Thursday, September 23, 2010

Vishnu sahasranama 379-384


ವಿಷ್ಣು ಸಹಸ್ರನಾಮ: ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹಃ
379) ಕರಣಂ

ಎಲ್ಲಕ್ಕೂ ಮುಖ್ಯ ಕಾರಣನು ಕರಣ. ಕರಣ-ಅಸಾಧಾರಣವಾದದ್ದು. ಉದಾಹರಣೆಗೆ ರೂಪವನ್ನು ನೋಡಲು ಕಣ್ಣು 'ಕರಣ'; ಕೇಳುವುದಕ್ಕೆ ಕಿವಿ 'ಕರಣ'. ಈ ನಾಮವನ್ನು ಒಡೆದು ನೋಡಿದರೆ ಕ+ರ+ಣ; ಇಲ್ಲಿ 'ಕ'ಎಂದರೆ ಆನಂದ, 'ರ' ಎಂದರೆ ಕ್ರೀಡೆ, 'ಣ' ಎಂದರೆ ಭಲ. ಆದ್ದರಿಂದ ಕರಣಂ ಎಂದರೆ ಆನಂದ ಸ್ವರೂಪ, ಭಲ ಸ್ವರೂಪ ಹಾಗು ಕ್ರೀಡಾ ಸ್ವರೂಪ ಭಗವಂತ.
380) ಕಾರಣಂ
ಎಲ್ಲಕ್ಕೂ ನಿಮಿತ್ತಕಾರಣನು. ಕ+ಅರ+ಣ. ಇಲ್ಲಿ 'ಅರ' ಎಂದರೆ 'ನಾಶವಿಲ್ಲದ್ದು'. ಭಗವಂತ ಎಂದೂ ನಾಶವಿಲ್ಲದ ಆನಂದ ಸ್ವರೂಪ. ಆತನ ಕ್ರೀಡೆಯೇ ಈ ಜಗತ್ತಿನ ನಿಯಮನ. ಕ+ಆ+ರಣ- ಇಲ್ಲಿ 'ರಣ' ಎಂದರೆ ಘೋಷಣೆ. ಭಗವಂತ ಆನಂದ ಸ್ವರೂಪ ಎಂದು ವೇದಗಳಿಂದ ಘೋಷಿಸಲ್ಪಟ್ಟ ಅಸಾಧಾರಣ ಶಕ್ತಿ.
381) ಕರ್ತಾ
ಎಲ್ಲವನ್ನೂ ಇನ್ನೊಬ್ಬರ ಸಹಾಯವಿಲ್ಲದೆ ಸ್ವತಂತ್ರವಾಗಿ ಮಾಡಬಲ್ಲವ ಕರ್ತಾ. ನಾವು ಭಗವಂತನ ಮುಂದೆ ಕೇವಲ ಸೂತ್ರದ ಗೊಂಬೆಗಳಂತೆ. ನಮಗೆ ಸ್ವಾತಂತ್ರ್ಯವಿಲ್ಲ, ಸೂತ್ರದಾರ ಆಡಿಸುವಂತೆ ಆಡುತ್ತೇವೆ. ಮನಸ್ಸಿಗೆ ಸ್ಪೂರಣ ಕೊಡುವ ನಿಜವಾದ ಕರ್ತ ಭಗವಂತ.
382) ವಿಕರ್ತಾ
ವಿವಿಧವಾದ ಸೃಷ್ಟಿಯನ್ನು ಮಾಡುವವನು ವಿಕರ್ತಾ. ಭಗವಂತನ ಸೃಷ್ಟಿ ವಿಸ್ಮಯ ಹಾಗು ವೈವಿದ್ಯಪೂರ್ಣ. ಒಂದು ವಸ್ತುವಿನಂತೆ ಇನ್ನೊಂದು ವಸ್ತುವಿಲ್ಲ. ಮರದ ಒಂದು ಎಲೆಯಂತೆ ಇನ್ನೊಂದು ಎಲೆ ಇರುವುದಿಲ್ಲ. ಒಬ್ಬ ಮನುಷ್ಯನಂತೆ ಇನ್ನೋಬ್ಬನಿರುವುದಿಲ್ಲ. ಹೀಗೆ ವೈವಿಧ್ಯಪೂರ್ಣ ಸೃಷ್ಟಿಯನ್ನು ನಿರ್ಮಿಸಿದ ಭಗವಂತ ವಿಕರ್ತಾ.
383) ಗಹನಃ
ಭಗವಂತ ಅತ್ಯಂತ ನಿಗೂಢನಾದವನು. ಆತ ಮಾಡಿದ ಸೃಷ್ಟಿ ಮಾತ್ರ ನಮಗೆ ಕಾಣುತ್ತದೆ ಆದರೆ ಆತ ಕಾಣಿಸುವುದಿಲ್ಲ. ಆತನನ್ನು ತಿಳಿಯಬೇಕಾದರೆ ಶಾಸ್ತ್ರದ ಒಳಹೊಕ್ಕು ಪ್ರಯತ್ನಿಸಬೇಕು.
384) ಗುಹಃ
ಹೃದಯ ಗುಹೆಯಲ್ಲಿ ಅವಿತವನು-ಹ್ರತ್ಕಮಲ ಮಧ್ಯ ನಿವಾಸಿ . ಆತ ಎಂದೂ ಬಿಚ್ಚಿಕೊಳ್ಳುವುದಿಲ್ಲ. ಜೀವದ ಸಾಧನೆ ಪೂರ್ತಿಯಾಗುವ ತನಕ ಆತ ಕಾಣಿಸಿಕೊಳ್ಳುವುದಿಲ್ಲ. ಆತ್ಮ ಸಾಕ್ಷಾತ್ಕಾರವಾದ ಮೇಲೆ ಜೀವ ಸ್ವರೂಪದಿಂದ ಆತನನ್ನು ನೋಡಬಹುದು.

No comments:

Post a Comment