Monday, September 13, 2010

Vishnu sahasranama 344-346


ವಿಷ್ಣು ಸಹಸ್ರನಾಮ : ಶತಾವರ್ತಃ ಪದ್ಮೀ ಪದ್ಮನಿಭೇಕ್ಷಣಃ
344) ಶತಾವರ್ತಃ

ಇಲ್ಲಿ ಆವರ್ತ ಎಂದರೆ ಅವತರಣ. ಭಗವಂತ ಶತಾವರ್ತ, ಅಂದರೆ ನೂರಾರು ಬಾರಿ ನಮಗಾಗಿ ಭೂಮಿಯಲ್ಲಿ ಇಳಿದು ಬಂದವ. ರಾಮನಾಗಿ, ಕೃಷ್ಣನಾಗಿ, ಬುದ್ದನಾಗಿ, ಪರಶುರಾಮನಾಗಿ, ವಾಮನನಾಗಿ, ನರಸಿಂಹನಾಗಿ, ವರಾಹನಾಗಿ, ಮತ್ಸ್ಯನಾಗಿ, ಕೂರ್ಮನಾಗಿ, ಕಪಿಲನಾಗಿ, ದತ್ತಾತ್ರಯನಾಗಿ, ವ್ಯಾಸನಾಗಿ, ಹೀಗೆ ನೂರಾರು ಅವತಾರದಲ್ಲಿ ಭೂಮಿಗೆ ಇಳಿದು ಬಂದವ. ಕೇವಲ ರಾವಣನನ್ನು ಕೊಲ್ಲಲು ಭಗವಂತ ಅವತಾರವೆತ್ತಬೇಕಿರಲಿಲ್ಲ. ಆತನ ಅವತಾರದ ಹಿಂದೆ ಅನೇಕ ರಹಸ್ಯವಡಗಿದೆ. ನಾವು ಆತನನ್ನು ನೋಡುವಷ್ಟು ಎತ್ತರಕ್ಕೆ ಏರಲು ಆಗದಿದ್ದಾಗ ಆತ ಸ್ವಯಂ ಭೂಮಿ ಮೇಲೆ ಅವತಾರವೆತ್ತುತ್ತಾನೆ ಅಥವಾ ಸಿದ್ಧ ಜ್ಞಾನಿಗಳನ್ನು ನಮ್ಮ ಉದ್ದಾರಕ್ಕಾಗಿ ಕಳುಹಿಸುತ್ತಾನೆ. ಇಂತಹ ಭಗವಂತನ ವರ್ತನೆ ಅನೇಕ ಹಾಗು ತಿಳಿದು ಕೊಳ್ಳುವುದು ಕಷ್ಟ. ಭಗವಂತನ ವರ್ತನೆಯನ್ನು ಸಾಮಾನ್ಯ ಮನುಷ್ಯನೊಂದಿಗೆ ಹೋಲಿಸಲಾಗದು. ಆತನ ವರ್ತನೆ ಹಿಂದೆ ಒಂದು ಮಹತ್ತಾದ ಸಂದೇಶವಿರುತ್ತದೆ. ಹೀಗೆ ನೂರಾರು ಬಾರಿ ಅವತರಿಸುವ, ವಿಶಿಷ್ಟವಾದ ವರ್ತನೆಯುಳ್ಳ ಹಾಗು ಸಂಸಾರದಲ್ಲಿರುವ ಲೆಕ್ಕವಿಲ್ಲದಷ್ಟು ಸುಳಿಯನ್ನು ನಿಯಂತ್ರಿಸುವ ಭಗವಂತ ಶತಾವರ್ತಃ
345) ಪದ್ಮೀ
ಪದ್ಮೀ ಎಂದರೆ ತಾವರೆಯನ್ನು ಕೈಯಲ್ಲಿ ಹಿಡಿದವನು. ನಾವು ಸಹಸ್ರಬಾಹು ಭಗವಂತನನ್ನು ನಾಲ್ಕು ಕೈಗಳ ಮೂರ್ತಿಯಾಗಿ ಉಪಾಸನೆ ಮಾಡುತ್ತೇವೆ. ಈ ನಾಲ್ಕು ಕೈಗಳು ನಾಲ್ಕು ಪುರುಷಾರ್ಥಕದ ಸಂಕೇತ. ನಾಲ್ಕು ಕೈಗಳಲ್ಲಿ ಹಿಡಿದಿರುವ ಚಕ್ರ, ಶಂಖ, ಗಧಾ ಹಾಗು ಪದ್ಮ ಕ್ರಮವಾಗಿ ಧರ್ಮ, ಅರ್ಥ, ಕಾಮ ಹಾಗು ಮೋಕ್ಷದ ಸಂಕೇತ. ಈ ಕಾರಣಕ್ಕಾಗಿ ಮೋಕ್ಷಪ್ರದನಾದ ಭಗವಂತನನ್ನು ಪದ್ಮೀ ಎಂದು ಸಂಭೋದಿಸುತ್ತಾರೆ. ಇಷ್ಟೇ ಅಲ್ಲದೆ ಜಗತ್ತಿನ ಮೂಲ ಪ್ರಕೃತಿಯಾದ ಲಕ್ಷ್ಮಿಯನ್ನು ಪದ್ಮಾ ಎಂದೂ ಹಾಗು ಚತುರ್ಮುಖ ಬ್ರಹ್ಮನನ್ನು ಕೂಡಾ ಪದ್ಮಾ ಎಂದು ಕರೆಯುತ್ತಾರೆ. ಲಕ್ಷ್ಮೀಪತಿಯಾದ ಭಗವಂತ ಪದ್ಮೀ; ಜಗತ್ತಿನ ಮೂಲಸೃಷ್ಟನಾದ ಚತುರ್ಮುಖನ ತಂದೆ ಪದ್ಮೀ. ಈ ರೀತಿ ಮೊಕ್ಷಪ್ರದನಾಗಿ ಕೈಯಲ್ಲಿ ತಾವರೆ ಹಿಡಿದಿರುವ, ಜಗತ್ತಿನ ಮೂಲಶಕ್ತಿಯಾದ ಪ್ರಕೃತಿಯ ಸ್ವಾಮಿ ಹಾಗು ಚತುರ್ಮುಖನ ತಂದೆ ಭಗವಂತ ಪದ್ಮೀ.
346) ಪದ್ಮನಿಭೇಕ್ಷಣಃ
ಪದ್ಮನಿಭೇಕ್ಷಣ ಎಂದರೆ ತಾವರೆಯ ಎಸಳಿನಂತೆ ಕಣ್ಣುಳ್ಳವ. ಇಲ್ಲಿ ತಾವರೆಯ ಎಸಳು 'ಅನುಗ್ರಹವನ್ನು' ಸಂಕೇತಿಸುವ ಉಪಮಾನ. 'ದೇವರು ಕಣ್ಣುಬಿಟ್ಟ' ಎಂದರೆ ಭಗವಂತ ಅನುಗ್ರಹಿಸಿದ ಎಂದರ್ಥ. ತಾವರೆಯ ಎಸಳು ಏನನ್ನೂ ಅಂಟಿಸಿಕೊಳ್ಳುವುದಿಲ್ಲ; ಅದೇ ರೀತಿ ಏನನ್ನೂ ಅಂಟಿಸಿಕೊಳ್ಳದ ನಿರ್ಲಿಪ್ತ ಭಗವಂತ ಪದ್ಮನಿಭೇಕ್ಷಣಃ

No comments:

Post a Comment