Monday, September 13, 2010

Vishnu Sahasranama 340-342


ವಿಷ್ಣು ಸಹಸ್ರನಾಮ: ಶೂರಃ ಶೌರಿರ್ಜನೇಶ್ವರಃ
340) ಶೂರಃ

ಈ ಜಗತ್ತಿನಲ್ಲಿ ಯಾರಲ್ಲಿ ಏನೇನು ಪರಾಕ್ರಮವಿದೆ, ಪೌರುಷವಿದೆ, ಅದೆಲ್ಲವೂ ಭಗವಂತನ ಕೊಡುಗೆ. ನಿಜವಾದ ಶೂರ ಭಗವಂತ. ಒಂದು ಶಕ್ತಿಯಾಗಿ ಭಗವಂತ ನಮ್ಮೊಳಗೆ ತುಂಬಿದರೆ ಮಾತ್ರ ಶತ್ರುಗಳನ್ನು ಗೆದೆಯುವ ಸಾಮರ್ಥ್ಯ ನಮಗೆ ಬರುತ್ತದೆ. 'ಶೂ' ಎಂದರೆ ಆನಂದವುಳ್ಳವರು ಅಥವಾ ಮುಕ್ತರು. ಮುಕ್ತರನ್ನು ಸ್ವೀಕರಿಸಿ ತನ್ನ ಬಳಿಯಲ್ಲಿರಿಕೊಂಡು ನಿತ್ಯಾನಂದವನ್ನು ಕೊಡುವ ಭಗವಂತ ಶೂರಃ.
341) ಶೌರಿಃ
ವಾಸುದೇವನ ತಂದೆ ಶೂರಸೇನ; ಈ ವಂಶದಲ್ಲಿ ಅವತರಿಸಿದ ಭಗವಂತನನ್ನು ಶೌರಿ ಎನ್ನುತ್ತಾರೆ. ಶೌರಿ ಎಂದರೆ ಶೂರರಲ್ಲಿ ಇರುವವನು. ಗೀತೆಯಲ್ಲಿ ಹೇಳುವಂತೆ:
ಯದ್ಯದ್ ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ ವಾ
ತತ್ತದೇವಾವಗಚ್ಛ ತ್ವಂ ಮಮ ತೆಜೋಂಶಸಂಭವಂಮ್ (ಅ-೧೦, ಶ್ಲೋ-೪೧)
"ಏಲ್ಲಿ ಯಾರಲ್ಲಿ ವಿಶಿಷ್ಟ ಶಕ್ತಿಯಿದೆ ಆ ಶಕ್ತಿಯಲ್ಲಿ ನಾನೇ ಅಡಗಿದ್ದೇನೆ ; ನನ್ನ ತೇಜಸ್ಸಿನ ಕಿಡಿ ಆತನ ಶೌರ್ಯವಾಗಿ ಮೂಡಿಬರುತ್ತದೆ" ಎಂಬ ಕೃಷ್ಣನ ನುಡಿ ಆತನ ಈ ನಾಮವನ್ನು ನೆನಪಿಸುತ್ತದೆ. ಪುರಾಣದಲ್ಲಿ ಕಾಣುವ ಪ್ರತಿಯೊಬ್ಬ ಶೂರರ ಶೌರ್ಯಕ್ಕೆ ಮೂಲ ಕಾರಣ ಅವರೊಳಗೆ ಕುಳಿತ 'ಶೌರಿ' ನಾಮಕ ಭಗವಂತನ ವಿಭೂತಿ.
342) ಜನೇಶ್ವರಃ
ಭಗವಂತ ಬರೀ ಶೂರರಲ್ಲಿ ಮಾತ್ರವಲ್ಲ ಈ ಜಗತ್ತಿನಲ್ಲಿ ಜನಿಸುವ ಎಲ್ಲಾ ಜೀವಜಾತದೊಳಗೆ ತುಂಬಿರುವ ಈಶ್ವರ(ನಿಯಾಮಕ ಶಕ್ತಿ). ಈ ಭೂಮಿಯಲ್ಲಿ ಜನಿಸುವ ಪ್ರತಿಯೊಂದು ವಸ್ತುವಿನೊಳಗೆ ಭಗವಂತ ನಿಯಾಮಕ ಶಕ್ತಿಯಾಗಿ ತುಂಬಿದ್ದಾನೆ. ಈ ಜಗತ್ತಿನಲ್ಲಿ ಹುಟ್ಟುವ ಒಂದು ಹುಲ್ಲು ಕಡ್ಡಿ ಕೂಡಾ ವ್ಯರ್ಥವಲ್ಲ, ಅದರಲ್ಲಿ ಭಗವಂತನ ವಿಭೂತಿಯಾದ ವಿಶಿಷ್ಟ ಶಕ್ತಿ ಅಡಗಿರುತ್ತದೆ.
ಉದಾಹರಣೆಗೆ :
(೧)ದರ್ಬೆ:-ಮೇಲ್ನೋಟಕ್ಕೆ ವ್ಯರ್ಥವಾಗಿ ಬೆಳೆಯುವ ಹುಲ್ಲು; ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೇಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ಇಡುತ್ತಾರೆ.
(೨)ಅಶ್ವತ್ತಮರ:-ಮರಗಳಲ್ಲಿ ಅತ್ಯಂತ ಹೆಚ್ಚು ಆಮ್ಲಜನಕ(Oxygen) ಕೊಡುವ ವೃಕ್ಷ ಅಶ್ವತ್ತ. ಇದಕ್ಕಾಗಿ ಈ ಮರವನ್ನು ಸುತ್ತುವುದರಿಂದ ಸ್ತ್ರೀಯರ ಗರ್ಭಕೋಶ ಸ್ವಚ್ಚವಾಗಿ ತಾಯ್ತನದ ಭಾಗ್ಯ ಬರುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ ಹಾಗು ಇದು ನಿಜ.
(೩)ಮುಟ್ಟಿದರೆ ಮುನಿ ಗಿಡ (Touch me not):- ಯಾರಿಗೂ ಬೇಡವಾಗಿ ಬೆಳೆಯುವ ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ. ಈ ಗಿಡವನ್ನು (ಹೂ ರಹಿತ) ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯಮಾಡಿ ಕುಡಿದರೆ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಮೂಲವ್ಯಾದಿ(Piles) ಗುಣಮುಖವಾಗುತ್ತದೆ.
ಹೀಗೆ ಈ ಪ್ರಪಂಚದಲ್ಲಿ ಏನೇನು ಹುಟ್ಟಿದೆ ಅದರೊಳಗೆ ವಿಶಿಷ್ಟ ಶಕ್ತಿಯಾಗಿ ತುಂಬಿರುವ ನಿಯಾಮಕ ಶಕ್ತಿ ಭಗವಂತ ಜನೇಶ್ವರಃ.

No comments:

Post a Comment