Sunday, September 5, 2010

Vishnu sahasranama 321-323


ವಿಷ್ಣು ಸಹಸ್ರನಾಮ: ಪ್ರಾಣಃ ಪ್ರಾಣದೋ ವಾಸವಾನುಜಃ
321) ಪ್ರಾಣಃ

ಭಗವಂತ 'ಸರ್ವಪ್ರೇರಕ' ಶಕ್ತಿ. ಎಲ್ಲರ ಒಳಗಿದ್ದು ಎಲ್ಲರನ್ನೂ ಪ್ರೇರಣೆಮಾಡುವ, ಎಲ್ಲ ಚಲನೆಯನ್ನು ನಿಯಂತ್ರಿಸುವ ಶಕ್ತಿ. ಈ ಜಗತ್ತಿಗೆ ಮೊದಲು ಚಲನೆಯನ್ನು ಕೊಟ್ಟವ ಭಗವಂತ. ಈ ಹಿಂದೆ ಹೇಳಿದಂತೆ 'ಣ' ಎಂದರೆ ಭಲ ಹಾಗೂ ಆನಂದ ಎನ್ನುವ ಅರ್ಥವನ್ನು ಕೊಡುತ್ತದೆ. ಪರಿಪೂರ್ಣವಾದ ಆನಂದ ಹಾಗೂ ಭಲ ಸ್ವರೂಪ ಭಗವಂತ ಪ್ರಾಣಃ.
322) ಪ್ರಾಣದಃ
ಪ್ರಾಣದಃ ಎಂದರೆ ಪ್ರಾಣವನ್ನು ಕೊಡುವವ. ಜಗತ್ತಿನ ನಿಯಾಮಕ ಶಕ್ತಿಯಾದ ಪ್ರಾಣನನ್ನು ನಮಗೆ ಕೊಟ್ಟವ. ಪ್ರಾಣನಿಗೆ ಉಪನಿಷತ್ತಿನಲ್ಲಿ 'ಪ್ರಾತಃ' ಎಂದಿದ್ದಾರೆ. ಅಂದರೆ ಭಗವಂತನ ಗುಣವನ್ನು ಬಿತ್ತರಿಸುವ ಶಕ್ತಿ. ಇಂತಹ ಜಗದ್ಗುರುವನ್ನು ಜಗತ್ತಿಗೆ ಕೊಟ್ಟ ಭಗವಂತ ಪ್ರಾಣದಃ.
323) ವಾಸವಾನುಜಃ
ವಾಸವಾನುಜಃ ಎಂದರೆ ಇಂದ್ರನ ತಮ್ಮ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ಇಲ್ಲಿ ‘ವಾಸವ’ ಎಂದರೆ ವಸುಗಳ ಸಮುದಾಯ. ವಸುಗಳೆಂದರೆ ಅಷ್ಟವಸುಗಳಲ್ಲ "ದೇವತೆಗಳ ಸಮುದಾಯ". ಬ್ರಹ್ಮಾಂಡದಲ್ಲಿದ್ದು ಬ್ರಹ್ಮಾಂಡವನ್ನು, ಪಿಂಡಾಂಡದಲ್ಲಿದ್ದು ಪಿಂಡಾಂಡವನ್ನು ನಿಯಂತ್ರಿಸುವ ತತ್ವಾಭಿಮಾನಿ ದೇವತೆಗಳ ನಿಯಾಮಕನಾದ ಭಗವಂತ ವಾಸವಃ. ಇಂತಹ ದೇವತೆಗಳು ಪ್ರಾರ್ಥನೆ ಮಾಡಿದಾಗ, ಪ್ರಾರ್ಥನೆಗನುಗುಣವಾಗಿ ಜ್ಞಾನಿಗಳ ಅನುಕೂಲಕ್ಕಾಗಿ ಭೂಮಿಯಲ್ಲಿ ಅವತರಿಸುವ ಭಗವಂತ ವಾಸವಾನುಜಃ.

No comments:

Post a Comment