Sunday, September 19, 2010

Vishnu sahasranama 364-365


ವಿಷ್ಣು ಸಹಸ್ರನಾಮ: ವಿಕ್ಷರೋ ರೋಹಿತೋ................

364) ವಿಕ್ಷರಃ
'ಕ್ಷರ' ಎನ್ನುವ ಪದದ ಒಂದು ಅರ್ಥ "ನಿರಂತರವಾಗಿ ಕೊಡುವುದು" ಹಾಗು ಇನ್ನೊಂದು ಅರ್ಥ "ನಾಶವಾಗುವುದು". ವಿಕ್ಷರ ಎಂದರೆ ವಿವಿಧ ಫಲವನ್ನೀಯುವವನು ಹಾಗು ನಾಶವಿಲ್ಲದವನು ಎಂದರ್ಥ. ಭಗವಂತ ನಿರಂತರವಾಗಿ ಬಯಸಿದ್ದನ್ನು ಕೊಡುವ ನಾಶವಿಲ್ಲದ ಶಕ್ತಿ. "ಕೇಳಿದರೆ ಕೇಳಬೇಕು-ಭಗವಂತನನ್ನು ಕೇಳಬೇಕು" ಇನ್ನೊಬ್ಬರನ್ನು ಕೇಳಿದರೆ ಅವರೆಷ್ಟು ಕೊಟ್ಟಾರು? ನಿರಂತರವಾಗಿ ಭಕ್ತರು ಕೇಳಿದ್ದನ್ನು ಕೊಡುವ ಭಗವಂತ ವಿಕ್ಷರಃ. ನಾವು ಭಗವಂತನಲ್ಲಿ ಕೇಳುವಾಗ "ನನಗೆ ಇದು ಬೇಕು , ನನಗೆ ಅದು ಬೇಕು ಎಂದು ಕೇಳದೆ "ಓ ಭಗವಂತ ನನಗೆ ಏನು ಬೇಕು ಎನ್ನುವುದು ನನಗೆ ಗೊತ್ತಿಲ್ಲ, ನನಗೇನು ಬೇಕೋ ಅದನ್ನು ಕೊಡು ಎಂದು ಕೇಳಬೇಕು". ಹೀಗೆ ಅನಂತ ಕಾಲದಲ್ಲಿ ನಿರಂತರವಾಗಿ ಕೊಡುವ ಭಗವಂತ ಕೊಟ್ಟ ಫಲವನ್ನು ದುರುಪಯೋಗ ಮಾಡಿಕೊಂಡರೆ ಅದನ್ನು ಕಸಿದುಕೊಳ್ಳುತ್ತಾನೆ ಎನ್ನುವ ಎಚ್ಚರ ಅಗತ್ಯ!
365) ರೋಹಿತಃ
ಭಗವಂತ ಕೆಂಪು ಬಣ್ಣದವನು ಎನ್ನುವುದು ಈ ನಾಮದ ಮೇಲ್ನೋಟದ ಅರ್ಥ. ಉಪನಿಷತ್ತಿನಲ್ಲಿ ಹೇಳುವಂತೆ: "ಅಜಂ ಏಕಮ್ ಲೋಹಿತ-ಶುಕ್ಲ-ಕೃಷ್ಣಂ" ಅಂದರೆ ಒಂದು ಅಜ ಅದಕ್ಕೆ ಮೂರು ಬಣ್ಣಗಳು! ಇಲ್ಲಿ ಅಜ ಎಂದರೆ 'ಆಡು' ಅಲ್ಲ. ಅಜ ಎಂದರೆ 'ಹುಟ್ಟಿಲ್ಲದ ಆದಿ ತತ್ವ'. ಮೂರು ಬಣ್ಣಗಳಾದ ಕೆಂಪು-ಬಿಳಿ-ಕಪ್ಪು ಕ್ರಮವಾಗಿ ಸೃಷ್ಟಿ-ಸ್ಥಿತಿ-ಸಂಹಾರವನ್ನು ಸೂಚಿಸುತ್ತವೆ. ಸೃಷ್ಟಿಗೆ ಕಾರಣನಾದ ಭಗವಂತನ ಬಣ್ಣ ಕೆಂಪು, ಆದ್ದರಿಂದ ಆತ ರೋಹಿತಃ.

No comments:

Post a Comment