Wednesday, September 29, 2010

Vishnu sahasranama 406-411


ವಿಷ್ಣು ಸಹಸ್ರನಾಮ: ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ
406) ವೈಕುಂಠಃ

ಮುಕ್ತರಿಗೆ ಆನಂದಪ್ರದನಾದ ಭಗವಂತ ವೈಕುಂಠ ಪತಿ. ನಮಗೆ ತಿಳಿದಿರುವಂತೆ 'ಕುಂಠ' ಎಂದರೆ ಅಸಾಮರ್ಥ್ಯ, 'ವಿಕುಂಠ' ಎಂದರೆ ಬದುಕಿನ ನಡೆಯಲ್ಲಿ ಎಂದೂ ಜಾರದವರು, ಅಂದರೆ ಭಗವಂತನ ಸಾಕ್ಷಾತ್ಕಾರವಾದ ಮುಕ್ತರು. 'ಆಗಾಮಿ' ಹಾಗು 'ಸಂಚಿತ' ಕರ್ಮವಿಲ್ಲದ ಅಪರೂಕ್ಷ ಜ್ಞಾನಿಗಳನ್ನೂ ಕೂಡಾ 'ಪ್ರರಾಬ್ಧ ಕರ್ಮ' ಬಿಡುವುದಿಲ್ಲ. ಪ್ರರಾಬ್ಧ ಕರ್ಮ ಬಿಟ್ಟ ಬಾಣದಂತೆ. ಆದರೆ ಮುಕ್ತಿಗೆ ಹೋದವರಿಗೆ ಯಾವ ಕರ್ಮದ ಲೇಪವೂ ಇಲ್ಲ. ಇಂತಹ ವೈಕುಂಠ ಲೋಕದ ಪತಿಯಾದ ಭಗವಂತ ವೈಕುಂಠಃ. "ನೆಡೆಯುವವರಿಗೂ ಭೂಮಿ ಆಸರೆ, ಜಾರಿ ಬೀಳುವವರಿಗೂ ಭೂಮಿ ಆಸರೆ" ಎಂಬಂತೆ 'ವಿಕುಂಠರಿಗೆ' ಆಸರೆಯಾದ ಭಗವಂತ 'ವಿವಿಧ ಕುಂಠರಿಗೂ' ಆಶ್ರಯದಾತ. ಪಂಚಭೂತಗಳಿಂದಾದ ಈ ಪ್ರಪಂಚವನ್ನು 'ವಿಕುಂಠ' ಎನ್ನುತ್ತಾರೆ. ಮೂಲ ದ್ರವ್ಯಗಳಾದ ಮಣ್ಣು-ನೀರು-ಬೆಂಕಿಗಳಿಂದ ನಾನಾ ಪದಾರ್ಥಗಳನ್ನು ಸೃಷ್ಟಿ ಮಾಡಿದ ಭಗವಂತ ವೈಕುಂಠಃ
407) ಪುರುಷಃ
ಪುರದಲ್ಲಿ ವಾಸಿಸುವವನು "ಪುರುಷಃ" ಸಮಸ್ತ ವೇದಗಳ ಸಾರಭೂತವಾದ ಸೂಕ್ತಗಳ ರಾಜ "ಪುರುಷ ಸೂಕ್ತ" ಭಗವಂತನನ್ನು ‘ಸಹಸ್ರ ಶೀರ್ಷಾ ಪುರುಷಃ' ಎಂದು ಕರೆದಿದೆ. ಭಗವಂತನೊಬ್ಬನೇ ನಿಜವಾದ ಪುರುಷ. ಸೃಷ್ಟಿ ಕಾಲದಲ್ಲಿ ಏನೂ ಇಲ್ಲದಾಗಲೂ ಇದ್ದು ಈ ಸೃಷ್ಟಿಯನ್ನು ನಿರ್ಮಾಣ ಮಾಡಿದ ಭಗವಂತ ಪುರಾ+ಷಃ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ಸುಟ್ಟ ಭಗವಂತ ಪುರ-ಉಷ. ಪ್ರಪಂಚದಲ್ಲಿ ಅನಂತವಾಗಿ, ಅನಂತ ಕಾಲ, ಅನಂತ ಸಾಮರ್ಥ್ಯ, ಅನಂತ ಗುಣಗಳಿಂದ ತುಂಬಿರುವ ಭಗವಂತ ಪುರ-ಸಹ. ಪ್ರಳಯ ಕಾಲದಲ್ಲಿ ಏನೂ ಇಲ್ಲದಾಗ ಇದ್ದು, ಸೃಷ್ಟಿ ಕಾಲದಲ್ಲಿ ತನ್ನ ನಾಭಿಯಿಂದ ಒಂದೊಂದನ್ನು ಸೃಷ್ಟಿ ಮಾಡಿದ ಭಗವಂತ ಮೊದಲು "ಮಹತತ್ವವನ್ನು" ಸೃಷ್ಟಿ ಮಾಡಿದ. ಮಹತತ್ವ ಎಂದರೆ ಇಡೀ ಪ್ರಪಂಚದ ಭೂತಪ್ರಜ್ಞೆ ಜಾಗೃತಿ. ಹಿಂದೆ ಇದ್ದ ಸಮಸ್ತ ಸೃಷ್ಟಿಯ ಸ್ಮರಣೆಯನ್ನು ಚಿತ್ತಾಭಿಮಾನಿ ಬ್ರಹ್ಮ-ವಾಯುವಿಗೆ ಕೊಟ್ಟು, ಸೂಕ್ಷ್ಮ ರೂಪದ ಪ್ರಪಂಚ ನಿರ್ಮಾಣ. ನಂತರ ದೇವತೆಗಳು, ಪಂಚಭೂತಗಳ ನಿರ್ಮಾಣ. ಹೀಗೆ ನಿರ್ಮಾಣವಾದ ಸ್ಥೂಲ ಬ್ರಹ್ಮಾಂಡದೊಳಗೆ ಭಗವಂತ ತುಂಬಿಕೊಂಡ, ಒಂದೊಂದು ಪಿಂಡಾ೦ಡದೊಳಗೆ ಒಂದೊಂದು ರೂಪದಲ್ಲಿ ಬಿಂಬ ರೂಪನಾಗಿ ತುಂಬಿ ಆ ಪಿಂಡಾ೦ಡದಿಂದ ಮಾಡಿಸಬೇಕಾದ ಕಾರ್ಯವನ್ನು ಮಾಡಿಸಿ ಮೋಕ್ಷವನ್ನು ಕರುಣಿಸುವ ಭಗವಂತ ಪುರುಷಃ. ಹೀಗೆ ಸೃಷ್ಟಿಯ ಮೊದಲು, ಸೃಷ್ಟಿಯ ಕಾಲದಲ್ಲಿ, ಸ್ರಷ್ಟವಾದ ವಸ್ತುವಿನೊಳಗೆ, ಸೃಷ್ಟಿಯ ಸಾಧನೆಯಲ್ಲಿ, ಸಾಧನೆಯಿಂದ ಮುಕ್ತಿಯ ತನಕ ಇರುವ ಹೃತ್ಕಮಲ ಮಧ್ಯ ನಿವಾಸಿ ಭಗವಂತ ಪೂರ್ಣವಾದ ಷಡ್ಗುಣಗಳಿಂದ ತುಂಬಿರುವ ಜ್ಞಾನಾನಂದ ಸ್ವರೂಪ. ಪು+ರು+ಷಃ=ಪುರುಷಃ; ಇಲ್ಲಿ 'ಪು' ಎಂದರೆ ನಮ್ಮನ್ನು ಪಾವನಗೊಳಿಸುವ ಪರಮಪವಿತ್ರವಾದವ. 'ರು' ಎಂದರೆ 'ರುವಂತಿ' , ಪ್ರಪಂಚದ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. 'ಷಃ' ಅಥವಾ 'ಸಹ' ಎಂದರೆ ಎಲ್ಲಾ ವಸ್ತುಗಳೊಳಗೆ ತುಂಬಿರುವ ಸರ್ವಾಂತರ್ಯಾಮಿ ತತ್ವ. ಹೀಗೆ ಪುರುಷಃ ಎನ್ನುವ ಭಗವಂತನ ನಾಮವನ್ನು ಅನೇಕ ರೀತಿಯಲ್ಲಿ ಅರ್ಥೈಸಬಹುದು.
408) ಪ್ರಾಣಃ
ಎಲ್ಲರ ಒಳಗಿದ್ದು ಸಮಸ್ತ ಚೇಷ್ಟೆಗಳನ್ನು ಮಾಡುವವ ಪ್ರಾಣಃ. ಈ ಎಲ್ಲಾ ಚೇಷ್ಟೆಗಳು ಆತನ ಆನಂದದ ಅಭಿವ್ಯಕ್ತವೇ ಹೊರತು ಇನ್ನೇನನ್ನೋ ಪಡೆಯುವುದಕ್ಕೊಸ್ಕರ ಅಲ್ಲ. ಹೀಗೆ ಪೂರ್ಣವಾದ ಆನಂದದ ಸೆಲೆಯಾದ ಭಗವಂತ ಪ್ರಾಣಃ.
409) ಪ್ರಾಣದಃ
ಪ್ರಾಣ+ದಃ, ಇಲ್ಲಿ 'ದ' ಎಂದರೆ ದ್ಯತಿ; ನಮ್ಮೊಳಗಿದ್ದು ಸಮಸ್ತ ಚೇಷ್ಟೆಗಳನ್ನು ಮಾಡುವ ಭಗವಂತ ಒಂದು ದಿನ ಪ್ರಾಣನೊಂದಿಗೆ ನಮ್ಮ ದೇಹವನ್ನು ತ್ಯೆಜಿಸುತ್ತಾನೆ, ಯಾವುದೂ ನಮ್ಮ ಕೈಯಲ್ಲಿಲ್ಲ, ನಾವು ಭಗವಂತ ನೆಡೆಸಿದಷ್ಟು ಕಾಲ ಮಾತ್ರ ನಡೆಯಬಹುದು. ವ್ಯರ್ಥವಾಗಿ ಅಹಂಕಾರದ ಮೊರೆ ಹೋಗುವ ದುಷ್ಟರ ಆನಂದವನ್ನು ಸಂಹಾರ ಮಾಡುವ ಭಗವಂತ ಪ್ರಾಣದಃ.
410) ಪ್ರಣವಃ
ಎಲ್ಲರಿಂದ ಸ್ತುತನಾದ ಓಂಕಾರ ಪ್ರತಿಪಾದ್ಯ ಭಗವಂತ ಪ್ರಣವಃ. ಭಗವಂತನ ಹಿರಿಮೆಯನ್ನರಿತವರು ಆತನತ್ತ ಮುಖ ಹಾಕುತ್ತಾರೆ. ತಮ್ಮ ಅಹಂಕಾರವನ್ನು ಕಳಚಿಕೊಂಡು ಆತನ ಹತ್ತಿರ ಹೋಗುತ್ತಾರೆ. ಭಗವಂತನ ಸ್ತುತಿಯಿಂದ ಭಗವಂತನಿಗೇನೂ ಲಾಭವಿಲ್ಲ. ಆತನನ್ನು ತಿಳಿದಾಗ ನಮ್ಮ ರಾಗ-ದ್ವೇಷ ಹೊರಟು ಹೋಗಿ ಆತನ ಸ್ತೋತ್ರದತ್ತ ಮನಸ್ಸು ಹರಿಯುತ್ತದೆ. ಹೀಗೆ ಜ್ಞಾನಿಗಳಿಂದ ಸ್ತುತನಾದ, ಮೂರು ಕಾಲದಲ್ಲೂ ಇರುವ ಅವಿನಾಶಿ ತತ್ವ ಭಗವಂತ ಪ್ರಣವಃ.
411) ಪೃಥುಃ
ಭೂಮಿ (ಪೃಥ್ವಿ) ಹೇಗೆ ಎಲ್ಲವನ್ನೂ ಹೊತ್ತು ಸಲಹುತ್ತದೋ ಅದೇ ರೀತಿ ಭಗವಂತ ಇಡೀ ವಿಶ್ವವನ್ನು ಹೊತ್ತು ಸಲಹುತ್ತಾನೆ. ಎಲ್ಲವನ್ನೂ ಹೊರುವ ವೈಶಾಲ್ಯವುಳ್ಳ ಭಗವಂತ ಸರ್ವ ವ್ಯಾಪ್ತನಾದವನು. ಇಂತಹ ವಿಶಾಲವಾದ ಸರ್ವವ್ಯಾಪಿ ಭಗವಂತ ಪೃಥುಃ.

No comments:

Post a Comment