Saturday, October 2, 2010

Vishnu sahasranama 412-416

ವಿಷ್ಣು ಸಹಸ್ರನಾಮ: ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ
412) ಹಿರಣ್ಯಗರ್ಭಃ

ಒಡಲಲ್ಲಿ ವಿಶ್ವವೆಂಬ ಬಂಗಾರ ತುಂಬಿರುವ ಭಗವಂತ ಹಿರಣ್ಯಗರ್ಭಃ. ಇಲ್ಲಿ ಹಿರಣ್ಯ ಎಂದರೆ ಬಾಹ್ಯ ಪ್ರಪಂಚದ ಅಪೇಕ್ಷೆ ಇಲ್ಲದೆ ಅಂತರಂಗದಿಂದ ಚಿಮ್ಮುವ ಆನಂದ. ನಮ್ಮೊಳಗಿರುವ ಜ್ಞಾನಾನಂದವೇ ನಿಜವಾದ ಚಿನ್ನ. ಇದನ್ನು ಬಿಟ್ಟು ಹೊರಗಿನ ಚಿನ್ನದ ಬೆನ್ನು ಹತ್ತುವವರಿಗೆ ಭಗವಂತ ಎಂದೂ ದಕ್ಕುವುದಿಲ್ಲ. ಬಂಗಾರದ ಮೊಟ್ಟೆಯಾದ ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ಚತುರ್ಮುಖನ ಅಂತರ್ಯಾಮಿ ಭಗವಂತ ಹಿರಣ್ಯಗರ್ಭಃ

413) ಶತ್ರುಘ್ನಃ
ಶ್ರೀರಾಮಚಂದ್ರನಿಗೆ ಶತ್ರುಘ್ನನೆಂಬ ತಮ್ಮನಿದ್ದ. ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗು ಅನಿರುದ್ಧ ಎಂಬ ಭಗವಂತನ ರೂಪವೇ ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ ಎಂದು ಅವತಾರದಲ್ಲಿ ನಮಗೆ ಕಾಣಿಸಿಕೊಂಡ ರೂಪ. ಶಂಖಾಭಿಮಾನಿ ಅನಿರುದ್ಧ ನಾಮಕ ಭಗವಂತ ಶತ್ರುಘ್ನನಲ್ಲಿ ಸನ್ನಿಹಿತನಾಗಿದ್ದ. ಶತ್ರು ನಾಶಕ ಭಗವಂತನನ್ನು ಶತ್ರುಘ್ನ ಎನ್ನುತ್ತಾರೆ. ಭಗವಂತನಿಗೆ ಶತ್ರುಗಳು ಯಾರು ? ಎನ್ನುವ ಪ್ರಶ್ನೆ ನಮ್ಮಲ್ಲಿ ಹುಟ್ಟಬಹುದು. ಭಗವಂತ ದ್ವೇಷ ಮಾಡುವ ವಸ್ತು ಅಜ್ಞಾನ, ವಿಪರೀತ ಜ್ಞಾನ, ಅತಿಕಾಮ, ಕ್ರೋಧ ಇತ್ಯಾದಿ. ಸಾಧಕನ ಸಾಧನೆಗೆ ಅಂತರಂಗದ ಶತ್ರುಗಳು ದುರ್ಗುಣಗಳು.ನಮ್ಮ ಅಂತರಂಗದ ಶತ್ರುಗಳು ತುಂಬಾ ಅಪಾಯಕಾರಿ. ಇದಕ್ಕೆ ನಿದರ್ಶನ 'ಮಹಾಭಾರತದ ದೃತರಾಷ್ಟ್ರ'. ದೃತರಾಷ್ಟ್ರನ ಒಳಗಿದ್ದ 'ಪುತ್ರಮೋಹ' ಎನ್ನುವ ಶತ್ರು ಆತನನ್ನು ಅಧಃಪತನಕ್ಕೆ ಕೊಂಡೊಯ್ದ ವಿಷಯ ನಮಗೆಲ್ಲ ತಿಳಿದೇ ಇದೆ. ನಾವು ಭಗವಂತನ ಬಗ್ಗೆ ಚಿಂತನೆ ಮಾಡಬೇಕಿದ್ದರೆ ಮೊದಲು ನಮ್ಮ ಮನಸ್ಸು ದುರ್ಗುಣಗಳಿಂದ ಈಚೆ ಬರಬೇಕು. ನಾವು ಚಿಂತನೆ ಮಾಡಬೇಕೆಂದುಕೊಂಡಾಗ ಮನಸ್ಸು ನಿಂತ ಕಡೆ ನಿಲ್ಲುವುದಿಲ್ಲ. ಮಗು ತಾಯೆಯೇ ಬೇಕು ಎಂದು ಹಂಬಲಿಸಿ ಹೇಗೆ ಹಠ ಮಾಡಿ ತಾಯಿಯನ್ನು ಸೇರುತ್ತದೋ ಅದೇ ರೀತಿ ನಾವು ಹಠ ಬಿಡದೆ ಭಗವಂತನನ್ನು ನೆನೆದರೆ ಆತ ಶತ್ರುಘ್ನನಾಗಿ ಬಂದು ನಮ್ಮ ಅಂತರಂಗದ ಶತ್ರುಗಳನ್ನು ನಾಶ ಮಾಡಿ ಸಾದನೆಯ ಹಾದಿಯಲ್ಲಿ ನಮ್ಮನ್ನು ಮುಂದೆ ನಡೆಸುತ್ತಾನೆ. ಹೀಗೆ ಜ್ಞಾನ ಮಾರ್ಗದ ಅರಿಗಳನ್ನು ತರಿಯುವವನು ಶತ್ರುಘ್ನ.
414) ವ್ಯಾಪ್ತಃ
ಭಗವಂತ ಪರಮ ಆಪ್ತನಾದವನು; ಆತ ಜ್ಞಾನಿಗಳ ಆಪ್ತ ಗೆಳೆಯ ಹಾಗು ಅಭಯ. ಹೀಗೆ ಜ್ಞಾನಿಗಳ ಮಿತ್ರನಾಗಿ ಎಲ್ಲೆಡೆ ತುಂಬಿರುವ ಭಗವಂತ ವ್ಯಾಪ್ತಃ
415) ವಾಯುಃ
ಪ್ರತಿಯೊಂದು ಜೀವ ಜಾತದ ಒಳಗೂ ಹೊರಗೂ ತುಂಬಿರುವ; ಜಗವನ್ನು ಬೆಸೆದ; ಜ್ಞಾನ ಸ್ವರೂಪ ಹಾಗು ನಮಗೆ ಉಸಿರನ್ನಿತ್ತ ಭಗವಂತ ವಾಯುಃ
416) ಅಧೋಕ್ಷಜಃ
ಎಂದೂ ಕೆಳಕ್ಕೆ ಕುಸಿಯದವನು; ಪ್ರತ್ಯಕ್ಷಕ್ಕೆ ಗೋಚರವಾಗದವನು.ಭಾರತದಲ್ಲಿ ಹೇಳುವಂತೆ "ಅದೋ ನಕ್ಷೀಯತೆ ಜಾತು ಯಸ್ಮಾತ್ ತಸ್ಮಃ ಅಧೋಕ್ಷಜಃ". ಅಂದರೆ ಭಗವಂತ ಎಂದೂ ತನ್ನ ಎತ್ತರದ ಸ್ಥಿತಿಯಿಂದ ಕೆಳಕ್ಕಿಳಿಯುವುದಿಲ್ಲ. ಆ ಎತ್ತರ ಆತನ ಸ್ವರೂಪ ಧರ್ಮ. ಹೀಗೆ ಎಂದೆಂದೂ ಶ್ರೇಷ್ಟನಾಗಿರುವ, ಪ್ರತ್ಯಕ್ಷ ಗೋಚರವಾಗದ ಭಗವಂತ ಅಧೋಕ್ಷಜಃ.

No comments:

Post a Comment