Sunday, October 3, 2010

Vishnu sahasranama 417-421

ವಿಷ್ಣು ಸಹಸ್ರನಾಮ: ಋತುಃ ಸುದರ್ಶನಃ ಕಾಲಃ ಪರಮೇಷ್ಠೀ ಪರಿಗ್ರಹಃ
417) ಋತುಃ

ಕಾಲ ಚಕ್ರಕ್ಕೆ ಋತು ಎನ್ನುತ್ತೇವೆ. ನಾವು ವಸಂತ, ಗ್ರೀಷ್ಮ, ವರ್ಷ,ಶರತ್, ಹೇಮಂತ ಹಾಗು ಶಿಶಿರ ಎನ್ನುವ ಆರು ಋತುಗಳನ್ನು ಕಾಣುತ್ತೇವೆ. ವಸ್ತುತಃ ಋತುಗಳು ಐದೇ. ಹಿಮವನ್ನು ಕೊಡುವ ಹೇಮಂತ ಋತು ಹಾಗು ಚಳಿಯನ್ನು ಕೊಡುವ ಶಿಶಿರ ಋತು ಎರಡೂ ಒಂದೇ. ಋತುಗಳು ಕಾಲ ಚಕ್ರದ ಅರೆಗಳು(spokes); ಈ ಋತು ಚಕ್ರವನ್ನು ತಿರುಗಿಸಿ, ಕಾಲ ಕಾಲಕ್ಕೆ ಪರಿವರ್ತನೆಯನ್ನು ಮಾಡತಕ್ಕ ಭಗವಂತ ಋತುಃ. ಋತುವಾಗಿ ಬೇರೆ ಬೇರೆ ಕಾಲ ಧರ್ಮಗಳಿಂದ ಮನುಷ್ಯನಿಗೆ ಉಷ್ಣ, ಮಳೆ, ಚಳಿ, ಬೆಳೆ,ಚಿಗುರು,ಹೂ,ಹಣ್ಣನ್ನು ಕೊಟ್ಟು ಪ್ರಪಂಚಕ್ಕೆ ವೈವಿಧ್ಯವನ್ನು ಕೊಡುವ ಭಗವಂತ ಋತುಃ.
ಹೆಣ್ಣಿನಲ್ಲಿ ಋತುವಾಗಿ ಕೂತು ಹೊಸ ಜೀವ ಚಿಗುರಲು ಕಾರಣಕರ್ತನಾಗುವ ಭಗವಂತ ಋತುಃ; ಸಮಸ್ತ ವೇದಗಳಿಂದ ಜ್ಞಾನಿಗಳು ಅರಿಯುವ 'ಬದಲಾಗದ ಸತ್ಯ' ಭಗವಂತ ಋತುಃ.
418) ಸುದರ್ಶನಃ
ಸುದರ್ಶನವನ್ನು ಕೈಯಲ್ಲಿ ಆಯುಧವಾಗಿ ತೊಟ್ಟ; ಸಮೀಚೀನವಾದ ಸುಂದರ ದರ್ಶನವನ್ನು ಕೊಡುವ; ಜ್ಞಾನಿಗಳ ರೂಪದಲ್ಲಿ ಸಮಸ್ತ ವೇದಗಳ ದರ್ಶನವನ್ನು ಕೊಡುವ; ಚಲುನೋಟದ ಭಗವಂತ "ಸು-ದರ್ಶನಃ"
419) ಕಾಲಃ
ಕಾಲ ಎನ್ನುವುದು 'ಕಲ' ಎನ್ನುವ ಧಾತುವಿನಿಂದ ಬಂದ ಪದ. ಈ ಧಾತು ಅನೇಕ ಅರ್ಥವನ್ನು ಕೊಡುತ್ತದೆ.ಎಲ್ಲಾ ಗುಣಗಳನ್ನು, ಎಲ್ಲಾ ಸಾಮರ್ಥ್ಯವನ್ನು ತನ್ನೊಳಗೆ 'ಕಲೆ' ಹಾಕಿದವನು ಕಾಲಃ. ಭಗವಂತ ಸಮಸ್ತ ಸದ್ಗುಣಗಳಿಂದ ಪರಿಪೂರ್ಣವಾದ ತತ್ವ. ಈ ತತ್ವವನ್ನು ನಾವು ಅರಿಯದೆ ಅಹಂಕಾರಿಗಳಾದಾಗ, ಅದೇ ತತ್ವ 'ಕಾಲ ಪುರುಷನಾಗಿ' ನಮ್ಮ ಸಂಹಾರಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ 'ಬದುಕಿನಲ್ಲಿ'
ನಮ್ಮ ಉದ್ಧಾರವಿರುತ್ತದೆ, ಕೆಲವೊಮ್ಮೆ ನಮ್ಮ 'ಸಾವಿನಲ್ಲಿ' ನಮ್ಮ ಉದ್ಧಾರವಿರುತ್ತದೆ, ಕೆಲವೊಮ್ಮೆ ನಮ್ಮ 'ಮಾನದಲ್ಲಿ', ಇನ್ನು ಕೆಲವೊಮ್ಮೆ ನಮ್ಮ 'ಅವಮಾನದಲ್ಲಿ'; ಕೆಲವೊಮ್ಮೆ ನಮ್ಮ 'ಜ್ಞಾನದಲ್ಲಿ' , ಇನ್ನು ಕೆಲವೊಮ್ಮೆ ನಮ್ಮ 'ಅಜ್ಞಾನದಲ್ಲಿ' ನಮ್ಮ ಉದ್ಧಾರವಿರುತ್ತದೆ. ಆದರೆ ನಮ್ಮ 'ಅಹಂಕಾರದಲ್ಲಿ' ಎಂದೆಂದೂ ಉದ್ಧಾರವಿಲ್ಲ. ಜಗತ್ತಿನಲ್ಲಿ ಅಹಂಕಾರ ಭರಿತ ಅಜ್ಞಾನ ತುಂಬಿದಾಗ ಭಗವಂತ 'ಕಾಲ ಪುರುಷನಾಗಿ' ಬೆಳೆದು ನಿಲ್ಲುತ್ತಾನೆ. ಇದನ್ನೇ ಗೀತೆಯಲ್ಲಿ ಕೃಷ್ಣ ಹೀಗೆ ಹೇಳಿದ್ದಾನೆ:
ಕಾಲೋsಸ್ಮಿ ಲೋಕಕ್ಷಯಕೃತ್ ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ (ಅ-೧೧ ಶ್ಲೋ-೩೨)
ಅಂದರೆ "ಲೋಕಗಳನ್ನು ಕಬಳಿಸಲು ಬೆಳೆದು ನಿಂತಿರುವ ಕಾಲಪುರುಷ ನಾನು" ಎಂದರ್ಥ.

ಕಾಲ ಎನ್ನುವುದಕ್ಕೆ ಇನ್ನೊಂದು ಅರ್ಥ 'ಸಮಯ'. ಪ್ರತಿಯೊಂದು ಕ್ರಿಯೆಯ ಹಿಂದೆ 'ಕಾಲ' ಸರ್ವ ಕಾರಣವಾಗಿರುತ್ತದೆ. ಕಾಲ ನಿಯಾಮಕ ಭಗವಂತ ಕಾಲಃ.
ಜ್ಞಾನಕಾರಕವಾದ ಅವತಾರಗಳಿಂದ(ವ್ಯಾಸ,ಕಪಿಲ,ದತ್ತಾತ್ರಯ, ನರ-ನಾರಾಯಣ, ಇತ್ಯಾದಿ) ಅಜ್ಞಾನಕ್ಕೆ 'ಕಾಲವಾದ' ಭಗವಂತ, ಬಲಕಾರಕ ಅವತಾರಗಳಿಂದ(ನರಸಿಂಹ, ವರಾಹ, ರಾಮ,ಪರಶುರಾಮ, ಇತ್ಯಾದಿ) ಅಹಂಕಾರಕ್ಕೆ 'ಕಾಲನಾದ'
ಹೀಗೆ ಸರ್ವ ಗುಣಪೂರ್ಣ, ಸರ್ವ ಸಂಹಾರಕ ಹಾಗು ಕಾಲ ನಿಯಾಮಕ ಭಗವಂತ ಕಾಲಃ
420) ಪರಮೇಷ್ಠೀ
ಪರಮದಲ್ಲಿ ಸ್ಥಿತನಾದವನು. ಪರಮಾಕಾಶವೆಂಬ ಹೃತ್ಕಮಲ ಮಧ್ಯ ನಿವಾಸಿ. ಇಡೀ ವಿಶ್ವದ ಅನಂತ ಶಕ್ತಿ ಪ್ರತಿಯೊಬ್ಬ ಮನುಷ್ಯನ ಹೃತ್ಕಮಲದಲ್ಲಿ ಪೂರ್ಣ ಪ್ರಮಾಣದಲ್ಲಿ ಅಡಗಿದೆ. ನಮ್ಮ ಹೃದಯದ ಸ್ವಲ್ಪ ಮೇಲ್ಬಾಗದಲ್ಲಿನ ಥೈಮಸ್ ಗ್ಲಾಂಡ್ ಒಳಗೆ ಕಮಲರೂಪದಲ್ಲಿ ಒಂದು ಸೂಜಿಯ ಮೊನೆಯಷ್ಟು ಸೂಕ್ಷ್ಮ ರೂಪದಲ್ಲಿ ಈ ಶಕ್ತಿಯ ಕೇಂದ್ರ ಅಡಗಿದೆ. ಇಂತಹ ಅದ್ಭುತ ಶಕ್ತಿ ಭಗವಂತ ಪರಮೇಷ್ಠೀ. ಎಲ್ಲಕ್ಕಿಂತ ಉತ್ಕೃಷ್ಟವಾದ ನಿತ್ಯ ಲೋಕ ವೈಕುಂಠ ನಿವಾಸಿ ಭಗವಂತ ಪರಮೇಷ್ಠೀ.
421) ಪರಿಗ್ರಹಃಪರಿಗ್ರಹ ಎಂದರೆ 'ಪರಿವಾರ' ಎನ್ನುವುದು ಒಂದು ಅರ್ಥ. ಎಲ್ಲಕ್ಕೂ ಮೂಲ ಸ್ವಾಮಿಯಾದ ಭಗವಂತನಿಗೆ ಸರ್ವರೂ ಪರಿಗ್ರಹವಾದರೆ, ಸ್ವಯಂ ಭಗವಂತ ಭಕ್ತರ, ಜ್ಞಾನಿಗಳ ಪರಿಗ್ರಹ. "ಹೂವ ತರುವವರ ಮನೆಗೆ ಹುಲ್ಲತರುವ" ಎನ್ನುವಂತೆ, ಭಕ್ತಿಯಿಂದ ಭಗವಂತನಿಗೆ ನಾವು ಹೂವನ್ನು ಅರ್ಪಿಸಿದರೆ ಆತ ನಮ್ಮ ಪರಿವಾರದವರಲೋಬ್ಬನಾಗಿ ಭಕ್ತರ ಸೇವೆ ಮಾಡುತ್ತಾನೆ.
ಪರಿತಃ+ಗ್ರಹ್ಯತಿ, ಅಂದರೆ ಎಲ್ಲಾ ಕಡೆ ಜ್ಞಾನಿಗಳ, ಭಕ್ತರ ಉಪಾಸ್ಯ ಮೂರ್ತಿಯಾಗಿ ಪೂಜೆಯನ್ನು ಸ್ವೀಕರಿಸುವ ಭಗವಂತ ಪರಿಗ್ರಹಃ. ನಾವು ಯಾವ ದೇವತೆಯನ್ನು ಶ್ರೆದ್ಧೆಯಿಂದ ಪೂಜಿಸಿದರೂ ಅದು ತಲುಪುವುದು ಭಗವಂತನನ್ನೇ. ಗೀತೆಯಲ್ಲಿ ಹೇಳುವಂತೆ:
ಯೇsಪ್ಯನ್ಯ ದೇವತಾಭಕ್ತಾ ಯಜಂತೇ ಶ್ರದ್ಧಯಾsನ್ವಿತಾಃ

ತೇsಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್ (ಅ-೯, ಶ್ಲೋ-೨೩)
"ಕೌಂತೇಯ- ಯಾರು ಬೇರೆ ದೇವತೆಗಳ ಭಕ್ತರಾಗಿ ಶ್ರದ್ಧೆಯಿಂದ ಅವರನ್ನು ಆರಾಧಿಸುತ್ತಾರೆ ಅಂತವರೂ ಕೂಡಾ ತಪ್ಪು ದಾರಿಯಿಂದ ನನ್ನನ್ನೇ ಪೂಜಿಸುತ್ತಾರೆ"
ಭಕ್ತರು ಪ್ರೀತಿಯಿಂದ,ಭಕ್ತಿಯಿಂದ ನೀಡುವ ಎಲ್ಲವನ್ನೂ ಎಲ್ಲೆಡೆ ಸ್ವೀಕರಿಸಿ ಉದ್ಧಾರ ಮಾಡುವ ಭಗವಂತ ಪರಿಗ್ರಹಃ.

No comments:

Post a Comment