Friday, October 15, 2010

Vishnu Sahasranama 457-462

ವಿಷ್ಣು ಸಹಸ್ರನಾಮ:  ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್
"ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್" ಈ ಶ್ಲೋಕದಲ್ಲಿ ಬರುವ ಎಲ್ಲಾ ನಾಮಗಳು 'ಸು' ಪದದಿಂದ ಆರಂಭವಾಗುತ್ತದೆ. ಭಗವಂತನನ್ನು ಮೂಲ ನಾಮ ವ್ಯಾಹೃತಿಯಲ್ಲಿ 'ಸ್ವಃ' (ಭೂರ್ಭುವಃ ಸ್ವಃ) ಎಂಬ ನಾಮದಿಂದ ಸಂಭೋದಿಸುತ್ತಾರೆ. ಆದ್ದರಿಂದ 'ಸು' ಎಂದರೆ ಸುಂದರ, ಚಲುವ,ಆನಂದಪೂರ್ಣ,ಸುಸ್ಥಿತ, ಸುವ್ಯವಸ್ಥಿತ ಇತ್ಯಾದಿ. ಈ ಅರ್ಥ ಇಲ್ಲಿ ಬರುವ ಎಲ್ಲಾ ನಾಮಗಳಿಗೂ ಅನ್ವಯ.
457) ಸುವ್ರತಃ
ವ್ರತ ಎಂದರೆ ದೀಕ್ಷೆ, ನಿಷ್ಠೆ, ಶಿಸ್ತುಬದ್ಧವಾದ ಕ್ರಿಯೆ. ಇಂದ್ರಿಯ ನಿಗ್ರಹಕ್ಕೆ ಮಾಡುವ ನಿಯತವಾದ ಕ್ರಿಯೆ. ವ್ರತದಲ್ಲಿ ಎರಡು ವಿಧ. ಯಾವುದೋ ಒಂದು ಫಲಾಪೇಕ್ಷೆಯಿಟ್ಟು ಮಾಡುವ ವ್ರತ ಹಾಗು ಭಗವಂತನ ಪ್ರೀತ್ಯರ್ಥವಾಗಿ ಮಾಡುವ ವ್ರತ. ಫಲಾಪೇಕ್ಷೆಯಿಟ್ಟು ಮಾಡುವ ವ್ರತವನ್ನು ಕಾಮ್ಯ ಎನ್ನುತ್ತಾರೆ. ಇದನ್ನು ಶಾಸ್ತ್ರದಲ್ಲಿ ವಿರೋಧಮಾಡುತ್ತಾರೆ. ಭಗವಂತನ ಅನುಗ್ರಹ,ಪ್ರೀತಿಗೋಸ್ಕರ ಮಾಡುವ ವ್ರತ ನಿಷ್ಕಾಮ ವ್ರತ. ಇಲ್ಲಿ ವ್ರತ ಮಾಡುವವರು ಭಗವಂತನ ಪ್ರೀತಿಯನ್ನು ಬಿಟ್ಟು ಇನ್ನೇನನ್ನೂ ಬಯಸುವುದಿಲ್ಲ. ಇದಕ್ಕೆ ಉತ್ತಮ ನಿದರ್ಶನ ಪ್ರಹಲ್ಲಾದನ ವ್ರತ. ತನ್ನ ಮುಂದೆ ಪ್ರತ್ಯಕ್ಷನಾದ ಭಗವಂತ ನಿನಗೇನೂ ಬೇಕು ಎಂದು ಕೇಳಿದಾಗ ಆ ಪುಟ್ಟ ಬಾಲಕ 'ನಾನು ನಿನ್ನನ್ನು ಭಕ್ತಿ ಮಾಡಿದ್ದು ನಿನ್ನಿಂದ ಪ್ರತಿಫಲಪಡೆಯುವುದಕ್ಕಾಗಿ ಅಲ್ಲ, ನನ್ನ ಭಕ್ತಿ ವ್ಯಾಪಾರವಲ್ಲ ಎನ್ನುತ್ತಾನೆ'! ಸೃಷ್ಟಿ-ಸ್ಥಿತಿ-ಸಂಹಾರ ಭಗವಂತನ ನಿಷ್ಕಾಮ ವ್ರತ. ರಾಮಾಯಣದಲ್ಲಿ ಶ್ರೀರಾಮಚಂದ್ರ ಹೇಳುವಂತೆ "ಅಭಯಂ ಸರ್ವ ಭೂತೇಭ್ಯೋ ದದಾಮಿ ಏತದ್ ವ್ರತಂ ಮಮಃ" ಅಂದರೆ 'ಯಾರು ನನ್ನಲ್ಲಿ ಶರಣು ಕೋರಿ ಬರುತ್ತಾರೋ ಅವರಿಗೆ ಜಗತ್ತಿನಿಂದ ರಕ್ಷಣೆ ಕೊಡುವುದು ನನ್ನ ವ್ರತ'. ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ:
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ

ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್
ಅಂದರೆ 'ಬೇರೆಲ್ಲಾ ತೊರೆದು ನನ್ನನ್ನೇ ನೆನೆಯುತ್ತ ಪರಿಪರಿಯಿಂದ ಪೂಜಿಸುವ(ನಿತ್ಯ ನಿಷ್ಕಾಮ ಕರ್ಮ) ಜನರು ಎಲ್ಲೆಲ್ಲೂ ನನ್ನ ಸೇವೆಗೆ ಮುಡಿಪಾದವರು. ಅವರ ಯೋಗ-ಕ್ಷೇಮದ ಹೊಣೆ ನನ್ನದು'. ಭಗವಂತ ಎಂದೂ ಹೂಡಿದ ಬಾಣ ಹಿಂದೆ ಪಡೆಯುವುದಿಲ್ಲ, ಆಡಿದ ಮಾತನ್ನು ತಪ್ಪುವುದಿಲ್ಲ. ಆದರೆ ಕೆಲವೊಮ್ಮೆ ಆತನ ನುಡಿ ನೆರವೇರಲು ಅನೇಕ ಜನ್ಮಗಳೇ ಹಿಡಿಯಬಹುದು! ಹೀಗೆ ನಿರಂತರ ರಕ್ಷಣೆಯ ವ್ರತವನ್ನು ಮಾಡುವ ಆನಂದಮಯ ಭಗವಂತ ಸುವ್ರತಃ.
458) ಸುಮುಖಃ
ಮೇಲೆ ಹೇಳಿದ 'ಸು' ಪದದ ಅರ್ಥವನ್ನು 'ಮುಖ' ಪದದೊಂದಿಗೆ ಸೇರಿಸಿದರೆ ಭಗವಂತನ 'ಸುಮುಖಃ' ನಾಮದ ಅರ್ಥ ತೆರೆದುಕೊಳ್ಳುತ್ತದೆ. ಭಗವಂತ ಸುಂದರವಾದ ರೂಪವನ್ನು ಈ ನಾಮ ಹೇಳುತ್ತದೆ. ವಿಶೇಷವಾಗಿ ಕೃಷ್ಣಾವತಾರದಲ್ಲಿ ಭಗವಂತ ತನ್ನ ಸುಮುಖ ರೂಪವನ್ನು ತೋರಿದ್ದಾನೆ.
459) ಸೂಕ್ಷ್ಮಃ
ಭಗವಂತ ಜ್ಞಾನಾನಂದಮಯ. ಆತ ಸೂಕ್ಷ್ಮದಲ್ಲಿ ಸೂಕ್ಷ್ಮ ಹಾಗು ಬೃಹತ್ ರೂಪಿ (Smaller than Smallest and Bigger than Biggest). ಹೀಗಿದ್ದರೂ ಕೂಡಾ ಆತ ಇಷ್ಟಪಟ್ಟರೆ ಭಕ್ತರ ಮುಂದೆ ಕಾಣಿಸಿಕೊಳ್ಳುತ್ತಾನೆ. ರಾಮನ ಕಾಲದಲ್ಲಿದ್ದವರು ರಾಮನನ್ನು, ಕೃಷ್ಣನ ಕಾಲದಲ್ಲಿದ್ದವರು ಕೃಷ್ಣನನ್ನು ಕಂಡಿದ್ದಾರೆ. ಒಳ್ಳೆಯವರು-ಕೆಟ್ಟವರು, ಸಜ್ಜನರು-ದುರ್ಜನರು, ಪಂಡಿತರು-ಪಾಮರರು, ಗಂಡಸರು-ಹೆಂಗಸರು, ಎಳೆಯರು-ಮುದುಕರು, ಹೀಗೆ ಎಲ್ಲರೂ ಕಂಡಿದ್ದಾರೆ. ನಿಜವಾಗಿ ಅವರು ಕಂಡಿದ್ದು ನಮ್ಮ ಕಣ್ಣಿಗೆ ಕಾಣದ ಸೂಕ್ಷ್ಮ ತತ್ವವನ್ನು. ಇಂತಹ ಸೂಕ್ಷ್ಮಾತಿ-ಸೂಕ್ಷ್ಮ ತತ್ವ ಭಗವಂತ ಸೂಕ್ಷ್ಮಃ.
460) ಸುಘೋಷಃ
ಭಗವಂತನ ಮಾತು ಬಹಳ ಸುಂದರ. ಭಗವಂತನ ಆದೇಶ ಪಡೆದು ಭೂಮಿಯಲ್ಲಿ ಹುಟ್ಟಿದ ಮಹಾಪುರುಷರ ಮಾತಿನ ನಾದದಲ್ಲೇ ಭಗವಂತನನ್ನು ದ್ವನಿಸುವ ಶಕ್ತಿ ಇರುತ್ತದೆ.
ಮಂತ್ರಗಳಲ್ಲಿ ಶಕ್ತಿ ಅಡಗಿರುವುದು ಅದರ ನಾದದಲ್ಲಿ. ಮಂತ್ರವನ್ನು ಪಠಿಸುವವರ ಇಷ್ಟಾರ್ಥ ಸಿದ್ಧಿಗಾಗಿ ಅದನ್ನು Compose ಮಾಡಿದ್ದಾರೆ. ಇದರ ಹಿಂದೆ ಶಕ್ತಿಯುತ ಮನೋಬಲ (Will power) ಅಡಗಿದೆ. ಭಗವಂತನ ಭಕ್ತರ ನಾದವೇ ಇಷ್ಟೊಂದು ಶಕ್ತಿಶಾಲಿಯಾಗಿರುವಾಗ ಇನ್ನು ಭಗವಂತನ ನಾದ ಹಾಗು ಮನೋಬಲ ನಮ್ಮಿಂದ ಊಹಿಸುವುದು ಅಸಾಧ್ಯ. ಜಗತ್ತಿನಲ್ಲಿ ಯಾವ ಯಾವ ಘೋಷಗಳಿವೆ ಅವುಗಳೆಲ್ಲವೂ ಸಮೀಚೀನವಾದ ಭಗವಂತನನ್ನೇ ಹೇಳುತ್ತವೆ. ಈ ಪ್ರಪಂಚದಲ್ಲಿರುವ ಎಲ್ಲಾ ನಾದಗಳೂ, ಎಲ್ಲಾ ಬಾಷೆಗಳು ಭಗವಂತನನ್ನೇ ಹೇಳುತ್ತವೆ. ಪಕ್ಷಿಗಳ ಚಿಲಿಪಿಲಿ, ಪ್ರಾಣಿಗಳ ಕೂಗು, ನೀರಿನ ಝುಳು-ಝುಳು, ಸಮುದ್ರದ ಮೊರೆತ, ಗಾಳಿಯ ಸುಯಿಲು, ಎಳೆಗಳ ಮರ್ಮರ ಎಲ್ಲಾ ಸಮಸ್ತ ನಾದವೂ ಕೂಡಾ ಭಗವಂತನ ಗುಣಗಾನ ಮಾಡುವುದರಿಂದ ಆತ ಸುಘೋಷಃ.
461) ಸುಖದಃ
ಭಗವಂತನ ಬಗ್ಗೆ ಕೇಳುವುದೇ ಆನಂದ. ಆನಂದಮಯನಾದ ಆತನ ಚಿಂತನೆ ನಮ್ಮನ್ನು ಆನಂದಮಯರನ್ನಾಗಿ ಮಾಡುತ್ತದೆ. ಆತ ಆನಂದ ಸಾಗರ. ಆತನ ಬಳಿಗೆ ಹೋದವರು ಆನಂದ ಸಾಗರದಲ್ಲಿ ಮುಳುಗಿರುತ್ತಾರೆ. ಇನ್ನೊಂದು ಅರ್ಥದಲ್ಲಿ ಆತ ಸುಖವನ್ನು 'ಧ್ಯತಿಸುವವನು'. ಯಾರು ಅಸತ್ಯದ ದಾರಿಯಲ್ಲಿ ಸಾಗುತ್ತಾರೋ ಅವರ ಸುಖವನ್ನು ಕಸಿದುಕೊಳ್ಳುವ, ಸುಖ-ದುಃಖದ ಮಿಶ್ರಣದ ಬದುಕನ್ನು ಕೊಟ್ಟು ನಮ್ಮನ್ನು ಮುಕ್ತಿಯತ್ತ ಕೊಂಡೊಯ್ಯುವ ಭಗವಂತ ಸುಖದಃ.
462) ಸುಹೃತ್
ಎಲ್ಲಾ ಜೀವ ಜಾತಕ್ಕೆ ಆತ್ಮೀಯ ಗೆಳೆಯ. ಭಗವಂತ ನಮಗೆ ಕೊಡುವ ಕಷ್ಟ ನಮ್ಮ ಒಳಿತಿಗಾಗಿ, ನಮ್ಮ ಜೀವನದಲ್ಲಿ ನಮಗರಿವಿಲ್ಲದಿದ್ದರೂ, ಅವನು ಮಾಡುವ ಉಪಕಾರ ಅಪರಿಮಿತ. ಹೀಗೆ ಆತ್ಮೀಯನಾಗಿ ಎಂದೆಂದೂ ನಮ್ಮೊಂದಿಗಿರುವ ಭಗವಂತ ಸುಹೃತ್.

No comments:

Post a Comment