Tuesday, October 12, 2010

Vishnu sahasranama 447-452


ವಿಷ್ಣು ಸಹಸ್ರನಾಮ: ಯಜ್ಞ ಇಜ್ಯೋ ಮಹೇಜ್ಯಶ್ಚ ಕ್ರತುಃ ಸತ್ರಂ ಸತಾಂ ಗತಿಃ
447) ಯಜ್ಞಃ

ವಿಶ್ವದ ಸೃಷ್ಟಿಯೇ ಒಂದು ಯಜ್ಞ. ಎಲ್ಲೆಲ್ಲೂ ಹರಡಿರುವ ವಸ್ತುವನ್ನು ಒಂದು ಕಡೆ ಒಂದುಗೂಡಿಸುವುದು ಯಜ್ಞ. ಬೇರೆ ಬೇರೆ ಕಡೆಯಿಂದ ಬಂದು ಒಂದು ಕಡೆ ಸೇರಿ ಜ್ಞಾನಾರ್ಜನೆ ಮಾಡುವುದು ಜ್ಞಾನ ಯಜ್ಞ. ಸೃಷ್ಟಿಯ ಆದಿಯಲ್ಲಿ ಪರಮಾಣುರೂಪದಲ್ಲಿದ್ದ ಈ ಸೃಷ್ಟಿಯನ್ನು ಒಂದುಗೂಡಿಸಿ ಪ್ರಪಂಚ ಸೃಷ್ಟಿಮಾಡಿದ ಭಗವಂತ ಯಜ್ಞಃ. ನಾವು ಮಾಡುವ ಯಜ್ಞ ಕೂಡಾ ಈ ಸೃಷ್ಟಿಯ ಸಂಕೇತ. ಯಜ್ಞ ಕುಂಡ ಸೃಷ್ಟಿಗೆ ಕಾರಣವಾದ ಗರ್ಭ; ಅದರೊಳಗಿನ ಪ್ರಜ್ವಲಿಸುವ ಅಗ್ನಿ 'ಜೀವ'; ತುಪ್ಪದ ಆಹುತಿ ಸೃಷ್ಟಿಗೆ ಮೂಲಕಾರಣವಾದ ವೀರ್ಯ.
ಇರುವುದನ್ನೆಲ್ಲ ಬಲ್ಲವನು; ಯಜ್ಞದಲ್ಲಿ ನೆಲೆಸಿದವನು ಆದ ಭಗವಂತ ಯಜ್ಞಃ.
448) ಇಜ್ಯಃ
ಎಲ್ಲರಿಂದ ಇಜ್ಯನಾದ ಭಗವಂತ ಇಜ್ಯ. ಇಲ್ಲಿ ಇಜ್ಯ ಎಂದರೆ ಎಲ್ಲರಿಂದ ಪೂಜಿಸಲ್ಪಡುವವನು. ಯಜ್ಞದಲ್ಲಿ ನಾವು ಪೂಜೆ ಮಾಡುವುದು ಬೆಂಕಿಯನ್ನಲ್ಲ, ಅಗ್ನಿ ಮುಖೇನ ಅಗ್ನಿನಾರಾಯಣನ ಪೂಜೆ ಯಜ್ಞ. ಈ ಅರಿವಿಲ್ಲದೆ ಯಜ್ಞವನ್ನು ಮಾಡಿದರೆ ಹೊಗೆ ತಿಂದು ಸಾಯಬೇಕಾದೀತು! ನಮ್ಮ ಪೂಜೆ ಅಗ್ನಿನಾರಾಯಣನಿಂದ ಸೂರ್ಯ ನಾರಾಯಣನನ್ನು ಸೇರಿ ಮರಳಿ ನರನಾರಾಯಣನನ್ನು ತಲುಪುತ್ತದೆ. ಇದಕ್ಕಾಗಿ ದೇವರನ್ನು ಕುರಿತು ಮಾಡುವ ಯಜ್ಞ ಯಾವಾಗಲೂ ಹಗಲು ಹೊತ್ತಿನಲ್ಲೇ ನಡೆಯುತ್ತದೆ. ಅಗ್ನಿಯ ಏಳು ಬಣ್ಣಗಳ ಮುಖೇನ ಸೂರ್ಯನ ಏಳು ಬಣ್ಣಗಳಲ್ಲಿ ವಿಲೀನವಾಗುವ ಯಜ್ಞಶಕ್ತಿ, ವಾತಾವರಣವನ್ನು ಸೇರಿ ಲೋಕಕ್ಕೆ ಮಂಗಳಕಾರಿಯಾಗುತ್ತದೆ. ಹೀಗೆ ಯಜ್ಞಗಳಿಂದ ಆರಾಧ್ಯನಾದ ಭಗವಂತ ಇಜ್ಯಃ.
449) ಮಹೇಜ್ಯಃ
ಯಜ್ಞಗಳಿಂದ ಪೂಜಿಸಲ್ಪಡುವ ಶಕ್ತಿಗಳಲ್ಲಿ 'ಮಹತ್ತಾದ ಶಕ್ತಿ' ಮಹೇಜ್ಯಃ. ಇಲ್ಲಿ 'ಮಹ' ಎಂದರೆ ಮಹತ್ತಾದ, ನಮ್ಮಿಂದ ದೊಡ್ಡದಾದ, ಪೂಜನೀಯ ಇತ್ಯಾದಿ. ಮಹಹ+ಇಜ್ಯ-ಮಹೇಜ್ಯ; ಮಹಹ ಎಂದರೆ ಉತ್ಸವ, ಸಂಭ್ರಮ ಆಚರಣೆ, ಹಬ್ಬ ಇತ್ಯಾದಿ. ಸರ್ವ "ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ". ಉತ್ಸವಗಳ ಪೂಜೆಯನ್ನು ಸ್ವೀಕರಿಸುವವನು ದೇವತೆಗಳ ಅಂತರ್ಯಾಮಿ ಭಗವಂತ. ಉದಾಹರಣೆಗೆ 'ಹನುಮ ಜಯಂತಿ' ಈ ಉತ್ಸವದಲ್ಲಿ ನಾವು ಆಂಜನೇಯನನ್ನು ಪೂಜಿಸುತ್ತೇವೆ, ಆದರೆ ಶ್ರೀರಾಮಚಂದ್ರ ಸ್ವೀಕರಿಸದೆ ಅಂಜನೇಯ ಯಾವ ಪೂಜೆಯನ್ನೂ ಸ್ವೀಕರಿಸಲಾರ. ಉತ್ಸವಗಳಷ್ಟೇ ಅಲ್ಲ, ಹುಟ್ಟು ಹಬ್ಬ ಮದುವೆ ಇನ್ಯಾವುದೋ ಸಂಭ್ರಮದಲ್ಲಿ, ಪೂಜೆಯನ್ನು ಸ್ವೀಕರಿಸುವವ ಮಹೇಜ್ಯನಾದ ಭಗವಂತನೇ. ಉದಾಹರಣೆಗೆ ಹುಟ್ಟು ಹಬ್ಬ, ನಾವು ನಮ್ಮ ಮಗುವಿನ ಹುಟ್ಟು ಹಬ್ಬ ಆಚರಿಸುತ್ತೇವೆ. ಈ ಹಿಂದೆ ಹೇಳಿದಂತೆ ಒಂದು ಜೀವ ಹುಟ್ಟುವಾಗ ಆ ಜೀವದೊಂದಿಗೆ ರಕ್ಷಕನಾಗಿ ಬಿಂಬ ರೂಪಿ ಭಗವಂತನ ಜನನವಾಗುತ್ತದೆ. ಅಂದರೆ ನಾವು ಆಚರಿಸುವ ಹುಟ್ಟು ಹಬ್ಬ ಬಿಂಬರೂಪಿ ಭಗವಂತನ ಹುಟ್ಟು ಹಬ್ಬ ಕೂಡಾ ಹೌದು. ಒಬ್ಬ ಮನುಷ್ಯ ನೂರು ವರ್ಷ ಬದುಕಿದ ಎಂದರೆ ಆತನ ದೇಹದೊಳಗೆ ಬಿಂಬ ರೂಪಿ ಭಗವಂತ ನೂರು ವರ್ಷ ಕೂತ ಎಂದರ್ಥ. ಆದ್ದರಿಂದ ಭಗವಂತನನ್ನು 'ಶತರ್ಷಿ' ಎನ್ನುತ್ತಾರೆ. ಇನ್ನು ಮದುವೆ, ಪ್ರೀತಿ, ದಾಪತ್ಯ, ಭಾಂದವ್ಯ ಇತ್ಯಾದಿ. ಇಲ್ಲಿ ನಮ್ಮೊಳಗೆ ಕೂತ ಭಗವಂತ ಪ್ರೀತಿಯ ಬೀಜವನ್ನು ಬಿತ್ತದಿದ್ದರೆ ಅಲ್ಲಿ ಪ್ರೀತಿ ಇರುವುದಿಲ್ಲ. ಕೆಲವೊಮ್ಮೆ ನಮಗರಿವಿಲ್ಲದಂತೆ ನಾವು ಇನ್ನೊಬ್ಬರ ಸ್ನೇಹ ಪ್ರೀತಿಯ ಪಾಶದಲ್ಲಿ ಬಂಧಿಗಳಾಗುತ್ತೇವೆ. ಇನ್ನು ಕೆಲವೊಮ್ಮೆ ಕಾರಣವಿಲ್ಲದೆ ಇನ್ನೊಬ್ಬರಿಂದ ದೂರವಿರುತ್ತೇವೆ. "I don't know why, but i don't like him" ಎಂದು ಹೇಳುವ ಜನರನ್ನು ನೀವು ನೋಡಿರಬಹುದು. ಇದಕ್ಕೆ ಕಾರಣ ನಮ್ಮ ಪೂರ್ವ ಕರ್ಮ ಹಾಗು ನಮ್ಮೊಳಗಿದ್ದು ನಮ್ಮಲ್ಲಿ ಪ್ರೀತಿಯ ಬೀಜವನ್ನು ಚಿಗುರಿಸುವ ಭಗವಂತ. ಜೀವನದಲ್ಲಿ ಗಂಡು ಹೆಣ್ಣಿನ ನಡುವೆ ಅನ್ಯೋನ್ಯ ಪ್ರೀತಿ ಕೊನೆಯ ತನಕ ಬೆಸೆದುಕೊಂಡಿರುವುದು ಅತೀ ವಿರಳ. ಅಂತಹ ದಾಂಪತ್ಯವನ್ನು ಎಲ್ಲರೂ ಬಯಸುತ್ತಾರೆ, ಆದರೆ ಸಿಗುವುದು ಅತೀ ವಿರಳ. ಆದ್ದರಿಂದ ದಾಂಪತ್ಯ ಕೂಡಾ ಭಗವಂತನ ದಾಂಪತ್ಯ Anniversary ಕೂಡಾ ಅವನದ್ದೇ!, ನಾವು ಕೇವಲ ಮಾಧ್ಯಮ ಅಷ್ಟೇ. ಆದ್ದರಿಂದ ಪ್ರತಿಯೊಂದು ಉತ್ಸವದಲ್ಲಿ ಪೂಜಿಸಲ್ಪಡುವವನು ಮಹೇಜ್ಯನಾದ ಭಗವಂತನೇ.
ಗೋಪೂಜೆಯ ದಿನ ನಾವು ಗೋವುಗಳನ್ನು, ತುಳಸಿ ಪೂಜೆಯ ದಿನ ತುಳಸಿಯನ್ನು ಆರಾದಿಸುತ್ತೇವೆ. ಆದರೆ ಗೋವು, ತುಳಸಿ ಎಲ್ಲವೂ ಭಗವಂತನ ಪ್ರತೀಕ. ಹೀಗೆ ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ಆಯಾ ಪ್ರತೀಕದಲ್ಲಿದ್ದು ಇಜ್ಯನಾಗುವ ಭಗವಂತ ಮಹೇಜ್ಯಃ.
450) ಕ್ರತುಃ
ಯಜ್ಞಗಳಲ್ಲಿ ಅನೇಕ ವಿಧದ ಪ್ರಕ್ರಿಯೆಗಳು ವೇದಕಾಲದಲ್ಲಿ ಪ್ರಚಲಿತದಲ್ಲಿತ್ತು. ಮೂರುದಿನದ ಯಜ್ಞ, ಆರು ದಿನದ ಯಜ್ಞ , ಚಾತುರ್ಮಾಸದ ಯಜ್ಞ, ಇತ್ಯಾದಿ. ಇಂತಹ ಯಜ್ಞದಲ್ಲಿ ದಿನಂಪ್ರತಿ ಮೂರು ಭಾರಿ ಭಗವಂತನಿಗೆ ಆಹುತಿ ಕೊಡುತ್ತಾರೆ. ಈ ಕ್ರಿಯೆ ಯಜ್ಞದ ಎಲ್ಲಾ ದಿನಗಳಲ್ಲೂ ನಡೆಯುತ್ತದೆ. ಈ ಕ್ರಿಯೆಯನ್ನು 'ಕ್ರತು' ಎನ್ನುತ್ತಾರೆ. ನಮ್ಮ ಕೈಯಿಂದ ಕ್ರತುವನ್ನು ಮಾಡಿಸಿ, ಪ್ರತಿದಿನ ಕ್ರತುವನ್ನು ಸ್ವೀಕಾರ ಮಾಡುವ ಭಗವಂತ ಕ್ರತುಃ. ಕ್ರತು ಸಾಂಗವಾಗಿ ನೆರವೇರಬೇಕಿದ್ದರೆ ನಮ್ಮಲ್ಲಿ ನಂಬಿಕೆ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಹಾಗು ಅನುಕೂಲತೆ ಅತ್ಯಗತ್ಯ. ನಮ್ಮ ಹಿಂದೆ ನಿಂತು ಈ ಕ್ರಿಯಾ ಕಲಾಪಗಳನ್ನು ನಡೆಸುವ, ಜ್ಞಾನ ಸ್ವರೂಪನು; ಕರ್ಮದ ಕಟ್ಟಿನಿಂದ ನಮ್ಮನ್ನು ಪಾರು ಮಾಡುವನು ಆದ ಭಗವಂತ ಕ್ರತುಃ.
451) ಸತ್ರಮ್.
ಸತ್ರ ಎಂದರೂ ಯಜ್ಞ ಎನ್ನುವ ಅರ್ಥವನ್ನು ಕೊಡುತ್ತದೆ. ಮನೆಯಲ್ಲಿ ನಮಗೋಸ್ಕರ ಅಗ್ನಿಮುಖದಲ್ಲಿ ಮಾಡುವ ಕ್ರಿಯೆ 'ಯಾಗ' ; ಹತ್ತಾರು ಜನ ಸೇರಿ ಸಮಷ್ಟಿಯಾಗಿ ಮಾಡಿದರೆ ಅದು 'ಸತ್ರಯಾಗ'. ಸಕಲರನ್ನೂ ರಕ್ಷಿಸುವ, ಎಲ್ಲವನ್ನು ಏಕರೀತಿಯಿಂದ ಪಾಲಿಸುವ ಭಗವಂತ ಸತ್ರಮ್.
452) ಸತಾಂಗತಿಃ
ಸಾತ್ವಿಕ ಗುಣಗಳಿಂದ ತುಂಬಿದ, ಯಾವಾಗಲೂ ಜ್ಞಾನದ ಮಾರ್ಗದಲ್ಲಿ ನಡೆವ 'ಸಜ್ಜನರರಿಗೆ' , 'ವಿದ್ವಾಂಸರಿಗೆ' ವಿಶಿಷ್ಟವಾದ ಪ್ರೀತಿ ಹಾಗು ರಕ್ಷಣೆಯನ್ನು ಕೊಡುವ ಭಗವಂತ ಸತಾಂಗತಿಃ. ಇದಕ್ಕೆ ಉತ್ತಮ ನಿದರ್ಶನ 'ಮಹಾಭಾರತ'. ಸಜ್ಜನರಾದ ಪಾಂಡವರಿಗೆ ದ್ರೋಹವನ್ನು ಮಾಡಿದ ಕೌರವರನ್ನು ಹಾಗು ಅವರಿಗೆ ಸಹಾಯ ಮಾಡಿದ ಪ್ರತಿಯೊಬ್ಬರನ್ನು ಶಿಕ್ಷಿಸಿ ಸಾತ್ವಿಕತೆಯ ರಕ್ಷಣೆ ಮಾಡಿದ ಭಗವಂತ ಸತಾಂಗತಿಃ

No comments:

Post a Comment