Friday, October 29, 2010

Vishnu sahasranama 477-483


ವಿಷ್ಣು ಸಹಸ್ರನಾಮ:  ಧರ್ಮಗುಬ್ಧರ್ಮಕೃದ್ಧರ್ಮೀ ಸದಸತ್ಕ್ಷರಮಕ್ಷರಮ್
477) ಧರ್ಮಗುಪ್
 
ಧರ್ಮಗುಪ್ ಅಂದರೆ ಧರ್ಮವನ್ನು ಗೊಪನೆ ಮಾಡುವವನು. ಗೊಪನೆ ಎಂದರೆ  ರಕ್ಷಣೆ ಮಾಡುವುದು. ಕೃಷ್ಣ ಗೀತೆಯಲ್ಲಿ ಹೇಳಿದಂತೆ:
ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾssತ್ಮಾನಾಂ ಸೃಜಾಮ್ಯಹಮ್ | (ಅ 4- ಶ್ಲೋ 7)
ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಮ್ |                      
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ||     (ಅ 4- ಶ್ಲೋ 8)
ಭಗವದ್ ಗೀತೆಯ ಈ ಶ್ಲೋಕದ ಅರ್ಥ ಭಗವಂತನ "
ಧರ್ಮಗುಪ್" ಎನ್ನುವ ನಾಮದಲ್ಲಿ ಅಡಗಿದೆ. ಅಧರ್ಮದ ಕೈ ಮೇಲಾಗಿ,  ಧರ್ಮ ನೆಲೆ ಕಳೆದುಕೊಳ್ಳುವ ಸಂದರ್ಭ ಬಂದಾಗ ಭಗವಂತ ಭೂಮಿಗಿಳಿದು ಬರುತ್ತಾನೆ. ಭಗವಂತನ ಅವತಾರದ ಉದ್ದೇಶವೇ ಧರ್ಮ ಗೊಪನೆ. ನಾವು ಭಗವಂತನ ದಶಾವತಾರವನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಮತ್ಸ್ಯಾವತಾರದಲ್ಲಿ ವೇದಾಭಿಮಾನಿ ದೇವತೆಗಳನ್ನು ಬಂಧನದಲ್ಲಿಟ್ಟ ಆಸುರಿಶಕ್ತಿಯನ್ನು ನಿಗ್ರಹಿಸಿ ಧರ್ಮ ರಕ್ಷಣೆ ಮಾಡಿದ ಭಗವಂತ, ಧರ್ಮದ ಬಗ್ಗೆ ಅಲಕ್ಷ ತೋರಿದ ದೇವತೆಗಳು ಸೋತಾಗ, ಕೂರ್ಮಾವತಾರಿಯಾಗಿ ಬಂದು ಧರ್ಮ ರಕ್ಷಣೆ ಮಾಡಿದ. ಹೀಗೆ ಆತನ ಎಲ್ಲಾ ಅವತಾರಗಳು ಧರ್ಮದ ರಕ್ಷಣೆಗಾಗಿಯೇ ಆಗಿದೆ. ವೇದವ್ಯಾಸರ ರೂಪದಲ್ಲಿ ಹದಿನೆಂಟು ಪುರಾಣ, ಬ್ರಹ್ಮಸೂತ್ರ, ಮಹಾಭಾರತ ಇತ್ಯಾದಿ ಗ್ರಂಥಗಳನ್ನು ನಮಗೆ ದಯಪಾಲಿಸಿದ ಭಗವಂತ ಧರ್ಮಗುಪ್.
478) ಧರ್ಮಕೃತ್
ಧರ್ಮ ಎಂದರೆ ನಾವು ನಡೆಯಬೇಕಾದ ನಡೆ. ಧರ್ಮಕೃತ್  ಎಂದರೆ ಧರ್ಮವನ್ನು ನಿರ್ಮಾಣ ಮಾಡಿದವ.
ಇನ್ನೊಂದು ಅರ್ಥದಲ್ಲಿ ಧರ್ಮ ಎಂದರೆ ಒಂದು ವಸ್ತುವಿನ ಅಸಾಧಾರಣ ಗುಣ. ಉದಾಹರಣೆಗೆ ಕಣ್ಣಿನ ಧರ್ಮ ನೋಡುವುದು; ಕಿವಿಯ ಧರ್ಮ ಕೇಳುವುದು, ನಾಲಿಗೆಯ ಧರ್ಮ ರುಚಿ ನೋಡುವುದು. ಹೀಗೆ ಒಂದೊಂದು ಇಂದ್ರಿಯಗಳಲ್ಲಿ, ಒಂದೊಂದು ವಸ್ತುವಿನೊಳಗೆ ಒಂದೊಂದು ಧರ್ಮವನ್ನಿಟ್ಟ ಭಗವಂತ ಧರ್ಮಕೃತ್.  
479) ಧರ್ಮೀ
ಎಲ್ಲ ಶುಭ ಧರ್ಮಗಳ ನೆಲೆ, ಮೂಲ ಶಕ್ತಿ  ಹಾಗು  ಜಗತ್ತಿನ ಧಾರಕಶಕ್ತಿಗಳಾದ ದೇವತೆಗಳ ದೊರೆಯಾದ ಭಗವಂತ
ಧರ್ಮೀ.
480) ಸತ್
ಭಗವಂತನನ್ನು ಸತ್ ಚಿತ್ ಆನಂದ ಎಂದು ಉಪಾಸನೆ ಮಾಡುತ್ತೇವೆ. ಇಲ್ಲಿ ಸತ್ ಎಂದರೆ 'ವ್ಯಕ್ತ'. ಆತ ನಿರ್ಧಿಷ್ಟ ಹಾಗು ದೋಷ ರಹಿತ ಜ್ಞಾನಾನಂದ ಮೂರ್ತಿ.
481) ಅಸತ್
ಅಸತ್ ಎಂದರೆ 'ಅವ್ಯಕ್ತ'.  ಭಗವಂತ ಅವ್ಯಕ್ತ ಮೂರ್ತಿ. ಆತ ಎಲ್ಲರ ಕಣ್ಣಿಗೆ ಕಾಣಲಾರ. ಆತನನ್ನು ಒಳಗಣ್ಣಿನಿಂದ ಕಾಣಲು ಪ್ರಯತ್ನಿಸಬೇಕು. 
482) ಕ್ಷರಮ್
ಕ್ಷರಮ್  ಎಂದರೆ ಸಾವಿನ ಒಡೆಯ. ಸಾವು ಯಾರ ಅಧೀನವೋ ಅವನು ಕ್ಷರಮ್. ಕ್ಷರಣ ಎಂದರೆ ನಿರಂತರ ಬಯಸಿದ್ದನ್ನು ಕೊಡುವವನು. ಎಲ್ಲರ ಒಳಗಿದ್ದು ಆನಂದವನ್ನೀಯುವ ಭಗವಂತ ಕ್ಷರಮ್. 
483) ಅಕ್ಷರಮ್
'ನ-ಕ್ಷರತಿ ಅಕ್ಷರಮ್'; ಅಂದರೆ ಎಂದೂ ನಾಶವಿಲ್ಲದವನು. 'ಅಷ್ಣುತೇ  ಇತಿ ಅಕ್ಷರಮ್'; ಅಂದರೆ ಎಲ್ಲಕಡೆ ತುಂಬಿರುವವನು. 'ಅಧಿಕಮ್ ಕ್ಷರತಿ ಅಕ್ಷರಮ್'; ಅಂದರೆ ಎಲ್ಲರಿಗಿಂತ ಹೆಚ್ಚು ಅಭೀಷ್ಟವನ್ನು ಕೊಡತಕ್ಕ ಸರ್ವಶಕ್ತ. 'ಅಕ್ಷ+ರ' ಅಂದರೆ ಸಮಸ್ತ ವರ್ಣಗಳಲ್ಲಿ (ಅಕ್ಷರಗಳಲ್ಲಿ) ರಮಿಸುವವನು. ಹೀಗೆ ಭಗವಂತನ ಈ ನಾಮಕ್ಕೆ ಅನೇಕ ಅರ್ಥಗಳನ್ನು ಕಾಣಬಹುದು.

2 comments:

  1. ಉತ್ತಮವಾದ ಮಾಹಿತಿಗಳು.ನೀಡುತ್ತಿರಿ.
    ಧನ್ಯವಾದಗಳು.

    ReplyDelete