Monday, October 11, 2010

Vishnusahasranama 442-446


ವಿಷ್ಣು ಸಹಸ್ರನಾಮ: ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ, ಕ್ಷಾಮಃ ಸಮೀಹನಃ
442) ನಕ್ಷತ್ರನೇಮಿಃ

ನಕ್ಷತ್ರ ಎಂದಾಕ್ಷಣ ನಮಗೆ ತಿಳಿದಿರುವುದು ಆಕಾಶದಲ್ಲಿ ಅನೇಕ ಜ್ಯೋತಿರ್ವರ್ಷ ದೂರದಲ್ಲಿರುವ ಅಸಂಖ್ಯ ನಕ್ಷತ್ರಗಳ ಒಂದು ವಿಸ್ಮಯ ಲೋಕ. ಇಂತಹ ನಕ್ಷತ್ರ ಮಂಡಲಕ್ಕೆ ಆಧಾರವಾಗಿ(ನೇಮಿ) ನಿಂತಿರುವ ಭಗವಂತ ನಕ್ಷತ್ರನೇಮಿಃ.
'ಕ್ಷತ್ರ' ಎಂದರೆ ಕ್ಷತಿಗೊಂಡವರನ್ನು ರಕ್ಷಿಸುವವರು ಹಾಗು ಆಳುವವರು (ಉದಾಹರಣೆಗೆ ಕ್ಷತ್ರಿಯರು). ನಕ್ಷತ್ರರು ಎಂದರೆ ಭಗವಂತನಲ್ಲದೆ ಇನ್ನು ಯಾರ ನಿಯಂತ್ರಣದಲ್ಲೂ ಇಲ್ಲದವರು. ಭಗವಂತನೋಬ್ಬನೆ ಜಗದೊಡೆಯ ಎಂದು ನಂಬುವ ಭಕ್ತರಿಗೆ ಆಸರೆಯಾದ ಭಗವಂತ ನಕ್ಷತ್ರನೇಮಿಃ.
443) ನಕ್ಷತ್ರೀ
ಇಪ್ಪತ್ತೇಳು ತಾರೆಗಳ ಅಭಿಮಾನಿ ದೇವಿಯರ ಪತಿಯಾದ ಚಂದ್ರನೊಳಗಿರುವ ಅಭಿಮಾನಿ ದೇವತೆಯೊಳಗೆ ಇರುವ ಧನ್ವಂತರಿ ರೂಪಿ ಭಗವಂತ ನಕ್ಷತ್ರೀ. (ಶೀತಾಂಶು ಮಂಡಲಗತ). ಅಸಂಖ್ಯ ನಕ್ಷತ್ರಗಳನ್ನು ಸೃಷ್ಟಿಸಿ ನಿಯಮಿಸುವ ಭಗವಂತ ನಕ್ಷತ್ರೀ.
444) ಕ್ಷಮಃ
ಕ್ಷಮತೇ ಇತಿ ಕ್ಷಮಃ ; ಎಲ್ಲವನ್ನೂ ಕ್ಷಮಿಸುವ ಭಗವಂತ ಕ್ಷಮಃ. ಕ್ಷಮೆ ಎಂದರೆ ಎದುರಾಳಿಗಳ ಪ್ರತಿಭಟನೆಯನ್ನು ತಡೆದುಕೊಳ್ಳುವ ಸೋಲಿಲ್ಲದ ಸಹನಾಶಕ್ತಿ. ಭಗವಂತನ ಕ್ಷಮಾ ಗುಣವನ್ನು ಹೇಳುವ ಅನೇಕ ದೃಷ್ಟಾಂತವನ್ನು ಆತನ ಲೀಲೆಗಳಲ್ಲಿ ಕಾಣುತ್ತೇವೆ. ರಾಮಾವತಾರ ಸಂಪೂರ್ಣ ಕ್ಷಮೆ ತಾಳ್ಮೆ ಸಹನೆಯ ಅವತಾರ.
ಕೋಪಗೊಂಡು ಕರ್ತವ್ಯ ನಿರತ ದ್ವಾರಪಾಲಕರಾದ ಜಯ-ವಿಜಯರ ಮೇಲೆ ಶಾಪವನ್ನಿತ್ತ ಸನಕಾದಿಗಳನ್ನು ಭಗವಂತ ಕಂಡ ಬಗೆ; ಕೋಪಗೊಂಡು ಭಗವಂತನ ಎದೆಯನ್ನು ತುಳಿದ ಭೃಗು ಮಹರ್ಷಿಯನ್ನು ಭಗವಂತ ನಡೆಸಿಕೊಂಡ ರೀತಿ; ಇತ್ಯಾದಿ ಆತನ ಕ್ಷಮಾ ಗುಣಕ್ಕೆ ಶ್ರೇಷ್ಠ ನಿದರ್ಶನಗಳು. ಭಗವಂತ ಕ್ಷಮಿಸದೆ ಇದ್ದರೆ ನಾವು ನಮ್ಮ ಪಾಪದಿಂದ ಈಚೆ ಬರಲು ಅಸಾಧ್ಯ. ಒಂದು ಜನ್ಮದಲ್ಲಿ ಮುಂದಿನ ಹತ್ತು ಜನ್ಮಕ್ಕೆ ಬೇಕಾಗುವಷ್ಟು ಪಾಪವನ್ನು ಕಲೆಹಾಕುವ ನಮ್ಮನ್ನು ಕ್ಷಮಿಸಿ, ನಮ್ಮ ಪಾಪವನ್ನು ಅಳಿಸಿ ಮುಕ್ತಿಯ ಮಾರ್ಗದತ್ತ ಕೊಂಡೊಯ್ಯುವ ಭಗವಂತ ಕ್ಷಮಃ.
445) ಕ್ಷಾಮಃ
ಎಲ್ಲವನ್ನೂ ಕ್ಷಮಿಸಿ ಮೋಕ್ಷ ಮಾರ್ಗವನ್ನು ತೋರುವ ಭಗವಂತ ಕೆಲವೊಮ್ಮೆ ಅನ್ನಕ್ಕೂ ಗತಿಯಿಲ್ಲದಂತೆ ಮಾಡಿ ಕ್ಷಾಮನೆನಿಸುತ್ತಾನೆ. ಇದು ಅವನು ಅಜ್ಞಾನವನ್ನು ತೊಳೆಯುವ ರೀತಿ. ಕ್ಷ+ಅಮ; ಕ್ಷ ಎಂದರೆ ಕ್ಷಪಯತಿ ಅಂದರೆ ನಾಶಮಾಡುವುದು, 'ಅಮ' ಎಂದರೆ ಅಜ್ಞಾನ. ಭಗವಂತ ಕೊಡುವ ಕಷ್ಟದಲ್ಲಿ ಅಸಾಧಾರಣ ಕಾರುಣ್ಯ ಅಡಗಿದೆ. ನಮ್ಮ ಅಜ್ಞಾನ ನಾಶಮಾಡಿ ಜ್ಞಾನ ಪಕ್ವತೆಯತ್ತ ಕೊಂಡೊಯ್ಯುವ ಭಗವಂತ ಕ್ಷಾಮಃ
446) ಸಮೀಹನಃ
'ಸಮೀಹ' ಎಂದರೆ ಸಮೀಚೀನವಾದ ಕ್ರಿಯೆ. ಭಗವಂತನ ಸರ್ವ ಕ್ರಿಯೆಯೂ ನೂರಕ್ಕೆ ನೂರು ಪರಿಪೂರ್ಣ. ಆತನ ಸೃಷ್ಟಿಯಲ್ಲಿ ಅಪರಿಪೂರ್ಣತೆ ಇಲ್ಲ. ಆದರೆ ನಾವು ಪರಿಪೂರ್ಣರಲ್ಲ. ನಮ್ಮ ಯೋಗ್ಯತೆಗೆ ತಕ್ಕಂತೆ ನಮ್ಮನ್ನು ನಡೆಸುವ, ಒಳಿತನ್ನೇ ಮಾಡುವ ಭಗವಂತ ಸಮೀಹನಃ

No comments:

Post a Comment