Monday, October 4, 2010

Vishnu sahasranama 422-426


ವಿಷ್ಣು ಸಹಸ್ರನಾಮ: ಉಗ್ರಃ ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣಃ
422) ಉಗ್ರಃ

ಮೇಲೆ ಹೇಳಿದಂತೆ ಎಲ್ಲರನ್ನೂ ಪ್ರೀತಿಸುವ ಭಗವಂತ ಅಂತಃಕರಣ ಶುದ್ಧಿ ಇಲ್ಲದೆ ಬಾಹ್ಯ ಪ್ರಪಂಚದಲ್ಲಿ ಸೋಗು ಹಾಕಿಕೊಂಡು ಬದುಕುವವರಿಗೆ ಉಗ್ರ! ಕರ್ತವ್ಯ ಚ್ಯುತನಾದರೆ ಭಗವಂತನ ರಾಜ್ಯದಲ್ಲಿ ಕ್ಷಮೆ ಇಲ್ಲ. ಭಗವಂತ ನಮ್ಮಲ್ಲಿ ಬಯಸುವುದು ಚಿನ್ನದ ಆಭರಣವನ್ನಲ್ಲ, ನಮ್ಮ ಕರ್ತವ್ಯ ನಿಷ್ಠೆಯನ್ನು. ಕರ್ತವ್ಯ ಭ್ರಷ್ಟನಾಗಿ ವೈಭವದ ಪೂಜೆ ಮಾಡಿದರೆ ಆತ ಎಂದೂ ಒಲಿಯುವುದಿಲ್ಲ. ಆತನ ರಾಜ್ಯದಲ್ಲಿ ಎಂದೂ ತಪ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪು ಮಾಡಿದವನು ತಪ್ಪಿನ ಫಲ ಉಣ್ಣಲೇಬೇಕು. ಇದೇ "ಕರ್ಮಫಲ". ನಮಗೆ ಬರುವ ಅತಿಯಾದ ಕಷ್ಟ, ನಮ್ಮ ಮುಂದೆ ನಡೆಯುವ ದುರ್ಘಟನೆ, ಎಲ್ಲವೂ ನಮ್ಮ ಪೂರ್ವ ಪಾಪದ ಪ್ರತಿಫಲನ. "ಪುಣ್ಯ ಫಲವಿರಲಿ, ಪಾಪ ಫಲ ಬೇಡ" ಎಂದರೆ ಅದು ಸಾಧ್ಯವಿಲ್ಲ, ಅದನ್ನು ಅನುಭವಿಸಿಯೇ ತೀರಬೇಕು ! ಈ ವಿಷಯದಲ್ಲಿ ದಾಕ್ಷಣ್ಯವೇ ಇಲ್ಲ. ತಪ್ಪು ಮಾಡಿದವರಿಗೆ ನಿರ್ದಯವಾಗಿ ಶಿಕ್ಷೆ ಕೊಡುವ ಭಗವಂತ ಏಲ್ಲಿ ಅಪ್ರಮಾಣಿಕತೆ ಅಹಂಕಾರವಿದೆಯೋ ಅಲ್ಲಿ ಉಗ್ರನಾಗಿದ್ದು ನಮಗೆ ಶಿಕ್ಷಣವನ್ನು ಕೊಡುತ್ತಾನೆ!
423) ಸಂವಸ್ಸರಃ
ಈ ಹಿಂದೆ ಹೇಳಿದಂತೆ ಈ ನಮ್ಮ ದೇಹದಲ್ಲಿ ನಾಲ್ಕು ವಿಧದ "ಪುರುಷರಿದ್ದಾರೆ'. ಶರೀರ ಪುರುಷ, ಛಂದಃಪುರುಷ, ವೇದಪುರುಷ ಮತ್ತು ಸಂವತ್ಸರ ಪುರುಷ. ಈ ದೇಹ ನಿಂತು ನಡೆದಾಡಬೇಕಾದರೆ ದೇಹದಲ್ಲಿ ಶರೀರಪುರುಷನಾದ ಶಿವಶಕ್ತಿ ಬೇಕು. ಮನಸ್ಸು ಯೋಚಿಸಿದ್ದನ್ನು ಸ್ಪಂದನ, ಪರಾಶರ, ಪಶ್ಯಂತಿ, ಮಧ್ಯಮ ಮತ್ತು ವೈಖರಿ ರೂಪದಲ್ಲಿ ವಾಕ್ ಶಕ್ತಿ ಯಾಗಿ ಹೊರಹೊಮ್ಮುವಂತೆ ಮಾಡಲು ಛಂದಃಪುರುಷನಾದ ಶೇಷ ಶಕ್ತಿ ಅಗತ್ಯ, ವೇದದ ಅರ್ಥವನ್ನು ಮನನ ಮಾಡಿ ತಿಳಿಯುವ ಶಕ್ತಿ "ಗರುಡ ಶಕ್ತಿ" ಅದೇ "ವೇದಪುರುಷ". ಇದರಿಂದಾಚೆಗೆ ಚಿತ್ತವನ್ನು ಒಳಗಿನಿಂದ ಜಾಗೃತಗೊಳಿಸುವ ವಿಜ್ಞಾನಮಯ ಕೋಶದ ಅಭಿಮಾನಿ "ಬ್ರಹ್ಮ-ವಾಯು" ಇದುವೇ "ಸಂವತ್ಸರ ಪುರುಷ". ಈ ಸಂವತ್ಸರ ಪುರುಷರಲ್ಲಿ ನಿಯಾಮಕನಾಗಿ ಕುಳಿತ ಭಗವಂತ "ಪರಮ ಪುರುಷ". ಇದಕ್ಕಾಗಿ ಆತ ಸಂವತ್ಸರಃ.
ಸಂ+ವಸತ್+ರ; ಇಲ್ಲಿ "ಸಂ" ಎಂದರೆ ಸಂಪೂರ್ಣವಾದ ವಸ್ತು-ಭಗವಂತ, ವಸತ್ ಎಂದರೆ ನೆಲೆಸಿರುವುದು, 'ರ' ಎಂದರೆ ರಮೆಯತಿ. ಆದ್ದರಿಂದ ಸಂವಸ್ಸರಃ ಎಂದರೆ "ಭಗವಂತನಲ್ಲಿ ತಮ್ಮ ಮನಸ್ಸನ್ನು ನೆಲೆಗೊಳಿಸಿದವರಿಗೆ ಪೂರ್ಣಾನಂದವನ್ನು ಕೊಡುವವ.
'ಸಂ' ಎಂದರೆ 'ಸಮ್ಯಕ್' ಎನ್ನುವ ಅರ್ಥವನ್ನೂ ಕೊಡುತ್ತದೆ. ಆದ್ದರಿಂದ ಸಂವಸ್ಸರಃ ಎಂದರೆ ತನ್ನ ಪರಿಸರದೊಂದಿಗೆ ಚೆನ್ನಾಗಿ ಬದುಕುವವರಿಗೆ ಆನಂದವನ್ನು ಕೊಡುವವ ಎಂದರ್ಥ. ಇಲ್ಲಿ ಪರಿಸರದೊಂದಿಗೆ ಚನ್ನಾಗಿ ಬದುಕುವುದು ಎಂದರೆ "ಇನ್ನೊಬ್ಬರ ಖುಷಿಯನ್ನು ಕಂಡು ತಾನೂ ಖುಷಿ ಪಡುವುದು, ಇನ್ನೊಬ್ಬರ ಕಷ್ಟಕ್ಕೆ ಕರಗುವುದು, ಒಳ್ಳೆಯತನವನ್ನು ಪ್ರೀತಿಸುವುದು, ಕೆಟ್ಟತನದಿಂದ ದೂರ ನಿಲ್ಲುವುದು". ಇದನ್ನು 'ಸಂ-ವಾಸ' ಎನ್ನುತ್ತಾರೆ. ಇಷ್ಟೇ ಅಲ್ಲದೆ 'ನನಗೆ ಯಾವುದು ಕಷ್ಟ ಕೊಡುತ್ತದೋ ಅದು ಇನ್ನೊಬ್ಬರಿಗೂ ಕಷ್ಟ ಕೊಡುತ್ತದೆ ಎಂದು ತಿಳಿದು ಬದುಕುವುದು'; 'ಇನ್ನೊಬ್ಬರಿಗೆ ಸುಖ-ದುಃಖದ ಸ್ಪಂದನವಿದೆ ಎಂದು ತಿಳಿದು ಬದುಕುವುದು'; 'ಇನ್ನೊಬ್ಬರ ಸುಖಕ್ಕೊಸ್ಕರ ತಾನು ಕಷ್ಟ ಪಡುವುದು', ಇತ್ಯಾದಿ.
ಭಗವಂತನ ಕಡೆ ಮುಖ ಹಾಕಿ ಸಾಗುವವರಿಗೆ ಆನಂದವನ್ನು ಕೊಡುವ ಭಗವಂತ ಸಂವತ್ಸರಃ.
424) ದಕ್ಷಃ
ದಕ್ಷ ಎಂದರೆ ಸಮರ್ಥ. ಭಗವಂತ ಸರ್ವಸಮರ್ಥ (Omnipotent). ಆತ ಇಡೀ ವಿಶ್ವದ ಪ್ರತಿಯೊಂದು ವಸ್ತುವಿನ ಭೂತ-ಭವಿಷ್ಯತ್ ಹಾಗು ವರ್ತಮಾನವನ್ನು ಸಂಪೂರ್ಣ ತಿಳಿದಿರುತ್ತಾನೆ. ಭಗವಂತ ಸರ್ವವನ್ನೂ ಕಾಣಬಲ್ಲ ಶಕ್ತಿ. ನಮ್ಮಲ್ಲಿರುವ ಕಿಂಚಿತ್ ದಕ್ಷತೆ ಭಗವಂತನ ಪ್ರಸಾದ. ಎಲ್ಲಾ ದಕ್ಷರಿಗೂ ದಕ್ಷತೆಯನ್ನು ಕೊಡುವ ಪೂರ್ಣ ದಕ್ಷ ಭಗವಂತನೊಬ್ಬನೆ. ಆತನ ದಕ್ಷತೆಯನ್ನು ವರ್ಣಿಸುವುದು ಅಸಾಧ್ಯ. ಆತನೊಬ್ಬ ವೈಶಿಷ್ಟ್ಯಪೂರ್ಣ ವಿನ್ಯಾಸಕಾರ. ಈ ಜಗತ್ತಿಗೆ ವೈಶಿಷ್ಟವನ್ನು ಕೊಟ್ಟು ನಿರ್ಮಿಸಿ ಸಲಹುವ ಕಾರ್ಯ ಸಮರ್ಥ ಭಗವಂತ ದಕ್ಷಃ
425) ವಿಶ್ರಾಮಃ
ಭಗವಂತ ಸಂಹಾರ ಕರ್ತ ಎಂದಾಗ ನಮಗೆ ಆಶ್ಚರ್ಯವಾಗುತ್ತದೆ. ಯಾರೂ ತನ್ನ ಕೈಯಾರೆ ತನ್ನ ಮಕ್ಕಳನ್ನು ಸಂಹಾರ ಮಾಡುವುದಿಲ್ಲ, ಆದರೆ ಭಗವಂತ ಪ್ರಳಯಕಾಲದಲ್ಲಿ ತನ್ನ ಅದ್ಭುತ ಸೃಷ್ಟಿಯನ್ನು ತಾನೇ ಸಂಹಾರ ಮಾಡುತ್ತಾನೆ! ಭಗವಂತನ ಸಂಹಾರ ನಾಶವಲ್ಲ ! ಅದು ವಿಶ್ರಾಂತಿ. ಜೀವನ ಚಕ್ರದಲ್ಲಿ ಬಳಲಿ ಬೆಂಡಾದ ಜೀವಕ್ಕೆ ವಿಶ್ರಾಂತಿ ಕೊಡುವ ಕಾಲ 'ಪ್ರಳಯ ಕಾಲ'. ಅನೇಕ ಜನ್ಮಗಳಲ್ಲಿ ದೇಹ ಬದಲಾವಣೆ ಮಾಡುತ್ತಾ ಸಾಧನೆಯಲ್ಲಿ ಮುಂದೆ ಸಾಗಿ, ಕೊನೇಯ ದೇಹವೂ ಕಳಚಿ ಬಿದ್ದ ಮೇಲೆ, ಪೂರ್ತಿಯಾಗಿ ವಿಶ್ರಾಂತಿ ಕೊಟ್ಟು ಮೋಕ್ಷ ಸುಖ ಕೊಡುವ ಭಗವಂತ ವಿಶ್ರಾಮಃ.
426)ವಿಶ್ವದಕ್ಷಿಣಃ
'ದಕ್ಷಿಣ' ಎಂದರೆ 'ನಿಷ್ಪಕ್ಷಪಾತಿ'. ಭಗವಂತ ಇಡೀ ವಿಶ್ವವನ್ನು ಸೃಷ್ಟಿಮಾಡಿ ಸಲಹುವಾಗ ಎಂದೂ ಎಲ್ಲಿಯೂ ಪಕ್ಷಪಾತ ಮಾಡಿಲ್ಲ. ಇಡೀ ವಿಶ್ವವನ್ನು ನಿಷ್ಪಕ್ಷಪಾತವಾಗಿ ದಕ್ಷತೆಯಿಂದ ನಿರ್ವಹಿಸುವ, ಸರ್ವಸ್ವವನ್ನೀಯುವ ಮಹಾ ಉದಾರಿ ಭಗವಂತ ವಿಶ್ವದಕ್ಷಿಣಃ.

No comments:

Post a Comment