Monday, October 18, 2010

Vishnu sahasranama 472-476

ವಿಷ್ಣು ಸಹಸ್ರನಾಮ: ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರಃ
472) ವತ್ಸರಃ
ವತ್ಸರ ಎಂದರೆ ಒಂದು ಅರ್ಥದಲ್ಲಿ 'ವರ್ಷ' ಎನ್ನುವ ಅರ್ಥವನ್ನು ಕೊಡುತ್ತದೆ. ಒಂದು ಪೂರ್ಣ  ವರ್ಷ ಎಂದರೆ 365.2422  ದಿನಗಳು. ಪೂರ್ಣವಾದ ವರ್ಷವನ್ನು ಸಂವಸ್ಸರ ಎನ್ನುತ್ತಾರೆ. ಕಾಲ ನಿಯಾಮಕನಾದ ಚತುರ್ಮುಖ  ಬ್ರಹ್ಮನೊಳಗೆ ಕುಳಿತು ನಿಯಮಿಸುವ ಭಗವಂತ ವತ್ಸರಃ.
ವಸತ್+ರ; ಅಂದರೆ ಯಾರು ತನ್ನ ಹೃದಯದಲ್ಲಿ ಭಗವಂತ ವಾಸವಾಗಿದ್ದಾನೆ ಎಂದು ತಿಳಿದು ನೆಡೆಯುತ್ತಾರೋ ಅವರಿಗೆ ಆನಂದವನ್ನು ಕೊಡುವವ. ವತ್ಸ+ರ- ಮಕ್ಕಳಂತೆ ಜೀವರನ್ನು ರಮಿಸುವ ಭಗವಂತ ವತ್ಸರಃ.
473) ವತ್ಸಲಃ
ಭಗವಂತ ಪರಮ ಭಕ್ತ ವತ್ಸಲ.  ತನ್ನ ಪ್ರೀತಿಯ ಭಕ್ತ ಜಾರಿಬಿದ್ದಾಗ, ಸಂಕಷ್ಟದಲ್ಲಿದ್ದಾಗ ತಾನೇ ಇಳಿದು ಬರುವ ಭಗವಂತ ವತ್ಸಲಃ.
474) ವತ್ಸೀ
ವತ್ಸೀ ಎಂದರೆ ಅನಂತ ಸಂತಾನವುಳ್ಳವನು ಎಂದರ್ಥ! ಚತುರ್ಮುಖ ಬ್ರಹ್ಮನಿಂದ ಹಿಡಿದು ಎಲ್ಲರೂ ಆತನ ಮಕ್ಕಳೇ.  ಬ್ರಹ್ಮ-ವಾಯುಗಳನ್ನು ಮಕ್ಕಳಾಗಿ ಪಡೆದ ಭಗವಂತ ವತ್ಸೀ.
475) ರತ್ನಗರ್ಭಃ
'ರತಿ' ಯನ್ನು ತನ್ನ ಗರ್ಭದಲ್ಲಿ ಧರಿಸಿದವ.  ಅಂದರೆ ಭಗವಂತ ಆನಂದದ ಕಡಲು. ಆತನ ಆನಂದದ ಆವಿರ್ಭಾವವೇ ಈ ಪ್ರಪಂಚ. ಇನ್ನು ರತ್ನ ಎಂದರೆ ಸಂಪತ್ತು ಎನ್ನುವ ಅರ್ಥವನ್ನು ಕೊಡುತ್ತದೆ. ಈ ಪ್ರಪಂಚವೇ ಒಂದು ಮಹಾ ಸಂಪತ್ತು . ಇಂತಹ ಸಂಪತ್ತನ್ನು ತನ್ನ ಗರ್ಭದಲ್ಲಿ ಧರಿಸಿ,ಆನಂದದಿಂದ ತುಂಬಿ ತುಳುಕುವ ಭಗವಂತ ರತ್ನಗರ್ಭಃ.
476) ಧನೇಶ್ವರಃ
ಭಗವಂತ ಸರ್ವ ಸಂಪತ್ತಿನ ಒಡೆಯ. ಇಲ್ಲಿ ಧನ ಎಂದರೆ ಹಣವಿರಬಹುದು, ಜ್ಞಾನವಿರಬಹುದು ಅಥವಾ ಭಕ್ತಿ ಇರಬಹುದು. ಎಲ್ಲಾ ಸಂಪತ್ತಿನ ಅಧಿಪತಿ ಭಗವಂತ. ಆತ ಕೊಟ್ಟರೆ ನಾವು ಧನಿಕರು ಇಲ್ಲದಿದ್ದರೆ ಇಲ್ಲ! ಕೆಲವೊಮ್ಮೆ ಭಗವಂತ  ನಮ್ಮ ಕೈಯನ್ನು ಸಂಪೂರ್ಣ ಖಾಲಿ ಮಾಡಿ ನಮ್ಮನ್ನು ಇನ್ನೊಂದು ರೀತಿಯಲ್ಲಿ ಉದ್ದಾರ ಮಾಡುತ್ತಾನೆ. ಇದನ್ನೇ ಕೃಷ್ಣ ಈ ರೀತಿ ಹೇಳಿದ್ದಾನೆ. "ಯಸ್ಸ್ಯಮ್ ಅನುಗ್ರಹಾಮಿ ತಸ್ಸ್ಯ ವಿತ್ತಮ್ ಹರಾಮ್ಯಹಂ" ಇದಕ್ಕೆ ಉತ್ತಮ ನಿದರ್ಶನ ರಾಜಸೂಯ ಯಾಗ ಮಾಡಿ ಪ್ರಪಂಚವನ್ನೇ ಗೆದ್ದ ಧರ್ಮರಾಯ. ಇಂತಹ ಧರ್ಮರಾಯ ಕೇವಲ ಒಂದು ವಾರದಲ್ಲಿ ಬಿಡಿಗಾಸೂ ಇಲ್ಲದೆ ಕಾಡಿಗೆ ಹೋದ!  ಎಲ್ಲವೂ ಆ ಭಗವಂತನ   ಸಂಕಲ್ಪ. ಆತ ಕೊಟ್ಟರೆ ಇದೆ, ಇಲ್ಲದಿದ್ದರೆ ಇಲ್ಲ. ಆದರೆ ಇರುವುದು ಇಲ್ಲದಿರುವುದು ಎಲ್ಲವೂ ನಮ್ಮ ಒಳಿತಿಗಾಗಿ! ಹೀಗೆ ಜ್ಞಾನ, ಭಕ್ತಿ, ಐಶ್ವರ್ಯ ಎಲ್ಲವುದರ ಈಶ್ವರ ಎಲ್ಲಾ ಸಂಪತ್ತಿನ ಒಡೆಯ ಭಗವಂತ ಧನೇಶ್ವರಃ.

2 comments: