Saturday, October 9, 2010

Vishnu sahasranama 432-436


ವಿಷ್ಣು ಸಹಸ್ರನಾಮ: ಅರ್ಥೋನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ
432) ಅರ್ಥಃ
ಅರ್ಥಃ ಎಂದರೆ ಎಲ್ಲರೂ ಬಯಸುವಂತವನು;ಮನುಷ್ಯನು ಬಯಸುವ ಬಯಕೆಗಳಲ್ಲಿ ಶ್ರೇಷ್ಠವಾದ ಬಯಕೆ ಭಗವಂತನ ಬಯಕೆ. ಬಯಕೆಗಳ ಬಗ್ಗೆ ಹೇಳುವಾಗ ಮಹಾಭಾರತದ ಒಂದು ಘಟನೆ ಇಲ್ಲಿ ನೆನಪಿಗೆ ಬರುತ್ತದೆ. ಒಮ್ಮೆ ಧರ್ಮರಾಯನ ಸಮ್ಮುಖದಲ್ಲಿ ಧರ್ಮ,ಅರ್ಥ ಮತ್ತು ಕಾಮ ಈ ಮೂರು ಪುರುಷಾರ್ಥಗಳಲ್ಲಿ ಶ್ರೇಷ್ಠವಾದ ಪುರುಷಾರ್ಥ ಯಾವುದು ಎನ್ನುವ ವಿಷಯದ ಬಗ್ಗೆ ಚರ್ಚೆಯಾಗುತ್ತದೆ. ಆಗ ಸಭೆಯಲ್ಲಿದ್ದ ಪ್ರಮುಖರು 'ಧರ್ಮವೇ' ಶ್ರೇಷ್ಠವಾದ ಪುರುಷಾರ್ಥ ಎಂದು ಹೇಳುತ್ತಾರೆ. ಇದಕ್ಕೆ ವಿರೋದಿಸಿದ ಅರ್ಜುನ ಧರ್ಮಕ್ಕಿಂತ ಅರ್ಥವೇ ಮೇಲು, ಏಕೆಂದರೆ ಬಡವನನ್ನು ಈ ಪ್ರಪಂಚದಲ್ಲಿ ಯಾರೂ ಗುರುತಿಸಲಾರರು. ಧರ್ಮವನ್ನು ಪಾಲಿಸಲು 'ಅರ್ಥ' ಮುಖ್ಯ ಎಂದು ವಾದಿಸುತ್ತಾನೆ. ಕೊನೆಯದಾಗಿ ಭೀಮಸೇನ ಎಲ್ಲರ ವಾದವನ್ನು ಬದಿಗಿರಿಸಿ ಸರ್ವ ಶ್ರೇಷ್ಠ ಪುರುಷಾರ್ಥ 'ಕಾಮ' ಎನ್ನುತ್ತಾನೆ! ಎಲ್ಲರಿಗೂ ಈ ಬಗ್ಗೆ ಆಶ್ಚರ್ಯವಾಗುತ್ತದೆ. ನಾವು 'ಕಾಮ' ಎಂದಾಗ ಅದರ ಅತ್ಯಂತ ಸೀಮಿತ ಅರ್ಥವನ್ನು ಮಾತ್ರ ನೋಡುತ್ತೇವೆ. 'ಕಾಮ' ಎಂದರೆ ಬಯಕೆ (desire). ನಮಗೆ ಬಯಕೆಗಳೇ ಇಲ್ಲದಿದ್ದರೆ ಧರ್ಮವೂ ಇಲ್ಲ, ಅರ್ಥವೂ ಇಲ್ಲ! ಧರ್ಮ ಮಾರ್ಗದಲ್ಲಿ ನಡೆಯಬೇಕು ಎನ್ನುವ ಬಯಕೆ ಇಲ್ಲದಿದ್ದರೆ ಧರ್ಮ ಅಸಾಧ್ಯ! ಜ್ಞಾನಿಗಳಿಗೆ ಇರುವ ಅತ್ಯಂತ ಮಹಾನ್ ಬಯಕೆ ದೇವರನ್ನು ಕಾಣಬೇಕು ಎನ್ನುವುದು. ಹೀಗೆ ಎಲ್ಲರೂ ಬಯಸುವ ಭಗವಂತ ಅರ್ಥಃ.
ಸಮಸ್ತ ವೇದಗಳ ಮುಖ್ಯಾರ್ಥ ಭಗವಂತನೊಬ್ಬನೆ. ಮೇಲ್ನೋಟಕ್ಕೆ ವೇದ ‘ಕರ್ಮ’, ‘ವ್ಯವಹಾರ’, ‘ಪ್ರಪಂಚವನ್ನು’ ಹೇಳುವಂತೆ ಕಾಣಿಸಿದರೂ, ವೇದದ ಮುಖ್ಯಾರ್ಥ ಭಗವಂತ. ಹೀಗೆ ಸರ್ವ ವೇದಗಳಿಂದ, ಸರ್ವ ಶಬ್ದಗಳಿಂದ ವಾಚ್ಯನಾದ, ಎಲ್ಲರೂ ಬಯಸುವ ಭಗವಂತ ಅರ್ಥಃ
433) ಅನರ್ಥಃ
ಸೃಷ್ಟ್ಯಾದಿಗಳಿಂದ ತನಗೆ ಯಾವ ಪ್ರಯೋಜನವೂ ಇರದವನು ಅನರ್ಥಃ. ಈ ಪ್ರಪಂಚವನ್ನು ಯಾವುದೇ ಸ್ವಪ್ರಯೋಜನವಿಲ್ಲದೆ ನಮಗಾಗಿ ನಿರ್ಮಿಸಿರುವ ಭಗವಂತ, ತನ್ನ ನಿಯಮವನ್ನು ತಾನೂ ಪಾಲಿಸುತ್ತಾನೆ. ಪ್ರಕೃತಿಯ ನಿಯಮವನ್ನು ಮೀರಿ ನಡೆಯುವವರಿಗೆ ಆತ ಅನರ್ಥ. ವೇದಗಳನ್ನು ನಾಶಮಾಡಲು ಹೊರಟ ಹಯಗ್ರೀವನಿಗೆ ಮತ್ಸ್ಯಾವತಾರಿ ಭಗವಂತ 'ಅನರ್ಥಕಾರಿಯಾದ' ; ಭೂಮಿಯ ಆಕರ್ಷಣ ಶಕ್ತಿಯನ್ನು ಕಳಚಲು ಹೋದ ಹಿರಣ್ಯಾಕ್ಷನಿಗೆ ವರಾಹರೂಪಿ ಭಗವಂತ ಅನರ್ಥಕಾರಿಯಾದ; ಧರ್ಮ ಕಾರ್ಯ ನಡೆಯಬಾರದು, ಯಾರ ಬಾಯಲ್ಲೂ ದೇವರ ಹೆಸರು ಬರಬಾರದು, ನಾನೇ ದೇವರು ಎಂದ ಹಿರಣ್ಯಕಶಿಪುವಿಗೆ 'ನರಸಿಂಹನಾಗಿ' ಭಗವಂತ ಅನರ್ಥಕಾರಿಯಾದ. ರಾಮನಾಗಿ ರಾವಣ ಕುಂಭಕರ್ಣರಿಗೆ; ಕೃಷ್ಣನಾಗಿ ಶಿಶುಪಾಲ ದಂತವಕ್ರರಿಗೆ ಅನರ್ಥನಾಗಿ, ಶಸ್ತ್ರವನ್ನು ಹಿಡಿಯದೆ ಹದಿನೆಂಟು ಅಕ್ಷೋಹಿಣಿ ಸೈನ್ಯಕ್ಕೆ ಅನರ್ಥಕಾರಿಯಾದ ಭಗವಂತ ಅನರ್ಥಃ.
434) ಮಹಾಕೊಶಃ
ವೇದವೆಂಬ ಹಿರಿಯ ಅರಿವಿನ ಕೋಶದಲ್ಲಿ ತುಂಬಿದ ಭಗವಂತ, ಬ್ರಹ್ಮಾಂಡವೆಂಬ ಮಹಾಕೊಶದೊಳಗೆ ಅಂತರ್ಯಾಮಿಯಾಗಿ ತುಂಬಿರುವ ಮಹಾನ್ ಶಕ್ತಿ. ನಮ್ಮಲ್ಲಿರುವ ಪಂಚಕೋಶ (ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ,ವಿಜ್ಞಾನಮಯಕೋಶ ಹಾಗು ಆನಂದಮಯಕೋಶ)ದ ಒಳಗೆ ಅಡಗಿರುವ ಭಗವಂತ ಮಹಾಕೊಶಃ.
435) ಮಹಾಭೋಗಃ
ಈ ಪ್ರಪಂಚದಲ್ಲಿ ಯಾರ್ಯಾರು ಏನೇನು ಭೋಗಿಸುತ್ತಾರೆ ಅವೆಲ್ಲವನ್ನು ಭೋಗಿಸುವವನು ಭಗವಂತ. ಇಡಿಯ ಜಗವನ್ನೇ ಕಬಳಿಸುವ ಹಿರಿಯ ಪೂರ್ಣಾನಂದ ಭೋಗಿ ಭಗವಂತ ಮಹಾಭೋಗಃ.
436) ಮಹಾಧನಃ
ಈ ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಸಂಪತ್ತು ಭಗವಂತ. ಈ ಜಗತ್ತಿನಲ್ಲಿ ಏನೇನು ಸಂಪತ್ತಿದೆ ಅವೆಲ್ಲವೂ ಅವನಿಗೆ ಸೇರಿದ್ದು. ಅರಿವೆಂಬ ಹಿರಿಯ ಸಿರಿಯನ್ನೀಯುವ ಭಗವಂತ ಮಹಾಧನಃ.

No comments:

Post a Comment