Sunday, October 10, 2010

Vishnu sahasranama 437-441


ವಿಷ್ಣು ಸಹಸ್ರನಾಮ: ಅನಿರ್ವಿಣ್ಣಃ ಸ್ಥವಿಷ್ಠೋಭೂರ್ಧರ್ಮಯೂಪೋ ಮಹಾಮಖಃ
437) ಅನಿರ್ವಿಣ್ಣಃ

'ನಿರ್ವಿಣ್ಣ' ಎಂದರೆ ಸಾಕು ಅಥವಾ ಬೇಡ ಅನ್ನಿಸಿ ಆಸಕ್ತಿ ಕಳೆದುಕೊಳ್ಳುವವ. ಆದರೆ ಭಗವಂತ ಅನಿರ್ವಿಣ್ಣ. ಈ ಹಿಂದೆ ಹೇಳಿದಂತೆ ಸೃಷ್ಟಿ-ಸ್ಥಿತಿ-ಸಂಹಾರ ಅನಂತ ಅನಾದಿ ಕಾಲದಿಂದ ನಡೆಯುತ್ತಿದೆ ಹಾಗು ಅನಂತವಾಗಿ ನಡೆಯುತ್ತದೆ. ಭಗವಂತ ಎಂದೂ ತನ್ನ ಕ್ರಿಯೆಯಲ್ಲಿ ಆಸಕ್ತಿ ಕಳೆದು ಕೊಳ್ಳುವುದಿಲ್ಲ; ಸೃಷ್ಟಿ-ಸಂಹಾರ ಮಾಡಿ ಸಾಕು ಅನ್ನಿಸುವುದು ಅಥವಾ ಸೋಲುವುದು ಅನ್ನುವ ಪ್ರಶ್ನೆ ಭಗವಂತನಲ್ಲಿಲ್ಲ. ಅದ್ದರಿಂದ ಭಗವಂತ ಅನಿರ್ವಿಣ್ಣಃ
ಅ+ನಿರ್+ವಿತ್+ಣ; ಇಲ್ಲಿ 'ನಿರ್' ಎಂದರೆ ನಾಶವಿಲ್ಲದ; 'ವಿತ್' ಎಂದರೆ 'ಜ್ಞಾನ'; 'ಣ' ಎಂದರೆ ಭಲ ಅಥವಾ ಆನಂದ. ಆದ್ದರಿಂದ ಅನಿರ್ವಿಣ್ಣ ಎಂದರೆ ನಿಶ್ಚಯಾತ್ಮಕವಾದ, ನಿರ್ಣಾಯಾತ್ಮಕವಾದ, ನಿರಂತರ ಜ್ಞಾನಾನಂದದ ಸೆಲೆಯಾದ, ಭಲರೂಪಿ 'ಅ'ಕಾರ ವಾಚ್ಯ ಭಗವಂತ. ಆದ್ದರಿಂದ ಆತ ಎಂದೆಂದೂ ಪರಿಪೂರ್ಣ ಹಾಗು ಜ್ಞಾನಾನಂದದ ಖನಿ.
438) ಸ್ಥವಿಷ್ಠಃ
'ಸ್ಥವಿರ' ಎಂದರೆ 'ಮುದುಕರು' ಸ್ಥವಿಷ್ಠ ಎಂದರೆ ಹಣ್ಣು ಹಣ್ಣು ಮುದುಕರು! ಇಲ್ಲಿ ಭಗವಂತ ಮುದುಕನಲ್ಲ ಆತ ಹಿರಿಯರಹಿರಿಯ ಆದ್ದರಿಂದ ಆತ ಸ್ಥವಿಷ್ಠಃ. ಇಡೀ ವಿಶ್ವಕ್ಕೆ ಪಿತಾಮಹನೆನಿಸಿರುವ ಚತುರ್ಮುಖ ಬ್ರಹ್ಮನನ್ನು ಮಗನಾಗಿ ಪಡೆದ ಭಗವಂತ ಹಿರಿಯರ ಹಿರಿಯ. ಯಾರು ಸೃಷ್ಟಿ ಮೊದಲು, ಸೃಷ್ಟಿಯಲ್ಲಿ ಹಾಗು ಸಂಹಾರದ ನಂತರವೂ ಇರುತ್ತಾನೋ ಅವನು ಸ್ಥವಿಷ್ಠಃ ನಾಮಕ ಭಗವಂತ.
ಈ ನಾಮವನ್ನು ಭಗವಂತನ ಬೇರೆ ಬೇರೆ ಲೀಲೆಗಳೊಂದಿಗೆ ನೋಡಿದರೆ ವಿಶಿಷ್ಟ ಅರ್ಥಗಳು ಬೇರೆ ಬೇರೆ ಆಯಾಮದಲ್ಲಿ ತೆರೆದುಕೊಳ್ಳುತ್ತವೆ. 'ಸ್ಥ' ಎಂದರೆ ನೆಲೆಸಿರುವವನು; 'ವಿಷ್ಠ' ಎಂದರೆ ವಿಶಿಷ್ಟವಾಗಿ ನೆಲೆಸಿರುವವನು. ಇದು ಭಗವಂತನ ವಿಭೂತಿಯನ್ನು ಹೇಳುತ್ತದೆ. ಭಗವಂತ ಎಲ್ಲಾ ಗಿಡ-ಪ್ರಾಣಿ-ಜೀವಜಂತುವಿನಲ್ಲಿ ನೆಲೆಸಿದ್ದಾನೆ, ಆದರೆ ಕೆಲವೊಂದು ಜೀವದಲ್ಲಿ ಆತನ ವಿಶೇಷ ಸನ್ನಿದಾನ ಅಭಿವ್ಯಕ್ತವಾಗುತ್ತದೆ. ಉದಾಹರಣೆಗೆ ಮರಗಳಲ್ಲಿ ಅಶ್ವಥ ಮರ ಅತೀ ಶ್ರೇಷ್ಠ. ಏಕೆಂದರೆ ಅದು ನಮ್ಮ ಜೀವ ಅನಿಲವಾದ ಆಮ್ಲಜನಕವನ್ನು ಅತೀ ಹೆಚ್ಚು ಪ್ರಮಾಣದಲ್ಲಿ ಹೊರಸೂಸುವ ವೃಕ್ಷ . ಪಕ್ಷಿಗಳಲ್ಲಿ ನವಿಲು ಶ್ರೇಷ್ಠ ಪಕ್ಷಿ, ಏಕೆಂದರೆ ಅದು ತನ್ನ ಸೌಂದರ್ಯ ಹಾಗು ವಿಶಿಷ್ಟ ನೃತ್ಯಕ್ಕೆ ಹೆಸರುವಾಸಿ. ಹೀಗೆ ಭಗವಂತ ಎಲ್ಲಾ ಜೀವರೊಳಗಿದ್ದರೂ, ಕೆಲವು ಜೀವ ಜಂತುಗಳಲ್ಲಿ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತಾನೆ. ಇಂತಹ ಭಗವಂತನಿಗೆ ಸ್ಥವಿಷ್ಠಃ ಅನ್ವರ್ಥ ನಾಮ.
439) ಭೂಃ (ಅಭೂಃ)
ಈ ನಾಮವನ್ನು ಭೂಃ ಅಥವಾ ಅಭೂಃ ಎಂದು ಎರಡು ರೂಪದಲ್ಲಿ ನೋಡಬಹುದು. ಇದು ಭಗವಂತನ ಅತ್ಯಂತ ಮುಖ್ಯವಾದ ನಾಮಗಳಲ್ಲಿ ಒಂದು. ಏಕೆಂದರೆ ಭಗವಂತನ ಮೊದಲ ನಾಮ ಮೂರು ಅಕ್ಷರಗಳುಳ್ಳ 'ಓಂಕಾರ' (ಅ,ಉ,ಮ). ನಂತರ ಮೂರು ಪದಗಳುಳ್ಳ ವ್ಯಾಹೃತಿ (ಭೂಃ ಭುವಃ ಸುವಃ), ನಂತರ ಮೂರು ಪಾದದ ಗಾಯತ್ರಿ (ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್). ಓಂಕಾರದ ಮೊದಲ ಅಕ್ಷರ 'ಅ' ಕಾರದ ವಿವರಣಾ ರೂಪ ಭೂಃ. 'ಭವತೀತಿ ಭೂಃ' ; ಭವತಿ ಎಂದರೆ ಪೂರ್ಣವಾಗಿರುವುದು, ನಿರ್ಧಿಷ್ಟವಾದ ಇರುವಿಕೆಯುಳ್ಳ ಭಗವಂತ. ಎಲ್ಲಾ ಕಡೆ ಅಭಿವ್ಯಕ್ತನಾಗುವ ಭಗವಂತ ಸ್ಪೂರ್ತಿಯ ಸೆಲೆ. ಎಲ್ಲಾ ಚಟುವಟಿಕೆಗಳ ಮೂಲ ಸ್ಫೂರ್ತಿ, ಎಲ್ಲಾಕಡೆ ಪ್ರಕಾಶಮಾನನಾಗಿ ಎಲ್ಲರನ್ನೂ ಪ್ರೇರಣೆ ಮಾಡುವ ಅಂತಃಶಕ್ತಿ ಭಗವಂತ ಭೂಃ. ಭೂಮಿಯನ್ನು ನಿಯಂತ್ರಿಸುವ ದೇವತೆಯ ಒಳಗಿದ್ದು ಎಲ್ಲವನ್ನೂ ನಿಯಮ ಬದ್ದವಾಗಿ ನಡೆಸುವ ಭಗವಂತ ಭೂಃ.
ಭಗವಂತನಿಗೆ ಎಂದೂ ಹುಟ್ಟಿಲ್ಲ! 'ನಭವತಿ' ಹಾಗು 'ಅದಿಕಂ ಭವತಿ'. ಎಂದೂ ಹುಟ್ಟಿಲ್ಲದ ಸರ್ವ ಶ್ರೇಷ್ಠ ಭಗವಂತ ಅಭೂಃ.
440)ಧರ್ಮಯೂಪಃ
ಈ ನಾಮವನ್ನು ಸಂಪೂರ್ಣ ತಿಳಿಯಬೇಕಾದರೆ ನಾವು 'ಯೂಪ' ಪದದ ಅರ್ಥವನ್ನು ಮೊದಲು ತಿಳಿಯಬೇಕು. ಹಿಂದೆ ದೇಶ ರಕ್ಷಣೆ ಮಾಡುತ್ತಿದ್ದ ಕ್ಷತ್ರಿಯರು ಮಾಂಸಹಾರಿಗಳಾಗಿದ್ದರು. ನಾವು ಏನನ್ನೂ ತಿನ್ನುತ್ತೆವೋ ಅದನ್ನು ದೇವರಿಗೆ ಅರ್ಪಿಸಿ ತಿನ್ನುವುದು ಸಂಪ್ರದಾಯ ಹಾಗು ಶಾಸ್ತ್ರಸಮ್ಮತ. ಅದಕ್ಕಾಗಿ ಕ್ಷತ್ರಿಯರು ತಮ್ಮ ಆಹಾರವಾದ ಪ್ರಾಣಿಯನ್ನು ಯಜ್ಞದಲ್ಲಿ ಬಲಿಕೊಟ್ಟು ದೇವರಿಗೆ ಅರ್ಪಿಸಿ ನಂತರ ತಿನ್ನುತ್ತಿದ್ದರು. ಪ್ರಾಣಿಬಲಿ ಕೊಡುವ ಮೊದಲು ಆ ಪ್ರಾಣಿಯನ್ನು ಕಟ್ಟುವ ಕಂಬವನ್ನು 'ಯೂಪ' ಎನ್ನುತ್ತಾರೆ. ಹಾಗು ಈ ಕ್ರಿಯಯನ್ನು 'ಆಲಿಂಬನ' ಎನ್ನುತ್ತಾರೆ. ಯಜ್ಞದಲ್ಲಿ ಪ್ರಾಣಿಯನ್ನು ಬಲಿ ಕೊಡುವುದು ಹಿಂಸೆಯಲ್ಲ ಧರ್ಮ ಎಂದು ಶಾಸ್ತ್ರಕಾರರು ಪರಿಗಣಿಸಿದ್ದಾರೆ. ಇಂತಹ ಯೂಪದಲ್ಲಿ ಧರ್ಮ ಸ್ವರೂಪನಾಗಿ ಕುಳಿತು ಯಜ್ಞದಲ್ಲಿ ಕೊಟ್ಟ ಆಹುತಿಯನ್ನು ಸ್ವೀಕಾರ ಮಾಡಿ, ಧರ್ಮಕ್ಕೆ ಆಧಾರ ಸ್ಥಂಭನಾಗಿ ನಿಂತ ಭಗವಂತ ಧರ್ಮಯೂಪಃ.
ಇನ್ನೊಂದು ಅರ್ಥದಲ್ಲಿ 'ಧರ್ಮಯೂಗಳು' ಎಂದರೆ ಧರ್ಮದ ಜೊತೆಗೆ ಕೂಡಿಕೊಂಡವರು. ಧರ್ಮಯೂಗಳಿಗೆ-ಪಾಹಿ(ರಕ್ಷಕ) ಭಗವಂತ ಧರ್ಮಯೂಪಃ.
441) ಮಹಾಮಖಃ
'ಮಖ' ಎಂದರೆ ಯಜ್ಞ, ಯಶಸ್ಸು, ಸಂಪತ್ತು ಇತ್ಯಾದಿ. ಎಲ್ಲಾ ಯಜ್ಞಗಳು, ಎಲಾ ಯಶಸ್ಸು, ಎಲ್ಲಾ ಸಂಪತ್ತು ಯಾರಲ್ಲಿ ಮಹತ್ತಾಗಿದೆಯೋ; ಯಾರ ಕುರಿತಾಗಿ ಮಾಡಿದ ಯಜ್ಞ ಮಹತ್ತದಾಗಿರುತ್ತದೋ, ಅವನು ಮಹಾಮಖಃ. ಮಖ(ಯಜ್ಞ) ಭಗವಂತನಿಂದಾಗಿ ಮಹತ್ತಾಗಿದೆ. ಯಜ್ಞಗಳ ಸರ್ವಾದಾರ ಇಡಿಯ ವಿಶ್ವವೆಂಬ ಸಿರಿಗೊಡೆಯ ಭಗವಂತ ಮಹಾಮಖಃ

No comments:

Post a Comment