Friday, October 8, 2010

Vishnu sahasranama 427-431


ವಿಷ್ಣು ಸಹಸ್ರನಾಮ: ವಿಸ್ತಾರಃ ಸ್ಥಾವರಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್
427) ವಿಸ್ತಾರಃ
ಇದು ಸೃಷ್ಟಿಯ ರಹಸ್ಯವನ್ನು ಹೇಳುವ ಒಂದು ಸುಂದರವಾದ ನಾಮ. ಪ್ರಳಯಕಾಲದಲ್ಲಿ ಸ್ಥೂಲವಾದ ಈ ಪ್ರಪಂಚ ಸೂಕ್ಷ್ಮ ರೂಪದಲ್ಲಿ ಉಳಿಯುತ್ತದೆ. ಸೃಷ್ಟಿ ಕಾಲದಲ್ಲಿ ಸೂಕ್ಷ್ಮವಾಗಿರುವ ಪ್ರಪಂಚವನ್ನು ಭಗವಂತ ವಿಸ್ತಾರಗೊಳಿಸಿ ಸ್ಥೂಲ ಪ್ರಪಂಚ ನಿರ್ಮಾಣ ಮಾಡುತ್ತಾನೆ. ಮಹತತ್ವ-ಅಹಂಕಾರ ತತ್ವ-ಆಕಾಶ-ಗಾಳಿ-ಬೆಂಕಿ-ನೀರು-ಭೂಮಿ ಹೀಗೆ ಸೃಷ್ಟಿ ಸೂಕ್ಷ್ಮ ರೂಪದಿಂದ ಸ್ಥೂಲ ಪ್ರಪಂಚವಾಗಿ ವಿಸ್ತಾರಗೊಳ್ಳುತ್ತದೆ. ಇಲ್ಲಿ ಸೃಷ್ಟಿ ಎಂದರೆ ಇಲ್ಲದ ಸೃಷ್ಟಿ ಅಲ್ಲ. ಇದ್ದದ್ದನ್ನು ಸ್ಥೂಲ ರೂಪಗೊಳಿಸಿ ಕಾಣುವ ರೂಪ ಕೊಡುವುದು. ನಾಮಾತ್ಮಕ ಪ್ರಪಂಚದಿಂದ ನಾದ, ನಾದದಿಂದ ತರಂಗ, ನಾದ ತರಂಗದಿಂದ ರೂಪ, ಈ ರೂಪ ಬೆಳೆದು ವಿಸ್ತಾರವಾಗಿ ಅಖಂಡ ಬ್ರಹ್ಮಾಂಡ ನಿರ್ಮಾಣ. ಪ್ರಪಂಚವನ್ನು ಸೂಕ್ಷ್ಮ ರೂಪದಿಂದ ಸ್ಥೂಲ ರೂಪವನ್ನಾಗಿ ವಿಸ್ತರಿಸಿ ಪ್ರತಿಯೊಂದು ವಸ್ತುವಿನಲ್ಲೂ ಆಯಾ ರೂಪದಲ್ಲಿ ಭಗವಂತ ತುಂಬಿಕೊಂಡ. ಇದು ಒಂದು ಹಣತೆಯಿಂದ ಸಹಸ್ರಾರು ಹಣತೆಗಳನ್ನು ಹಚ್ಚಿದಂತೆ. ಒಂದು ದೀಪದಿಂದ ಇನ್ನೊಂದು ದೀಪ ಹಚ್ಚಿದಾಗ ಮೂಲ ದೀಪ ತನ್ನ ಪ್ರಕಾಶವನ್ನು ಕಳೆದುಕೊಳ್ಳುವುದಿಲ್ಲ. ಇದೇ ರೀತಿ ಭಗವಂತ ಸಮಸ್ತ ಬ್ರಹ್ಮಾಂಡದಲ್ಲಿ ಸಮಸ್ತ ಚರಾಚರಗಳಲ್ಲಿ ಬೆಳಕಾಗಿ ತುಂಬಿದ. ಪ್ರತಿಯೊಂದು ಜೀವರಲ್ಲಿ ಸಂತಾನ ವಿಸ್ತಾರ ಅಥವಾ ಜ್ಞಾನ ವಿಸ್ತಾರದ ಬಯಕೆಯ ಬೀಜವನ್ನು ಬಿತ್ತಿ ಈ ಪ್ರಪಂಚದ ವಿಸ್ತಾರಕ್ಕೆ ಕಾರಣನಾದ. ಹೀಗೆ ಪ್ರಪಂಚ ಸೃಷ್ಟಿ ಹಾಗು ಅದರ ವಿಸ್ತಾರದ ಮೂಲನಾದ ಭಗವಂತ ವಿಸ್ತಾರಃ.
428) ಸ್ಥಾವರಃ
ಸ್ಥಾ+ಅವ+ರ; 'ಸ್ಥಾ' ಎಂದರೆ ಪ್ರತಿಯೊಂದು ವಸ್ತುವಿನಲ್ಲಿ ಸನ್ನಿಹಿತನಾದ, ನಮ್ಮ ಹಿತಕ್ಕೋಸ್ಕರ, ನಮ್ಮ ರಕ್ಷಣೆಗೋಸ್ಕರ ಸ್ಥಿತನಾದ ಭಗವಂತ, 'ಅವ' ಎಂದರೆ ನಮ್ಮ ಆಗು ಹೋಗುಗಳನ್ನು, ನಾವು ಮಾಡಲಾಗದ್ದನ್ನು ನಮ್ಮೊಳಗೆ ಕುಳಿತು ಮಾಡಿಸುವ ಭಗವಂತ. 'ರ' ಎಂದರೆ ರಮಿಸುವುದು. ಇಡೀ ವಿಶ್ವವನ್ನು ಸೃಷ್ಟಿ ಮಾಡುವುದು, ಸೃಷ್ಟಿ ಮಾಡಿ ಅದರೊಳಗೆ ಪ್ರವೇಶ ಮಾಡುವುದು, ಪ್ರವೇಶಿಸಿ ಎಲ್ಲರನ್ನೂ ರಕ್ಷಿಸಿ ನಡೆಸಿ ಕೊನೆಗೆ ಸಂಹಾರ ಮಾಡುವುದು ಭಗವಂತನ ಆನಂದದ ಲೀಲೆ. ಇಂತಹ ಭಗವಂತನಿಗೆ 'ಸ್ಥಾವರಃ' ಅನ್ವರ್ಥ ನಾಮ.
429) ಸ್ಥಾಣುಃ
ಎಂದೂ ಸ್ಥಿರತೆಯನ್ನು ಕಳೆದುಕೊಳ್ಳದ ವಸ್ತು, ಜೀವ ಸ್ವರೂಪದೊಳಗೆ ಅಣುವಿಗಿಂತ ಅಣುವಾಗಿ ಕುಳಿತ ಹೃತ್ಕಮಲ ಮಧ್ಯ ನಿವಾಸಿ ಭಗವಂತ ಸ್ಥಾಣುಃ. ನಮ್ಮೊಳಗಿರುವ ವಿಶ್ವ ರೂಪಿ ಭಗವಂತ ಎಷ್ಟು ಸೂಕ್ಷ್ಮ ಎಂದರೆ ಅದನ್ನು ಊಹಿಸುವುದು ಅಸಾಧ್ಯ. ಕುದುರೆಯ ಬಾಲದ ಕೂದಲಿನ ತುದಿ ಭಾಗವನ್ನು ಸುಮಾರು ಹತ್ತು ಸಾವಿರ ಭಾಗವನ್ನಾಗಿ ಮಾಡಿದರೆ ಅದರ ಒಂದು ಭಾಗ ಎಷ್ಟು ಗಾತ್ರದಲ್ಲಿರಬಹುದೋ ಅಷ್ಟು ಸೂಕ್ಷ್ಮಾತಿ ಸೂಕ್ಷ್ಮ ರೂಪದಲ್ಲಿರುವ ನಮ್ಮ ಸ್ವರೂಪ ಭೂತ ಜೀವದೊಳಗೆ ಭಗವಂತ ಸ್ಥಿತನಾಗಿದ್ದಾನೆ. ಹೀಗೆ ಅಚಲನಾದ, ಯಾವ ಶಕ್ತಿಗೂ ಅಭೇದ್ಯನಾದ, ನಿರ್ವಿಕಾರ ಭಗವಂತ ಸ್ಥಾಣುಃ.
430) ಪ್ರಮಾಣಮ್
ಎಲ್ಲಕ್ಕೂ ಕೊನೆಯ ಪ್ರಮಾಣ ಭಗವಂತ. ಯಾವುದು ಸರಿ, ಯಾವುದು ತಪ್ಪು, ಯಾವುದು ಧರ್ಮ, ಯಾವುದು ಅಧರ್ಮ ಎನ್ನುವುದಕ್ಕೆ ಭಗವಂತನೊಬ್ಬನೇ ಕೊನೆಯ ಪ್ರಮಾಣ. ಜಗತ್ತಿನ ಎಲ್ಲಾ ಪ್ರಮಾಣಗಳು(ಎಲ್ಲಾ ವೇದ ಶಾಸ್ತ್ರಗಳು) ಯಾರನ್ನು ಹೇಳುತ್ತವೋ ಅವನು ಪ್ರಮಾಣಃ
'ಪ್ರಮಾ' ಎಂದರೆ 'ಯಥಾರ್ಥ ಜ್ಞಾನ' 'ಅಣಯತಿ' ಎಂದರೆ ನಮ್ಮೊಳಗಿದ್ದು ದಯಪಾಲಿಸುವುದು. ಭಗವಂತನನ್ನು ಬರಿದೆ ವೇದಗಳನ್ನೋದುವುದರಿಂದ ಕಾಣಲು ಸಾಧ್ಯವಿಲ್ಲ. ತಪಸ್ಸಿನಿಂದ, ದಾನದಿಂದ, ಇಲ್ಲ ಯಜ್ಞದಿಂದ ಕಾಣಲು ಸಾಧ್ಯವಿಲ್ಲ. ಆತನನ್ನು ಕಾಣಲು ಆತನ ಬಗ್ಗೆ ಯಥಾರ್ಥ ಜ್ಞಾನ ಬೇಕು. ನಮ್ಮೊಳಗಿದ್ದು ನಮಗೆ ಇಂತಹ ಜ್ಞಾನವನ್ನು ಕೊಡುವ ಭಗವಂತ ಪ್ರಮಾಣಮ್. ಆತನನ್ನು ಕಾಣಲು ಕೇವಲ ಭಕ್ತಿಯಿಂದ ಮಾತ್ರ ಸಾಧ್ಯ. ಇದನ್ನೇ ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ.
ನಾಹಂ ವೇದೈರ್ನ ತಪಸಾ ನ ದಾನೇನ ನಚೇಜ್ಯಯಾ
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ (ಅ-೧೧, ಶ್ಲೋ -೫೩)
ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋsರ್ಜುನ
ಜ್ಞಾತುಂ ದ್ರಷ್ಟುಂ ಚ ತತ್ವೇನ ಪ್ರವೇಷ್ಟುಂ ಚ ಪರಂತಪ (ಅ-೧೧, ಶ್ಲೋ ೫೪)
431) ಬೀಜಮವ್ಯಯಮ್
ಭಗವಂತ ಎಂದೂ ವಿಕಾರಗೊಳ್ಳದ, ನಾಶವಾಗದ ಬೀಜ. ಈ ಜಗತ್ತು ಭಗವಂತನೆಂಬ ಬೀಜದಿಂದಲೇ ಹುಟ್ಟಿ ಬಂತು. ಆದರೆ ಆ ಬೀಜ ಜಗತ್ತಾಗಿ ವಿಕಾರಗೊಂಡ ಬೀಜವಲ್ಲ. ಭಗವಂತನಿಂದ ಈ ಪ್ರಪಂಚ ಅಭಿವ್ಯಕ್ತವಾಯಿತೇ ಹೊರತು ಭಗವಂತ ಪ್ರಪಂಚವಾಗಿ ರೂಪಾಂತರಗೊಂಡಿದ್ದಲ್ಲ. ಈ ಪ್ರಪಂಚ ಆತನ ಶರೀರವಲ್ಲ. ಜ್ಞಾನಾನಂದಮಯನಾದ ಭಗವಂತ ಈ ಪ್ರಪಂಚದ ಮೂಲ ಕಾರಣ ಹಾಗು ಧಾರಕ ಶಕ್ತಿ. ಹೀಗೆ ಅಳಿವಿರದ, ವಿಕಾರಗೊಳ್ಳದ ಜಗದ ಮೂಲ ಕಾರಣ ಭಗವಂತ ಬೀಜಮವ್ಯಯಮ್.

No comments:

Post a Comment