Thursday, October 14, 2010

Vishnusahasranama 453-456

ವಿಷ್ಣು ಸಹಸ್ರನಾಮ: ಸರ್ವದರ್ಶೀ ವಿಮುಕ್ತಾತ್ಮಾ ಸರ್ವಜ್ಞೋ ಜ್ಞಾನಮುತ್ತಮಮ್
453) ಸರ್ವದರ್ಶೀ
ಎಲ್ಲವನ್ನು ಕಾಣುವವನು ಹಾಗು ಕಾಣಿಸುವವನು ಸರ್ವದರ್ಶೀ. ನಮಗೆ ಗೊತ್ತಿರುವುದು ಕೇವಲ ವರ್ತಮಾನ ಜನ್ಮದ ವಿಷಯ ಮಾತ್ರ. ನಮ್ಮ ಪೂರ್ವ ಜನ್ಮದಲ್ಲಿ ನಾವು ಏನೇನು ಕರ್ಮಗಳನ್ನು ಮಾಡಿ ಈ ಜನ್ಮ ಪಡೆದಿದ್ದೇವೆ ಎನ್ನುವ ಪರಿಜ್ಞಾನ ನಮಗಿರುವುದಿಲ್ಲ. ಭಗವಂತನಿಗೆ ನಮ್ಮ ಸರ್ವ ಜನ್ಮದ, ಸರ್ವ ಕಾಲದ, ಸರ್ವಜೀವನದ ಸ್ಥಿತಿ ಗತಿಗಳು ತಿಳಿದಿರುತ್ತವೆ. ನಮಗೆ ನಮ್ಮ ಹಿಂದಿನ ಜನ್ಮದ ಫಲ ಎಂದೂ ತಪ್ಪುವುದಿಲ್ಲ. ಹುಟ್ಟುವಾಗಲೇ ನಾವು ಜನ್ಮಾಂತರದ ನಂಟಿನೊಂದಿಗೆ ಹುಟ್ಟುತ್ತೇವೆ. ಇದು ಕರ್ಮಚಕ್ರ. ಇದನ್ನೆಲ್ಲ ಬಲ್ಲ ಭಗವಂತ ಸರ್ವದರ್ಶಿ.
454) ವಿಮುಕ್ತಾತ್ಮಾ
ಯಾವ ಪೂರ್ವಾಗ್ರಹಗಳೂ, ಯಾವ ಲೇಪವೂ ಇಲ್ಲದ ಭಗವಂತ ವಿಮುಕ್ತಾತ್ಮಾ. ಭಗವಂತ ಯಾವುದೂ ದ್ವೇಷ ಅಥವಾ ಸ್ವಂತ ಹಿತಾಸಕ್ತಿಗಾಗಿ ಜ್ಞಾನ-ಅಜ್ಞಾನ ಬಡತನ-ಶ್ರೀಮಂತಿಕೆಯನ್ನು ಕೊಡುವುದಿಲ್ಲ. ಅವರವರ ಕರ್ಮಫಲಕ್ಕನುಗುಣವಾಗಿ ನಿರ್ಲಿಪ್ತನಾಗಿ ಈ ಸೃಷ್ಟಿ-ಸ್ಥಿತಿ-ಸಂಹಾರ ಕಾರ್ಯವನ್ನು ನಿರಂತರ ನಿಯಮಬದ್ದವಾಗಿ ಮಾಡುತ್ತಿರುತ್ತಾನೆ. ಇಂತಹ ಭಗವಂತನಿಗೆ ವಿಮುಕ್ತಾತ್ಮಾ ಅನ್ವರ್ಥ ನಾಮ. ಮುಕ್ತಿಯನ್ನು ಪಡೆದ ವಿಮುಕ್ತರಿಗೆ ಮುಕ್ತಿಯಲ್ಲೂ ನಿಯಾಮಕನಾದ ಭಗವಂತ ವಿಮುಕ್ತಾತ್ಮಾ.
455) ಸರ್ವಜ್ಞಃ
ಎಲ್ಲವನ್ನು ಬಲ್ಲವನು ಸರ್ವಜ್ಞ. ಜ್ಞಾನಸ್ವರೂಪನೂ, ಪರಿಪೂರ್ಣನೂ ಆದ ಭಗವಂತ ಸರ್ವಜ್ಞಃ
456)ಜ್ಞಾನಮುತ್ತಮಮ್
'ಜ್ಞಾ' ಎಂದರೆ ತಿಳಿದವನು, 'ಜ್ಞಾನಂ' ಎಂದರೆ ತಿಳಿವು. ಭಗವಂತ ಸರ್ವೋತ್ತಮ ಜ್ಞಾನ ಸ್ವರೂಪನೂ ಹೌದು, ಜ್ಞಾನ ಉಳ್ಳವನೂ ಹೌದು. ಎಲ್ಲಕ್ಕಿಂತ ಮಿಗಿಲಾದ ಅನಂತ ಜ್ಞಾನ ಸ್ವರೂಪಿ ಭಗವಂತ ಜ್ಞಾನಮುತ್ತಮಮ್.

No comments:

Post a Comment