Saturday, October 16, 2010

Vishnu sahasranama 463-466

ವಿಷ್ಣು ಸಹಸ್ರನಾಮ: ಮನೋಹರೋ ಜಿತಕ್ರೋಧೋ ವೀರಬಾಹುರ್ವಿದಾರಣಃ
463) ಮನೋಹರಃ
ಹಿಂದೆ ಸುಮುಖಃ ಎನ್ನುವ ನಾಮದಲ್ಲಿ ನೋಡಿದಂತೆ ಭಗವಂತ ಸೌಂದರ್ಯದ ಖನಿ. ಬಾಗವತದಲ್ಲಿ ಕವಿಗಳು ಭಗವಂತನನ್ನು ಮನ್ಮಥ ಎನ್ನುತ್ತಾರೆ. ಇದು ಕೇವಲ ದೃಷ್ಟಾಂತ ಅಷ್ಟೇ. ಏಕೆಂದರೆ ಭಗವಂತ ಮನ್ಮಥನ ಅಪ್ಪ! ಎಲ್ಲರ ಮನಸ್ಸನ್ನು ಅಪಹರಿಸುವ ಚಲುವಿನ ಖನಿ ಭಗವಂತ ಮನೋಹರಃ.
ಮನೋಮಯ ಕೋಶದ ನಿಯಾಮಕನಾದ ಹರನೊಳಗಿರುವ ಭಗವಂತ ಮನೋಹರ. ಇನ್ನು ಅನ್ನಮಯ ಕೋಶ, ಮನೋಮಯಕೋಶ, ವಿಜ್ಞಾನಮಯಕೋಶ ಎಲ್ಲವನ್ನೂ ದಾಟಿದರೆ ಅಮರಕೋಶ. ಅದೇ ನಿತ್ಯವಾಗಿರುವ ಮನನಶೀಲವಾದ ಜೀವ. ಈ ಜೀವವನ್ನು ಸಂಸಾರ ಬಂಧದಿಂದ ಕಳಚಿ ಮೋಕ್ಷವನ್ನು ಕೊಡುವ ಭಗವಂತ
ಮನೋಹರಃ.   
464) ಜಿತಕ್ರೋಧಃ
ಭಗವಂತ ಕೋಪವನ್ನು ಗೆದ್ದವ. ಕೋಪ ಮನಸ್ಸಿನ ವಿಕೃತ ರೂಪ. ಸರ್ವವನ್ನು ಗೆದ್ದ ಋಷಿ ಮುನಿಗಳೂ ಕೂಡಾ ಕೆಲವೊಮ್ಮೆ ಕೋಪಕ್ಕೆ ಬಲಿಬೀಳುತ್ತಾರೆ. ಭಗವಂತ ಎಂದೂ ಕೋಪದ ವಶವಾಗುವುದಿಲ್ಲ ಆದರೆ ಕೆಲವೊಮ್ಮೆ ತಾಯಿ ತನ್ನ ಮಗುವಿನ ಉದ್ಧಾರಕ್ಕಾಗಿ  ಕೊಪಗೊಳ್ಳುವಂತೆ ಕೋಪದ ನಟನೆ ಮಾಡುತ್ತಾನೆ. ಆ ಕೋಪ ಮೇಲ್ನೋಟಕ್ಕೆ ದುಃಖಕರವಾಗಿ ಕಂಡರೂ ಸುಖಾಂತವಾಗಿರುತ್ತದೆ. ಕ್ರೋಧ ವಶವಾದ ಧ್ಯತ್ಯ ಪಡೆಯನ್ನು ಗೆದ್ದ ಭಗವಂತ
ಜಿತಕ್ರೋಧಃ.
465) ವೀರಬಾಹುಃ
ಭಗವಂತನ ತೋಳು ಪೌರುಷ ತುಂಬಿದ ತೋಳು. ಸತ್ಯವನ್ನು ವಿರೋಧಿಸುವ, ಯತಾರ್ಥವನ್ನು ದ್ವೇಷಿಸುವ, ಸುಳ್ಳನ್ನು ಸಮರ್ಥಿಸುವ, ದುಷ್ಟ ಶಕ್ತಿಯನ್ನು  ನಿಗ್ರಹಿಸುವ ತೋಳುಗಳುಳ್ಳ ಭಗವಂತ ದ್ವೇಷಿಸುವುದು ಅಜ್ಞಾನವನ್ನು.ಸದಾ ಜ್ಞಾನವನ್ನೂ ಪ್ರೀತಿಸುವ ಹಾಗು ರಕ್ಷಿಸುವ ಭಗವಂತ
ವೀರಬಾಹುಃ. 
466) ವಿದಾರಣಃ
ವಿದಾರಣಃ ಎಂದರೆ ಸೀಳಿಬಿಡುವ ಗುಣದವನು. ವೀರ ಬಾಹುವಾದ ಭಗವಂತ ದುಷ್ಟರನ್ನು, ಎದುರಾಳಿಗಳನ್ನು ಸೀಳಿಬಿಡುವ ಗುಣದವನು.ಕೃಷ್ಣಾವತಾರದಲ್ಲಿ ನರಸಿಂಹಾವತಾರದಲ್ಲಿ ಇದಕ್ಕೆ ನಿದರ್ಶನಗಳಿವೆ. ಜರಾಸಂದನನ್ನು ಭೀಮನೊಳಗೆ ಕೂತು ಸೀಳಿ ಸುಮಾರು 22,800 ರಾಜಕುಮಾರರನ್ನು ಸೆರೆಮನೆಯಿಂದ ಬಿಡಿಸಿದ ಕೃಷ್ಣ, ನರಸಿಂಹಾವತಾರದಲ್ಲಿ ಹಿರಣ್ಯಕಶಿಪುವಿನ ಎದೆಬಗೆದ.ಹೀಗೆ ದುಷ್ಟರ ನಾಶಕ್ಕಾಗಿ ಸೀಳುವ ಗುಣವುಳ್ಳ ಭಗವಂತ ವಿದಾರಣಃ

No comments:

Post a Comment