Sunday, September 19, 2010

Vishnu sahasranama 366-369


ವಿಷ್ಣು ಸಹಸ್ರನಾಮ: .....ಮಾರ್ಗೋ ಹೇತುರ್ದಾಮೋದರಸ್ಸಹಃ
366) ಮಾರ್ಗಃ

ಭಗವಂತ ಜ್ಞಾನಿಗಳು ಹುಡುಕುವ ತತ್ವ; ಮುಕ್ತಿಗೆ ಹೆದ್ದಾರಿ. ಎಲ್ಲರೂ ಕೊನೆಗೆ ಕಂಡು ಹುಡುಕಬೇಕಾದ ಶಕ್ತಿ. ಸಂಸಾರ ಸಾಗರವನ್ನು ದಾಟಿಸುವ ದೂಣಿಯೂ ಅವನೇ, ಹೋಗಿ ಸೇರಬೇಕಾದ ದಡವೂ ಅವನೇ. ಅವನನ್ನು ಸೇರುವ ಒಂದೇ ಒಂದು ಮಾರ್ಗ ಶರಣಾಗತಿ, ಆಗ ಆತ ಮುಕ್ತಿಯ ದಾರಿ ತೋರುತ್ತಾನೆ. ಆತನನ್ನು ಸೇರುವ ದಾರಿಯನ್ನು ನಮ್ಮ ಹೊರಗೆ ಹುಡುಕಿದರೆ ಸಿಗುವುದಿಲ್ಲ. ನಮ್ಮ ಹೊರಪ್ರಪಂಚವನ್ನು ಬಿಟ್ಟು ನಮ್ಮೊಳಗಿರುವ ಭಗವಂತನನ್ನು ನೋಡುವ ಪ್ರಯತ್ನ ನಮ್ಮನ್ನು ಭಗವಂತನತ್ತ ಕೊಂಡೊಯ್ಯಬಲ್ಲುದು.
367) ಹೇತುಃ
ಎಲ್ಲಕ್ಕೂ ಕಾರಣಕರ್ತ. ಇಡೀ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷ-ಎಲ್ಲಕ್ಕೂ ಕಾರಣಕರ್ತ ಭಗವಂತ ಹೇತುಃ.
368) ದಾಮೋದರಃ
ಮೇಲ್ನೋಟಕ್ಕೆ ದಾಮೋದರ ಎಂದರೆ ತಾಯಿಯಿಂದ ಹೊಟ್ಟೆಗೆ ಹಗ್ಗ ಬಿಗಿಸಿಕೊಂಡವನು. ಇದು ಭಗವಂತನ ಕೃಷ್ಣಾವತಾರದ ಬಾಲ್ಯಕ್ಕೆ ಸಂಭಂದಪಟ್ಟ ಕಾಲಬದ್ಧ ಘಟನೆಗನುಗುಣವಾದ ಅರ್ಥ; ಆದರೆ ಭಗವಂತ ಮೂಲತಃ ದಾಮೋದರ, ಆದ್ದರಿಂದ ಈ ನಾಮಕ್ಕೆ ವಿಶಿಷ್ಟವಾದ ಅರ್ಥವಿದೆ. ಆತ ದಾಮ+ಉದರ; ಇಲ್ಲಿ ದಾಮ ಎಂದರೆ 'ದಮ' ಉಳ್ಳವರಿಗೆ ಒಲಿಯುವವನು. ದಮ ಎಂದರೆ 'ಮದ' ಎನ್ನುವ ಪದದ ವಿರುದ್ದ ಪದ. 'ಮದ' ಇಲ್ಲದಿರುವುದು 'ದಮ' ಅಂದರೆ ಇಂದ್ರಿಯಗಳನ್ನು ಸ್ವಾದೀನದಲ್ಲಿಟ್ಟುಕೊಳ್ಳುವುದು. ಉದರ ಎಂದರೆ ಉತ್+ಅರ; 'ಅರ' ಎಂದರೆ ದೋಷ, ಉದರ ಎಂದರೆ ಸರ್ವ ದೋಷಗಳನ್ನು ದಾಟಿನಿಂತ ಪರಿಪೂರ್ಣವಾದ ವಸ್ತು. ಆದ್ದರಿಂದ ದಾಮೋದರ ಎಂದರೆ ಇಂದ್ರಿಯ ನಿಗ್ರಹ ಉಳ್ಳವರು ತಿಳಿಯಬಹುದಾದ, ಅಳತೆಗೆ ಸಿಗದ, ಎಂದೂ ನಾಶವಿಲ್ಲದ, ಎಲ್ಲಕ್ಕಿಂತ ಮಿಗಿಲಾದ ಅಮಿತವನ್ನು ಕೊಡಬಲ್ಲ, ದೋಷರಹಿತವಾದ ತತ್ವ.
369) ಸಹಃ
ಭಗವಂತ ಎಂದೂ ತಾಳ್ಮೆಗೆಡುವುದಿಲ್ಲ. ಆತ ಸಹನೆಯ ಮೂರ್ತಿ.ದುಷ್ಟ ಶಕ್ತಿಯನ್ನು ಗೆದೆಯುವ ಭಗವಂತ ಭಕ್ತರ ಅಪರಾಧವನ್ನು ಕ್ಷಮಿಸುವ ಕರುಣಾಳು. ಇಂತಹ ಭಗವಂತ "ಸಹಃ"

No comments:

Post a Comment