Sunday, September 26, 2010

Vishnu sahasranama 390-394

ವಿಷ್ಣು ಸಹಸ್ರನಾಮ: ಪರರ್ದ್ಧಿಃ ಪರಮಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷಣಃ
390) ಪರರ್ದ್ಧಿಃ

ಸಂಸ್ಕೃತದಲ್ಲಿ 'ರದ್ಧಿ' ಎಂದರೆ ಸಮೃದ್ಧಿ,ಅಥವಾ ಪೂರ್ಣತೆ. ಭಗವಂತ ಸಮೃದ್ಧಿಯ ತುತ್ತತುದಿ ಹಾಗು ಅದು ಅನಂತ. ನಮಗೆ ಸಮೃದ್ಧಿಯನ್ನು (ಜ್ಞಾನ, ಭಲ, ಐಶ್ವರ್ಯ, ಸಜ್ಜನಿಕೆ,ಇತ್ಯಾದಿ) ಕೊಡುವವನೂ ಅವನೇ. ಇಂತಹ ಪರಿಪೂರ್ಣ ಸ್ವರೂಪ ಭಗವಂತ ಪರರ್ದ್ಧಿಃ.
391) ಪರಮಸ್ಪಷ್ಟಃ
ಭಗವಂತ ಸ್ಪಷ್ಟ ಹಾಗು ಯಾರಿಗೂ ತಿಳಿಯದ್ದನ್ನು ನೋಡಿ ತಿಳಿದವನು. ಜ್ಞಾನಿ ಅಜ್ಞಾತನಾದ ಭಗವಂತನನ್ನು ಕೊನೆಗೊಮ್ಮೆ ನಿಚ್ಚಳವಾಗಿ ಕಾಣುತ್ತಾನೆ. ಭಗವಂತ ನಾವು ಹೊರಗಿನಿಂದ ಕಾಣುವ ವಸ್ತುವಿನಂತಲ್ಲ , ಆತನಿಗೆ ಇಂತದ್ದೇ ಎನ್ನುವ ರೂಪವೊಂದಿಲ್ಲ, ಆತ ಆಕಾಶದಂತೆ.ಆತ ಕಾಣಿಸಿಕೊಂಡರೆ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಾನೆ, ಆಗ ನಮಗೆ ಕಾಣುವ ಇತರ ಎಲ್ಲಾ ವಸ್ತುಗಳು ಅಸ್ಪಷ್ಟವಾಗುತ್ತವೆ.ಕಾಣದವರ ಸಂಶಯಕ್ಕೆ ಆತ ಕಾಣಿಸುವ ತನಕ ಪರಿಹಾರವಿಲ್ಲ, ಕಂಡವರಿಗೆ ಕಂಡ ಮೇಲೆ ಸಂಶಯ ಬರುವ ಸಂಭವವಿಲ್ಲ, ಅಷ್ಟು ನಿಚ್ಚಳವಾಗಿ ಕಾಣಿಸಿಕೊಳ್ಳುತ್ತಾನೆ. 'ಯಸ್ಮಿನ್ ವಿಜ್ಞಾತೇ ಸರ್ವವಿದಂ ವಿಜ್ಞಾತಂ' ಭಗವಂತನನ್ನು ತಿಳಿದವನಿಗೆ ಯಾವ ವಿಧದ ಪ್ರಶ್ನೆ ಇಲ್ಲ, ಅಷ್ಟು ಸ್ಪಷ್ಟವಾಗಿ ವಿಶ್ವದ ರಹಸ್ಯವನ್ನು ತೆರೆದು ಬಿಡುತ್ತಾನೆ ಭಗವಂತ. ಹೀಗೆ ಜ್ಞಾನಿಗಳಿಗೆ ನಿಚ್ಚಳವಾಗಿ ಗೋಚರಿಸುವ ಭಗವಂತ ಪರಮಸ್ಪಷ್ಟಃ.
392) ಸ್ತುಷ್ಟಃ
ಭಗವಂತ ನಿತ್ಯ ತೃಪ್ತ. ಮಾನವರಾದ ನಮಗೆ ಯಾವುದೂ ಸಾಕು ಅನ್ನಿಸುವುದಿಲ್ಲ, ಒಂದು ವೇಳೆ ಅನ್ನಿಸಿದರೂ ಅದು ತಾತ್ಕಾಲಿಕ. ಬಯಕೆ ನಮ್ಮ ಬೆನ್ನನ್ನು ಬಿಡುವುದಿಲ್ಲ, ಆದರೆ ಭಗವಂತ ಎಲ್ಲವುದರಲ್ಲೂ ನಿತ್ಯ ತೃಪ್ತ. ಯಾವುದನ್ನೂ ಬಯಸದ ಅಸಾಧಾರಣ ಸ್ವರೂಪನಾದ ಭಗವಂತ ಸ್ತುಷ್ಟಃ.
393) ಪುಷ್ಟಃ
ಎಲ್ಲ ಗುಣಗಳಿಂದ ತುಂಬಿದ ಭಗವಂತ ಎಲ್ಲವುದರಿಂದ ಪೂರ್ಣ. ಸ್ವಯಂ ಪರಿಪೂರ್ಣನಾದ ಭಗವಂತ ಪುಷ್ಟಃ
394) ಶುಭೇಕ್ಷಣಃ
ಶುಭೇಕ್ಷಣ ಎಂದರೆ ಮಂಗಳಕರವಾದ ಕಣ್ಣು ಅಥವಾ ನೋಟವುಳ್ಳವನು. ಭಗವಂತನ ನೋಟ ಪರಮಾನುಗ್ರಹ ಮಾಡತಕ್ಕಂತಹ ನೋಟ. ಆತನ ಮಾಂಗಲಿಕ ನೋಟ ಯಾರ ಮೇಲೆ ಬಿತ್ತೋ ಆತ ಭಗವಂತನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ. ಭಗವಂತ ಎಲ್ಲೆಲ್ಲೂ ಶುಭವನ್ನು ಕಾಣುತ್ತಾನೆ, ಆತ ಎಂದೂ ಕೆಟ್ಟದ್ದನ್ನು ಕಾಣುವುದಿಲ್ಲ. ಸಾಮಾನ್ಯರಾದ ನಮಗೆ ಹುಟ್ಟು ಮಾಂಗಲಿಕ ಹಾಗು ಸಾವು ಅಶುಭ. ಆದರೆ ಭಗವಂತನಿಗೆ ಹುಟ್ಟು ಎಷ್ಟು ಸಹಜ ಘಟನೆಯೋ, ಸಾವೂ ಕೂಡಾ ಅಷ್ಟೇ ಸಹಜ ಘಟನೆ. ಯಾದವರು ಹೊಡೆದಾಡಿ ಸಾಯುತ್ತಿರುವಾಗ ಕೃಷ್ಣ ನಗುತ್ತ ನಿಂತಿದ್ದನಂತೆ. ಏಕೆಂದರೆ ಭಗವಂತನಿಗೆ ಯಾವುದೂ ಅಶುಭವಲ್ಲ. ವೇದವ್ಯಾಸರು ಹೇಳುವಂತೆ "ಈ ಸೃಷ್ಟಿಯಲ್ಲಿ ಈ ತನಕ ಯಾವುದೂ ಆಗಬಾರದ್ದು ಆಗಿಲ್ಲ ಹಾಗು ಇನ್ನು ಆಗುವುದೂ ಇಲ್ಲ" ಯಾವ ಘಟನೆ ಏಕೆ ಸಂಭವಿಸುತ್ತದೆ ಎನ್ನುವ ಪರಿಜ್ಞಾನ ಮಾತ್ರ ನಮಗಿಲ್ಲ ಅಷ್ಟೇ.ಶುಭ+ಈಕ್ಷ+ಣ, ಇಲ್ಲಿ ಶುಭ ಎಂದರೆ ಭಗವಂತ. ಏಕೆಂದರೆ ಆತನಿಗಿಂತ ಶುಭ ಇನ್ನೊಂದಿರಲು ಸಾದ್ಯವಿಲ್ಲ. 'ಶುಭೇಕ್ಷರು' ಎಂದರೆ ಭಗವಂತನನ್ನು ತಿಳಿದವವರು, ತಿಳಿದು ಕಂಡವರು. 'ಣ' ಎಂದರೆ 'ಭಲ' ಆದ್ದರಿಂದ ಶುಭೇಕ್ಷಣಃ ಎಂದರೆ ಜ್ಞಾನಿಗಳಿಗೆ ಪರಮಾನಂದದ ನಿತ್ಯ ಪದವಿಯನ್ನು ಕೊಡುವವ. ಹೀಗೆ ಜ್ಞಾನಿಗಳಿಗೆ ಬೆಂಬಲವನ್ನೀಯುವ, ಬರಿಯ ಕಣ್ಣ ನೋಟದಿಂದ ಸಕಲ ಪುರುಷಾರ್ಥವನ್ನೀಯುವ ಭಗವಂತ ಶುಭೇಕ್ಷಣಃ

No comments:

Post a Comment