Tuesday, September 14, 2010

Vishnu sahasranama 347-350


ವಿಷ್ಣು ಸಹಸ್ರನಾಮ: ಪದ್ಮನಾಭೋರವಿಂದಾಕ್ಷಃ ಪದ್ಮಗರ್ಭಃ ಶರೀರಭೃತ್

347) ಪದ್ಮನಾಭಃ
ಸೃಷ್ಟಿಯ ಮೊದಲು ಪ್ರಳಯ ಕಾಲದಲ್ಲಿ ಈ ಬ್ರಹ್ಮಾಂಡ ಸಂಪೂರ್ಣವಾಗಿ ಭಗವಂತನೊಳಗೆ ಸೇರಿರುತ್ತದೆ. ಸೃಷ್ಟಿಕಾಲದಲ್ಲಿ ಅದು ಭಗವಂತನ ನಾಭಿಯಿಂದ ಕಮಲರೂಪದಲ್ಲಿ ಹೊರಬರುತ್ತದೆ. ಈ ಬ್ರಹ್ಮಾಂಡ ಅಂಡ ರೂಪದಲ್ಲಿ ಅಥವಾ ಕಮಲದ ಮೊಗ್ಗಿನ ರೂಪದಲ್ಲಿ ಸೃಷ್ಟಿಯಾಗುತ್ತದೆ. ಈ ಕಮಲ ರೂಪಿ ಬ್ರಹ್ಮಾಂಡದಲ್ಲಿ ಹದಿನಾಲ್ಕು ಎಸಳುಗಳಿರುತ್ತವೆ, ಅವೇ ಹದಿನಾಲ್ಕು ಲೋಕಗಳು. ಹೀಗೆ ತನ್ನ ನಾಭಿಯಿಂದ ಕಮಲರೂಪಿ ಬ್ರಹ್ಮಾಂಡ ಸೃಷ್ಟಿ ಮಾಡುವ ಭಗವಂತ ಪದ್ಮನಾಭಃ.
348) ಅರವಿಂದಾಕ್ಷಃ
ಅರವಿಂದ ಎಂದರೆ ದಳಗಳು. ಮೇಲೆ ಹೇಳಿದಂತೆ ಭಗವಂತ ಕಮಲದ ಮೊಗ್ಗಿನಂತಹ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ; ಆ ಕಮಲ ಅರಳಿದಾಗ ಹದಿನಾಲ್ಕು ಲೋಕವಾಯಿತು; ಆ ನಂತರ ಈ ಅರಳಿನಿಂತ ಬ್ರಹ್ಮಾಂಡದೊಳಗೆ ಸ್ವಯಂ ತಾನೇ ತುಂಬಿದ. ಇಂತಹ ಭಗವಂತ ಅರವಿಂದಾಕ್ಷಃ.
'ರವಿ' ಎಂದರೆ ಸೂರ್ಯ 'ಅರವಿ' ಎಂದರೆ ಕತ್ತಲು; 'ದಾ' ಎಂದರೆ 'ಧ್ಯತಿ ಅಥವಾ 'ನಾಶ' ; ಅಕ್ಷ ಎಂದರೆ ಕಣ್ಣು. ಆದ್ದರಿಂದ ಅರವಿಂದಾಕ್ಷಃ ಎಂದರೆ ಕತ್ತಲನ್ನು ನಾಶಮಾಡುವ ಸೂರ್ಯ ಹಾಗು ಚಂದ್ರರೆಂಬ ಎರಡು ಕಣ್ಣುಗಳನ್ನು ಈ ಜಗತ್ತಿಗೆ ಕೊಟ್ಟವನು. ಹೀಗೆ ನಮ್ಮ ಒಳಗೆ ಹಾಗು ಹೊರಗಿರುವ ಕತ್ತಲನ್ನು ನಿವಾರಿಸುವ ಭಗವಂತ ಅರವಿಂದಾಕ್ಷಃ.
349) ಪದ್ಮಗರ್ಭಃ
ಸೃಷ್ಟಿಗೆ ಮೊದಲು ಸಂಪೂರ್ಣ ಬ್ರಹ್ಮಾಂಡ ಹಾಗು ಜೀವ ಜಂತುಗಳು ಸೂಕ್ಷ್ಮರೂಪದಲ್ಲಿ ಭಗವಂತನ ಉದರದಲ್ಲಿದ್ದು, ಸೃಷ್ಟಿ ಕಾಲದಲ್ಲಿ ಎಲ್ಲವೂ ಆತನ ನಾಭಿಯಿಂದ ಪದ್ಮ ರೂಪದಲ್ಲಿ ಹೊರ ಚಿಮ್ಮುತ್ತದೆ. ಹೀಗೆ ಇಡೀ ಬ್ರಹ್ಮಾಂಡವನ್ನು ತನ್ನ ಉದರದಲ್ಲಿ ಧರಿಸಿದ ಭಗವಂತ ಪದ್ಮಗರ್ಭಃ. ಚತುರ್ಮುಖನ ಗರ್ಭದೊಳಗೆ ನಿಂತು ಈ ಸೃಷ್ಟಿಯನ್ನು ನಡೆಸುವ ಭಗವಂತ ಪದ್ಮಗರ್ಭಃ
350) ಶರೀರಭೃತ್
ಶರೀರಭೃತ್ ಎಂದರೆ ಶರೀರವನ್ನು ಧಾರಣೆ ಮಾಡುವವನು. ಭಗವಂತ ನಮ್ಮೊಳಗೆ ಪ್ರಾಣದೇವರೊಂದಿಗೆ ಪ್ರವೇಶಿಸುವುದು 'ಹುಟ್ಟು' ಹಾಗು ನಮ್ಮ ಶರೀರದಿಂದ ನಿರ್ಗಮಿಸುವುದು 'ಸಾವು'. ಭಗವಂತ ನಮ್ಮ ಶರೀರದಿಂದ ಹೊರಟನೆಂದರೆ ನಮ್ಮ ಪ್ರಾಣ ಪಕ್ಷಿ ಹಾರಿಹೋಗುತ್ತದೆ; ಈ ಶರೀರ ಶವವಾಗುತ್ತದೆ.
ಶರೀರ ಎನ್ನುವುದಕ್ಕೆ ಇನ್ನೊಂದು ಅರ್ಥ ಬ್ರಹ್ಮಾಂಡ. ಹೀಗೆ ನಮ್ಮ ಶರೀರವನ್ನು ಹಾಗು ಸಂಪೂರ್ಣ ಬ್ರಹ್ಮಾಂಡವನ್ನು ಧಾರಣೆ ಮಾಡಿದ ಭಗವಂತ, ಅನಾದಿನಿತ್ಯವಾದ ಜೀವರನ್ನು ಸದಾ ಧಾರಣೆ ಮಾಡಿರುತ್ತಾನೆ. ಇಂತಹ ಭಗವಂತ ಶರೀರಭೃತ್.

No comments:

Post a Comment