Tuesday, September 21, 2010

Vishnu sahasranama 370-371


ವಿಷ್ಣು ಸಹಸ್ರನಾಮ: ಮಹೀಧರೋ ಮಹಾಭಾಗೋ......
37) ಮಹೀಧರಃ

ನಿಘಂಟಿನಲ್ಲಿ ಮಹೀಧರ ಪದದ ಅರ್ಥವನ್ನು ಹುಡುಕಿದರೆ ಭೂಮಿಯನ್ನು ಹೊತ್ತ ಬೆಟ್ಟಗಳು ಎನ್ನುವ ಅರ್ಥವನ್ನು ಕಾಣಬಹುದು. ಬೆಟ್ಟಗಳು ಭೂಮಿಯ ಮೇಲಿದ್ದರೂ ಸಹ ಭೂಮಿಯ ಸ್ಥಿರತೆಯನ್ನು ಕಾಪಾಡಲು ಬೆಟ್ಟಗಳು ಅತ್ಯಗತ್ಯ. ಆದರೆ ಇದು ಕೇವಲ ಲೌಕಿಕ ಅರ್ಥ. ನಿಜವಾಗಿ ಈ ಭೂಮಿಯನ್ನು ಹೊತ್ತವನು ಯಾರು? ಭೂಮಿ ಆಕಾಶದಲ್ಲಿ ಸಂಕರ್ಷಣ ಶಕ್ತಿಯಿಂದ ನಿಂತಿದೆ. ಈ ಸಂಕರ್ಷಣ ಶಕ್ತಿ (ಶೇಷ ಶಕ್ತಿ) ವಾತಾವರಣದಲ್ಲಿ (ವಾಯು ಶಕ್ತಿ) ನಿಂತಿದೆ. ಇವೆಲ್ಲವನ್ನು ಭಗವಂತ ಹೊತ್ತಿದ್ದಾನೆ.ಹೀಗೆ ಭೂಮಿಯನ್ನು ಈ ಸಂಪೂರ್ಣ ಜಗತ್ತನ್ನು ಧರಿಸಿರುವ ಭಗವಂತ ಮಹೀಧರಃ. "ನಾನು" ,"ನನ್ನಿಂದ" ಎನ್ನುವ ಅಹಂಕಾರವನ್ನು ಬಿಟ್ಟು, ನಮ್ಮೆಲ್ಲರನ್ನೂ, ಈ ಪ್ರಕೃತಿಯನ್ನು ಹೊತ್ತ ಸರ್ವ ಸಮರ್ಥ ಶಕ್ತಿ ಭಗವಂತ ಎಂದು ತಿಳಿದಾಗ ಮಾತ್ರ ಈ ಸತ್ಯ ಹೊಳೆಯುತ್ತದೆ.
371) ಮಹಾಭಾಗಃ
ನಾವು ಪೂಜೆಯಲ್ಲಿ ಅರ್ಪಿಸುವ ಪೂಜಾ ದ್ರವ್ಯಗಳ ಮುಖ್ಯ ಭಾಗ ಸೇರುವುದು ಭಗವಂತನನ್ನು. ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ:
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ
ನತು ಮಾಮಭಿಜಾನಂತಿ ತತ್ವೇನಾತಸ್ಚ್ಯವಂತಿ ತೇ (ಅ-೯ ಶ್ಲೋ ೨೪)
ನಾವು ಪೂಜೆ ಮಾಡುವಾಗ ನಮಗೆ ಈ ಎಚ್ಚರ ಬೇಕು. ತಿಳಿದು ಮಾಡಿದಷ್ಟು ಉತ್ತಮ. ಯಾವ ದೇವತೆಗಳೂ ಭಗವಂತನಿಗೆ ಅರ್ಪಿಸದ ಹವಿಸ್ಸನ್ನು ನೇರವಾಗಿ ಸ್ವೀಕರಿಸುವುದಿಲ್ಲ.
ಭಗವಂತ ಮಹಾ ಭಾಗ್ಯ ಕೂಡಾ ಹೌದು. ಇಲ್ಲಿ ಭಾಗ್ಯ ಎಂದರೆ ಜ್ಞಾನ, ಶಕ್ತಿ, ಭಲ, ಐಶ್ವರ್ಯ,ವೀರ್ಯ ಮತ್ತು ತೇಜಸ್ಸು ಈ ಷಡ್ಗುಣಗಳಿಂದ ಪೂರ್ಣನಾಗಿ ಜಗತ್ತನ್ನು ನಿಯಂತ್ರಿಸುವವ.

No comments:

Post a Comment