Thursday, September 16, 2010

Vishnu sahasranama 356-359


ವಿಷ್ಣು ಸಹಸ್ರನಾಮ : ಅತುಲಃ ಶರಭೋ ಭೀಮಃ ಸಮಯಜ್ಞೋ.......
356) ಅತುಲಃ

ಭಗವಂತ ಯಾವುದೇ ತುಲನೆಗೆ ನಿಲುಕುವವನಲ್ಲ. ಆತನನ್ನು ಇನ್ನೊಂದು ವಸ್ತುವಿನೊಂದಿಗೆ ತುಲನೆ ಮಾಡಲು ಸಾದ್ಯವಿಲ್ಲ; ಏಕೆಂದರೆ ಭಗವಂತ ನಮಗೆ ತಿಳಿದ ಯಾವುದೇ ವಸ್ತುವಿನಂತಿಲ್ಲ. ಭಗವಂತನನ್ನು ತಿಳಿಸುವ ಅತಿದೊಡ್ಡ ಬೀಜಾಕ್ಷರ ಓಂಕಾರದಲ್ಲಿ(ಅ+ಉ+ಮ) ಬರುವ ಮೊದಲ ಅಕ್ಷರ ಅ 'ಅಲ್ಲ' ಎನ್ನುವ ಅರ್ಥವನ್ನು ಕೊಡುತ್ತದೆ. ಅಂದರೆ ಭಗವಂತ ನಿನಗೆ ತಿಳಿದ ಯಾವುದೇ ವಸ್ತುವಲ್ಲ ಹಾಗು ಆತನನ್ನು ಪೂರ್ಣವಾಗಿ ತಿಳಿಯಲು ಸಾದ್ಯವಿಲ್ಲ ಎಂದರ್ಥ. ಭಗವಂತನಿಗೆ ಸದೃಶವಾದ ಯಾವುದೇ ವಸ್ತುವಿಲ್ಲ. ಹೀಗೆ ಸರಿಸಾಟಿಯಿಲ್ಲದ, ಎಲ್ಲಾ ಪ್ರಶ್ನೆಗೂ ಪ್ರಶ್ನೆಯಾಗಿ ಉಳಿಯುವ ಭಗವಂತ ಅತುಲಃ.
357) ಶರಭಃ
ಇಲ್ಲಿ ಶರ ಎಂದರೆ ಒಂದು ದಿನ ಬಿದ್ದು ಹೋಗುವ ಶರೀರ. ಶರಭ ಎಂದರೆ ನಮ್ಮ ಶರೀರದೊಳಗೆ ಬೆಳಗುವ ಶಕ್ತಿ. ಹೊರಗಣ್ಣನ್ನು ಮುಚ್ಚಿ ಒಳಗಣ್ಣಿನಿಂದ ನೋಡಿದಾಗ ಮಾತ್ರ ಶರೀರದೊಳಗಿನ ಪ್ರಕಾಶಮಾನವಾಗಿರುವ ಭಗವಂತನನ್ನು ಕಾಣಬಹುದು. ಇಡೀ ಪ್ರಪಂಚದಲ್ಲಿ ತುಂಬಿರುವ; ಪ್ರಳಯ ಕಾಲದಲ್ಲಿ ಇಡೀ ಪ್ರಪಂಚವನ್ನು ಸಂಹಾರ ಮಾಡುವ ಶಕ್ತಿ, ಅಣುವಿನೊಳಗೆ ಅಣುವಾಗಿ ಎಲ್ಲರಲ್ಲೂ ತುಂಬಿದ್ದಾನೆ. ಇಂತಹ ಭಗವಂತನನ್ನು ತಿಳಿಯಬೇಕಾದರೆ ನಮ್ಮ ಮನಸ್ಸನ್ನು ಶರ(ಬಾಣ)ವಾಗಿಸಿ ಆತನೆಡೆಗೆ ಗುರಿಯಿಟ್ಟು ಸಾಗಬೇಕು.(ಇಲ್ಲಿ ಬಾಣ ಎಂದರೆ ಏಕಾಗ್ರತೆ). ಮನಸ್ಸು ಮತ್ತು ಆತ್ಮ ಬಾಣವಾಗಿ ಭಗವಂತನ ಪಾದವನ್ನು ಸೇರಿದಾಗ ಆತ ನಮಗೆ ತಿಳಿಯುತ್ತಾನೆ.
ಪುರಾಣಗಳಲ್ಲಿ ಶರಭ ಎನ್ನುವ ಪ್ರಾಣಿಯ ಉಲ್ಲೇಖವಿದೆ. ಈ ಪ್ರಾಣಿ ಎಂಟು ಕಾಲುಗಳುಳ್ಳ ಅತ್ಯಂತ ಬಲಿಷ್ಠ ಪ್ರಾಣಿಯಾಗಿತ್ತು. ಆದರೆ ಈ ಪ್ರಾಣಿಯ ಯಾವುದೇ ಕುರುಹು ನಮಗೆ ದೊರೆತಿಲ್ಲ. ಇಂತಹ ವಿಶಿಷ್ಟ ಪ್ರಾಣಿಯಲ್ಲಿ ಸನ್ನಿಹಿತನಾಗಿರುವ ಭಗವಂತನಿಗೆ ಶರಭಃ ಎನ್ನುವುದು ಅನ್ವರ್ಥ ನಾಮ.
358) ಭೀಮಃ (ಅಭೀಮಃ)
ಯಾರು ಒಳಗಿನ ಪ್ರಪಂಚವನ್ನು ಮರೆತು ಹೊರಪ್ರಪಂಚದಲ್ಲಿ ಬದುಕುತ್ತಾರೋ ಅವರಿಗೆ ಭಗವಂತ ಭಯಂಕರ(ಭೀಮಃ). ಯಾರು ಒಳಪ್ರಪಂಚದ ಅರಿವಿನಿಂದ ಬದುಕುತ್ತಾರೋ ಅವರಿಗೆ ಭಗವಂತ ಅಭಯ(ಅಭೀಮಃ). ಅವನು ಭಯಂಕರನೂ ಹೌದು; ಅಭಯಂಕರನೂ ಹೌದು. ಹಿರಣ್ಯಕಶಿಪುವಿಗೆ ನರಸಿಂಹ ಅವತಾರದಲ್ಲಿ ಭಯಂಕರನಾದ ಭಗವಂತ ಪ್ರದ್ಯುಮ್ನನಿಗೆ ಅದೇ ರೂಪದಲ್ಲಿ ಅಭಯಂಕರನಾದ. ಇಂತಹ ಭಗವಂತ ಭೀಮಃ ಅಥವಾ ಅಭೀಮಃ.
359) ಸಮಯಜ್ಞಃ
ಈ ನಾಮವನ್ನು ಸಮಯ+ಜ್ಞಾ ಮತ್ತು ಸಮ+ಜ್ಞಾ ಎಂದು ಎರಡು ಬಗೆಯಲ್ಲಿ ಅರ್ಥೈಸಬಹುದು. ಭಗವಂತ ಸಮಯ ಅಥವಾ ಹೊತ್ತು ತಿಳಿದವನು. ಸೃಷ್ಟಿಯಿಂದ ಸಂಹಾರ ತನಕದ ಸ್ಥಿತಿ ಕಾಲದಲ್ಲಿ ನಿರಂತರ ಹುಟ್ಟು-ಸಾವು ನಡೆಯುತ್ತಿರುತ್ತದೆ. ಯಾವುದು ಯಾವಾಗ ನಡೆಯುತ್ತದೆ ಎನ್ನುವ ಅರಿವು ನಮಗಿರುವುದಿಲ್ಲ. ಯಾವುದೂ ನಮಗೆ ತಿಳಿದಿಲ್ಲವೋ ಅದನ್ನು ನಾವು ಆಕಸ್ಮಿಕ ಎನ್ನುತ್ತೇವೆ. ಆದರೆ ಭಗವಂತನಿಗೆ ಯಾವುದೂ ಆಕಸ್ಮಿಕವಲ್ಲ. ಆತ ಸರ್ವಜ್ಞ. ಯಾವ ಕಾಲದಲ್ಲಿ ಏನು ನಡೆಯುತ್ತದೆ ಎನ್ನುವ ಸಂಪೂರ್ಣ ಅರಿವು ಇರುವುದು ಭಗವಂತನೊಬ್ಬನಿಗೆ. ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆ ಹಿಂದೆ ಒಂದು ಕಾರಣವಿರುತ್ತದೆ. ಇಂತಹ ಕಾಲ ಜ್ಞಾನಿ ಭಗವಂತ ಸಮಯ-ಜ್ಞ.
ಸಮಯ ಎನ್ನುವುದಕ್ಕೆ ಇನ್ನೊಂದು ಅರ್ಥ "ವೇದಾದಿ ಶಾಸ್ತ್ರಗಳು" ಯಾವುದರಿಂದ ನಮಗೆ ಸಮೀಚೀನವಾದ ಜ್ಞಾನ ಬರುತ್ತದೋ ಅದು ಸಮಯ. ಸಮಗ್ರ ವೇದದ, ಶಾಸ್ತ್ರದ ಅಂತರಂಗದ ರಹಸ್ಯ ತಿಳಿದವನು ಭಗವಂತನೊಬ್ಬನೇ. ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ:
ಸರ್ವಸ್ಯ ಚಾಹಂ ಹೃದಿ ಸನ್ನಿ ವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ
ವೇದೈಸ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ ವೇದವಿದೇವ ಚಾಹಮ್ (ಅ-೧೫, ಶ್ಲೋ-೧೫)
"ಎಲ್ಲರ ಹೃದಯದಲ್ಲಿ ನಾನು ನೆಲೆಸಿರುವೆ, ನೆನಪು, ಅರಿವು, ಮರೆವು ಎಲ್ಲ ನನ್ನ ಕೊಡುಗೆ. ಎಲ್ಲ ವೇದಗಳಿಂದ ಅರಿಯಬೇಕಾದವನು ನಾನೆ. ವೇದಾಂತಸೂತ್ರಗಳನೊರೆದವನು, ವೇದಗಳ ಮರ್ಮವನ್ನರಿತವನು ನಾನೆ".
ಭಗವಂತ ಸಮ-ಯಜ್ಞ. ಯಜ್ಞ ಎಂದರೆ ಪೂಜೆ; ಒಳ್ಳೆಯ ಕಾರ್ಯಕ್ಕಾಗಿ ಒಟ್ಟಿಗೆ ಸೇರುವುದು; ದಾನ ಮಾಡುವುದು ಇತ್ಯಾದಿ . ನಮ್ಮಲ್ಲೇನಿದೆ ಅದನ್ನು ಇಲ್ಲದವರಿಗೆ ಕೊಡುವುದು ಒಂದು ಯಜ್ಞ. ಭಗವಂತನನ್ನು ಅಂತರಂಗದ ಸಮದೃಷ್ಟಿಯಿಂದ ಪೂಜಿಸಬೇಕು. ಸಮಾಜದಲ್ಲಿ ಎಲ್ಲರನ್ನೂ ಅವರ ಯೋಗ್ಯತೆಗೆ ತಕ್ಕಂತೆ ದ್ವೇಷವಿಲ್ಲದೆ, ಅವರೊಳಗಿರುವ ಭಗವಂತನನ್ನು ಹಾಗು ಅವನ ಅಭಿವ್ಯಕ್ತವನ್ನು ತಿಳಿದು ಗೌರವಿಸಬೇಕು.ಎಲ್ಲರ ಒಳಗಿರುವ ಭಗವಂತ ಒಬ್ಬನೇ. ಕೇವಲ ಅವನ ಅಭಿವ್ಯಕ್ತ ಮಾತ್ರ ಬೇರೆ ಬೇರೆ. ಈ ಸಮಭಾವಕ್ಕೆ ಯೋಗವೆಂದು ಹೆಸರು. (ಸಮತ್ವಂ ಯೋಗ ಉಚ್ಯತೇ ಅ-೨, ಶ್ಲೋ-೪೮)
ಕೃಷ್ಣ ಭಗವದ್ಗೀತೆಯಲ್ಲಿ ಹೇಳುವಂತೆ:
ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ (ಅ-೦೫, ಶ್ಲೋ-೧೮)
"ಪಾಂಡಿತ್ಯ-ಸೌಜನ್ಯಗಳ ನೆಲೆಯಾದ ಬ್ರಹ್ಮಜ್ಞಾನಿ, ಆಕಳು, ಆನೆ, ನಾಯಿ, ಹೊಲಗೇಡಿಯಾದ ಹೀನ ಮಾನವನಲ್ಲಿ ಕೂಡಾ ಏಕರೂಪದ ಭಗವಂತನನ್ನು ಕಾಣಬಲ್ಲರು"
ಭಗವಂತ ಯಾರಿಗೂ ತಾರತಮ್ಯ ಮಾಡುವುದಿಲ್ಲ. ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಸಮ ದೃಷ್ಟಿಯಿಂದ ನೋಡುತ್ತಾನೆ. ಇಲ್ಲಿ ಸಮ ದೃಷ್ಟಿ ಎಂದರೆ ಎಲ್ಲರನ್ನೂ ಏಕ ರೂಪದಲ್ಲಿ ನೋಡುವುದು ಎಂದರ್ಥವಲ್ಲ, ಯೋಗ್ಯತೆಗನುಗುಣವಾದ ಸಮ ದೃಷ್ಟಿ. ಒಂದು ಶಾಲೆಯಲ್ಲಿ ಚನ್ನಾಗಿ ಓದಿ ಬರೆದ ವಿದ್ಯಾರ್ಥಿ ಹಾಗು ಓದದೆ ಪೋಲಿಯಾಗಿರುವ ಇನ್ನೊಬ್ಬ ವಿದ್ಯಾರ್ಥಿಗೆ ಸಮನಾದ ಅಂಕವನ್ನು ಕೊಡುವುದು ಸಮಾನತೆ ಅಲ್ಲ. ಯಾವುದೇ ದ್ವೇಷವಿಲ್ಲದೆ, ಶತ್ರು, ಮಿತ್ರ, ಸ್ಥಳೀಯ, ಪರಕೀಯ ಎನ್ನುವ ಬೇದವಿಲ್ಲದೆ ಅವರವರ ಯೋಗ್ಯತೆಗೆ ತಕ್ಕಂತೆ ಅಂಕ ವಿತರಣೆ ಮಾಡುವುದು ಸಮಾನತೆ. ಹೀಗೆ ಸಮ ದೃಷ್ಟಿಯಿಂದ ಮಾಡುವ ಕ್ರಿಯೆ ಮಹಾನ್ ಯಜ್ಞ, ಹಾಗು ಭಗವಂತನಿಗೆ ಅತ್ಯಂತ ಪ್ರಿಯವಾದದ್ದು. ಹೀಗೆ ಸಮದೃಷ್ಟಿಯ ಯಜ್ಞಪ್ರಿಯ ಭಗವಂತ ಸಮಯಜ್ಞಃ

No comments:

Post a Comment