Monday, September 27, 2010

Vishnu sahasranama 395-401


ವಿಷ್ಣು ಸಹಸ್ರನಾಮ: ರಾಮೋ ವಿರಾಮೋ ವಿರಜೋ ಮಾರ್ಗೋ ನೇಯೋ ನಯೋನಯಃ
395) ರಾಮಃ

ರಾಮ ಎನ್ನುವ ನಾಮಕ್ಕೆ ಶಾಸ್ತ್ರದಲ್ಲಿ ಅನೇಕ ಅರ್ಥಗಳನ್ನು ಕಾಣಬಹುದು. 'ರಾ+ಅಮಃ', ಎಂದರೆ ಅಪರಿಮಿತವಾದ ಆನಂದ ಸ್ವರೂಪ ಹಾಗು ಎಲ್ಲರಿಗೂ ಆನಂದವನ್ನು ಹಂಚುವವನು. ಭಗವಂತನ ಈ ಗುಣ ರಾಮಾವತಾರದಲ್ಲಿ ಸ್ಪಷ್ಟವಾಗಿ ಕಾಣ ಸಿಗುತ್ತದೆ. ರಾಮಾವತಾರದಲ್ಲಿ ಭಗವಂತ ಎಲ್ಲಿಯೂ ಇನ್ನೊಬ್ಬರಿಗೆ ನೋವಾಗುವಂತೆ ನಡೆದುಕೊಂಡಿಲ್ಲ. ತನ್ನನ್ನು ಕಾಡಿಗೆ ಕಳುಹಿಸಲು ಕಾರಣಕರ್ತೆಯಾದ ಕೈಕೇಯಿಯ ಮೇಲೆ ಎಲ್ಲರೂ ಕೂಪಗೊಂಡಾಗಲೂ ಸಹ ರಾಮಚಂದ್ರ ಒಮ್ಮೆಯೂ ಕೂಡಾ ಕೆಟ್ಟ ಮಾತನ್ನು ಆಡಲಿಲ್ಲ, ಬದಲಿಗೆ "ಸಲಿಗೆಯಿಂದ ನನ್ನಿಂದೇನಾದರೂ ಅಪರಾಧವಾಗಿದ್ದರೆ ಕ್ಷಮಿಸು" ಎಂದು ಹೇಳಿ ಕಾಡಿಗೆ ಹೊರಟು ಹೋದ. ಹೀಗೆ ಇನ್ನೊಬ್ಬರ ಸಂತೋಷಕ್ಕಾಗಿ ತ್ಯಾಗಮಾಡಿ ತೋರಿಸಿದ ಅಪೂರ್ವ ಅವತಾರ ರಾಮಾವತಾರ. ರಮೆಯ ಅರಸಾದ ಸೀತಾಪತಿ ಭಗವಂತ ಈ ಅವತಾರದಲ್ಲಿ ಗಂಡು-ಹೆಣ್ಣಿನ ನಡುವೆ ದಾಪತ್ಯ ಜೀವನ ಹೇಗಿರಬೇಕು, ಅಣ್ಣ-ತಮ್ಮಂದಿರ ಪ್ರೀತಿ ಹೇಗಿರಬೇಕು, ತಂದೆ-ತಾಯಿ-ಮಕ್ಕಳ ಭಾಂದವ್ಯ ಹೇಗಿರಬೇಕು ಎನ್ನುವುದನ್ನು ಸ್ವಯಂ ತೋರಿಸಿ ಕೊಟ್ಟಿದ್ದಾನೆ.
ರಂ+ಅಮ, ಇಲ್ಲಿ ರಂ 'ಅಗ್ನಿಬೀಜ' 'ಅಮ' ಎಂದರೆ ಅಜ್ಞಾನ. ಆದ್ದರಿಂದ ರಾಮ ಎಂದರೆ ಅಜ್ಞಾನವನ್ನು ಸುಟ್ಟುಬಿಡುವ ಶಕ್ತಿ. ಆದ್ದರಿಂದ ನಿರಂತರ ರಾಮ ಜಪದಿಂದ ನಮ್ಮ ಅಜ್ಞಾನ ಹಾಗು ದುರ್ಗುಣಗಳು ಸುಟ್ಟು ಹೋಗುತ್ತವೆ.

396) ವಿರಾಮಃ
ಒಬ್ಬೊಬ್ಬರಲ್ಲಿ ಒಂದೊಂದು ರೀತಿ ವಿಹರಿಸುವ, ಒಂದೊಂದು ಅವತಾರದಲ್ಲಿ ಒಂದೊಂದು ರೀತಿ ನಡೆದುಕೊಳ್ಳುವ, ವೈವಿಧ್ಯವಾಗಿ ಆನಂದವನ್ನು ಹಂಚುವ ಶಕ್ತಿ ವಿರಾಮಃ. ವಿರ+ಆಮಃ; ಇಲ್ಲಿ 'ವಿರರು' ಎಂದರೆ ಮುಕ್ತಿ ಯೋಗ್ಯರು; 'ಆಮ' ಎಂದರೆ ಜ್ಞಾನ. ಮುಕ್ತಿಯೋಗ್ಯರಿಗೆ ಪೂರ್ಣ ಜ್ಞಾನವನ್ನು ಕರುಣಿಸಿ ಉದ್ಧಾರ ಮಾಡುವ ಭಗವಂತ ವಿರಾಮಃ.
397) ವಿರಜಃ
'ರಜ' ಎಂದರೆ ಕೊಳೆ. ವಿರಜಃ ಎಂದರೆ ಯಾವ ಕೊಳೆಯ ಸ್ಪರ್ಶವೂ ಇಲ್ಲದ ನಿತ್ಯ ಪವಿತ್ರವಾದ ಪರಿಶುದ್ಧ ವಸ್ತು. ಇದಕ್ಕೆ ಉತ್ತಮ ಉದಾಹರಣೆ 'ಬೆಂಕಿ'. ಬೆಂಕಿ ಎಂದೆಂದೂ ಪರಮ ಪವಿತ್ರ ಹಾಗು ಬೆಂಕಿಗೆ ಯಾವ ವಸ್ತುವನ್ನು ಹಾಕಿದರೂ ಅದು ಪವಿತ್ರವಾಗುತ್ತದೆ. ಭಗವಂತನಿಂದ ಸೃಷ್ಟಿಯಾದ 'ಬೆಂಕಿಗೆ' ಇಂತಹ ಗುಣವಿರಬೇಕಾದರೆ ಇನ್ನು ಭಗವಂತ ಎಷ್ಟು ಪವಿತ್ರ ಎನ್ನುವುದನ್ನು ನಾವು ಊಹಿಸಬಹುದು.ಹೀಗೆ ಅಪವಿತ್ರವಾಗದ,ನಿತ್ಯ ಶುದ್ಧ ಸ್ವರೂಪ ಭಗವಂತ ವಿರಜಃ.
398) ಮಾರ್ಗಃ
ಇಲ್ಲಿ ಮಾರ್ಗಃ ಎಂದರೆ 'ಅನ್ವೇಷಣ'; ಎಲ್ಲರೂ ಹುಡುಕುತ್ತಿರುವ ವಸ್ತು. ವೇದಗಳಿಗೆ ಪೂರ್ತಿ ಎಟುಕದ, ವೇದಾಭಿಮಾನಿ ದೇವತಗಳಿಗೆ ಇನ್ನೂ ಪೂರ್ತಿ ತಿಳಿಯಲಾಗದ, ಎಷ್ಟು ಹುಡುಕಿದರೂ ಬಾಕಿ ಉಳಿಯುವ ಭಗವಂತ ಮಾರ್ಗಃ.
399) ನೇಯಃ
ಎಷ್ಟು ಹುಡುಕಿದರೂ ಸಿಗದ ಭಗವಂತ ತನ್ನ ಭಕ್ತರು ಭಕ್ತಿಯಿಂದ ಕರೆದಾಗ ಕರೆದಲ್ಲಿಗೆ ಬಂದು ಸಲಹುತ್ತಾನೆ. ಇಂತಹ ಹೃತ್ಕಮಲ ಮಧ್ಯ ನಿವಾಸಿಯಾಗಿರುವ ಭಗವಂತ ನೇಯಃ.
400) ನಯಃ
ಎಲ್ಲರನ್ನೂ ಪ್ರೇರೇಪಿಸುವ, ಎಲ್ಲ ನೀತಿ-ನಿಯಮಗಳನ್ನು ಮಾಡುವ ಸ್ವರೂಪ ನಯಃ.

401) ಅನಯಃ
ಎಲ್ಲರನ್ನೂ ನಿಯಂತ್ರಿಸುವ, ಅಜ್ಞಾನಿಗಳ ಅರಿವಿಗೆ ಬರದ, ಜ್ಞಾನಿಗಳ ಬಳಿ ಸದಾ ಮಗುವಿನಂತಿರುವ, ಯಾರ ನೀತಿ-ನಿಯಮಗಳ ಕಟ್ಟುಪಾಡಿಗೆ ಸಿಲುಕದ, ತನ್ನ ನೀತಿಗೆ ತಾನು ಬದ್ಧನಾಗಿರುವ ಭಗವಂತ ಅನಯಃ.

No comments:

Post a Comment