Wednesday, September 1, 2010

Vishnu Sahasranama 317-318

ವಿಷ್ಣು ಸಹಸ್ರನಾಮ: ವಿಶ್ವಬಾಹುರ್ಮಹೀಧರಃ
317) ವಿಶ್ವಬಾಹುಃ
ಮೇಲ್ನೋಟಕ್ಕೆ ವಿಶ್ವಬಾಹು ಎಂದರೆ ಪರಿಪೂರ್ಣವಾದ ತೋಳು ಉಳ್ಳವನು ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ ಅನಂತ ಹಾಗು ಪರಿಪೂರ್ಣವಾದ ತೊಳುಗಳುಳ್ಳವನು. ಇಲ್ಲಿ ಅನಂತ ಎಂದರೆ ಪರಿಪೂರ್ಣವಾದ ಸ್ವರೂಪಭೂತವಾದ ತೋಳು. ಭಗವಂತ ಹಾಗು ಅವನ ತೋಳುಗಳು ಭಿನ್ನವಲ್ಲ, ಆತನಿಗೆ ಬೌತಿಕವಾದ ಅಂಗಗಳಿಲ್ಲ. ನಮಗೆ ಬೌತಿಕವಾದ ಎರಡು ಕೈಗಳು; ನಮ್ಮೊಳಗಿರುವ ಸೂಕ್ಷ್ಮ ಶರೀರಕ್ಕೆ ಎರಡು ತೋಳುಗಳು; ಲಿಂಗ ಶರೀರಕ್ಕೆ ಎರಡು ತೋಳುಗಳು ಹಾಗು ನಮ್ಮ ಜೀವ ಸ್ವರೂಪಕ್ಕೆ ಎರಡು ಭುಜಗಳು. ನಮ್ಮ ಬೌತಿಕ ಇಂದ್ರಿಯ ಶಾಶ್ವತವಲ್ಲ ಆದರೆ ಸ್ವರೂಪಭೂತವಾದ ಇಂದ್ರಿಯ ಮೊಕ್ಷದಲ್ಲೂ ನಮ್ಮೊಂದಿಗಿರುತ್ತದೆ. ಭಗವಂತನ ಅನಂತ ಅವಯವಗಳು ಸ್ವರೂಪಭೂತವಾದದ್ದು ಹಾಗು ಪರಿಪೂರ್ಣವಾದದ್ದು. ಇಲ್ಲಿ ವಿಶ್ವ ಬಾಹು ಎಂದರೆ ಇಡೀ ವಿಶ್ವವನ್ನು ರಕ್ಷಣೆ ಮಾಡುವ ತೋಳು. ಪ್ರಾಣದೇವರ ಮುಖೇನ ಇಡೀ ವಿಶ್ವವನ್ನು ಧಾರಣೆ ಮಾಡಿದ ಭಗವಂತ ವಿಶ್ವಬಾಹುಃ.
318) ಮಹೀಧರಃ
'ಮಹೀ' ಎಂದರೆ ಭೂಮಿ. ಭಗವಂತ ಇಡೀ ಜಗತ್ತನ್ನು ಧರಿಸಿರುವುದಷ್ಟೇ ಅಲ್ಲದೆ ಪ್ರತಿಯೊಂದು ವಸ್ತುವಿನೊಳಗಿದ್ದು ಅದನ್ನು ಪ್ರತ್ಯೇಕವಾಗಿ ಧರಿಸಿದ್ದಾನೆ. ಭೂಮಿಯೊಳಗಿದ್ದು ಭೂಮಿಯನ್ನು ಧರಿಸಿರುವ ಭಗವಂತ ಮಹೀಧರಃ. ಗಾಯತ್ರಿಯಲ್ಲಿ ನಾವು ಉಪಾಸನೆ ಮಾಡುವ ಭಗವಂತನ ಒಂದು ರೂಪ 'ಮಹೀರೂಪ'. ಗಾಯತ್ರಿಯಲ್ಲಿ ಸಮಸ್ತ ವಾಗ್ಮಯಗಳಿಗೆ ಕಾರಣನಾದ ವಾಕ್ ನಾಮಕ ಭಗವಂತನ ರೂಪ, ಪ್ರಥ್ವಿಯಲ್ಲಿರುವ ಪ್ರಥ್ವಿ ನಾಮಕ ಭಗವಂತನ ರೂಪ, ನಮ್ಮೊಳಗಿರುವ ಬಿಂಬರೂಪಿ ಭಗವಂತನ ರೂಪ ಹಾಗು ಸೂರ್ಯಮಂಡಲದಲ್ಲಿ ಸನ್ನಿಹಿತನಾದ ಭಗವಂತನ ರೂಪವನ್ನು ಸ್ತ್ರೀ ಹಾಗು ಪುರುಷ ರೂಪದಲ್ಲಿ ಉಪಾಸನೆ ಮಾಡುತ್ತಾರೆ. ಹೀಗೆ ಗಾಯತ್ರಿ ಪ್ರತಿಪಾದ್ಯನಾದ, ತನ್ನ ಎದೆ ಹಾಗು ತೊಡೆಯಲ್ಲಿ ಲಕ್ಷ್ಮಿಯನ್ನು ಧರಿಸಿರುವ ಭಗವಂತ ಮಹೀಧರಃ.

No comments:

Post a Comment