Wednesday, August 25, 2010

Vishnu sahasranama 310-313


ವಿಷ್ಣು ಸಹಸ್ರನಾಮ: ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ
310) ಶಿಷ್ಟೇಷ್ಟಃ

ಶಿಷ್ಟರು ಎಂದರೆ ಸಂಪ್ರದಾಯದಿಂದ ಬಂದ ಸತ್ಯದ ಅರಿವನ್ನು ಪಡೆದವರು; ಗುರೂಪದೇಶದಂತೆ ಸತ್ಯದ ಮಾರ್ಗದಲ್ಲಿ ನಡೆಯುವವರು. ಬಲ್ಲವರಿಗೆ ಇಷ್ಟವಾದ ಹಾಗು ಬಲ್ಲವರಿಂದ ಪೂಜೆತನಾಗುವ ಭಗವಂತ ಶಿಷ್ಟೇಷ್ಟಃ.
311) ಶಿಖಂಡೀ
ಸಾಮಾಜಿಕವಾಗಿ ಈ ಪದಕ್ಕೆ ತಪ್ಪಾದ ಅರ್ಥ ರೂಢಿಯಲ್ಲಿದೆ. ಆದರೆ ಶಿಖಂಡೀ ಎಂದರೆ ಮೂಲಭೂತವಾಗಿ ಶಿಖಂಡ ಉಳ್ಳವನು. ಶಿಖ+ಅಂಡ ಇಲ್ಲಿ ಶಿಖ ಎಂದರೆ ತಲೆಕೂದಲು. ತಲೆಕೂದಲನ್ನು ಚನ್ನಾಗಿ ಬಾಚಿ ಹಿಂದೆ ಮೊಟ್ಟೆಯಂತೆ ಕಟ್ಟುವವರು ಶಿಖಂಡಿಗಳು. ಕೃಷ್ಣ ಬಾಲಕನಿದ್ದಾಗ ತಾಯಿ ಯಶೋದೆ ಆತನ ಕೂದಲನ್ನು ಈ ರೀತಿ ಕಟ್ಟುತ್ತಿದ್ದಳು ಈ ಕಾರಣಕ್ಕಾಗಿ ಆತನನ್ನು ಶಿಖಂಡೀ ಎಂದು ಕರೆಯುತ್ತಿದ್ದರು. ನವಿಲು ಗರಿಯನ್ನು ತಲೆಯಲ್ಲಿ ಧರಿಸುವವರನ್ನು ಕೂಡ ಶಿಖಂಡೀ ಎಂದು ಕರೆಯುತ್ತಿದ್ದರು. ಕೃಷ್ಣ ಬಾಲಕನಿದ್ದಾಗ ಇತರ ಗೋಪಾಲಕರ ಜೊತೆ ನವಿಲುಗರಿ ಧರಿಸುತ್ತಿದ್ದ ಆ ಕಾರಣಕ್ಕಾಗಿ ಆತನನ್ನು ಶಿಖಂಡೀ ಎನ್ನುವುದು ವಾಡಿಕೆ.
ಈ ನಾಮವನ್ನು ಒಡೆದು ನೋಡಿದರೆ ಶಿ+ಖಂಡಿ; ಇಲ್ಲಿ ಶಿ ಎಂದರೆ ಸದಾ ಅಜ್ಞಾನದ ನಿದ್ದೆಯಲ್ಲಿರುವವರು, ಇಂತವರನ್ನು ಖಂಡಿಸುವ ಭಗವಂತ ಶಿಖಂಡೀ, ಶಂ ಎಂದರೆ ಸುಖ, ಸ್ವಯಂ ಆನಂದ ಸ್ವರೂಪನಾಗಿದ್ದು ದುಃಖಮಯವಾದ ಸಂಸಾರವನ್ನು ಖಂಡಿಸಿ ಮುಕ್ತಿ ಕೊಡುವವನು; ಸುಖಕ್ಕೆ ಅಯೋಗ್ಯರಾದವರ ಸುಖವನ್ನು ಖಂಡಿಸುವ ಭಗವಂತ ಶಿಖಂಡೀ.
312) ನಹುಷಃ
ನಮ್ಮನ್ನು ಸಂಸಾರ ಬಂಧನದಲ್ಲಿ ಸಿಲುಕಿಸುವ, ಕೊನೆಗೆ ಸಂಸಾರ ಬಂಧದಿಂದ ಬಿಡಿಸಿ ಮೋಕ್ಷ ಕರುಣಿಸುವ ಭಗವಂತ ನಹುಷಃ.
ನಾವು ಅನೇಕ ಬಂಧನಗಳ ಸರಮಾಲೆಗಳಿಂದ ಬಂಧಿಸಲ್ಪಟ್ಟಿರುತ್ತೇವೆ. ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವುದಕ್ಕೆ ಅವರೊಳಗಿರುವ ಯಾವುದೋ ಒಂದು ಶಕ್ತಿ ಕಾರಣವಾಗಿರುತ್ತದೆ. ಯಾವುದೇ ಸ್ವಾರ್ಥವಿಲ್ಲದೆ ಅಪರಿಚಿತರಾಗಿ ಬಂದು ಸ್ನೇಹದ ಬಂಧನದಲ್ಲಿ ಸಿಲುಕುವುದು, ಪತಿ-ಪತ್ನಿಯಾಗಿ ಪ್ರೀತಿಯ ಬಂಧನದಲ್ಲಿ ಬಂಧಿಸಲ್ಪಡುವುದು, ಎಲ್ಲವೂ ಭಗವಂತನ ನಿಯಮದಂತೆ. ಒಬ್ಬ ವ್ಯಕ್ತಿಯ ಸಹವಾಸದಲ್ಲಿ ನಮ್ಮ ಹೃದಯ ಅರಳುವಂತೆ ಮಾಡುವವ ಭಗವಂತ. ಇದರಿಂದ ಸ್ನೇಹ ಬೆಳೆಯುತ್ತದೆ. ಸ್ನೇಹ-ಪ್ರೇಮದ ನಂಟನ್ನು ಬೆಳೆಸುವವ ಹಾಗು ಬೆಸೆಯುವವ ಹಾಗು ಬೇರ್ಪಡಿಸುವವ ಭಗವಂತ. ನಮ್ಮನ್ನು ಬಂಧನಕ್ಕೆ ಸಿಲುಕಿಸುವ ಭಗವಂತ ಯಾವಾಗ ಬೇರ್ಪಡಿಸುತ್ತಾನೆ ಎಂದು ತಿಳಿಯುವುದು ಕಷ್ಟ. ಪ್ರೀತಿಗಾಗಿ ಬೇರ್ಪಡುವ, ದ್ವೇಷದಿಂದ ಬೇರ್ಪಡುವ ಜನರನ್ನು ಸಾಮಾನ್ಯವಾಗಿ ನಾವು ಕಾಣುತ್ತೇವೆ. ಹೀಗೆ ಬಂಧನದಲ್ಲಿ ಸಿಲುಕಿಸುವವ ಹಾಗು ಬಂಧನದಿಂದ ಬೇರ್ಪಡಿಸುವ ಭಗವಂತ ನಹುಷಃ. ಗ್ರಹ-ಗೊಲಗಳನ್ನು ಒಂದಕ್ಕೊಂದು ಸಂಕರ್ಷಣ ಶಕ್ತಿಯಿಂದ ಬಂಧಿಸಿಟ್ಟಿರುವ ಭಗವಂತ ಪ್ರಳಯಕಾಲದಲ್ಲಿ ಎಲ್ಲವನ್ನೂ ಬೇರ್ಪಡಿಸುತ್ತಾನೆ. ಇದು ಆತನ ನಿಯಮ.


313) ವೃಷಃ
ರೂಢಿಯಲ್ಲಿ ವೃಷಃ ಎಂದರೆ ಗೂಳಿ ಎನ್ನುವ ಅರ್ಥವಿದೆ. ಆದರೆ ವೈದಿಕವಾಗಿ ವೃಷಃ ಎಂದರೆ 'ಸುರಿಸುವುದು' ಎನ್ನುವ ಅರ್ಥವನ್ನು ಕೊಡುತ್ತದೆ. ಭಕ್ತರ ಹಾಗು ಜ್ಞಾನಿಗಳ ಮೇಲೆ ಅಭೀಷ್ಟದ ಮಳೆ ಸುರಿಸುವ ಭಗವಂತ ವೃಷಃ. ಈ ನಾಮದ ಇನ್ನೊಂದು ಅರ್ಥ 'ಧರ್ಮ'; ಸಮಾಜವನ್ನು ಧಾರಣೆ ಮಾಡುವುದು ಧರ್ಮ ಹಾಗು ಇದು ಭಗವಂತನ ಪ್ರತೀಕ. ವೃ+ಷಃ ಇಲ್ಲಿ 'ಷ' ಎಂದರೆ ಷಡ್ಗುಣಾಃ; ಭಗವಂತನ ಉಪಾಸನೆ ಮಾಡುವ ಆರು ಮೂಲ ಗುಣ. ಐಶ್ವರ್ಯ, ವೀರ್ಯ, ಯಶಸ್ಸು, ಸಂಪತ್ತು , ಜ್ಞಾನ ಹಾಗು ವೈರಾಗ್ಯ. ಯಾರಲ್ಲಿ ಈ ಆರು ಗುಣಗಳು ಪೂರ್ಣವಾಗಿದೆಯೋ ಅವನು ವೃಷಃ .

No comments:

Post a Comment