Friday, August 20, 2010

Vishnu Sahasranamam 294-299

ವಿಷ್ಣು ಸಹಸ್ರನಾಮ: ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ
294) ಕಾಮಹಾ

ಇಲ್ಲಿ ಕಾಮ ಅಂದರೆ ಕಾ+ಅ+ಮ; 'ಕಾ' ಎಂದರೆ ಕುಸ್ಸಿತ, 'ಅ' ಎಂದರೆ ಅಜ್ಞಾನ ಹಾಗು 'ಮ' ಎಂದರೆ ಬಯಕೆ. 'ಹ' ಎಂದರೆ 'ಹಂತಿ ಅಥವಾ ನಾಶ'. ಆದ್ದರಿಂದ ಕಾಮಹಾ ಎಂದರೆ ಅಜ್ಞಾನದಿಂದ ಬರುವ ಕೆಟ್ಟ ಬಯಕೆಯನ್ನು ನಾಶ ಮಾಡುವವನು. ಕೆಟ್ಟ ಕಾಮನೆಗಳನ್ನು ಹೊತ್ತ ದುರ್ಜನರನ್ನು ನಾಶಮಾಡುವವನು ಕಾಮಹಾ. ಕೃಷ್ಣನಾಗಿ ಕಂಸ ಹಾಗು ಜರಾಸಂದನನ್ನು, ರಾಮನಾಗಿ ರಾವಣ-ಕುಂಭಕರ್ಣನನ್ನು, ವರಾಹನಾಗಿ ಹಿರಣ್ಯಾಕ್ಷನನ್ನು, ನರಸಿಂಹನಾಗಿ ಹಿರಣ್ಯಕಷಿಪುವನ್ನು ಸಂಹಾರ ಮಾಡಿದ ಭಗವಂತ ದುಷ್ಟ ಕಾಮನೆಗಳನ್ನು ಎಂದೂ ನೆರವೇರಿಸಿಲ್ಲ. ಭಕ್ತರ ಅಭೀಷ್ಟವನ್ನು ಪೂರೈಸುವ ಆತನಲ್ಲಿ ನಾವು ನಮ್ಮ 'ಕೆಟ್ಟ ಬಯಕೆಗಳಿಂದ' ಮುಕ್ತಿ ಕರುಣಿಸೆಂದು ಬೇಡಬೇಕು.
295) ಕಾಮಕೃತ್
ಸದ್ಬಯಕೆಗಳ ತಂದೆ ಭಗವಂತ ! ಬಯಕೆಗಳ ಅಭಿಮಾನಿ ಕಾಮನನ್ನು ಹುಟ್ಟಿಸಿದವ. ಕೆಟ್ಟ ಕಾಮನೆಗಳ ಅಭಿಮಾನಿ 'ಕಾಲನೇಮಿ' ಕಂಸನನ್ನು ಸಂಹರಿಸಿದ ಭಗವಂತ ಕಾಮಕೃತ್.
296) ಕಾಂತಃ
ಭಗವಂತ ಎಲ್ಲರೂ ಬಯಸುವ ಚಲುವ. ಮನ್ಮಥನಿಗೂ ಸೌಂದರ್ಯವನ್ನು ಕೊಟ್ಟ ಭಗವಂತ ಚಲುವರ ಚಲುವ. ಕಂ+ಅಂತಃ -ಕಾಂತಃ ಇಲ್ಲಿ ಕಂ ಎಂದರೆ ತುದಿ ಆದ್ದರಿಂದ ಕಾಂತಃ ಎಂದರೆ ಆನಂದದ ತುತ್ತ-ತುದಿ. ಭಗವಂತ ಆನಂದದ ಪರಾಕಾಷ್ಟೆ. ಜ್ಞಾನಿಗಳಿಗೆ ಆನಂದವನ್ನು ಕೊಡುವ ಭಗವಂತ ಪಾಪಿಗಳಿಗೆ ಅದರ ಅಂತ! ಪರಂಪರೆಯಲ್ಲಿ ಆನಂದವನ್ನು ಪಡೆದ ಅತೀ ದೊಡ್ಡ ಶತಾನಂದನಿಗಿಂತಲೂ ಆಚೆಗಿನ ಶಕ್ತಿಯಾದ ಭಗವಂತ ಕಾಂತಃ.
297) ಕಾಮಃ
ಭಗವಂತ ಎಲ್ಲರೂ ಬಯಸುವಂತವನು. ಅಳತೆ ಮಾಡಲು ಅಸಾಧ್ಯವಾದ ಜ್ಞಾನಾನಂದಗಳ ಪರಿಪೂರ್ಣ ಸ್ವರೂಪ.
298) ಕಾಮಪ್ರದಃ
ಸದ್ಬಯಕೆಗಳನ್ನು ನಮ್ಮ ಕರ್ಮಫಲಕ್ಕನುಸಾರವಾಗಿ ಈಡೇರಿಸುವ, ಎಲ್ಲಾ ವಿವೇಕಿಗಳು ಬಯಸುವ ಅತ್ಯಂತ ಅಮೂಲ್ಯ ವಸ್ತು ಭಗವಂತ. ಭಕ್ತರ ಬಯಕೆಗಳನ್ನು ಈಡೇರಿಸುವಲ್ಲಿ ಭಗವಂತನಿಗೆ ತೃಪ್ತಿಯೇ ಇಲ್ಲ. ತನ್ನ ಸಹಸ್ರಾರು ತೋಳುಗಳಿಂದ ಭಕ್ತಕೋಟಿಯ ಅಭೀಷ್ಟವನ್ನು ಈಡೇರಿಸುವ ಭಗವಂತ ಕಾಮಪ್ರದಃ.
299) ಪ್ರಭುಃ
ಭಕ್ತಕೋಟಿಯ ಸರ್ವಾಭೀಷ್ಟವನ್ನು ನೆರವೇರಿಸುವ ಭಗವಂತ ಸರ್ವ ಸಮರ್ಥ. ಯಾರಿಗೆ ಯಾವ ಕಾಲದಲ್ಲಿ ಏನನ್ನು ಕೊಡಬೇಕು, ಏನನ್ನು ಕೊಡಬಾರದು ಎನ್ನುವುದು ಅವನಿಗೆ ತಿಳಿದಿದೆ. ನಾವು ನಮ್ಮ ಮಕ್ಕಳು ಬಯಸಿದ್ದನ್ನೆಲ್ಲ ಕೊಡುವುದಿಲ್ಲ. ಏಕೆಂದರೆ ಮಕ್ಕಳಿಗೆ ಯಾವುದೂ ಒಳ್ಳೆಯದು ಹಾಗು ಯಾವುದು ಕೆಟ್ಟದ್ದು ಎನ್ನುವ ಅರಿವಿರುವುದಿಲ್ಲ. ಹೀಗೆ ಭಗವಂತ ತನ್ನ ಭಕ್ತರ ಅಭೀಷ್ಟವನ್ನು ಅವರ ಒಳಿತಿಗನುಗುಣವಾಗಿ ಕೊಟ್ಟು ಉದ್ದರಿಸುವ ಪ್ರಭುಃ.

No comments:

Post a Comment