Tuesday, August 10, 2010

Vishnu sahasranama 262-265

ವಿಷ್ಣು ಸಹಸ್ರನಾಮ: ವರ್ಧನೋ ವರ್ಧಮಾನಶ್ಚ ವಿವಿಕ್ತಃ ಶ್ರುತಿಸಾಗರಃ
262) ವರ್ಧನಃ

ವೃದ್ಧಿ ಎಂದರೆ ಬೆಳೆಸುವವನು. ನಮ್ಮನ್ನು, ಈ ಸೃಷ್ಟಿಯನ್ನು ಭಗವಂತ ಪೋಷಿಸಿ ಬೆಳೆಸುತ್ತಾನೆ. ಬೆಳೆಯುವುದು ಅಂದರೆ ಸಾವಿಗೆ ಹತ್ತಿರವಾಗುವುದು. ಆದ್ದರಿಂದ ವರ್ಧನ ಎಂದರೆ ಸಂಹಾರ ಮಾಡುವವನು ಎನ್ನುವ ಅರ್ಥವನ್ನು ಕೂಡಾ ಕೊಡುತ್ತದೆ. ಧಾನ್ಯ, ಭತ್ತ ಬಾಳೆ, ಇತ್ಯಾದಿ ಗಿಡಗಳು ಅವುಗಳ ಸಂತಾನವಾದಾಕ್ಷಣ ಜೀವನ ಅಂತ್ಯವಾಗುತ್ತದೆ. ಬೆಳವಣಿಗೆ ಸಾರ್ಥಕವಾಗುವುದು ಸಾವಿನಲ್ಲಿ. ಆದ್ದರಿಂದ ಸಾವು ಒಂದು ಸಹಜ ಸ್ಥಿತಿ.
ವರ+ಧನ-ವರ್ಧನ. ಶ್ರೇಷ್ಠವಾದ ಸಂಪತ್ತನ್ನು ನಾವು ಯಾರಿಂದ ಪಡೆಯುತೇವೋ ಅವನು ವರ್ಧನ. ಇಲ್ಲಿ ಶ್ರೇಷ್ಠವಾದ ಸಂಪತ್ತು ಎಂದರೆ "ಹಂಚಿದಾಗ ಹೆಚ್ಚಾಗುವ ಸಂಪತ್ತು-ಅಂದರೆ ಜ್ಞಾನ". ಒಳ್ಳೆಯ ದಾರಿಯಲ್ಲಿ ಪಡೆಯಬಹುದಾದ ಶ್ರೇಷ್ಠವಾದ ಸಂಪತ್ತು ಮೋಕ್ಷ. ಹೀಗೆ ನಮ್ಮನ್ನು ಬೆಳೆಸುವವನು, ಸಂಹಾರ ಮಾಡುವವನು, ಜ್ಞಾನಪ್ರದ ಹಾಗು ಮೊಕ್ಷಪ್ರದನಾದ ಭಗವಂತ ವರ್ಧನಃ.

263) ವರ್ಧಮಾನಃ
ವರ್ಧಮಾನ ಎಂದರೆ ಬೆಳೆಯುತ್ತಿರುವವನು. ಇಲ್ಲಿ ಭಗವಂತ ಬೆಳೆಯುತ್ತಿರುವವನಲ್ಲ. ಆತ ಎಲ್ಲಾ ಕಾಲದಲ್ಲೂ ಪೂರ್ಣತೆಯನ್ನು ಹೊಂದಿದವ. ತನ್ನ ಅವತಾರಗಳ ಮೂಲಕ ಬೆಳವಣಿಗೆಯ ವಿವಿಧ ಹಂತಗಳಲ್ಲಿ ನಾವು ಹೇಗಿರಬೇಕು ಎನ್ನುವುದನ್ನು ಆತ ತೋರಿಸಿ ಕೊಟ್ಟಿದ್ದಾನೆ.ಆತ ಯಾವುದೇ ಮಾನ ಹಾಗು ಮಾಪನಗಳ ಅಳತೆಗೆ ನಿಲುಕುವವನಲ್ಲ.
264) ವಿವಿಕ್ತಃ
ವಿವಿಕ್ತ ಎಂದರೆ ಅತ್ಯಂತ ಪವಿತ್ರವಾದ ಹಾಗು ವಿಲಕ್ಷಣವಾದ ಎಂದರ್ಥ. ಭಗವಂತನ ವ್ಯಕ್ತಿತ್ವ ತೀರಾ ಭಿನ್ನ. ಸೃಷ್ಟಿ ಮಾಡುವ ಭಗವಂತ ಯಾವುದೇ ಲೇಪವೂ ಇಲ್ಲದೆ ನಿರ್ಲಿಪ್ತನಾಗಿ ಸಂಹಾರ ಕೂಡ ಮಾಡುತ್ತಾನೆ. ಈ ರೀತಿ ಪವಿತ್ರನೂ, ವಿಲಕ್ಷಣನೂ ಆಗಿರುವ ವಿಶಿಷ್ಟ ವ್ಯಕ್ತಿತ್ವವುಳ್ಳ ಭಗವಂತ ವಿವಿಕ್ತಃ. 265) ಶ್ರುತಿಸಾಗರಃ
ಎಲ್ಲಾ ಶಾಸ್ತ್ರ ಸಮಸ್ತ ವೇದ ಹರಿದು ಹೋಗಿ ಸೇರಬೇಕಾದ ಕಡಲು ಭಗವಂತ. ಈ ಪ್ರಪಂಚದಲ್ಲಿರುವ ಎಲ್ಲಾ ಭಾಷೆಗಳು ಹಾಗು ಎಲ್ಲಾ ಪದಗಳು ಭಗವಂತನನ್ನು ಹೇಳುತ್ತವೆ. ಶಬ್ಧದ ಜೊತೆಗಿರುವ ನಾದ ಶ್ರುತಿ. ನಾದದಲ್ಲಿ ಮೂಲಭೂತವಾಗಿ ನಾಲ್ಕು ವಿಧ. ಉದಾತ್ತ, ಅನುದಾತ್ತ, ಸ್ವರಿತ ಮತ್ತು ಪ್ರಚಯ. ಉದಾತ್ತ ಎಂದರೆ ಕಂಠದಿಂದ ಮೇಲಕ್ಕೆ ಎತ್ತಿ ಮಾತನಾಡುವುದು, ಅನುದಾತ್ತ ಎಂದರೆ ನಾದವನ್ನು ಕೆಳಗೆ ಒತ್ತಿ ಮಾತನಾಡುವುದು, ಸ್ವರಿತ ಎಂದರೆ ಉದಾತ್ತ ಮತ್ತು ಅನುದಾತ್ತದ ಸಮೀಕರಿಸಿದ ರೂಪ. ಪ್ರಚಯ ಎಂದರೆ ಉದಾತ್ತ ಮತ್ತು ಅನುದಾತ್ತವನ್ನು ಕಳಚಿ ಸಮಾನಾಂತರವಾಗಿ ಮೂಡುವ ನಾದ. ಸಪ್ತ ಸ್ವರಗಳೂ ಕೂಡ ಈ ಮೇಲಿನ ನಾಲ್ಕು ಮೂಲಭೂತ ನಾದದಿಂದಾಗಿದೆ. ನಾದ ಬದಲಾದಂತೆ ಅರ್ಥ ಬದಲಾಗುತ್ತದೆ. ಭಾಷೆಗೆ ಅರ್ಥ ಕೊಡುವುದು ನಾದ. ಎಲ್ಲಾ ನಾದಗಳೂ ಭಗವಂತನನ್ನು ಹೇಳುವುದರಿಂದ ಆತ ಶ್ರುತಿಸಾಗರಃ.

No comments:

Post a Comment