Thursday, August 5, 2010

Vishnu sahasranama 242-247

ವಿಷ್ಣು ಸಹಸ್ರನಾಮ: ಸತ್ಕರ್ತಾ ಸತ್ಕೃತಃ ಸಾಧುರ್ಜಹ್ನುರ್ನಾರಾಯಣೋ ನರಃ
242) ಸತ್ಕರ್ತಾ

ಗುಣದಲ್ಲಿ ಜ್ಞಾನದಲ್ಲಿ ಹಿರಿಯರಾದವರನ್ನು ಮೇಲು-ಕೀಳು ಎನ್ನುವ ಭೇದವಿಲ್ಲದೆ ಗೌರವಿಸುವುದನ್ನು ಸತ್ಕಾರ ಎನ್ನುತ್ತಾರೆ. ಭಗವಂತನ ಪೂಜೆ ಸಹ ಸತ್ಕಾರ. ಜೀವನದಲ್ಲಿ ಸತ್ಕಾರ ಹೇಗಿರಬೇಕು ಎನ್ನುವುದನ್ನು ಭಗವಂತ ತನ್ನ ಅವತಾರ ರೂಪದಲ್ಲಿ ನಮಗೆ ತೋರಿಸಿ ಕೊಟ್ಟಿದ್ದಾನೆ. ನಿಜವಾಗಿ ಹಿರಿಯ ವ್ಯಕ್ತಿಗಳು ಅಹಂಕಾರ ರಹಿತರಾಗಿರುತ್ತಾರೆ. ತಾನು ದೊಡ್ಡವ ಎನ್ನುವ ಅಹಂಕಾರ ಅವರಲ್ಲಿರುವುದಿಲ್ಲ. ರಾಜಸೂಯ ಯಜ್ಞದಲ್ಲಿ ಯಾರಿಗೆ ಮೊದಲು ಪಾದ ಪೂಜೆ ಮಾಡಬೇಕು ಎಂದು ಚರ್ಚೆಯಾದಾಗ ಭೀಷ್ಮಾಚಾರ್ಯರು ಶ್ರೀಕೃಷ್ಣನೊಬ್ಬನೇ ಅಗ್ರಪೂಜೆಗೆ ಅರ್ಹ ಎನ್ನುವ ಸಲಹೆಯನ್ನು ಮುಂದಿಡುತ್ತಾರೆ. ಆ ಸಮಯದಲ್ಲಿ ಕೃಷ್ಣನನ್ನು ಹುಡುಕಾಡಿದರೆ ಆತ ಬಂದ ಅತಿಥಿಗಳ ಕಾಲು ತೊಳೆಯಲು ನೀರು ಕೊಡುತ್ತಿದ್ದನಂತೆ! ನಿಜವಾದ ಜ್ಞಾನಿಗಳು ಎಂದೂ ಅಹಂಕಾರಿಗಳಾಗಿರುವುದಿಲ್ಲ. ಇನ್ನೊಬ್ಬರನ್ನು ಸತ್ಕಾರ ಮಾಡುವುದನ್ನು ಭಗವಂತ ತನ್ನ ರಾಮಾವತಾರದಲ್ಲಿ ತೋರಿಸಿ ಕೊಟ್ಟಿದ್ದಾನೆ. ಮೇಲು-ಕೀಳು ಬಡವ-ಬಲ್ಲಿದ ಎನ್ನುವ ಬೇಧವಿಲ್ಲದೆ ಸ್ನೇಹಿತ ಸುಧಾಮನನ್ನು ಭಗವಂತ ಸತ್ಕರಿಸಿದ ಬಗೆ ಎಲ್ಲರಿಗೂ ತಿಳಿದಿದೆ. ದುರ್ವಾಸಮುನಿ ದ್ವಾರಕೆ ನೋಡಲು ಬಂದಾಗ ಸ್ವತಃ ಶ್ರೀಕೃಷ್ಣ ಅವರನ್ನು ಗಾಡಿಯಲ್ಲಿ ಕುಳ್ಳಿರಿಸಿ ತಾನೇ ಎಳೆದುಕೊಂಡು ಹೋಗಿ ಇಡೀ ದ್ವಾರಕೆಯನ್ನು ದುರ್ವಾಸರಿಗೆ ತೋರಿಸಿ ಕಳುಹಿಸಿ ಕೊಡುತ್ತಾನೆ. ತನ್ನ ಪೂಜೆಯನ್ನು ನಮ್ಮೊಳಗಿದ್ದು ತಾನೇ ಮಾಡಿಕೊಳ್ಳುವವ, ಪೂಜಾ ಫಲವನ್ನು ಭಕ್ತಕೋಟಿಗೆ ಕರುಣಿಸುವವ, ಸತ್ಕಾರ ಮಾಡುವುದು ಹೇಗೆ ಎನ್ನುವುದನ್ನು ಅವತಾರಗಳ ಮೂಲಕ ನಮಗೆ ತೋರಿಸಿಕೊಟ್ಟ ಭಗವಂತ ಸತ್ಕರ್ತಾ.

243) ಸತ್ಕೃತಃ
ಈ ಜಗತ್ತಿನಲ್ಲಿ ಇರುವ ಸರ್ವ ವಸ್ತುಗಳ ಕರ್ತನಾದ ಭಗವಂತ ಸತ್ಕೃತಃ. ಜ್ಞಾನ, ದುಃಖ, ಅಜ್ಞಾನ, ಸಂಹಾರ, ಮೋಕ್ಷದ 'ಕರ್ತ' ಭಗವಂತ ಸತ್ಕೃತಃ. 'ಸತ್' ಎಂದರೆ ಕಣ್ಣಿಗೆ ಕಾಣುವ ವಸ್ತು. ಸೃಷ್ಟಿಯ ಆದಿಯಲ್ಲಿ ಭಗವಂತ ಪ್ರಾಣ ತತ್ವವನ್ನು ಸೃಷ್ಟಿ ಮಾಡಿದ. ಭಗವಂತ ಸೃಷ್ಟಿ ಮಾಡಿರುವ 'ಮಣ್ಣು, ನೀರು, ಮತ್ತು ಬೆಂಕಿ 'ಸತ್'. ಈ ಜಗತ್ತಿನಲ್ಲಿ ಕಣ್ಣಿಗೆ ಕಾಣುವ ಸರ್ವ ವಸ್ತುಗಳು ಈ ಮೂರು ಮೂಲ ವಸ್ತುಗಳ ಮಿಶ್ರಣ. ಸದಾ ಕೆಳಮುಖವಾಗಿ ಚಲಿಸುವ ಮಣ್ಣು ತಮೋಗುಣವನ್ನು, ತಗ್ಗಿದ್ದ ಕಡೆ ಹರಿಯುವ ನೀರು ರಜೋಗುಣವನ್ನು ಹಾಗು ಸದಾ ಮೇಲ್ಮುಖವಾಗಿ ಉರಿಯುವ ಬೆಂಕಿ ಸತ್ವಗುಣವನ್ನು ಪ್ರತಿಬಿಂಬಿಸುತ್ತದೆ. ಮಣ್ಣು-ನೀರು-ಬೆಂಕಿ ಇಡೀ ವಿಶ್ವದ ಮೂಲದ್ರವ್ಯ. ಗೊಬ್ಬರದಲ್ಲಿರುವುದೂ ಮಣ್ಣು-ನೀರು-ಬೆಂಕಿ ಹಾಗು ಅದರಿಂದ ಅರಳಿನಿಲ್ಲುವ ಸುಂದರವಾದ ಗುಲಾಬಿ ಕೂಡ ಮಣ್ಣು-ನೀರು-ಬೆಂಕಿಯಿಂದಾಗಿದೆ. ಇಲ್ಲಿ ಬೆಂಕಿ ಎಂದರೆ ಶಾಖ. ಸೂರ್ಯನ ಬೆಳಕಿನಿಂದ ನಮಗೆ ಬೇಕಾದ ಶಾಖ ದೊರೆಯುತ್ತದೆ. ಹೀಗೆ ಅನಂತ ಆಕಾಶ, ಮೂಲದ್ರವ್ಯವಾದ ಮಣ್ಣು-ನೀರು-ಬೆಂಕಿ, ಗಾಳಿ, ಚರ-ಅಚರ, ಜಡ-ಚೇತನ, ಎಲ್ಲವುದರ ಸೃಷ್ಟಿಕರ್ತ ಭಗವಂತ ಸತ್ಕೃತಃ. ಆತ ಮಾಡುವ ಯಾವ ಕರ್ಮವೂ ಕೆಟ್ಟ ಕೆಲಸವಾಗಿರುವುದಿಲ್ಲ. ಈ ಜಗತ್ತಿನಲ್ಲಿ ಎಂದೂ ಆಗಬಾರದ್ದು ಆಗಿಲ್ಲ ಹಾಗು ಆಗುವುದೂ ಇಲ್ಲ!
244) ಸಾಧುಃ
ಭಗವಂತ ಸದ್ಗುಣಮೂರ್ತಿ. ಯಾವ ಕಾಲದಲ್ಲೂ ಆತನಿಗೆ ಕೆಟ್ಟ ಗುಣದ ಲೇಪವಿಲ್ಲ. ಸದ್ಗುಣಗಳಿಂದ ಪರಿಪೂರ್ಣನಾದ, ಸಾತ್ವಿಕ ಮೂರ್ತಿ ಹಾಗು ಸಕಲ ಗುಣಪೂರ್ಣ ಭಗವಂತ ಸಾಧುಃ.

245) ಜಹ್ನು

'ಜಹ್ನು' ಎಂದಾಗ ನಮಗೆ ನೆನಪಿಗೆ ಬರುವುದು ಋಷಿ ಜಹ್ನು. ಗಂಗೆಯು ಭಗೀರಥ ಪ್ರಯತ್ನದಿಂದ ಭೂಮಿಗಿಳಿದು ಬರುತ್ತಿದ್ದಾಗ, ರಭಸದಿಂದ ಬಂದು ಜಹ್ನು ಋಷಿಗಳ ತಪೋವನ ಪ್ರವೇಶಿಸುತ್ತಾಳೆ. ಕೋಪಗೊಂಡ ಜಹ್ನು ಋಷಿಗಳು ಇಡೀ ಗಂಗೆಯನ್ನು ಸ್ವೀಕರಿಸಿ ಹಿಡಿದಿಡುತ್ತಾರೆ. ನಂತರ ಋಷಿಮುನಿಗಳ ಪ್ರಾರ್ಥನೆಯಂತೆ ಮತ್ತು ದೇವಾನುದೇವತೆಗಳ ಅನುಜ್ಞೆಯಂತೆ ಗಂಗಾದೇವಿಯನ್ನು ಹರಿದು ಬಿಡುತ್ತಾರೆ. ಈ ಕಾರಣಕ್ಕಾಗಿ ಗಂಗೆಯನ್ನು ಜಾನ್ಹವಿ ಎನ್ನುತ್ತಾರೆ. ಭಗವಂತನನ್ನು 'ಜಹ್ನು' ಎನ್ನಲು ಕಾರಣವೇನು? ಯಾವುದೇ ಅರ್ಥವಿಲ್ಲದೆ ವ್ಯರ್ಥವಾದ ಪದವನ್ನು ಜಹ್ನುವಿನ ತಂದೆ ನಾಮಕರಣ ಮಾಡಿಲ್ಲ. ಜಹ್ನು ಭಗವಂತನ ಗುಣವಾಚಕ ನಾಮ. ಇಲ್ಲಿ 'ಜಃ' ಧಾತು 'ಬಿಟ್ಟವನು' ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ ಯಾವುದು ಬೇಡವೋ ಅದನ್ನು ಬಿಟ್ಟವನು.ಇಲ್ಲಿ ಬೇಡವಾದದ್ದು ಅಂದರೆ ಪ್ರಮುಖವಾಗಿ ಅಹಂಕಾರ ಮತ್ತು ಮಮಕಾರ. ಆತನಿಗೆ ಅಹಂಕಾರ ಮತ್ತು ಮಮಕಾರದ ಸ್ಪರ್ಶವೇ ಇಲ್ಲ. ಆದ್ದರಿಂದ ಆತ ಜಹ್ನು. 'ಜ' ಎಂದರೆ ‘ಜನನ’, 'ಹಂತಿ' ಎಂದರೆ ಸಂಹಾರ. ಸೃಷ್ಟಿ-ಸ್ಥಿತಿ-ಸಂಹಾರಗಳ ಕರ್ತ ಜಹ್ನು.

246) ನಾರಾಯಣಃ
ಸೃಷ್ಟಿಗೆ ಮೊದಲು ಭಗವಂತ ಸೂಕ್ಷ್ಮ ರೂಪದ ಪ್ರಕೃತಿಯನ್ನು ನಿರ್ಮಾಣ ಮಾಡಿದ. ಇದೇ ಸೃಷ್ಟಿಯ ಮೂಲ ದ್ರವ್ಯ ಹಾಗು ಇದನ್ನು 'ನಾರ' ಎನ್ನುತ್ತಾರೆ. ಸೃಷ್ಟಿಗೆ ಮೊದಲು ಇದ್ದವ ನಾರಾಯಣ. ಸೃಷ್ಟಿ ನಿರ್ಮಾಣದ ನಂತರ ನರರ ಸಮುದಾಯವೇ ಅವನ ಅಯನ. ನಾರಸ್ಯ ಅಯನಃ ನಾರಾಯಣಃ. ಅಂದರೆ ಜೀವ ಸಮುದಾಯಕ್ಕೆ ಆಶ್ರಯದಾತ. "ನಾರಂ ಅಯನಂ ಯಸ್ಸ್ಯ ನಾರಾಯಣಃ. ಅಂದರೆ ಜೀವ ಸಮುದಾಯವನ್ನು ಆಶ್ರಯಿಸಿ ಕೊಂಡಿರುವವ. ನಾರಾಣಾಂ ಅಯನಃ ನಾರಾಯಣಃ. ಅಂದರೆ ಜೀವರನ್ನು ನಿಯಂತ್ರಿಸುವ ಸರ್ವ ದೇವತೆಗಳ ಆಶ್ರಯದಾತ. "ಅರ" ಎಂದರೆ ದೋಷ. ದೋಷದ ಸ್ಪರ್ಶವೇ ಇಲ್ಲದ ಗುಣಪೂರ್ಣ ನಾರಾಯಣ. ಹೀಗೆ ಸೃಷ್ಟಿಗೆ ಮೊದಲು ಇದ್ದವ, ಸೃಷ್ಟಿಯಲ್ಲಿ ನಮ್ಮ ಒಳಗೂ ಹೊರಗೂ ತುಂಬಿರುವವ,ದೋಷಗಳಿಲ್ಲದ ಗುಣಪೂರ್ಣ, ಸರ್ವ ನರರೂ ತಿಳಿಯಬೇಕಾದವ, ದೇವತೆಗಳ ಆಶ್ರಯದಾತ, ಮತ್ತು ಎಲ್ಲಾ ನರರು ಕೊನೆಯದಾಗಿ ಸೇರಬೇಕಾದ ತಾಣ ಭಗವಂತ ನಾರಾಯಣಃ.

247) ನರಃ
'ನರ' ಎಂದರೆ ನರರಲ್ಲಿ ಶೇಷಾಭೀಷ್ಟನಾದ ಭಗವಂತನ ಆವೇಶ. ಅರ್ಜುನನಲ್ಲಿ ನರನ ಆವೇಶವಿತ್ತು ಎನ್ನುವ ವಿಷಯವನ್ನು ನಾವು ಹಿಂದೆ ವಿಶ್ಲೇಷಿಸಿದ್ದೇವೆ. ಶೇಷ ನಮ್ಮ ದೇಹದಲ್ಲಿರುವ ಕುಂಡಲಿನಿ ಶಕ್ತಿಯ ಸಂಕೇತ. ದೇಹದಲ್ಲಿ ನಾಲ್ಕು "ಪುರುಷರಿದ್ದಾರೆ'. ಶರೀರ ಪುರುಷ, ಛಂದಃಪುರುಷ, ವೇದಪುರುಷ ಮತ್ತು ಸಂವತ್ಸರ ಪುರುಷ. ಈ ದೇಹ ನಿಂತು ನಡೆದಾಡಬೇಕಾದರೆ ದೇಹದಲ್ಲಿ ಶರೀರಪುರುಷನಾದ ಶಿವಶಕ್ತಿ ಬೇಕು. ಮನಸ್ಸು ಯೋಚಿಸಿದ್ದನ್ನು ಸ್ಪಂದನ, ಪರಾಶರ, ಪಶ್ಯಂತಿ, ಮದ್ಯಮ ಮತ್ತು ವೈಖರಿ ರೂಪದಲ್ಲಿ ವಾಕ್ ಶಕ್ತಿ ಯಾಗಿ ಹೊರಹೊಮ್ಮಲು ಛಂದಃಪುರುಷನಾದ ಶೇಷ ಕಾರಣ. ಶೇಷನಲ್ಲಿ ವಿಶೇಷವಾಗಿ ಅಭಿಷ್ಟನಾದ ಶೇಷ ಶಯನನಾಗಿರುವ ಭಗವಂತ ನಮ್ಮಲ್ಲಿರುವ ವೇದಪುರುಷ (ಗರುಡ) ಜಾಗೃತನಾಗುವಂತೆ ಮಾಡಿ ಅಪೂರ್ವವಾದ ವೈದಿಕ ವಾಙ್ಮಯ ಶಕ್ತಿ ಪ್ರಾಪ್ತವಾಗುವಂತೆ ಮಾಡುತ್ತಾನೆ. ಹೀಗೆ ಛಂದಃಪುರುಷನಲ್ಲಿ ಅಭೀಷ್ಟನಾಗಿದ್ದು, ಎಲ್ಲವನ್ನೂ ತಿಳಿದ, 'ಅರಿಗಳಿಗೆ' ನರನಾದ ಭಗವಂತ ನರಃ

No comments:

Post a Comment