Saturday, August 14, 2010

Vishnu Sahasranamam 272-275


ವಿಷ್ಣು ಸಹಸ್ರನಾಮ: ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ
272) ನೈಕರೂಪಃ

ನೈಕರೂಪ ಎಂದರೆ ಅನಂತ ರೂಪ. ಭಗವಂತ ಒಬ್ಬೊಬ್ಬರೊಳಗೆ ಬಿಂಬರೂಪನಾಗಿ ಇಡೀ ವಿಶ್ವದಲ್ಲಿ ತುಂಬಿದ್ದಾನೆ. ನಾರಾಯಣ ಸೂಕ್ತದಲ್ಲಿ ಹೇಳುವಂತೆ:

ತಸ್ಯಾಂತೆ ಸುಶಿರಂ ಸೂಕ್ಷ್ಮಂ ತಸ್ಮಿನ್ ಸರ್ವಂ ಪ್ರತಿಷ್ಟಿತಂ

ಅಂದರೆ ನಮ್ಮ ಹೃದಯ ಮಧ್ಯದಲ್ಲಿ ಸೂಜಿಮೊನೆಯಷ್ಟು ಸೂಕ್ಷ್ಮವಾದ ಅತ್ಯಂತ ಪವಿತ್ರವಾದ ಸ್ಥಾನದಲ್ಲಿ ಭಗವಂತನಿದ್ದಾನೆ. ಇಡೀ ಬ್ರಹ್ಮಾಂಡವನ್ನು ಯಾವ ಶಕ್ತಿ ನಿಯಂತ್ರಿಸುತ್ತದೋ ಅದೇ ಸರ್ವಸಮರ್ಥ ಶಕ್ತಿ ನಮ್ಮ ಹೃತ್ಕಮಲದಲ್ಲಡಗಿದೆ. ಇದೇ ಶಕ್ತಿ ಇಡೀ ವಿಶ್ವದಲ್ಲಿ ತುಂಬಿರುವ ಸಮಗ್ರಶಕ್ತಿ. ಹೀಗೆ ಬಿಂಬರೂಪಿಯಾಗಿ ಅನಂತರೂಪಿಯಾಗಿರುವ ಭಗವಂತ ನೈಕರೂಪಃ.
273) ಬೃಹದ್ರೂಪಃ
ಬೃಹತ್ ಎಂದರೆ ನಮಗೆ ಕಾಣುವ ಬೆಳಕುಗಳಲ್ಲೆಲ್ಲಾ ಅತ್ಯಂತ ದೊಡ್ಡ ಬೆಳಕಾದ 'ಸೂರ್ಯ'. ಇಡೀ ಬ್ರಹ್ಮಾಂಡಕ್ಕೆ ಬೆಳಕು ನೀಡುವ ಸೂರ್ಯನೊಳಗಿರುವ ಭಗವಂತ ನಮ್ಮ ಹೃತ್ಕಮಲ ಮಧ್ಯ ನಿವಾಸಿ ಕೂಡಾ ಹೌದು. ಇದನ್ನೇ ಗಾಯತ್ರಿ ಉಪಾಸನೆಯಲ್ಲಿ ಹೀಗೆ ಹೇಳಿದ್ದಾರೆ:

ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್

ಬ್ರಹ್ಮಾಂಡ ಹಾಗೂ ಪಿಂಡಾ೦ಡದ ಸಮನ್ವಯ ಗಾಯತ್ರಿಯಲ್ಲಿದೆ. ಯಾವ ಶಕ್ತಿ ಸೂರ್ಯಮಂಡಲದಲ್ಲಿ ಬೃಹತ್ ಆಗಿ ಇಡೀ ವಿಶ್ವಕ್ಕೆ ಜೀವದಾನ ಮಾಡುತ್ತಿದೆಯೋ ಅದೇ ಶಕ್ತಿ ನನ್ನೊಳಗಿದ್ದು ಸದ್ಬುದ್ಧಿಯನ್ನು ಕೊಡಲಿ, ವಿಶ್ವಕ್ಕೆ ಬದುಕನ್ನು ನೀಡುವ ಶಕ್ತಿ ನನ್ನೊಳಗಿದ್ದು ನನ್ನ ಇಂದ್ರಿಯವನ್ನು ಒಳ್ಳೆಯ ವಿಷಯದತ್ತ ಪ್ರೇರೇಪಿಸಲಿ, ಒಳ್ಳೆಯದಕ್ಕೊಸ್ಕರ ಬದುಕುವಂತೆ ಮಾಡಲಿ ಎನ್ನುವುದೇ ಈ ಪ್ರಾರ್ಥನೆ. ಒಬ್ಬೊಬ್ಬರಿಗೆ ಒಂದೊಂದು ರೂಪದಲ್ಲಿ ಅವತಾರಪುರುಷ ಭಗವಂತ ಕಾಣಿಸಿಕೊಂಡಿದ್ದಾನೆ. ವಾಮನ ರೂಪಿಯಾಗಿ ಬಂದು ಬ್ರಹದ್ರೂಪಿಯಾದ ನಾರಾಯಣ, ವೈವಸ್ವತ ಮನುವಿಗೆ ಚಿಕ್ಕ ಮೀನಿನ ರೂಪದಲ್ಲಿ ಕಾಣಿಸಿಕೊಂಡು ನಂತರ ಮಹಾ ಮತ್ಸ್ಯವಾಗಿ ದರ್ಶನಕೊಟ್ಟ ಭಗವಂತ ಹಾಗು ಅರ್ಜುನನ ಸಾರಥಿಯಾಗಿ ತನ್ನ ವಿಶ್ವರೂಪವನ್ನು ತೋರಿದ ಕೃಷ್ಣ, ತಾಯಿಗೆ ತನ್ನ ಬಾಯಿಯಲ್ಲಿ ಬ್ರಹ್ಮಾಂಡವನ್ನು ತೋರಿದ ಭಗವಂತ ಬೃಹದ್ರೂಪಃ.
274) ಶಿಪಿವಿಷ್ಟಃ
'ಶಿಪಿ' ಎನ್ನುವ ಪದ ಅರ್ವಾಚೀನ ಸಂಸ್ಕೃತ ಭಾಷೆಯಲ್ಲಿ ಪ್ರಚಲಿತದಲ್ಲಿಲ್ಲ. ಇದು ವೈದಿಕ ಪದ. ಶಿಪಿ ಎಂದರೆ ಪ್ರಾಣಿಗಳು. ಶಿಪಿವಿಷ್ಟಃ ಎಂದರೆ ಪ್ರಾಣಿಗಳಲ್ಲಿ ವಿಶಿಷ್ಟವಾಗಿ ಸನ್ನಿಹಿತನಾದ ಭಗವಂತ. ಇದೊಂದು ವಿಶಿಷ್ಟವಾದ ಯಾಜ್ಞಿಕ ಉಪಾಸನೆ. ವೇದದಲ್ಲಿ ವಿಶೇಷವಾಗಿ ಐದು ಪ್ರಾಣಿಗಳನ್ನು ಉಲ್ಲೇಖ ಮಾಡಿದ್ದಾರೆ. ಅವುಗಳೆಂದರೆ ಅಶ್ವ, ಗೋವು, ಕುರಿ ಆಡು ಹಾಗು ಮನುಷ್ಯ. ಈ ಪಂಚ ಪ್ರಾಣಿಗಳಲ್ಲಿ ಪಂಚರೂಪದಲ್ಲಿ ಭಗವಂತ ಸನ್ನಿಹಿತನಾಗಿದ್ದಾನೆ ಪುರುಷ ಸೂಕ್ತದಲ್ಲಿ ಈ ಐದು ಪ್ರಾಣಿಗಳ ಉಲ್ಲೇಖವಿದೆ.

ತಸ್ಮಾದಶ್ವಾ ಅಜಾಯನ್ತ ಯೇ ಕೇ ಚೋಭಯಾದತಃ
ಗಾವೋ ಹ ಜಜ್ಞಿರೇ ತಸ್ಮಾತ್ ತಸ್ಮಾಜ್ಜಾತಾ ಅಜಾವಯಃ
ಯತ್ಪುರುಷಂ ವ್ಯದಧುಃ

ಈ ಐದು ಪ್ರಾಣಿಗಳಲ್ಲಿ ಭಗವಂತನ ಸೃಷ್ಟಿಯ ವೈಶಿಷ್ಟ್ಯ ಕಾಣಬಹುದು. ಅಶ್ವ ಹಾಗು ಎತ್ತು ಮನುಷ್ಯನ ಸಂಚಾರದ ಸಾಧನವಾಗಿದ್ದರೆ, ದನ ಯಜ್ಞದ ಮೂಲ ದ್ರವ್ಯವಾದ ಹಾಲು-ಮೊಸರು-ಬೆಣ್ಣೆ-ತುಪ್ಪವನ್ನು ಕೊಡುವ ಸಾಕು ಪ್ರಾಣಿ. ಅಶ್ವ ತನ್ನ ಜೀವದ ಪಣತೊಟ್ಟು ಯಜಮಾನನ ರಕ್ಷಣೆ ಮಾಡುವ ವಿಶಿಷ್ಟ ಪ್ರಾಣಿ. ಅಶ್ವದಲ್ಲಿ ಕಾಣುವ ಇನ್ನೊಂದು ವಿಶೇಷ ಲಕ್ಷಣವೆಂದರೆ ಅದು ಈ ಪ್ರಪಂಚದಂತೆ ನಿರಂತರ ಚಲನೆಯಲ್ಲಿರುತ್ತದೆ. ಅದು ಎಂದೂ ಚಲನೆ ರಹಿತವಾಗಿರುವುದಿಲ್ಲ. ಇದಕ್ಕಾಗಿ ಈ ಪ್ರಪಂಚವನ್ನು ಅಶ್ವತ್ಥ ಎಂದೂ ಕರೆಯುತ್ತಾರೆ. ಅಶ್ವತ್ಥಮರ ಕೂಡ ಎಂದೂ ಚಲನೆ ರಹಿತವಾಗಿರುವುದಿಲ್ಲ. ಅಶ್ವ ನಿರಂತರ ಎಷ್ಟೇ ದೂರವಾದರೂ ಆಯಾಸವಿಲ್ಲದೆ ಚಲಿಸಬಲ್ಲದು. ಚಲನೆ ಅದರ ಸಹಜ ಕ್ರಿಯೆ. ಅಶ್ವ ಮನುಷ್ಯನ ಚಾಪಲ್ಯದ ಸಂಕೇತ ಕೂಡ ಹೌದು. ಅದಕ್ಕಾಗಿ ಹಿಂದೆ ಅಶ್ವಮೇಧಯಾಗ ಮಾಡಿ ಕುದುರೆಯನ್ನು ಭಲಿ ಕೊಡುತ್ತಿದ್ದರು ಹಾಗು ಆನಂತರ ತಮ್ಮ ಚಾಪಲ್ಯದಿಂದ ಮುಕ್ತಿಯನ್ನು ಪಡೆದು ರಾಜರ್ಶಿಯಾಗಿ ಬದುಕುತ್ತಿದ್ದರು. ಮಾಂಸಹಾರಿಗಳು ತಾವು ತಿನ್ನುವ ಆಹಾರವನ್ನು ದೇವರಿಗೆ ಅರ್ಪಿಸಿ ತಿನ್ನುವುದು ಸಾಮಾನ್ಯ ಹಾಗು ಶಾಸ್ತ್ರ ಸಮ್ಮತ.
ಆಡು ಸೋಮಯಾಗದಲ್ಲಿ ಪ್ರಮುಖ ದ್ರವ್ಯ. ಆದರೆ ಸೋಮಯಾಗವನ್ನು ಕೇವಲ ಮಾಂಸಾಹಾರಿಗಳು ಮಾತ್ರ ಮಾಡಬಹುದು. ಆಡಿನ ಹಾಲನ್ನು ಈಗಲೂ ಆಹಾರವಾಗಿ ಉಪಯೋಗಿಸುತ್ತಾರೆ. ಇನ್ನು ಕುರಿ ಪ್ರಮುಖವಾಗಿ ಮನುಷ್ಯನ ಬಟ್ಟೆಯ ಸಾಧನ. ವೈದಿಕ ಸಂಪ್ರದಾಯ ಬೆಳೆದುಬಂದಿದ್ದು ಹಿಮಾಲಯದಲ್ಲಿ. ಅದಕ್ಕಾಗಿ 'ಸಿಂಧೂ ಕಣಿವೆಯ ಸಂಸ್ಕೃತಿ' ಎನ್ನುವ ಹೆಸರು ಬಂದಿರುವುದು. ಈ ಸಿಂಧೂ ಎನ್ನುವ ಹೆಸರು ಪರ್ಷಿಯನ್ ಭಾಷೆಯಲ್ಲಿ 'ಹಿಂದೂ' ಆಗಿ ನಂತರ ಬ್ರಿಟೀಷರಿಂದ 'ಇಂದು' ಆಗಿ ಇದೀಗ ಇಂಡಿಯಾ ಆಗಿದೆ!
ಈ ಸಿಂಧೂ ಕಣಿವೆಯಲ್ಲಿ ಕೊರೆಯುವ ಚಳಿಗೆ ಮನುಷ್ಯನ ರಕ್ಷಣೆ 'ಕುರಿಯಿಂದ' ತಯಾರಾದ ಬಟ್ಟೆಯಿಂದಾಗುತ್ತಿತ್ತು. ಹೀಗೆ ಈ ಮೇಲಿನ ನಾಲ್ಕು ಪ್ರಾಣಿಗಳಲ್ಲಿ ವಿಶಿಷ್ಟವಾಗಿ ಸನ್ನಿಹಿತನಾದ ಭಗವಂತ ಶಿಪಿವಿಷ್ಟಃ.
275) ಪ್ರಕಾಶನಃ
ಪ್ರಕಾಶನ ಎಂದರೆ ಎಲ್ಲವನ್ನೂ ಬೆಳಗುವವನು. ಗೀತೆಯಲ್ಲಿ ಹೇಳುವಂತೆ :

ಯದಾದಿತ್ಯಗತಂ ತೇಜೋ ಜಗದ್ ಭಾಸಯತೇsಖಿಲಮ್
ಯಚ್ಚಂದ್ರಮಸಿ ಯಚ್ಚಾಗ್ನೋ ತತ್ ತೇಜೋ ವಿದ್ಧಿ ಮಾಮಕಮ್ (ಅ-೧೫ ಶ್ಲೋ-೧೨)

ಅಗ್ನಿ, ನಕ್ಷತ್ರ ಹಾಗು ಪ್ರಪಂಚದ ಸಮಸ್ತ ಬೆಳಕಿನ ಪುಂಜಗಳನ್ನು ಬೆಳಗಿಸುವ ಮೂಲ ಜ್ಯೋತಿ ಭಗವಂತ. ಈ ನಾಮವನ್ನು ಒಡೆದು ನೋಡಿದರೆ 'ಪ್ರಕಾ+ಅಶನ' ಎಂದರೆ ಸರ್ವೋತ್ಕ್ರುಷ್ಟವಾದ ಆನಂದ ಸ್ವರೂಪ. ಪ್ರಕಾಶರು ಎಂದರೆ ಮುಕ್ತಿ ಯೋಗ್ಯ ಜ್ಞಾನಿಗಳು. ಅವರಿಗೆ 'ನಯತಿ' ಎಂದರೆ ಮೋಕ್ಷವನ್ನು ಕೊಡುವವನು ಪ್ರಕಾಶನಃ

1 comment:

  1. We need to salute Bannanje's indepth knowledge on the subject. He is An "Avathara Purusha".
    People of Udupi should be proud of giving this "Avathara Purusha" to the world.

    ReplyDelete