Wednesday, August 18, 2010

Vishnu Sahasranamam 287-289


ವಿಷ್ಣು ಸಹಸ್ರನಾಮ: ಔಷಧಂ ಜಗತಃ ಸೇತುಃ ಸತ್ಯಧರ್ಮಪರಾಕ್ರಮಃ
287) ಔಷಧಂ

ಇಡೀ ವಿಶ್ವದಲ್ಲಿ ಎಲ್ಲಾ ರೋಗಗಳಿಗೆ, ಮೂಲಭೂತವಾಗಿ ಸಂಸಾರ ಬಂಧನವೆಂಬ ರೋಗಕ್ಕೆ ಔಷಧ ಕೇವಲ ಭಗವಂತ. ಆತ ಭವರೋಗ ವೈದ್ಯ. ಅವನೇ ವೈದ್ಯ, ಅವನೇ ಔಷಧ! ಈ ನಾಮವನ್ನು ಒಡೆದು ನೋಡಿದರೆ ಔಷ+ಧ. ಇಲ್ಲಿ ಔಷ ಎಂದರೆ ಉಷ ಎಂದರೆ ಉಷ್ಣ ಅಥವಾ ಸುಡುವಂತಹದ್ದು ಎನ್ನುವ ಅರ್ಥವನ್ನು ಕೊಡುತ್ತದೆ. ಔಷರು ಎಂದರೆ ಸಂಸಾರ ತಾಪತ್ರಯದಲ್ಲಿ ಸುಟ್ಟು ಹೋಗುತ್ತಿರುವವರು. 'ಧ' ಎಂದರೆ ರಕ್ಷಕ ಅಥವಾ ಗುಣಪಡಿಸುವವ. ಔಷಧಂ ಎಂದರೆ ಸಂಸಾರ ಸಾಗರದಲ್ಲಿ ಸಿಲುಕಿ ಬೆಂದು ಬಸವಳಿದ ಜೀವರ ರಕ್ಷಕನಾದ ವೈದ್ಯ ಹಾಗು ಸ್ವಯಂ ಔಷಧ. He is the Doctor and He is the Medicine!
288) ಜಗತಃ ಸೇತುಃ
ಭಗವಂತ ಜಗತ್ತಿನಿಂದ ಮೋಕ್ಷದ ಕಡೆಗೆ ಬಿಗಿದ ಸೇತುವೆ. ಅವನೇ ಜಗತ್ತೆಂಬ ಕಡಲಿನ ಆಚೆಯ ದಢ. He is the Means and He is the End. He is the Bridge and He is the Destination! 'ಸೇತು' ಎಂದರೆ ಬಂಧನ ಶಕ್ತಿ. ನಮ್ಮನ್ನು ಈ ಸಂಸಾರವೆಂಬ ಬಂಧನದಲ್ಲಿ ಹಾಕಿದವನೂ ಅವನೇ. ಸಂಸಾರ ಸಾಗರವನ್ನು ದಾಟಲು ಸೇತುವು ಅವನೇ. ದಾಟಿದ ನಂತರ ಸೇರಬೇಕಾದ ಗಮ್ಯವು ಅವನೇ. ಇಂತಹ ಭಗವಂತ ಜಗತಃ ಸೇತುಃ
289) ಸತ್ಯಧರ್ಮಪರಾಕ್ರಮಃ
ಭಗವಂತನಲ್ಲಿ ಎರಡು ಮುಖ್ಯವಾದ ಗುಣಗಳನ್ನು ಹೇಳುತ್ತಾರೆ. ಅವುಗಳೆಂದರೆ ಧರ್ಮ ಮತ್ತು ಪರಾಕ್ರಮ. ಇಲ್ಲಿ ಧರ್ಮ ಎಂದರೆ ಧಾರಣ ಶಕ್ತಿ. ದುಷ್ಟ ಶಕ್ತಿಯನ್ನು ನಿರ್ನಾಮ ಮಾಡುವುದು ಪರಾಕ್ರಮ. ಭಗವಂತನ ಮಹಿಮೆ ಯಥಾರ್ಥವಾದದ್ದು ಆದ್ದರಿಂದ ಆತ ಸತ್ಯಧರ್ಮಪರಾಕ್ರಮಃ. ಭಗವಂತ ಸತ್ಯ ಅಂದರೆ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣ ಕರ್ತ. ಆತ ನಮಗೆ ಜ್ಞಾನವನ್ನು ಕೊಡುವವ. ಭಾಗವತದಲ್ಲಿ ಹೇಳುವಂತೆ "ಸತ್ಯಂ ಜ್ಞಾನಂ ಅನಂತಮ್ ಬ್ರಹ್ಮ ಸತ್ಯಂ ಪರಮ್ ಧೀಮಹಿ". ಸತ್ಯ ನಾಮಕನಾದ ಭಗವಂತನನ್ನು ತನ್ನ ಹೃದಯದಲ್ಲಿ ಹೊತ್ತ ಭಕ್ತರಿಗೆ ಜ್ಞಾನವೆಂಬ ಪರಾಕ್ರಮವನ್ನು ಕೊಟ್ಟು ಅನ್ಯಾಯದ ವಿರುದ್ದ ಹೋರಾಡುವ ಪರಾಶಕ್ತಿಯಾದ ಭಗವಂತ ಸತ್ಯಧರ್ಮಪರಾಕ್ರಮಃ.

No comments:

Post a Comment