Sunday, August 22, 2010

Vishnusahasranama 301-303


ವಿಷ್ಣು ಸಹಸ್ರನಾಮ: ಯುಗಾದಿಕೃದ್ಯುಗಾವರ್ತೋ ನೈಕಮಾಯೋ ಮಹಾಶನಃ

301) ಯುಗಾವರ್ತಃ
ಮೇಲೆ ಹೇಳಿದಂತೆ ಯುಗದ ಆದಿಗೆ ಕಾರಣಕರ್ತನಾದ ಭಗವಂತ ಯುಗದ ಆವರ್ತನೆಗೂ ಕಾರಣಕರ್ತ. ಯುಗದ ನಂತರ ಯುಗ, ಚತುರ್ಯುಗದ ನಂತರ ಚತುರ್ಯುಗ, ಮನ್ವಂತರದ ನಂತರ ಮನ್ವಂತರ, ಹೀಗೆ ವಿಶ್ವದ ಆವರ್ತನೆಗೆ ಕಾರಣಕರ್ತನಾಗಿ, ಪ್ರತಿಯೊಂದು ಗಂಡು ಹೆಣ್ಣಿನಲ್ಲಿ ಕುಳಿತು ಯುಗಚಕ್ರವನ್ನು ತಿರುಗಿಸುವ ಭಗವಂತ ಯುಗಾವರ್ತಃ.
302) ನೈಕಮಾಯಃ
ಭಗವಂತನ ಮಾಯೆ ಅನೇಕ. ವೈದಿಕ ಸಾಹಿತ್ಯದಲ್ಲಿ 'ಮಾಯ' ಎನ್ನುವ ಪದಕ್ಕೆ 'ಜ್ಞಾನ, ಇಚ್ಚೆ, ಮಹಿಮೆ ಇತ್ಯಾದಿ ಅರ್ಥವಿದೆ. ಭಗವಂತನ ಮಾಯೆಯಿಂದ ಈ ಜಗತ್ತು ಸೃಷ್ಟಿಯಾಯಿತು ಎಂದರೆ ಭಗವಂತನ ಅನಂತ ಜ್ಞಾನಶಕ್ತಿ ಹಾಗು ಇಚ್ಚಾ ಶಕ್ತಿಯಿಂದ ಈ ಜಗತ್ತು ಆವಿಷ್ಕಾರವಾಯಿತು ಎಂದರ್ಥ. ಭಗವಂತ ಅನಂತ ಮಹಿಮ; ಅವನ ಮಹಿಮೆಗೆ ಎಣೆಯಿಲ್ಲ, ಅದು ಅಪರಂಪಾರವಾದದ್ದು. ಇನ್ನು ಮಾಯೆ ಎಂದರೆ ಮೋಹಕ ಶಕ್ತಿ ; ನೈಕಮಾಯ ಎಂದರೆ ನಮ್ಮನ್ನು ಎರಡು ಮೋಹಕ ಶಕ್ತಿಗಳಿಂದ ಕಟ್ಟಿಹಾಕಿದ ಭಗವಂತ. ಅವುಗಳೆಂದರೆ ನಮಗೆ ನಮ್ಮ ಸ್ವರೂಪದ ಅರಿವೇ ಇಲ್ಲದ ಹರಿಯುವ ಪರದೆ ಮತ್ತು ಭಗವಂತನಿಗೂ ಹಾಗು ನಮ್ಮ ನಡುವಿನ ಸರಿಯುವಂತಹ ಪರದೆ. ಹೀಗೆ ಜ್ಞಾನಸ್ವರೂಪನಾಗಿದ್ದು, ಜ್ಞಾನಿಗಳಿಗೆ ತನ್ನ ಅರಿವನ್ನು ಕರುಣಿಸುವ ಭಗವಂತ ನೈಕಮಾಯಃ
303) ಮಹಾಶನಃ
ಮಹಾ+ಅಶನ- ಅಂದರೆ ಇಡೀ ಜಗತ್ತನ್ನು ಕಬಳಿಸಿ ಯೋಗನಿದ್ರೆಯಲ್ಲಿ ಪವಡಿಸುವ ಭಗವಂತ. ಕಠೋಪನಿಷತ್ತಿನಲ್ಲಿ ಹೇಳುವಂತೆ,ಪ್ರಳಯ ಕಾಲದಲ್ಲಿ ಭಗವಂತನಿಗೆ ಬ್ರಹ್ಮ-ವಾಯು ಕೇವಲ ಒಂದು ತುತ್ತು ! ಪ್ರಳಯ ಕಾಲದಲ್ಲಿ ಸಮಸ್ತ ವಿಶ್ವವನ್ನು ಕಬಳಿಸಿ ತನ್ನ ಉದರದಲ್ಲಿ ಪೋಷಿಸುವ ಹಾಗು ಪುನಃ ತನ್ನ ನಾಭಿಯಿಂದ ಸೃಷ್ಟಿಯ ನಿರ್ಮಾಣ ಮಾಡುವ ಭಗವಂತ ಮಹಾಶನಃ. ಇನ್ನು ಈ ನಾಮವನ್ನು ಮಹಾ+ಶ+ನ ಎಂದು ಅರ್ಥೈಸಬಹುದು. ಇಲ್ಲಿ 'ಶ' ಅಥವಾ 'ಶಂ' ಎಂದರೆ ಅಂತರಂಗದ ಆನಂದ. 'ನ' ಎಂದರೆ ನಯತಿ ಜೀವರಿಗೆ ಅಂತರಂಗದ ಮಹದಾನಂದವನ್ನು ಕೊಡುವವ ಮಹಾಶನಃ. ಮಹತ್ತಾದ ಆಸೆ ಉಳ್ಳವರು ಮಹಾಶರು. ಇಲ್ಲಿ ಮಹತ್ತಾದ ಆಸೆ ಎಂದರೆ ಯಾವುದೇ ರಾಗ-ದ್ವೇಷವಿಲ್ಲದೆ ಇಡೀ ಜಗತ್ತಿನ ಕಲ್ಯಾಣ ಬಯಸುವುದು. ಜ್ಞಾನಿಗಳಿಗೆ ಇಂತಹ ಸ್ಥಿತಿಯನ್ನು ಕರುಣಿಸುವ ಭಗವಂತ ಮಹಾಶನಃ.

1 comment:

  1. Lord Krishna Speakes through Bannanje...
    Bannanje is a Blessed Soul....God's Gift for the people who listen to his discourses and read his writings...to understand God and His creation.

    ReplyDelete