Tuesday, August 17, 2010

Vishnusahasranama 283-286

ವಿಷ್ಣು ಸಹಸ್ರನಾಮ: ಅಮೃತಾಂಶೂದ್ಭವೋ ಭಾನುಃ ಶಶಬಿಂದುಃ ಸುರೇಶ್ವರಃ
283) ಅಮೃತಾಂಶೂದ್ಭವಃ

ಅಮೃತಾಂಶು ಎಂದರೆ ಅಮೃತದ ಕಿರಣಗಳುಳ್ಳ ಚಂದ್ರ. ಚಂದ್ರನನ್ನು ಸೃಷ್ಟಿ ಮಾಡಿದ ಶಕ್ತಿ ಅಮೃತಾಂಶೂದ್ಭವಃ. ಪೌರಾಣಿಕವಾಗಿ, ಸಪ್ತರ್ಷಿಗಳಲ್ಲಿ ಒಬ್ಬನಾದ ಅತ್ರಿ ಮುನಿ ಹಾಗು ಆತನ ಹೆಂಡತಿ ಅನುಸೂಯೆ ತಪಸ್ಸಿನಲ್ಲಿ ತಮಗೆ ತ್ರಿಮೂರ್ತಿಗಳೇ ಮಕ್ಕಳಾಗಬೇಕು ಎಂದು ಪ್ರಾರ್ಥಿಸಿದಾಗ, ನಾರಾಯಣ-ದತ್ತನಾಗಿ, ಶಿವ-ಧುರ್ವಾಸನಾಗಿ ಅವತರಿಸುತ್ತಾರೆ. ಬ್ರಹ್ಮನಿಗೆ ಭೂಲೋಕದಲ್ಲಿ ಅವತಾರವಿಲ್ಲ. ಅದಕ್ಕಾಗಿ ಚಂದ್ರನಲ್ಲಿ ಸನ್ನಿಹಿತನಾಗಿ ಸೋಮನಾಗಿ ಅತ್ರಿಯಲ್ಲಿ ಜನಿಸುತ್ತಾನೆ. ದತ್ತಾತ್ರಯ ಎಂದರೆ ದತ್ತ, ದುರ್ವಾಸ ಹಾಗು ಸೋಮ.
ಇನ್ನೊಂದು ರೀತಿಯಲ್ಲಿ ನೋಡಿದಾಗ ಅಮೃತರು ಎಂದರೆ ಮೃತಿ ಇಲ್ಲದ ಮುಕ್ತರು. ಮುಕ್ತರನ್ನು ಹುಟ್ಟು-ಸಾವುಗಳ ಸಂಕೋಲೆಯಿಂದ ಬಿಡಿಸಿ ಮರು ಹುಟ್ಟು ಇಲ್ಲದ ಉನ್ನತ ಸ್ಥಿತಿ ಕೊಟ್ಟ ಭಗವಂತ ಅಮೃತಾಂಶೂದ್ಭವಃ.
284) ಭಾನುಃ
'ಭಾ' ಎಂದರೆ ಜ್ಞಾನ, ಬೆಳಕು, ಆನಂದ, ಇತ್ಯಾದಿ. ಜಗತ್ತಿನಲ್ಲಿರುವ ಎಲ್ಲಾ ಜ್ಞಾನಾನಂದಗಳು ಯಾರಿಗೆ ಸೇರಿವೆಯೋ ಅವನು ಭಾನುಃ. ಜಗತ್ತನ್ನು ಬೆಳಗುವವನು, ಸೂರ್ಯನಲ್ಲಿ, ಸೂರ್ಯಕಿರಣದಲ್ಲಿ ಸನ್ನಿಹಿತನಾದ ಭಗವಂತ ಭಾನುಃ
285) ಶಶಬಿಂದುಃ
ಮೇಲ್ನೋಟಕ್ಕೆ ಶಶಬಿಂದು ಎಂದರೆ 'ಮೊಲದ ಬಿಂದು'. ಇದು ಯಾವುದೇ ನಿರ್ದಿಷ್ಟ ಅರ್ಥವನ್ನು ಕೊಡುವುದಿಲ್ಲ. ಕಾಡಿನಲ್ಲಿದ್ದಾಗ ಶ್ರೀರಾಮಚಂದ್ರ ಮೊಲದ ಭೇಟೆಯಾಡುತ್ತಾನೆ. ಆಗ ಆ ಮೊಲದ ಒಂದು ಹನಿ ನೆತ್ತರು ಆತನ ಮೇಲೆ ಬೀಳುತ್ತದೆ. ಮೊಲದ ನೆತ್ತರಿನಿಂದ ತೊಯ್ದ ಶ್ರೀರಾಮನನ್ನು ಶಶಬಿಂದುಃ ಎಂದು ಕರೆದರು ಎನ್ನುವುದು ಮೇಲ್ನೋಟದ ಅರ್ಥ. ಆದರೆ ಈ ನಾಮದಲ್ಲಿ ಇನ್ನೂ ಅರ್ಥ ಪೂರ್ಣವಾದ ವಿಷಯವಿದೆ. 'ಶಶ' ಎಂದರೆ ಆನಂದದ-ಆನಂದ ಅಂದರೆ ಮಹದಾನಂದ, 'ಬಿಂದು' ಎಂದರೆ ಅವಯವ. ಭಗವಂತನ ಸರ್ವ ಅವಯವ ಆನಂದಪೂರ್ಣ. ಸ್ವಯಂ ಆನಂದಪೂರ್ಣನಾಗಿದ್ದು ನಮ್ಮನ್ನು ಪರಮಾನಂದದ ಸ್ಥಿತಿಗೆ ಕೊಂಡೊಯ್ಯುವ ಭಗವಂತ ಶಶಬಿಂದುಃ.
286) ಸುರೇಶ್ವರಃ
ನಮ್ಮಲ್ಲಿ ಸತ್ಕರ್ಮ ಮಾಡಿಸಿ ನಮ್ಮನ್ನು ಊರ್ಧ್ವಮುಖ ನಡೆಸಿ ಉದ್ದಾರಮಾಡುವವರು ಸುರರು. ನಮ್ಮ ಇಂದ್ರಿಯಗಳನ್ನು ನಿಯಂತ್ರಿಸುವ ಎಲ್ಲಾ ದೇವತೆಗಳನ್ನು ನಿಯಂತ್ರಿಸುವ ಪರಮೇಶ್ವರನಾದ ಭಗವಂತ ಸುರೇಶ್ವರಃ. ಇಂದ್ರಾದಿ ದೇವತೆಗಳು ನಮಗೆ ಸುಖ ಕೊಡಬೇಕಾದರೆ ನಮ್ಮಲ್ಲಿ ಕರ್ಮಫಲ ಬೇಕು ಹಾಗು ಭಗವಂತನ ಅನುಗ್ರಹ ಬೇಕು. ನಮಗೆ ಯಾವ ಗ್ರಹ-ದೇವತೆಗಳು ತೊಂದರೆ ಕೊಡುವುದಿಲ್ಲ. ನಮ್ಮ ಕರ್ಮಕ್ಕನುಸಾರವಾಗಿ ನಮ್ಮ ಗ್ರಹಗತಿ ನಿರ್ಧಾರವಾಗುತ್ತದೆ. ಕೆಲವರಿಗೆ 'ಶನಿಕಾಟ' ಎಂದು ಜೋತಿಷಿಗಳು ಹೇಳುತ್ತಾರೆ. ಆದರೆ ಯಾವ ದೇವತೆಗಳೂ ನಮಗೆ 'ಕಾಟ' ಕೊಡುವುದಿಲ್ಲ. ಗ್ರಹಗತಿ ಕೇವಲ ನಮ್ಮ ಪ್ರರಾಬ್ದಕರ್ಮವನ್ನು ಹೇಳುತ್ತದೆ. ನಮ್ಮನ್ನು ನಿಯಂತ್ರಿಸುವ ಸರ್ವ ದೇವತೆಗಳ ಈಶ್ವರ ಎಲ್ಲವುದರ ಸೂತ್ರದಾರ. ನಮ್ಮ ಜೀವನ ಒಂದು ನಾಟಕ ಹಾಗು ಇಲ್ಲಿ ನಾವು 'ಪಾತ್ರಧಾರಿಗಳು'. ಈ ನಾಟಕ ಸೂತ್ರದಾರನ ನಿಯಮದಂತೆ ನಡೆಯುತ್ತದೆ. ಸೂತ್ರದಾರನ ನಿಯಮದ ಚೌಕಟ್ಟಿನಲ್ಲಿ ನಮಗೆ ಕೊಟ್ಟ ಪಾತ್ರವನ್ನು ನಿಭಾಯಿಸುವುದೊಂದೇ ನಮ್ಮ ಕರ್ತವ್ಯ. ಇಷ್ಟು ತಿಳಿದು ಬದುಕಿದರೆ ನಾವು ನಮ್ಮ ಜೀವನವನ್ನು ಸಂಪೂರ್ಣ ಆನಂದಿಸಬಹುದು.
ನಮ್ಮನ್ನು ನಿಯಂತ್ರಿಸುವ ಸುರರನ್ನು ನಿಯತ್ರಿಸುವವರು ಬ್ರಹ್ಮಾದಿಗಳು. ಈ ಬ್ರಹ್ಮಾದಿಗಳ ಒಡೆಯ ಭಗವಂತ . ನಾವು ಸುಖ ಪಡುವುದು ದುಃಖಪಡುವುದು ಎಲ್ಲವೂ ಆತನಿಂದ ಹಾಗು ಇದು ಭಗವಂತನ ಶಿಕ್ಷಣ ಕ್ರಮ. ನಮ್ಮ ಎಲ್ಲಾ ಪೂಜೆಗಳನ್ನು ಸ್ವೀಕರಿಸುವವನು ಹಾಗು ನಡೆಸುವವನು ಆ 'ಸುರೇಶ್ವರ'. ಗೀತೆಯಲ್ಲಿ ಸ್ವಯಂ ಭಗವಂತನೇ ಈ ಮಾತನ್ನು ಹೇಳಿದ್ದಾನೆ "ಅಹಂ ಹಿ ಸರ್ವ ಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ" (ಅ-೯, ಶ್ಲೊ-೨೪). ಹೀಗೆ ಸರ್ವ ಬ್ರಹ್ಮಾದಿ ದೇವತೆಗಳ ಒಡೆಯನಾಗಿದ್ದು ಎಲ್ಲರ ಸುಖದ ಈಶ್ವರನಾದ ಭಗವಂತ ಸುರೇಶ್ವರಃ.

No comments:

Post a Comment