Saturday, June 26, 2010

Vishnu Sahasranama 107-109

ಸಮಾತ್ಮಾ ಸಂಮಿತಃ ಸಮಃ

107) ಸಮಾತ್ಮಾ
ಭಗವಂತ 'ಸರ್ವೇಶು ಸಮಾತ್ಮಾ' ಅಂದರೆ ಸರ್ವರನ್ನು ಸಮಾನಾಗಿ ತಾರತಮ್ಯ ಇಲ್ಲದೆ ಕಾಣುವವನು.
ಈ ಪ್ರಪಂಚ ಒಂದು ತೋಟವಿದ್ದಂತೆ ಹಾಗು ಭಗವಂತ ಒಬ್ಬ ತೋಟಗಾರ. ಈ ಜೀವರು ಬೀಜಗಳು! ಬೀಜವನ್ನು ಮನೆಯೋಳಗಿಟ್ಟರೆ ಅದು ಫಲ ಕೊಡಲಾರದು, ಅದನ್ನು ಉತ್ತಿ-ಬಿತ್ತಿ ಪಾಲಿಸಿದಾಗ ಆ ಚಿಕ್ಕ ಬೀಜ ಹೆಮ್ಮರವಾಗಿ ಬೆಳೆಯುತ್ತದೆ ಮತ್ತು ತನ್ನ ಗುಣ ಸ್ವಭಾವದಂತೆ ಫಲವನ್ನು ಕೊಡುತ್ತದೆ. ಹುಣಸೆ ಹಣ್ಣು ಹುಳಿಯಾಗಿರುವುದಕ್ಕೆ ತೋಟಗಾರ ಕಾರಣನಲ್ಲ, ಅದರ ಗುಣ ಸ್ವಭಾವ ಕಾರಣ. ಅದೇ ರೀತಿ ಈ ಪ್ರಪಂಚದಲ್ಲಿ ಬೇರೆ ಬೇರೆ ರೀತಿಯ ಜನರನ್ನು ಕಾಣುತ್ತೇವೆ. ಭಗವಂತ ಒಬ್ಬ ತೋಟಗಾರನಂತೆ ಪ್ರತಿಯೊಬ್ಬರನ್ನು ಪಾಲಿಸಿ ಪೋಷಿಸುತ್ತಾನೆ. ಜೀವರು ಭಗವಂತನ ಕೃಪೆಯಿಂದ ತನ್ನ ಜೀವ ಸ್ವಭಾವದಂತೆ, ತನ್ನ ಕರ್ಮಫಲದಂತೆ ಬೆಳೆಯುತ್ತಾರೆ. ಭಗವಂತ ಜೀವರಿಗೆ ಕೊಡುವುದು ಶಿಕ್ಷೆ ಅಲ್ಲ ಶಿಕ್ಷಣ.ಭಗವಂತ ತನ್ನ ಎಲ್ಲಾ ಅವತಾರಗಳಲ್ಲಿ ಎಲ್ಲಾ ಕ್ರಿಯೆಗಳಲ್ಲಿ ಸಮಾತ್ಮ, ಅದರಲ್ಲಿ ಅಂತರವಿಲ್ಲ. ಭಗವಂತ ಅಖಂಡ, ಅಬಿವ್ಯಕ್ತ ಮಾತ್ರ ಬೇರೆ ಬೇರೆಯಾಗಿ ಕಾಣುತ್ತದೆ. ಎಲ್ಲರಲ್ಲೂ ಇರುವ ಬಿಂಬ ಒಂದೇ, ಆದರೆ ಪ್ರತಿಬಿಂಬ ಬೇರೆ ಬೇರೆ. ಇರುವೆ ಒಳಗೆ ಇರುವ ಬಿಂಬ ರೂಪಿ ಭಗವಂತನಿಗೂ ಆನೆಯೊಳಗಿರುವ ಬಿಂಬ ರೂಪಿ ಭಗವಂತನಿಗೂ ಯಾವುದೇ ರೀತಿ ವ್ಯತ್ಯಾಸವಿಲ್ಲ, ಅಬಿವ್ಯಕ್ತ ಮಾತ್ರ ಬೇರೆ ಬೇರೆ . ಅದ್ದರಿಂದ ಭಗವಂತ ಸಮಾತ್ಮಾ.
108) (ಅ)ಸಂಮಿತಃ
ಮೇಲೆ ಹೇಳಿದಂತೆ ಭಗವಂತ ಸಮಾತ್ಮಾ ಎಂದು ಎಲ್ಲಾ ಜ್ಞಾನಿಗಳು ಬಲ್ಲರು ಆದ್ದರಿಂದ ಆತ ಸಂಮಿತ. ಅವನು ಎಲ್ಲಾ ಕಡೆ ಸಮನಾಗಿದ್ದರೂ ಕೂಡ ಆತನಿಗೆ ಸಮನಾದವರು ಇನ್ನೊಬ್ಬರಿಲ್ಲ ಆದ್ದರಿಂದ ಆತ ಅಸಂಮಿತ ಕೂಡ ಹೌದು!!
109) ಸಮಃ

ಸಮಃ ಅನ್ನುವ ಶಬ್ದ ಎಲ್ಲರೂ ಎಲ್ಲಾ ಬಾಷೆಗಳಲ್ಲಿ ಉಪಯೋಗಿಸುವ ಸರ್ವೇಸಾಮಾನ್ಯ ಶಬ್ದ. ಆದರೆ ಇದು ಭಗವಂತನ ನಾಮ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಸಮ ಅಂದರೆ ಎಲ್ಲರನ್ನು ಏಕ ರೂಪದಲ್ಲಿ ನೋಡುವವ ಎನ್ನುವುದು ಎಲ್ಲರಿಗೂ ಹೊಳೆಯುವ ಅರ್ಥ. ಈ ಪದವನ್ನು ಒಡೆದರೆ 'ಸ' ಮತ್ತು 'ಮ' ಎನ್ನುವ ಅಪೂರ್ವ ಅರ್ಥವುಳ್ಳ ಸಂಕ್ಷಿಪ್ತ (Abbreviation) ಪದ ಕಾಣ ಸಿಗುತ್ತದೆ. ಸ ಅಂದರೆ ಸಾರ, ಮ ಎಂದರೆ ಜ್ಞಾನ ಅಥವಾ ಆನಂದ. ಆದ್ದರಿಂದ ಸಮ ಅಂದರೆ ಜ್ಞಾನಾನಂದ ಸ್ವರೂಪ ಎಂದರ್ಥ. ಈ ರೀತಿ ಪದಗಳನ್ನು ಒಡೆದಾಗ ವಿಶಿಷ್ಟ ಅರ್ಥ ಸಂಸ್ಕೃತ ಬಾಷೆ ಮಾತ್ರ ಕೊಡಬಲ್ಲದು. ನೀವು ಕೆಲವು ಆಮಂತ್ರಣ ಪತ್ರಿಕೆಯಲ್ಲಿ 'ಸ-ಕುಟುಂಬ' ಅನ್ನುವ ಪದವನ್ನು ನೋಡಿರಬಹುದು. ಇಲ್ಲಿ 'ಸ' ಅಂದರೆ ಸಹಿತ ಎಂದರ್ಥ. ಇನ್ನು 'ಮಃ' ಎಂದರೆ ಮಾತೆ, ಮಾತು, ವಾಚ್ಯ,,ಮಾನ ಅಥವಾ ಪ್ರಮಾಣ ಎನ್ನುವ ಹಲವು ಅರ್ಥವನ್ನು ಕೊಡುತ್ತದೆ. ಆದ್ದರಿಂದ ಸಮಃ ಅಂದರೆ ಸಮಸ್ತ ವೇದವಾಚ್ಯ, ಸಮಸ್ತ ಶಬ್ದ ವಾಚ್ಯ ಎಂದಾಗುತ್ತದೆ. ಇಂತಹ ಭಗವಂತನ ನಿಜವಾದ ಅನುಭವವಾಗದೆ ಅವನನ್ನು ಯಾವ ಯುಕ್ತಿಯಿಂದ ತಿಳಿಯಲು ಅಸಾದ್ಯ. ಒಮ್ಮೆ ಭಗವಂತನನ್ನು ತಿಳಿದ ಮೇಲೆ ಎಲ್ಲಾ ಯುಕ್ತಿಗಳು ಆತನನ್ನೇ ಹೇಳುತ್ತವೆ. ಇಂತಹ ಭಗವಂತ ಯಾವಾಗಲೂ ಮಾತೆ ಲಕ್ಷ್ಮೀದೇವಿ ಸಮೇತನಾಗಿ ಇರುತ್ತಾನೆ. ಈ ಎಲ್ಲಾ ಕಾರಣದಿಂದಾಗಿ ಭಗವಂತ ಸಮಃ

No comments:

Post a Comment