ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ
123) ಸರ್ವಗಃ
ಸರ್ವಗಃ ಅಂದರೆ ಎಲ್ಲಾ ಕಡೆ ಇರುವ, ಪರಿಪೂರ್ಣ ಜ್ಞಾನವುಳ್ಳ, ಎಲ್ಲವನ್ನೂ ತಿಳಿದಿರುವ, ಕೊನೆಗೆ ಎಲ್ಲವನ್ನೂ ಸಂಹಾರ ಮಾಡುವ ಭಗವಂತ.
124) ಸರ್ವವಿದ್ಭಾನು
ಸರ್ವವಿತ್+ಭಾನು. ಇಲ್ಲಿ ಸರ್ವವಿತ್ ಅಂದರೆ ಎಲ್ಲವನ್ನೂ ಪಡೆದ ಸತ್ಯಸಂಕಲ್ಪ ಆಪ್ತಕಾಮ.
ಭಾನು ಅಂದರೆ ಎಲ್ಲಾ ಬೆಳಕನ್ನು ಬೆಳಗಿಸುವ ಮೂಲ ಕಾರಣನಾದ, ಸೂರ್ಯನೊಳಗಿದ್ದು, ಎಲ್ಲಾ ಬೆಳಕನ್ನು ಪ್ರೇರೇಪಿಸುವ ಮೂಲ ಬೆಳಕು.(Note: ಎರಡು ನಾಮವಾಗಿ ಕೂಡ ಅರ್ಥೈಸಬಹುದು)
125) ವಿಷ್ವಕ್ಸೇನೋ
ಭಗವಂತನ ಕಣ್ಣು ತಪ್ಪಿಸಿ ಏನನ್ನೂ ಮಾಡಲು ಸಾದ್ಯವಿಲ್ಲ. ಏಕೆಂದರೆ ಆತನ ಸೇನೆ ಪ್ರಪಂಚದ ಮೂಲೆ ಮೂಲೆಗಳಲ್ಲಿ, ಅಂಡಾ೦ಡ-ಪಿಂಡಾ೦ಡಗಳಲ್ಲಿ, ಇಡೀ ಬ್ರಹ್ಮಾಂಡದಲ್ಲಿ ವ್ಯಾಪಿಸಿ ನಿಂತಿದೆ. ಭಗವಂತ ನಮ್ಮ ಹೃತ್ಕಮಲದಲ್ಲಿ ನೆಲೆಸಿದ್ದಾನೆ, ಹಾಗು ಆತನ ಸುತ್ತ ಅವನ ಪರಿವಾರ ದೇವತೆಗಳು ವ್ಯಾಪಿಸಿದ್ದಾರೆ. ಕಣ್ಣಿನಲ್ಲಿ ಸೂರ್ಯ, ಕಿವಿಯಲ್ಲಿ ಚಂದ್ರ , ಮೂಗಿನಲ್ಲಿ ವಾಯು, ನಾಲಿಗೆಯಲ್ಲಿ ವರುಣ, ಬಾಯಲ್ಲಿ ಅಗ್ನಿ, ಕೈಯಲ್ಲಿ ಇಂದ್ರ, ಕಾಲಲ್ಲಿ ಜಯಂತ, ಹೀಗೆ ಸಮಸ್ತ ಇಂದ್ರಿಯಗಳಲ್ಲಿ ಭಗವಂತನ ಸೇನೆ ತುಂಬಿದೆ. ಪಂಚಭೂತಗಳಿಂದ(ಮಣ್ಣು,ನೀರು,ಬೆಂಕಿ,ಗಾಳಿ,ಆಕಾಶ) ಮತ್ತು ಪಂಚ ಕೋಶಗಳಿಂದ (ಅನ್ನಮಯ ಕೋಶ, ಪ್ರಾಣಮಯ ಕೋಶ ,ವಿಜ್ಞಾನಮಯ ಕೋಶ, ಮನೋಮಯ ಕೋಶ ಹಾಗು ಆನಂದಮಯ ಕೋಶ) ಆದ ನಮ್ಮ ದೇಹದಲ್ಲಿ ನೆಲೆಸಿರುವ ಎಲ್ಲಾ ದೇವತೆಗಳನ್ನು, ಪುಂಡರೀಕಾಕ್ಷನಾಗಿ, ಲಕ್ಷ್ಮಿ ಜೊತೆಗಿದ್ದು, ಆ ಭಗವಂತ ನಿಯಂತ್ರಿಸುತ್ತಿರುತ್ತಾನೆ. ಇನ್ನು ಸೂರ್ಯಮಂಡಲದಲ್ಲಿದ್ದು, ಸೂರ್ಯ ಕಿರಣದೊಂದಿಗೆ ಈ ಬ್ರಹ್ಮಾಂಡದಲ್ಲಿ ವ್ಯಾಪಿಸಿರುವ ಭಗವಂತನನ್ನು ವಿಷ್ವಕ್ಸೇನಾ ಎನ್ನುತ್ತಾರೆ.
126) ಜನಾರ್ದನಃ
ಜನ+ಅರ್ದನ-ಜನಾರ್ದನ. ಇಲ್ಲಿ ಅರ್ದನ ಅಂದರೆ ಕೊನೆಗೊಳಿಸುವವನು ಎನ್ನುವ ಅರ್ಥವನ್ನು ಕೊಡುತ್ತದೆ.
'ಜನ' ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ.
೧. ಜನ ಅಂದರೆ ದುರ್ಜನ. ಜನಾರ್ದನ ಅಂದರೆ ದುರ್ಜನ ನಾಶಕ.
೨. ಜನ ಅಂದರೆ ಜನನ ಉಳ್ಳವರು. ಜನಾರ್ದನ ಎಂದರೆ ಜನನ ಮುಕ್ತಗೊಳಿಸುವವನು ಅಂದರೆ ಮುಕ್ತಿಪ್ರದಾಯಕ.
೩. ಜನ ಅಂದರೆ ದೇಹ. ಜನಾರ್ದನ ಎಂದರೆ ಜೀವರಿಗೆ ದೇಹದಿಂದ ಮುಕ್ತಿ ಕೊಡುವವನು.
೪. ಜನ ಅಂದರೆ ಸಜ್ಜನ. ಜನಾರ್ದನ ಎಂದರೆ ಸಜ್ಜನರ ಪ್ರಾರ್ಥನೆ ಸ್ವೀಕರಿಸಿ ಅವರ ಅಭಿಷ್ಟವನ್ನು ಪೂರೈಸುವವನು.
No comments:
Post a Comment