ವಿಷ್ಣು ಸಹಸ್ರನಾಮ: ಅಜೋ ದುರ್ಮರ್ಷಣಃ ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ
204) ಅಜಃ
ಅಜಃ ಎಂದರೆ ಎಂದೂ ಹುಟ್ಟದವನು. ಎಲ್ಲರೂ ಭಗವಂತನ ಮಕ್ಕಳು, ಆದರೆ ಆತ ಯಾರಿಗೂ ಹುಟ್ಟಿದವನಲ್ಲ. ಭಗವಂತನ ಹುಟ್ಟಿನ ಬಗ್ಗೆ ಚರ್ಚೆ 'ಬೀಜ ಮೊದಲೋ ಮರ ಮೊದಲೋ' ಎನ್ನುವ ಚರ್ಚೆಯಂತೆ. ಆತನ ತಂದೆ ಯಾರೂ ಅಲ್ಲ ಏಕೆಂದರೆ ಅವನಿಗೆ ಹುಟ್ಟು-ಸಾವು ಎಂಬುದಿಲ್ಲ.ಇನ್ನು ಅಜಃ ಎಂದರೆ ಎಲ್ಲಾ ಕಡೆ ವ್ಯಾಪಿಸಿರುವವನು ಕೂಡಾ ಹೌದು. ಅ+ಜ-ಅಜಃ. ಇಲ್ಲಿ 'ಅ' ಎಂದರೆ 'ಅಲ್ಲ' ಅಥವಾ ಇಲ್ಲ! ಅಂದರೆ ಅವನು ನಾವು ತಿಳಿದ ಯಾವ ವಸ್ತುವೂ ಅಲ್ಲ, ಅವನಲ್ಲಿ ಯಾವ ದೋಷವೂ ಇಲ್ಲ. 'ಜ' ಎಂದರೆ 'ಜನಕ'. ಭಗವಂತ ಎಲ್ಲರ ತಂದೆ.
205) ದುರ್ಮರ್ಷಣಃ
'ಮರ್ಷಣ' ಎಂದರೆ ಎಂಥಹ ವಿರೋಧವನ್ನೂ ತಡೆಯಬಲ್ಲ ಶಕ್ತಿ. ದುರ್ಮರ್ಷಣ ಎಂದರೆ ಯಾರೂ ತಡೆಯಲು ಅಸಾಧ್ಯವಾದ ಶಕ್ತಿ. ಭಗವಂತನನ್ನು ತಡೆದು ನಿಲ್ಲುವ ಶಕ್ತಿ ಇನ್ನೊಂದಿಲ್ಲ. ಸರ್ವಜ್ಞನಾದ ಆತನ ಆನಂದ ಸ್ವರೂಪ ಎಲ್ಲಾಕಡೆ ತುಂಬಿ ತುಳುಕುತ್ತಿರುತ್ತದೆ ಹಾಗು ಅದನ್ನು ತಡೆಯಲು ಯಾರಿಂದಲೂ ಸಾದ್ಯವಿಲ್ಲ.
206) ಶಾಸ್ತಾ
ಶಾಸ್ತಾ ಎಂದರೆ ಶಾಸನ ಮಾಡುವವನು,ಕರ್ಮಕ್ಕೆ ತಕ್ಕಂತೆ ಜೀವರ ನಿಯಮನ ಮಾಡುವವವನು. ಭಗವಂತನ ನಿಯಮದಲ್ಲಿ ಸತ್ಯ, ಅಸತ್ಯ, ಹಿಂಸೆ,ಅಹಿಂಸೆ, ಧರ್ಮ-ಅಧರ್ಮಗಳಿಗೆ ವಿಶಿಷ್ಟವಾದ ವಿವರಣೆಯಿದೆ. ಇನ್ನೊಬ್ಬರ ಕ್ಷೇಮಕ್ಕೋಸ್ಕರ ಹೇಳುವ ಸುಳ್ಳು ಸತ್ಯ! ನಮ್ಮ ಸ್ವಾರ್ಥಕ್ಕೋಸ್ಕರ ಇನ್ನೊಬ್ಬರಿಗೆ ತೊಂದರೆಯಾಗುವಂತೆ ಹೇಳುವ ಸತ್ಯ ಸುಳ್ಳು! ಸದ್ಭಾವನೆಯಿಂದ ಮಾಡಿದ ಕಾರ್ಯ ಧರ್ಮ. ಸ್ವರಕ್ಷಣೆ, ದೇಶ ರಕ್ಷಣೆ ಕಾರ್ಯದಲ್ಲಿ ನಮ್ಮಿಂದ ನಡೆಯುವ ಹಿಂಸೆ ಅಹಿಂಸೆ! ಭಗವಂತನ ಈ ವಿಶಿಷ್ಟ ನಿಯಮಗಳ ಅನೇಕ ದೃಷ್ಟಾಂತಗಳನ್ನು ಮಹಾಭಾರತ ಅಥವಾ ಕೃಷ್ಣಾವತಾರದಲ್ಲಿ ಕಾಣುತ್ತೇವೆ. ಮೇಲ್ನೋಟಕ್ಕೆ ಕೃಷ್ಣ ಸುಳ್ಳು ಹೇಳಿಸಿದ, ಮೋಸ ಮಾಡಿಸಿದ ಎನ್ನುವಂತೆ ಕಾಣುವ ಅನೇಕ ಘಟನೆಗಳ ಹಿಂದೆ ಭಗವಂತನ ಕಾರುಣ್ಯಪೂರ್ಣ ಉದ್ದೇಶ ಅಡಗಿದೆ. ಹೀಗೆ ಶಾಸನಗಳನ್ನು ಭೋಧನೆ ಮತ್ತು ನೈಜ ಘಟನೆಗಳ ಮೂಲಕ ನಮ್ಮ ಮುಂದೆ ಇರಿಸಿದ ಭಗವಂತ ಶಾಸ್ತಾ.
207) ವಿಶ್ರುತಾತ್ಮಾ
ವಿಶ್ರುತ ಎಂದರೆ ಎಲ್ಲರಿಂದ ಶ್ರುತನಾದವನು. ಸರ್ವ ಶಾಸ್ತ್ರಗಳಲ್ಲಿ ಖ್ಯಾತನಾದ, ಜ್ಞಾನಿಗಳಿಗೆ ಆತ್ಮೀಯನಾದ ಭಗವಂತ ವಿಶ್ರುತಾತ್ಮಾ.
208) ಸುರಾರಿಹಾ
ಸುರರು ಎಂದರೆ ಆನಂದದ ಅರಿವಿನಲ್ಲಿ ಅಥವಾ ಭಗವಂತನ ಅರಿವಿನಲ್ಲಿ ಬದುಕುವವರು. ಸುರರಿಗೆ ಅರಿಗಳು ಸುರಾರಿಗಳು. ಭೋಗ ಭಾಗ್ಯಗಳಿಂದ ಆಚೆಗೆ ಏನೂ ಇಲ್ಲ ಎಂದು ತಿಳಿದು, ನಿಜವಾದ ಆನಂದದ ಅರಿವಿಲ್ಲದೆ ಬದುಕುವವರು ಸುರಾರಿಗಳು. ಇಂತಹ ದೇವತೆಗಳ ಹಗೆಗಳನ್ನು ಸಾವಿನ ಕಡೆಗೆ ತಳ್ಳುವ ಭಗವಂತ ಸುರಾರಿಹಾ.
No comments:
Post a Comment