ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್
127)ವೇದೋ
ಭಗವಂತ ಸಮಸ್ತ ವೇದಗಳಿಂದ ಪ್ರತಿಪಾದ್ಯನಾದವನು. ಅವನು ಆನಾದಿನಿತ್ಯ, ಎಲ್ಲವನ್ನೂ ತಿಳಿದವನು, ಎಲ್ಲವನ್ನು ನಮಗೆ ತಿಳಿಯುವಂತೆ ಮಾಡುವವನು, ನಮಗೆ ಜ್ಞಾನದ ಜೊತೆಗೆ ಸ್ಮರಣಶಕ್ತಿ ದಯಪಾಲಿಸುವ ಭಗವಂತ ವೇದಃ
128)ವೇದವಿತ್
ಭಗವಂತ ಗೀತೆಯಲ್ಲಿ ತಾನೇ ಹೇಳುವಂತೆ "ಆತ ಮಾತ್ರ ವೇದದ ಸಂಪೂರ್ಣ ಅರ್ಥವನ್ನು ತಿಳಿದವನು". ವೇದಗಳಲ್ಲಿ ಭಗವಂತನ ಅನಂತ ಗುಣಗಳನ್ನು ಹೇಳಿದ್ದಾರೆ. ಆದರೆ ನಮಗೆ ಎಲ್ಲವೂ ಅರ್ಥವಾಗುವುದಿಲ್ಲ. ಏಕೆಂದರೆ ನಮ್ಮ ಬುದ್ದಿ ಸೀಮಿತ ಮತ್ತು ಅನುಭವವಿಲ್ಲದೆ ಯಾವುದೂ ಅರ್ಥವಾಗುವುದಿಲ್ಲ. ವೇದಮಂತ್ರಗಳಿಗೆ ಕನಿಷ್ಠ ಮೂರು ಅರ್ಥಗಳಿವೆ. ಆದರೆ ಎಲ್ಲವನ್ನೂ ತಿಳಿದವನು ಕೇವಲ ಭಗವಂತನೊಬ್ಬನೆ . ಸಾಮಾನ್ಯರಾದ ನಾವು ನಮ್ಮ ಜೀವಿತ ಕಾಲದಲ್ಲಿ ವೇದದ ಅಲ್ಪ-ಸ್ವಲ್ಪ ಅರ್ಥವನ್ನು ಮಾತ್ರ ತಿಳಿಯಲು ಸಾದ್ಯ. ಅಂತಹ ಭಗವಂತ ವೇದವಿತ್
129)ಅವ್ಯಂಗೋ
ಮೇಲ್ನೋಟಕ್ಕೆ ಅವ್ಯಂಗ ಅಂದರೆ ಪರಿಪೂರ್ಣವಾದ ಅಂಗ ಎಂದರ್ಥ. ಇಲ್ಲಿ ವ್ಯಂಗ ಎಂದರೆ ವಿಕಲಾಂಗ. ಭಗವಂತನ ಒಂದೊಂದು ಅಂಗವೂ ಅವನ ಸ್ವರೂಪ, ಆದ್ದರಿಂದ ಆತ ಅವ್ಯಂಗ.ಇನ್ನು 'ಅವಿ' ಎಂದರೆ ಸೂರ್ಯ, 'ಅವಿಹಿ' ಎಂದರೆ ಅಗ್ನಿ. ಸೂರ್ಯ ಆಕಾಶದಲ್ಲಿ , ವಾಯು ಉಸಿರಿನಲ್ಲಿ ಹಾಗು ಅಗ್ನಿ ಭೂಮಿಯಲ್ಲಿ ಭಗವಂತನ ಮೂರು ಜ್ಯೋತಿರ್ಮಯ ಸ್ವರೂಪಗಳು. ಹಿಂದೆ ಋಷಿಗಳು ಸಾಮಾನ್ಯವಾಗಿ ಭಗವಂತನನ್ನು ಸೂರ್ಯನಲ್ಲಿ ಉಪಾಸನೆ ಮಾಡುತ್ತಿದ್ದರು. ಅಗ್ನಿ ಮುಖೇನ ಉಪಾಸನೆ ಸರ್ವೇ ಸಾಮಾನ್ಯ. ಆದ್ದರಿಂದ ಗಾಯತ್ರಿ ಹೀಗೆ ಹೇಳುತ್ತದೆ: ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್. ಹೀಗೆ ಮೂರು ರೂಪದಲ್ಲಿ ಜಗತ್ತನ್ನು ರಕ್ಷಣೆ ಮಾಡುವ ಭಗವಂತ ಅವ್ಯಂಗಃ .
130)ವೇದಾಂಗೋ
ವೇದಗಳ ಅಂಗಗಳು ಯಾರನ್ನು ಪ್ರತಿಪಾದಿಸುತ್ತವೆಯೋ ಅವನು ವೇದಾಂಗ. ಈಗ ವೇದದ ಆರು ಮುಖ್ಯ ಅಂಗಗಳನ್ನು ನೋಡೋಣ.
೧. ಶಿಕ್ಷಾ : ಶಿಕ್ಷಾ ಎಂದರೆ ಶಿಕ್ಷಣ. ನಮ್ಮ ಧ್ವನಿಯಿಂದ ನಮ್ಮ ಅನುಭವದಿಂದ ವೇದಮಂತ್ರಗಳನ್ನು ಉಚ್ಚರಿಸುವುದು ಹೇಗೆ ಎಂದು ತಿಳಿಸುವ ಶಾಸ್ತ್ರ ಶಿಕ್ಷಾ. ಸಂಸ್ಕೃತದಲ್ಲಿ ನಾವು ಉಚ್ಚಾರವನ್ನು ಸ್ವಲ್ಪ ತಪ್ಪಾಗಿ ಹೇಳಿದರೆ ಅದು ವ್ಯತಿರಿಕ್ತ ಅರ್ಥವನ್ನು ಕೊಡುತ್ತದೆ. ಉದಾಹರಣೆಗೆ ಫಲ ಮತ್ತು ಪಲ. ಇಲ್ಲಿ ಫಲ ಅಂದರೆ ಹಣ್ಣು, ಪಲ ಅಂದರೆ ಮಾಂಸ. ಆದ್ದರಿಂದ ನಾವು ತುಂಬಾ ಎಚ್ಚರವಾಗಿ ವೇದಮಂತ್ರಗಳನ್ನು ಉಚ್ಚರಿಸಬೇಕು. ಇದಕ್ಕಾಗಿ ನಾವು ಪ್ರಾಯಶ್ಚಿತ ಮಂತ್ರವನ್ನು ಜಪದ ಕೊನೆಗೆ ತಪ್ಪನ್ನು ಕ್ಷಮಿಸುವಂತೆ ಭಗವಂತನಲ್ಲಿ ಈ ಕೆಳಗಿನಂತೆ ಪ್ರಾರ್ಥಿಸುತ್ತೇವೆ ಸ್ವರ ವರ್ಣ ಲೋಪ ದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯಮಂತ್ರಜಪಂ ಕರಿಷ್ಯೇ-ಎಂದು ಹೇಳಿ ಈ ಕೆಳಗಿನಂತೆ ಮೂರು ಬಾರಿ ಹೇಳುತ್ತೇವೆ. ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ ಅಚ್ಯುತಾನಂತ ಗೋವಿಂದೇಭ್ಯೋ ನಮಃ .
೨. ಕಲ್ಪ: ಕಲ್ಪ ಯಾವ ಮಂತ್ರವನ್ನು ಯಾವ ವಿಧಾನದಲ್ಲಿ ಉಪಯೋಗಿಸಿ ಆರಾದನೆ ಮಾಡಬೇಕು ಎನ್ನುವುದನ್ನು ತಿಳಿಸುತ್ತದೆ.
೩. ವ್ಯಾಕರಣ: ಶಬ್ದವನ್ನು ಸರಿಯಾಗಿ ಉಚ್ಚಾರ ಮಾಡುವುದಕ್ಕೆ ಬೇಕಾದ ಅಂಶಗಳನ್ನು ವ್ಯಾಕರಣ ತಿಳಿಸುತ್ತದೆ.
೪. ನಿರುಕ್ತ: ಶಬ್ದವನ್ನು ಒಡೆದಾಗ ಅದು ಯಾವ ಯಾವ ಧಾತುವಿನಿಂದ ಹುಟ್ಟಿದೆ, ಅದರ ಅರ್ಥ ವಿಸ್ತಾರ ಏನು ಎನ್ನುವುದನ್ನು ನಿರುಕ್ತ ತಿಳಿಸುತ್ತದೆ.
೫. ಜ್ಯೋತಿಷ: ಪುಣ್ಯ ಕರ್ಮ ಮಾಡಲು ಯಾವ ಕಾಲ ಹೆಚ್ಚು ಪ್ರಾಶಸ್ತ್ಯವಾದ ಕಾಲ ಎಂದು ಜ್ಯೋತಿಷ ತಿಳಿಸುತ್ತದೆ. ವಾತಾವರಣದಲ್ಲಿ ಕೆಲವೊಮ್ಮೆ ಪ್ರತಿಬಂದಕ ಶಕ್ತಿಗಳಿರುತ್ತವೆ ಹಾಗು ಇನ್ನು ಕೆಲವೊಮ್ಮೆ ಅನುಕೂಲಕರ ಶಕ್ತಿಗಳಿರುತ್ತವೆ. ವಾತಾವರಣದಲ್ಲಿ ಅನುಕೂಲಕರ ಶಕ್ತಿಗಳಿರುವಾಗ ಮಾಡಿದ ಕರ್ಮ ಕೈಗೂಡುತ್ತದೆ. ಇದನ್ನು ತಿಳಿಸುವ ಶಾಸ್ತ ಜ್ಯೋತಿಷ.
೬. ಛಂದಸ್ಸು: ಭಗವಂತನ ಗುಣಗಾನ ಮಾಡುವ ಮಂತ್ರಗಳು ಶ್ರುತಿಬದ್ದವಾಗಿ, ಲಯಬದ್ದವಾಗಿ ಹೇಗೆ ಹೇಳಬೇಕು ಎನ್ನುವುದನ್ನು ಛಂದಸ್ಸು ತಿಳಿಸುತ್ತದೆ. ಆದ್ದರಿಂದ ಈ ಮೇಲಿನ ಆರು ಅಂಶಗಳು ವೇದದಲ್ಲಿ ಯಾರಿಗೋಸ್ಕರ ಇವೆಯೋ ಅವನು ವೇದಾಂಗಾ.
131)ವೇದವಿತ್
ಈ ನಾಮ ಒಂದೇ ಶ್ಲೋಕದಲ್ಲಿ ಎರಡನೇ ಬಾರಿ ಬಂದಿದೆ. ಇಲ್ಲಿ ವೇದ ಅಂದರೆ ಜ್ಞಾನ, ಹಾಗು ವಿತ್ ಅಂದರೆ ಜ್ಞಾನಿ. ಭಗವಂತ ಜ್ಞಾನವುಳ್ಳವನೂ ಹೌದು, ಹಾಗು ಜ್ಞಾನ ಸ್ವರೂಪನೂ ಹೌದು. ಜ್ಞಾನವೂ ಅವನೇ ಜ್ಞಾನಿಯೂ ಅವನೇ. ವೇದವನ್ನು ನಮಗೆ ಋಷಿ-ಮುನಿಗಳ ಮೂಲಕ ಕೊಟ್ಟವನು ಮತ್ತು ವೇದಗಳಿಂದ ಪ್ರತಿಪಾದ್ಯನಾದವನು ವೇದವಿತ್.
No comments:
Post a Comment