Thursday, July 15, 2010

Vishnu Sahasranama 152-154


Vishnu Sahasranama ವಾಮನಃ ಪ್ರಾಂಶುರಮೋಘಃ

152) ವಾಮನಃ
ಬಲಿ ಚಕ್ರವರ್ತಿಯನ್ನು ವಾಮನರೂಪಿ ಭಗವಂತ ಮೂರು ಹೆಜ್ಜೆ ಭೂಮಿ ಕೇಳಿ, ಸೋಲಿಸಿ ಉದ್ದಾರ ಮಾಡಿದ ಕಥೆಯನ್ನು ನಾವು ಭಗವಂತನ ವಿಕ್ರಮೀ ಎನ್ನುವ ನಾಮ(75 ನೇ ನಾಮ)ದಲ್ಲಿ ನೋಡಿದ್ದೇವೆ.
ಇಲ್ಲಿ ವಾಮನ ಎಂದರೆ ಚಿಕ್ಕ ಗಾತ್ರದವ ಎಂದರ್ಥ. ಭಗವಂತ ಅಣುವಿಗಿಂತ ಅಣುವಾಗಿ ನಮ್ಮ ಹೃದಯಕಮಲದಲ್ಲಿ ತುಂಬಿದ್ದಾನೆ.
ಇನ್ನು 'ವಾಮ' ಅಂದರೆ ಸೌಂದರ್ಯ. ವಾಮನ ಎಂದರೆ ಸೌಂದರ್ಯವನ್ನು ಕೊಡುವವನು. ಸೌಂದರ್ಯದ ಕೇಂದ್ರಬಿಂದು ಕಣ್ಣು. ಭಗವಂತನ ಸನ್ನಿದಾನ ಕಣ್ಣಿನಲ್ಲಿರುತ್ತದೆ. ಎಷ್ಟೇ ಸೌಂದರ್ಯವಿದ್ದರೂ, ಕಣ್ಣಿಲ್ಲದವ ಕುರೂಪಿಯಾಗಿರುತ್ತಾನೆ. ಈ ರೀತಿ ಸೌಂದರ್ಯಸಾರಭೂತನಾದ ಭಗವಂತ ವಾಮನ.
ಈ ಪದವನ್ನು ವಾ+ಅಮ+ನ ಎಂದು ಒಡೆದು ಅರ್ಥೈಸಬಹುದು. ಇಲ್ಲಿ 'ವಾ' ಅಂದರೆ ಜ್ಞಾನ, 'ಅಮ' ಅಂದರೆ ಅಜ್ಞಾನ ಹಾಗು 'ನ' ಎಂದರೆ ನಯತಿ. ಆದ್ದರಿಂದ ಜ್ಞಾನವನ್ನಾಗಲಿ, ಅಜ್ಞಾನವನ್ನಾಗಲಿ, ಅವರವರ ಯೋಗ್ಯತೆಗೆ ತಕ್ಕಂತೆ ಕರುಣಿಸುವ, ಜ್ಞಾನಮೂರ್ತಿಯೂ, ಆನಂದಮೂರ್ತಿಯೂ, ಆದ ಭಗವಂತ ವಾಮನ.
153) ಪ್ರಾಂಶುಃ
ಪ್ರಾಂಶುಃ ಅಂದರೆ ಪ್ರಕೃಷ್ಟವಾದ ಕಿರಣಗಳುಳ್ಳವ, ಹಾಗು ಎತ್ತರದಲ್ಲಿರುವವ ಎಂದರ್ಥ. ಸೂರ್ಯನಲ್ಲಿ, ಚಂದ್ರನಲ್ಲಿ, ಎಲ್ಲಾ ಜೀವರಲ್ಲಿ, ಎಲ್ಲೆಲ್ಲೂ ತುಂಬಿರುವ ಭಗವಂತ ಪ್ರಾಂಶುಃ. ಬಲಿ ಚಕ್ರವರ್ತಿ ಭಗವಂತನ ಈ ರೂಪವನ್ನು ತಿಳಿದ ಮರುಕ್ಷಣದಲ್ಲಿ ಭಗವಂತನ ಪಾದಕಮಲಕ್ಕೆ ತಲೆಯೊಡ್ಡಿ ಶರಣಾಗುತ್ತಾನೆ.
154) ಅಮೋಘಃ
ಮೋಘ ಅಂದರೆ ವ್ಯರ್ಥ ಎಂದರ್ಥ. ಭಗವಂತನ ಯಾವ ಕ್ರಿಯೆಯೂ ವ್ಯರ್ಥವಲ್ಲ ಅದು ಅಮೋಘ. ಭಗವಂತನಿಗೆ ಅರ್ಪಿಸಿ ನಾವು ಮಾಡುವ ಯಾವ ಕೆಲಸವೂ ಎಂದೂ ವ್ಯರ್ಥವಲ್ಲ. ಗೀತೆಯಲ್ಲಿ ಹೇಳುವಂತೆ:
ನೇಹಾಭಿಕ್ರ ಮನಾಶೋsಸ್ತಿ ಪ್ರತ್ಯವಾಯೋ ನ ವಿದ್ಯತೇ (ಅ-೨ ಶ್ಲೋ-೪೦)
ಎಂದರೆ "ಭಗವದ್ಸಾಧನೆಯ ಒಂದು ತೊದಲು ಹೆಜ್ಜೆ ಕೂಡಾ ವ್ಯರ್ಥವಲ್ಲ" .
ನಾವು ಕೋಟ್ಯಾಧಿಪತಿಯಾಗಬೇಕು ಎಂದು ದೇವರನ್ನು ಮರೆತು, ಜೀವನ ಪರ್ಯಂತ ಸಾಧನೆ ಮಾಡಿ, ಗಳಿಸಿದ ಹಣ ನಮ್ಮೊಂದಿಗೆ ಬರುವುದಿಲ್ಲ. ಆದರೆ ಭಗವಂತನ ಜ್ಞಾನ ಅಥವಾ ಭಗವಂತನನ್ನು ತಿಳಿಯುವ ಇಚ್ಚೆ, ನಮ್ಮ ಮುಂದಿನ ಜನ್ಮದ ಮೆಟ್ಟಿಲಾಗಿ ನಮ್ಮೊಂದಿಗೆ ಬರುತ್ತದೆ. ನಾವು ಮಾಡಿದ ಯಾವ ಕರ್ಮವಿರಲಿ, ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ, ಅದು ಮೋಘವಾಗದೆ, ಮುಂದಿನ ಜನ್ಮದಲ್ಲಿ ಫಲಿಸಿಯೇ ತೀರುವಂತೆ ನೋಡಿಕೊಳ್ಳುವ ಭಗವಂತ ಅಮೋಘಃ

No comments:

Post a Comment