ವಿಷ್ಣು ಸಹಸ್ರನಾಮ: ಅಮೃತ್ಯುಃ ಸರ್ವದೃಕ್ ಸಿಂಹಃ
198) ಅಮೃತ್ಯುಃ
ಭಗವಂತ ಮೃತ್ಯು ಇಲ್ಲದವನು. ಮೃತ್ಯುವಿಗೆ ಇನ್ನೊಂದು ಹೆಸರು 'ಅಪಸ್ಮೃತಿ', ಅಂದರೆ ನೆನಪನ್ನು ಅಳಿಸುವುದು. ಭಗವಂತ ಮೃತ್ಯುವನ್ನು ದಾಟಿನಿಂತವ. ಇತರ ದೇವಾದಿ ದೇವತೆಗಳಿಗೂ ಕೂಡ ಮೋಕ್ಷಕ್ಕೆ ಮೊದಲು ಮೃತ್ಯುವಿದೆ. ನಮಗೆ ಮೃತ್ಯುವೇ ಮೋಕ್ಷದ ಮಾರ್ಗ. ಅನೇಕ ಮೃತ್ಯುವಿನ ಬಳಿಕ, ಮೃತ್ಯು ರಹಿತ ಭಗವಂತನ ಸಾನಿದ್ಯವಾದ ಮೋಕ್ಷ ದೊರೆಯುತ್ತದೆ.
199) ಸರ್ವದೃಕ್
ಭಗವಂತನಿಗೆ ತಿಳಿಯಲಾಗದ್ದು ಯಾವುದೂ ಇಲ್ಲ. ಅವನು ಎಲ್ಲವನ್ನೂ ಕಾಣುವವನು. ನಮಗೆ ಈ ಪ್ರಪಂಚವನ್ನು ನೋಡುವ ಶಕ್ತಿಯನ್ನು ಕರುಣಿಸಿದವನು. ಸಾಕ್ಷಿ ಮತ್ತು ಸರ್ವದೃಕ್ ಸುಮಾರಾಗಿ ಒಂದೇ ಅರ್ಥವನ್ನು ಕೊಡುತ್ತದೆ. ಹೀಗೆ ಸರ್ವವನ್ನೂ ಕಾಣಬಲ್ಲ ಭಗವಂತ ಸರ್ವದೃಕ್.
200) ಸಿಂಹಃ
ಸಿಂಹಃ ಎಂದರೆ ಸರ್ವ ಸಂಹಾರಕ! ಯಾವುದೂ ನಮಗೆ ಬೇಡವಾಗಿದೆಯೋ ಅದನ್ನು ಸಂಹಾರ ಮಾಡುವವನು. ನಮಗೆ ನಿಜವಾಗಿ ಏನು ಬೇಕು ಎನ್ನುವ ಅರಿವು ಕೂಡಾ ನಮಗಿರುವುದಿಲ್ಲ. ಭಗವಂತನಲ್ಲಿ ನಮ್ಮ ಬೇಕು ಬೇಡಗಳ ಪಟ್ಟಿಯಿರುತ್ತದೆ ಹಾಗು ಅದು ನಮ್ಮ ಪಟ್ಟಿಗಿಂತ ತೀರ ಭಿನ್ನವಾಗಿರಬಹುದು. ನಾವು ಅನೇಕ ಕಾಯಿಲೆಯಿಂದ ಬಳಲುತ್ತಿದ್ದರೂ ಕೂಡ ನಮಗೆ ಬದುಕಬೇಕು ಎನ್ನುವ ಆಸೆ ಇರುತ್ತದೆ. ಆದರೆ ಈ ಸ್ಥಿತಿಯಲ್ಲಿ ಸಾವು ನಿಜವಾದ ವರ. ಈ ಸ್ಥೂಲ ಶರೀರದಲ್ಲಿದ್ದು ಒದ್ದಾಡುತ್ತಿರುವ ಜೀವ ತನ್ನ ಸ್ವಾತಂತ್ರ್ಯಕ್ಕಾಗಿ ಕಾದು ಕುಳಿತಿರುತ್ತದೆ. ಏಕೆಂದರೆ ಕಾಯಿಲೆ ಮತ್ತು ಅಂಗ ಹೀನತೆ ಕೇವಲ ಸ್ಥೂಲ ಶರೀರಕ್ಕೆ ಸಂಬಂಧಪಟ್ಟಿದ್ದೇ ಹೊರತು, ಸೂಕ್ಷ್ಮ ಶರೀರಕ್ಕಲ್ಲ. ಆದ್ದರಿಂದ ಸಾವು ಜೀವವನ್ನು ಅದರ ಸಹಜ ಸ್ಥಿತಿಗೆ ಕೊಂಡೋಯ್ಯವ ಸಹಜ ಕ್ರಿಯೆ. ಪಾಂಚಭೌತಿಕವಾದ ಈ ಶರೀರದ ಸಂಹಾರವಾಗದೆ, ನಮಗೆ ಮುಕ್ತಿಯಿಲ್ಲ. ಆದರೆ ಆತ್ಮಹತ್ಯೆ ಮಹಾ ಪಾಪ. ಹಿಮಾಲಯದಲ್ಲಿರುವ ಮಹಾತ್ಮ ಸಾಧುಗಳಿಗೆ ದೇಹ ತ್ಯಾಗ ಎನ್ನುವುದು ತೀರಾ ಸಹಜ ಮತ್ತು ಆನಂದದ ಕ್ರಿಯೆ, ಅವರಿಗೆ ತಮ್ಮ ಸಾವಿನ ದಿನಾಂಕ ಗೊತ್ತಿರುತ್ತದೆ. ಸ್ವಾಮಿರಾಮ್ ಅವರು ಬರೆದ "ಲಿವಿಂಗ್ ವಿಥ್ ಹಿಮಾಲಯನ್ ಮಾಸ್ಟರ್ಸ್" ಎನ್ನುವ ಪುಸ್ತಕದಲ್ಲಿ ಈ ಬಗ್ಗೆ ದಾಖಲೆಗಳಿವೆ. ನಮ್ಮಲ್ಲಿರುವ ದೋಷದ ನಿವಾರಣೆಗಾಗಿ ನರಸಿಂಹ ಸ್ವರೂಪವನ್ನು ಉಪಾಸನೆ ಮಾಡುವುದು ಶಾಸ್ತ್ರೋಕ್ತ. ಹೀಗೆ ಎಲ್ಲಾ ದೋಷಗಳ ಸಂಹಾರಕ, ಜೀವದ ಸಂಹಾರಕ ಮತ್ತು ಪೌರುಷದ ಗಣಿಯಾದ ಸರ್ವಶ್ರೇಷ್ಠ ಭಗವಂತ ಸಿಂಹಃ.
No comments:
Post a Comment