ವಿಷ್ಣು ಸಹಸ್ರನಾಮ: ಹಿರಣ್ಯನಾಭಃ ಸುತಪಾಃ ಪದ್ಮನಾಭಃ ಪ್ರಜಾಪತಿಃ
194) ಹಿರಣ್ಯನಾಭಃ
ಹಿರಣ್ಯ ಅಂದರೆ ಚಿನ್ನ. ಆದ್ದರಿಂದ ಹಿರಣ್ಯನಾಭ ಎಂದರೆ ಚಿನ್ನದ ಮೊಟ್ಟೆಯಂತಿರುವ ಈ ಬ್ರಹ್ಮಾಂಡವನ್ನು ತನ್ನ ಹೊಕ್ಕುಳಲ್ಲಿ ಹೊತ್ತವನು ಎಂದರ್ಥ. ಬ್ರಹ್ಮಾಂಡದ ಇನ್ನೊಂದು ಹೆಸರು ವಿರಾಟ, ಅಂದರೆ ಥಳ-ಥಳ ಹೊಳೆಯುವ ಚಿನ್ನದ ಮೊಟ್ಟೆ. ಭೂಮಿಯಿಂದ ಅತೀ ದೂರದಲ್ಲಿ ನಿಂತು ಭೂಮಿಯನ್ನು ನೋಡಿದರೆ, ಭೂಮಿ ಕೂಡಾ ನಕ್ಷತ್ರದಂತೆ ಹೊಳೆಯುತ್ತದೆ. ಪ್ರಳಯ ಕಾಲದಲ್ಲಿ ಎಲ್ಲವನ್ನು ತನ್ನ ಉದರದಲ್ಲಿ ಧರಿಸಿ, ಸೃಷ್ಟಿ ಕಾಲದಲ್ಲಿ ತನ್ನ ನಾಭಿಯಿಂದ ಚಿನ್ನದ ಮೊಟ್ಟೆಯಂತಹ ಈ ಬ್ರಹ್ಮಾಂಡದ ನಿರ್ಮಾಣ ಮಾಡಿದ ಭಗವಂತ ಹಿರಣ್ಯನಾಭಃ ಇನ್ನು ಹಿರಣ್ಯ ಎಂದರೆ ಹಿತವೂ, ರಮಣೀಯವೂ ಎಂದರ್ಥ. ಭಗವಂತ ಎಲ್ಲರಿಗೂ ಹಿತವೂ ರಮಣೀಯವೂ ಆಗಿ ಎಲ್ಲರೊಳಗೆ ಬಿಂಬ ರೂಪನಾಗಿದ್ದಾನೆ.
195) ಸುತಪಾಃ
ಸುತಪಾಃ ಅಂದರೆ ಸಮೀಚೀನವಾದ ತಪಸ್ಸು ಮಾಡುವವ. ಇಲ್ಲಿ ತಪಸ್ಸು ಎಂದರೆ ಒಂದು ಸಂಗತಿಯನ್ನು ಆಳವಾಗಿ ಚಿಂತಿಸಿ ಅದರ ತಳಸ್ಪರ್ಶಿ ಚಿಂತನ ಮಾಡುವುದು ಎಂದರ್ಥ. ಎಲ್ಲಾ ವಿಷಯಗಳನ್ನು ಗ್ರಹಿಸುವ, ತಳಸ್ಪರ್ಶಿಯಾದ ಜ್ಞಾನವುಳ್ಳವ ಸುತಪಾಃ. ಇನ್ನು ಈ ನಾಮವನ್ನು ಒಡೆದು ನೋಡಿದಾಗ ಸುತ+ಪಾ, ಇಲ್ಲಿ ಸುತ ಅಂದರೆ ಮಕ್ಕಳು, ಪಾ ಅಂದರೆ ಪಾಲಿಸುವವನು. ಎಲ್ಲರೂ ಭಗವಂತನ ಮಕ್ಕಳೇ. ಭಗವಂತನಿಗೆ ಮೇಲು ಕೀಳು ಎನ್ನುವ ಬೇದವಿಲ್ಲ. ತನ್ನೆಲ್ಲಾ ಮಕ್ಕಳನ್ನು ನಿಷ್ಪಕ್ಷಪಾತವಾಗಿ ಅವರವರ ಪೂರ್ವ ಕರ್ಮಕ್ಕನುಸಾರವಾಗಿ ಫಲಕೊಟ್ಟು ಸಲಹುವವನು ಸುತಪಾಃ ಇನ್ನೂ ಸು+ತ+ಪಾ-ಸುತಪಾ. ಇಲ್ಲಿ ಸು ಅಂದರೆ ಸಮೀಚೀನವಾದ ಆನಂದ ಸ್ವರೂಪ, ತ ಅಂದರೆ ತತಿ ಅಂದರೆ ಹಬ್ಬುವುದು(ಜ್ಞಾನದ ಮೂಲಕ) , ಪಾ ಅಂದರೆ ಸರ್ವ ಪಾಲಕನಾದ ಆನಂದ ಸ್ವರೂಪ. ಆದ್ದರಿಂದ ಸುತಪಾಃ ಅಂದರೆ ಸತ್, ಚಿತ್, ಆನಂದ - ಸಚ್ಚಿದಾನಂದ ರೂಪಿ ಭಗವಂತ.
196) ಪದ್ಮನಾಭಃ
ಈ ಬ್ರಹ್ಮಾಂಡವನ್ನು ತಾವರೆಗೆ ಹೋಲಿಸಿದ್ದಾರೆ. ಯಾರ ನಾಭಿಯಿಂದ ಈ ಪದ್ಮಾಕಾರವಾದ ಭುವನ ಸೃಷ್ಟಿಯಾಯಿತೋ ಅವನು ಪದ್ಮನಾಭಃ.
197) ಪ್ರಜಾಪತಿಃ
ಪ್ರಜಾಪತಿ ಎಂದರೆ ಸಮಸ್ತ ಜೀವಜಾತಗಳ ಪತಿ ಎನ್ನುವುದು ಒಂದು ಅರ್ಥ. ಇಲ್ಲಿ 'ಪತಿ' ಎಂದರೆ 'ರಕ್ಷಕ'. ಚತುರ್ಮುಖ ಬ್ರಹ್ಮನಿಗೂ ಪ್ರಜಾಪತಿ ಎನ್ನುತ್ತಾರೆ. ಜೀವ ಸ್ವರೂಪದ ಅಭಿಮಾನಿ ದೇವತೆಯಾದ ಬ್ರಹ್ಮ ಪ್ರಜಾಪತಿ ಹೌದು, ಆದರೆ ಚತುರ್ಮುಖನೂ ಕೂಡ ಒಬ್ಬ ಪ್ರಜೆ. ಸಮಸ್ತ ಜೀವಜಾತಗಳೊಂದಿಗೆ ಚತುರ್ಮುಖನನ್ನೂ ರಕ್ಷಿಸುವ ಭಗವಂತ ಪ್ರಜಾಪತಿಃ ಇನ್ನು 'ಪ್ರಜಾ' ಎಂದರೆ 'ಜ್ಞಾನ' , ಭಗವಂತ ಜ್ಞಾನದ ರಕ್ಷಕ. ನಮ್ಮಲ್ಲಿ "ಸಂತಾನವಿಲ್ಲದವರಿಗೆ ವೇದಶಾಸ್ತ್ರ ಹೇಳಬಾರದು" ಎನ್ನುವ ಅಪನಂಬಿಕೆ ಇದೆ. ಶಾಸ್ತ್ರದಲ್ಲಿ ಈ ಬಗ್ಗೆ ಉಲ್ಲೇಖ ಇರುವುದು ನಿಜ. ಆದರೆ ಅಲ್ಲಿ ಮಕ್ಕಳು ಎಂದರೆ ಶಿಷ್ಯ ವರ್ಗ. ಯಾರು ತಾನು ಕಲಿತಿದ್ದನ್ನು ಇನ್ನೊಬ್ಬರಿಗೆ ಹೇಳಲಾರರೋ, ಅಂಥವರಿಂದ ಜ್ಞಾನದ ರಕ್ಷಣೆ ಆಗದು, ಅವರಿಗೆ ವೇದ ಶಾಸ್ತ್ರ ಪಾಠ ಹೇಳಬಾರದು ಎಂದರ್ಥ. ನಮಗೆ ಸಂತಾನವಿದ್ದಾಕ್ಷಣ ಸದ್ಗತಿ ದೊರೆಯುವುದಿಲ್ಲ. ಸದ್ಗತಿ ನಾವು ಮಾಡುವ ಕರ್ಮದ ಮೇಲೆ ನಿರ್ಧಾರವಾಗುತ್ತದೆ. ಇನ್ನು ಪುರಾಣದಲ್ಲಿ "ಅಪುತ್ರಸ್ಯ ಗತಿರ್ನಾಸ್ತಿ" ಎಂದಿದೆ, ಇದನ್ನು "ಸಂತಾನವಿಲ್ಲದವರಿಗೆ ಮೋಕ್ಷವಿಲ್ಲ" ಎಂದು ಅಪಾರ್ಥ ಮಾಡುತ್ತಾರೆ. ಆದರೆ ನಿಜವಾದ ಅರ್ಥ " ನಾವು ಗಳಿಸಿದ ಜ್ಞಾನವನ್ನು ಮುಂದಿನ ಪೀಳಿಗೆಯ ಪ್ರಜಾ ಅಥವಾ ಪ್ರಜ್ಞೆಉಳ್ಳವರಿಗೆ ಕೊಡದೇ ಸತ್ತರೆ ಅಂತವರಿಗೆ ಸದ್ಗತಿ ಸಿಗದು" ಎಂಬುದಾಗಿದೆ. ಭಗವಂತ ಪ್ರಜಾ(ಜ್ಞಾನ) ರಕ್ಷಕ, ಹಾಗು ಜ್ಞಾನವನ್ನು ದಾನ ಮಾಡುವವರನ್ನು ಆತ ಉದ್ದಾರ ಮಾಡುತ್ತಾನೆ. ಜ್ಞಾನ ದಾನ ಭಗವಂತನ ಜ್ಞಾನ ರಕ್ಷಣೆಯ ಅವಿಭಾಜ್ಯ ಅಂಗ. ಜ್ಞಾನ ರಕ್ಷಣೆಗಾಗಿ ಶ್ರೀಕೃಷ್ಣ, ಶವ ಶಯ್ಯೆಯಲ್ಲಿದ್ದ ಭೀಷ್ಮಾಚಾರ್ಯರಿಂದ, ಧರ್ಮರಾಯನಿಗೆ ಜ್ಞಾನದ ಉಪದೇಶ ಮಾಡಿಸಿ, ಜ್ಞಾನದ ರಕ್ಷಣೆ ಹಾಗು ಭೀಷ್ಮಾಚಾರ್ಯರ ಉದ್ದಾರ ಮಾಡುತ್ತಾನೆ. ಈ ರೀತಿ ಜ್ಞಾನದ ಒಡೆಯ ಹಾಗು ಜ್ಞಾನದ ರಕ್ಷಕನಾದ ಭಗವಂತ ಪ್ರಜಾಪತಿಃ .
No comments:
Post a Comment