ವಿಷ್ಣು ಸಹಸ್ರನಾಮ: ಗುರುರ್ಗುರುತಮೋ ಧಾಮಃ ಸತ್ಯಃ ಸತ್ಯಪರಾಕ್ರಮಃ
209) ಗುರುಃ
ಪ್ರತಿಯೊಬ್ಬ ಜ್ಞಾನಧಾತನ ಒಳಗೆ ಜ್ಞಾನ ಸ್ವರೂಪನಾಗಿದ್ದು, ಜ್ಞಾನ ಅಭಿವ್ಯಕ್ತ ಮಾಡುವ ಭಗವಂತ ಗುರು. ಎಲ್ಲಾ ವೇದ ವಿದ್ಯೆಗಳನ್ನು ಉಪದೇಶಿಸಿರುವ ಭಗವಂತ ಗುರುಃ.
210) ಗುರುತಮಃ
"ಕೃಷ್ಣಂ ವಂದೇ ಜಗದ್ಗುರುಂ". ಭಗವಂತನಿಗಿಂತ ದೊಡ್ಡ ಗುರು ಇನ್ನೊಬ್ಬನಿಲ್ಲ. ಬ್ರಹ್ಮಾದಿ ದೇವತೆಗಳಿಗೂ ಗುರುವಾದ ಭಗವಂತ ಗುರುತಮಃ.
211) ಧಾಮಃ
ಧಾಮ ಎಂದರೆ ಆಶ್ರಯ, ಮನೆ ಹಾಗು ತೇಜಸ್ಸು ಎನ್ನುವ ಅರ್ಥಗಳನ್ನು ಕೊಡುತ್ತದೆ.ನಾವೆಲ್ಲರೂ ಕೊನೆಗೆ ಒಂದು ದಿನ ಸೇರಬೇಕಾದ ಮನೆ ಭಗವಂತ. ಆತ ಎಲ್ಲರ ಆಶ್ರಯಧಾತ. ಅದಕ್ಕಾಗಿ ದಾಸವರೇಣ್ಯರು "ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ" ಎಂದಿದ್ದಾರೆ. ಈ ನಾಮವನ್ನು ಒಡೆದು ನೋಡಿದರೆ ಧಾ+ಅಮ=ಧಾಮ. ಇಲ್ಲಿ 'ಧಾ' ಎಂದರೆ ಧಾರಕ, 'ಅಮ' ಎಂದರೆ ಅಮಿತ ಅಥವಾ ಮಿತಿ ಇಲ್ಲದ. ಧಾರಕವಾದ ಅನೇಕ ಶಕ್ತಿಗಳು ಈ ಪ್ರಪಂಚದಲ್ಲಿವೆ. ದೇವತೆಗಳಿಗೆ ಇಂದ್ರ ಧಾರಕ, ಇಂದ್ರನಿಗೆ ಗರುಡ-ಶೇಷ-ರುದ್ರರು ಧಾರಕರು ಹಾಗು ಅವರಿಗೆ ಬ್ರಹ್ಮ-ವಾಯು ಧಾರಕರಾಗಿದ್ದಾರೆ. ಬ್ರಹ್ಮ-ವಾಯುವನ್ನು ಮಾತೆ ಲಕ್ಷ್ಮಿ ಧಾರಣೆ ಮಾಡಿದ್ದಾಳೆ. ಈ ಎಲ್ಲರ ಧಾರಕ ಶಕ್ತಿ ಮಿತವಾದದ್ದು. ಸರ್ವಾಧಾರಕನಾದ ಭಗವಂತ ಅಮಿತ ಧಾರಕನಾದ ಜ್ಞಾನಾನಂದ ಸ್ವರೂಪ.
212) ಸತ್ಯಃ
ಸತ್ಯ ನಾಮದ ಸ್ಥೂಲವಾದ ಅರ್ಥ "ಸದ್ಗುಣಗಳಿಂದ ಪರಿಪೂರ್ಣನಾದವ". ಭಗವಂತನೊಬ್ಬನೇ ಸಂಪೂರ್ಣ. ಅದಕ್ಕಾಗಿ ವೇದದಲ್ಲಿ ಬರುವ ಶಾಂತಿ ಮಂತ್ರಗಳಲ್ಲಿ ಹೀಗೆ ಹೇಳಿದ್ದಾರೆ:
ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಶ್ಯತೇ
ಓಂ ಶಾಂತಿಃ ಶಾಂತಿಃ ಶಾಂತಿಃ
ಅಂದರೆ ಅದೂ ಪೂರ್ಣ ಹಾಗು ಇದೂ ಪೂರ್ಣ. ಪೂರ್ಣದಿಂದ ಪೂರ್ಣಬರುತ್ತದೆ, ಪೂರ್ಣದಲ್ಲಿ ಪೂರ್ಣ ಸೇರಿ ಪೂರ್ಣವಾಗುತ್ತದೆ.
ಎಲ್ಲಾ ಸದ್ಗುಣಗಳಿಂದ ಪೂರ್ಣನಾದ ಭಗವಂತ ಸತ್ಯಃ. ಭಾಗವತ ಮಂಗಲಾಚರಣೆ ಯಲ್ಲಿ ಹೇಳುವಂತೆ:
ಧಾಮ್ನಾಸ್ವೇನ ಸದಾ ನಿರಸ್ತ-ಕುಹಕಂ ಸತ್ಯಂ ಪರಂ ಧೀಮಹೀ
ಅಂದರೆ ಭಗವಂತ ಸತ್-ಚಿತ್-ಆನಂದ ಸ್ವರೂಪ. ಅದಕ್ಕಾಗಿ ಭಗವಂತನನ್ನು
"ಸತ್ಯಂ ಜ್ಞಾನಂ ಅನಂತಮ್ ಬ್ರಹ್ಮ" ಎಂದಿದ್ದಾರೆ.
ಸೃಷ್ಟಿ, ಸ್ಥಿತಿ, ಸಂಹಾರ, ನಿಯಾಮನ, ಜ್ಞಾನ, ಅಜ್ಞಾನ, ಬಂಧ ಮತ್ತು ಮೋಕ್ಷ ಈ ಎಂಟು ಅಸಾಧಾರಣ ಕ್ರಿಯೆಯುಳ್ಳ ಭಗವಂತ ಸತ್ಯಃ.
213) ಸತ್ಯಪರಾಕ್ರಮಃ
ಇಲ್ಲಿ 'ಪರರು' ಎಂದರೆ ಶತ್ರುಗಳು ಅಥವಾ ದುಷ್ಟರು.ಪರಾಕ್ರಮ ಎಂದರೆ ಶತ್ರುಗಳನ್ನು ಬಗ್ಗುಬಡಿಯುವ ಸಾಮರ್ಥ್ಯ. ಭಗವಂತನ ಪರಾಕ್ರಮ ‘ಸಂಪೂರ್ಣ’ ಅಥವಾ ‘ಸತ್ಯ’. ನಮ್ಮೊಳಗಿರುವ ಕಾಮ-ಕ್ರೋಧ-ಮಧ-ಮತ್ಸರ ಇತ್ಯಾದಿ ಶತ್ರುಗಳನ್ನು ನಿರ್ಮೂಲ ಮಾಡಬೇಕಾದರೆ ನಾವು ಭಗವಂತನಲ್ಲಿ ಶರಣಾಗಬೇಕು. ಕುರಾನ್ ನಲ್ಲಿ ಹೇಳುವಂತೆ "Drive them out from where You have been driven out" ಅಂದರೆ ಆತ್ಮದ ಸಾಧನೆಯಲ್ಲಿ ಭಾಧಕರಾಗಿರುವ ಮನೋದೋಷಗಳನ್ನು ಹೊಡೆದೋಡಿಸಿ ಅಂತರಂಗದ ರಾಜ್ಯದಲ್ಲಿ ನೆಲೆಗೊಳ್ಳು ಎಂದರ್ಥ. ನಮ್ಮೊಳಗಿರುವ ಈ ಶತ್ರುಗಳು ನಮ್ಮ ಇಂದ್ರಿಯಗಳನ್ನು ಕೆಟ್ಟ ಕಾರ್ಯದಲ್ಲಿ ತೊಡಗುವಂತೆ ಪ್ರೇರೇಪಿಸುತ್ತವೆ. ಇದರಿಂದ ಕಣ್ಣು ಕೆಟ್ಟದ್ದನ್ನು ನೋಡುತ್ತದೆ, ಕಿವಿ ಕೆಟ್ಟದ್ದನ್ನು ಕೇಳಲು ಹಂಬಲಿಸುತ್ತದೆ, ಬಾಯಿ ಕೆಟ್ಟ ಮಾತನ್ನು ಆಡುತ್ತದೆ! ಹೀಗೆ ನಮ್ಮ ವ್ಯಕ್ತಿತ್ಟವನ್ನು ಈ ಶತ್ರುಗಳು ನಮ್ಮಿಂದ ದೂರ ತಳ್ಳುತ್ತವೆ. ನಾವು ನಮ್ಮೊಳಗಿರುವ ಈ ಶತ್ರುಗಳನ್ನು ಗೆಲ್ಲಬೇಕಾದರೆ ಸತ್ಯಪರಾಕ್ರಮಿಯಾದ ಭಗವಂತನಲ್ಲಿ ಶರಣಾಗಬೇಕು. "ನನಗೆ ನನ್ನೊಳಗಿರುವ ಶತ್ರುಗಳನ್ನು ಸೋಲಿಸುವ ಶಕ್ತಿ ಇಲ್ಲ, ನೀನೇ ಸರ್ವ ವಿಘ್ನಗಳನ್ನು ನಿವಾರಿಸಿ, ಈ ಶತ್ರುಗಳಿಂದ ನನ್ನನ್ನು ಪಾರುಮಾಡಿ, ಸತ್ಯದ ದಾರಿಯಲ್ಲಿ ಮುನ್ನೆಡೆಸು" ಎಂದು ಭಗವಂತನಲ್ಲಿ ಪ್ರಾರ್ಥಿಸಬೇಕು. "ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪ ಶಾಂತಯೇ." ಭಗವಂತನೊಬ್ಬನೇ ಸರ್ವ ವಿಘ್ನಗಳ ನಾಶಕ ಹಾಗು ಸತ್ಯಪರಾಕ್ರಮಿ. ಈ ರೀತಿ ನಮ್ಮೊಳಗಿನ ಹಾಗು ಹೊರಗಿನ ದುಷ್ಟರನ್ನು ಬಗ್ಗು ಬಡಿಯಲು ನಾವು ಶರಣಾಗಬೇಕಾದ ಭಗವಂತ ಸತ್ಯಪರಾಕ್ರಮಃ
No comments:
Post a Comment