Friday, July 23, 2010

Vishnu ಸಹಸ್ರನಾಮ 185-193

ವಿಷ್ಣು ಸಹಸ್ರನಾಮ: ಅನಿರುದ್ಧಃ ಸುರಾನಂದೋ ಗೋವಿಂದೋ ಗೋವಿದಾಂಪತಿಃ 185) ಅನಿರುದ್ಧಃ ಈ ಹಿಂದೆ ನಾವು ಭಗವಂತನ ಚತುರ್ಮೂರ್ತಿ ರೂಪದ ಬಗ್ಗೆ ವಿಶ್ಲೇಷಿಸಿದ್ದೇವೆ. ಸೃಷ್ಟಿಯ ಆರಂಭದಲ್ಲಿ ಭಗವಂತ ನಾಲ್ಕು ಕ್ರಿಯೆಗಳನ್ನು ಪ್ರತಿನಿಧಿಸುವ ನಾಲ್ಕು ರೂಪದಲ್ಲಿ ವ್ಯಕ್ತವಾಗುತ್ತಾನೆ. ಅವುಗಳೆಂದರೆ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ದ. ವಾಸುದೇವ ಮೊಕ್ಷಪ್ರದವಾದ ರೂಪ, ಸಂಕರ್ಷಣ ಸಂಹಾರಪ್ರದವಾದ ರೂಪ, ಪ್ರದ್ಯುಮ್ನ ಸೃಷ್ಟಿ ಕಾರಣ ರೂಪ ಹಾಗು ಅನಿರುದ್ದ ಸ್ಥಿತಿ ಕಾರಣ ರೂಪ. ಜಗತ್ತಿನ ಸ್ಥಿತಿ ಅಥವಾ ರಕ್ಷಣೆಗೆ ಭಗವಂತ ತಾಳಿದ ರೂಪ ಅನಿರುದ್ದ ರೂಪ. ಬಾಹ್ಯ ಪ್ರಜ್ಞೆಯ ತಡೆ ಇಲ್ಲದೆ, ಬಾಹ್ಯ ಪ್ರಜ್ಞೆಯನ್ನು ಅನುಭವಿಸುವ ಭಗವಂತನ ರೂಪ ಅನಿರುದ್ದ ರೂಪ. ಹೀಗೆ ನಮ್ಮ ದೇಹದಲ್ಲಿರುವ ಪಂಚಪ್ರಾಣಗಳ ಚಲನೆಗೆ ಕಾರಣ ಶಕ್ತಿಯಾದ ಭಗವಂತ ಅನಿರುದ್ದ. 186) ಸುರಾನಂದಃ ಸುರರು ಅಂದರೆ ದೇವತೆಗಳು. ದೇವತೆಗಳ ಒಳಗಿದ್ದು ಅವರಿಗೆ ನಿರಂತರ ದುಃಖ ಸ್ಪರ್ಶವಿಲ್ಲದ ಆನಂದವನ್ನು ಕೊಡುವವನು. ಮುಕ್ತರಿಗೆ, ಮುಕ್ತಿ ಯೋಗ್ಯರಾದವರಿಗೆ ಆನಂದವನ್ನು ಕೊಡುವ ಭಗವಂತ ಸುರಾನಂದಃ 187) ಗೋವಿಂದಃ ಎಚ್ಚರ ಸ್ಥಿತಿಯಲ್ಲಿ ನಮ್ಮ ಆಜ್ಞಾ ಚಕ್ರದಲ್ಲಿ ಮೂರನೇ ಕಣ್ಣಾಗಿ ಕುಳಿತವ ಗೋವಿಂದಃ. ಒಳಗಣ್ಣಿನಿಂದ ನಮಗೆ ಮಾರ್ಗದರ್ಶನ ಮಾಡುವ ಶಕ್ತಿ. ಅದಕ್ಕಾಗಿ ಪ್ರಾತಃಕಾಲದಲ್ಲಿ "ಉತ್ತಿಷ್ಟೋತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ " ಎಂದು ಪ್ರಾರ್ಥನೆ ಮಾಡುತ್ತೇವೆ. ಅಂದರೆ "ನಮ್ಮ ಆಜ್ಞಾ ಚಕ್ರದಲ್ಲಿ ಕುಳಿತು ನಮಗೆ ಮಾರ್ಗದರ್ಶನ ಮಾಡು" ಎಂದರ್ಥ. ಊಟದ ಸಮಯದಲ್ಲಿ ನಮ್ಮ ಅಂತಃಕರಣ ಜಾಗೃತಿಗಾಗಿ "ಗೋವಿಂದ" ಸ್ಮರಣೆ ಮಾಡುತ್ತೇವೆ. ಇಂದ್ರ ಗೋವರ್ಧನ ಪರ್ವತವನ್ನೆತ್ತಿದ ಭಗವಂತನನ್ನು, ಗೋವಿಂದ ಎಂದು ಕರೆಯುತ್ತಾನೆ. ಭೂಮಿಯ ಮೇಲೆ ಅನಂತ ರೂಪದಲ್ಲಿ ಇಳಿದು ಬಂದ ಭಗವಂತ ಗೋವಿಂದಃ 188) ಗೋವಿದಾಂಪತಿಃ ವೇದಗಳನ್ನು ತಿಳಿದವನು, ವೇದಗಳನ್ನು ಸಲಹುವವನು, ದೇವತೆಗಳ ಅಧಿಪತಿಯಾದ ಭಗವಂತ ಗೋವಿದಾಂಪತಿಃ ವಿಷ್ಣು ಸಹಸ್ರನಾಮ: ಮರೀಚಿರ್ದಮನೋ ಹಂಸಃ ಸುಪರ್ಣೋ ಭುಜಗೋತ್ತಮಃ 189) ಮರೀಚಿಃ ಸೂರ್ಯ ಕಿರಣಗಳಲ್ಲಿದ್ದು, ಪ್ರಾಣ ಶಕ್ತಿಯನ್ನು ವಿಶ್ವದ ಜೀವ ಜಾತಕ್ಕೆ ಕೊಡುವವ ಮರೀಚಿಃ. ಇನ್ನು 'ಮರಿ' ಎಂದರೆ ನೀರು ತುಂಬಿದ ಮೋಡ. ಮೋಡಗಳಿಗೆ ಚಲನೆಯನ್ನು ಕೊಟ್ಟು ಮಳೆ ಬರಿಸುವವ ಮರೀಚಿಃ . ಗೀತೆಯಲ್ಲಿ ಹೇಳುವಂತೆ: ಯದಾದಿತ್ಯ ಗತಂ ತೇಜೋ ಜಗದ್ ಭಾಸಯತೇsಖಿಲಮ್ ಯಚ್ಚಂದ್ರ ಮಸಿ ಯಚ್ಚ ಗೌನ ತತ್ ತೇಜೋ ವಿದ್ದಿ ಮಾಮಕಮ್ (ಅ-೧೫, ಶ್ಲೋ-೧೨) ಅಂದರೆ "ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗುವ ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ ಕೂಡ, ಅದು ನನ್ನದೇ ಬೆಳಕೆಂದು ತಿಳಿ". ಈ ರೀತಿ ಜೀವರಲ್ಲಿ ತುಂಬಿರುವ ಬೆಳಕಿನ ಕುಡಿಯಾದ ಭಗವಂತ ಮರೀಚಿಃ 190) ದಮನಃ ಮೇಲೆ ಹೇಳಿದ ಸೂರ್ಯಕಿರಣ ರೂಪಿ ಭಗವಂತ, ಮೋಡಗಳ ರೂಪದಲ್ಲಿ ನೀರನ್ನು ಕೊಡುವ ಭಗವಂತ, ಪ್ರಳಯ ಕಾಲದಲ್ಲಿ ಅದೇ ಸೂರ್ಯ ಕಿರಣದ ಮೂಲಕ, ನೀರಿನ ಮೂಲಕ (ಜಲಪ್ರಳಯ) ಎಲ್ಲವನ್ನು ದಮನ ಮಾಡಿ ಯೋಗ ನಿದ್ರೆಯನ್ನು ಅನುಭವಿಸುತ್ತಾನೆ. ಸಜ್ಜನರಿಗೆ ಭಗವಂತ 'ದಮ'. ಅಂದರೆ ಇಂದ್ರಿಯ ನಿಗ್ರಹ ಶಕ್ತಿಯನ್ನು ಕರುಣಿಸುವವ. ದುರ್ಜನರ ದಮನ (ನಾಶ) ಮಾಡುವ ಭಗವಂತ ದಮನಃ 
191) ಹಂಸಃ
ದೋಷಹೀನ; ಸಾರರೂಪ; ಸಂಸಾರವನ್ನು ನಾಶಗೊಳಿಸುವವನು; ಎಲ್ಲರೊಳಗೂ ಅಂತರ್ಯಾಮಿಯಾಗಿರುವವನು; ಎಲ್ಲೆಡೆಯೂ ತುಂಬಿರುವವನೂ ಆದ ಭಗವಂತ ಹಂಸಃ.
192) ಸುಪರ್ಣಃ
ಗರುಡನಲ್ಲಿ ಅಂತರ್ಯಾಮಿಯಾಗಿರುವವನು; ದುಃಖವಿರದ ಪರಿಪೂರ್ಣಾನಂದ ಸ್ವರೂಪನು; ಜೀವರಿಗೆ ಸಾಧನೆಯಿಂದ ಪೂರ್ಣತೆಯನ್ನೀಯುವವನು; ಅವರವರ ಯೋಗ್ಯತೆಗೆ ತಕ್ಕಂತೆ ಪೂರ್ಣಾನಂದವನ್ನೀಯುವವನು ಸುಪರ್ಣಃ .

192) ಸುಪರ್ಣಃ ಗರುಡನಲ್ಲಿ ಅಂತರ್ಯಾಮಿಯಾಗಿರುವವನು; ದುಃಖವಿರದ ಪರಿಪೂರ್ಣಾನಂದ ಸ್ವರೂಪನು; ಜೀವರಿಗೆ ಸಾಧನೆಯಿಂದ ಪೂರ್ಣತೆಯನ್ನೀಯುವವನು; ಅವರವರ ಯೋಗ್ಯತೆಗೆ ತಕ್ಕಂತೆ ಪೂರ್ಣಾನಂದವನ್ನೀಯುವವನು ಸುಪರ್ಣಃ . 193) ಭುಜಗೋತ್ತಮಃ ಗರುಡನ ಹೆಗಲೇರಿ ಸಾಗುವ ಹಿರಿಯ ತತ್ವ ; ಹಾವುಗಳಲ್ಲಿ ಸನ್ನಿಹಿತನಾದ ಪುರುಷೋತ್ತಮ.

No comments:

Post a Comment