Saturday, July 3, 2010

Vishnu Sahasranama 132

ಕವಿಃ

132)ಕವಿಃ

ನಾವು ದೇವರ ಪೂಜೆ ಪ್ರಾರಂಭದಲ್ಲಿ ಗಣಪತಿ ಸ್ತೋತ್ರ ಮಾಡುತ್ತೇವೆ.
"ಗಣಾನಾಂ ತ್ವಾ ಗಣಪತಿಂ ಹವಾಮಹೇ, ಕವಿಂ ಕವೀನಾಂ ಉಪಮಶ್ರಮವಸ್ತಮಂ" ಎನ್ನುವ ಗಣಪತಿ ಸ್ತೋತ್ರದಲ್ಲಿ ಗಣಪತಿಯನ್ನು ಕವಿಗಳ ಕವಿ ಎಂದು ವರ್ಣಿಸಿದ್ದಾರೆ. ಅದೇ ರೀತಿ "ಗಣಗಳಲ್ಲಿ ಶ್ರೇಷ್ಟನಾದ, ಕವಿಗಳ ಕವಿಯಾದ ನೀನು ನನ್ನಲ್ಲಿ ಬಂದು ಕೂಡು" ಎಂದು ಪೂಜೆ ಪ್ರಾರಂಭದಲ್ಲಿ ಹೇಳುತ್ತೇವೆ. ಏನಿದರ ಅರ್ಥ ? ಭಗವಂತನನ್ನು ಗಣಪತಿ ಎಂದು ಕರೆಯಲು ಕಾರಣವೇನು? ಪೂಜೆಯನ್ನು ಗಣಪತಿ ಸ್ತೋತ್ರದಿಂದ ಯಾಕೆ ಪ್ರಾರಂಭಿಸಬೇಕು?
ಗಣಪತಿ ಆಕಾಶ ತತ್ವ ದೇವತೆ. ಆತ ಜೀವಗಣ, ಇಂದ್ರಿಯಗಣ, ಜ್ಞಾನಗಣ ಮತ್ತು ಭೂತಗಣ. ಇಡೀ ವಿಶ್ವ ಆಕಾಶದಿಂದ ಪ್ರಾರಂಭವಾಗುತ್ತದೆ. ಗಣಪತಿ ಪಂಚಭೂತಗಳ ಒಡೆಯ. ಪಂಚಭೂತಗಳಿಂದಾದ ಈ ನಮ್ಮ ದೇಹ ಮತ್ತು ಇಂದ್ರಿಯಗಳ ಅದಿಪತಿ ಆತ. ಇಂದ್ರಿಯಗಳ ಒಡೆಯನಾದ ಆತನನ್ನು ಮೊದಲು ಸ್ಮರಿಸಿ, "ಬಾರಯ್ಯ , ನನ್ನ ಇಂದ್ರಿಯಗಳಲ್ಲಿ ಕುಳಿತು, ನನ್ನ ಕೈಯಿಂದ ನಿನ್ನ ಪೂಜೆಯನ್ನು ಮಾಡುವಂತೆ, ನನ್ನ ಕಣ್ಣಿನಿಂದ ನಿನ್ನನ್ನು ನೋಡುವಂತೆ, ನನ್ನ ಬಾಯಿಯಿಂದ ನಿನ್ನ ಗುಣಗಾನ ಮಾಡುವಂತೆ ಮಾಡು. ಎಂದು ಪ್ರಾರ್ಥಿಸಿ ಕೊಳ್ಳುತ್ತೇವೆ. ಭಗವಂತ ಅನಾದಿಕವಿ. ಇಲ್ಲಿ ಕವಿ ಎಂದರೆ ಎಲ್ಲವನ್ನೂ ಬಲ್ಲವನು (omniscient) ಎಂದರ್ಥ.
ಇದಲ್ಲದೆ ಇನ್ನೂ ಅನೇಕ ಅರ್ಥ ಕವಿ ಎನ್ನುವ ಪದಕ್ಕಿದೆ. ಶಬ್ದ ಸೃಷ್ಟಿಮಾಡುವವನು, ಶಬ್ದಾರ್ಥ ಸಂಬಂಧ ತಿಳಿದವನು, ಶಬ್ದಗಳಿಗೆ ಹೊಸ ಆಯಾಮ ಕೊಡುವವನು ಇತ್ಯಾದಿ. ಜನಸಾಮಾನ್ಯರಾದ ನಾವು ದೈನಂದಿನ ಕಾರ್ಯದಲ್ಲಿ ಅನೇಕ ಶಬ್ದಗಳನ್ನು ಅರ್ಥ ತಿಳಿಯದೇ ಉಪಯೋಗಿಸುತ್ತೇವೆ. ನಮ್ಮ ಈಗಿನ ಶಿಕ್ಷಣ ಪದ್ದತಿ ಕೂಡ ಇದಕ್ಕೆ ಮೂಲ ಕಾರಣ. ಉದಾಹರಣೆಗೆ ಪತ್ರ ಬರೆಯುವಾಗ, "ನಾನು ಕ್ಷೇಮ, ನಿಮ್ಮ ಯೋಗ-ಕ್ಷೇಮದ ಬಗ್ಗೆ ತಿಳಿಸಿ" ಎಂದು ಬರೆಯುತ್ತೇವೆ. ಇಲ್ಲಿ ಯೋಗ-ಕ್ಷೇಮ ಎಂದರೆ ಏನು ಎನ್ನುವುದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದೇ ಇಲ್ಲ!! ಇಲ್ಲದ್ದನ್ನು ಪಡೆಯುವುದು ಯೋಗ (ಅಪ್ರಾಪ್ತಂ ಪ್ರಾಪ್ತಿಹೀ ಯೋಗಃ ). ಪಡೆದದ್ದನ್ನು ಉಳಿಸಿಕೊಳ್ಳುವುದು ಕ್ಷೇಮ. ಶಬ್ದದ ಅಂತರಾಳದ ಅರ್ಥವನ್ನು ಅರಿತು ಮಾತನಾಡುವವರು ಕವಿಗಳು. ಭಗವಂತ ಕವಿಗಳ ಕವಿ, ಸರ್ವನಾಮರೂಪಾತ್ಮಕನಾದ ಸರ್ವಜ್ಞ.
ಸಂಸ್ಕೃತದ ಏಕಾಕ್ಷರ ಕೋಶದಲ್ಲಿ ನೋಡಿದರೆ ಆ ,ಕ, ಯ, ಪ್ರ, ವಿ, ಸಂ, ಭೂ, ಮಾ, ಸಾ , ಹಾ .. ಇತ್ಯಾದಿ ಏಕಾಕ್ಷರಗಳು ಭಗವಂತನ ಗುಣವನ್ನು ವರ್ಣಿಸುತ್ತವೆ. ಇಲ್ಲಿ 'ಕ' ಎಂದರೆ ಆನಂದ, 'ವ' ಎಂದರೆ ಜ್ಞಾನ, 'ವಿ' ಎಂದರೆ ವಿಶಿಷ್ಟವಾದ ಜ್ಞಾನ. ಆದ್ದರಿಂದ ಕವಿ ಎಂದರೆ 'ವಿಶಿಷ್ಟವಾದ ಜ್ಞಾನಾನಂದ ಸ್ವರೂಪ' ಎಂದರ್ಥ.

No comments:

Post a Comment