ವಿಷ್ಣು ಸಹಸ್ರನಾಮ: ನಿಮಿಷೋನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀಃ
214) ನಿಮಿಷಃ
ನಿಮಿಷಃ ಎಂದರೆ ಕಣ್ಮುಚ್ಚಿ ನಿದ್ರಿಸುವವ.ಇಲ್ಲಿ ಭಗವಂತನ ಪ್ರಳಯಕಾಲದ ಯೋಗನಿದ್ರೆಯನ್ನು ನಿಮಿಷಃ ಎಂದಿದಾರೆ.
215)ಅನಿಮಿಷಃ
ಮೇಲಿನ ನಿಮಿಷಃ ಎನ್ನುವ ಪದದ ತದ್ವಿರುದ್ದ ನಾಮ ಅನಿಮಿಷಃ. ಅಂದರೆ ಭಗವಂತ ಎಂದೂ ನಿದ್ರಿಸುವುದಿಲ್ಲ! ಆತನಿಗೆ ನಿದ್ರೆಯೇ ಇಲ್ಲ. ಅಂದರೆ ಭಗವಂತ ನಮ್ಮಂತೆ ನಿದ್ರಿಸುವುದಿಲ್ಲ. ಆತನ ನಿದ್ರೆ ಕೇವಲ ಎಚ್ಚರದ ಯೋಗ ನಿದ್ರೆ.
216)ಸ್ರಗ್ವೀ
ಸ್ರಗ್ವೀ ಎಂದರೆ ಮಾಲೆ ತೊಟ್ಟವನು ಎಂದರ್ಥ. ಭಗವಂತನನ್ನು ಪಂಕಜ-ನಾಭ, ಪಂಕಜ-ನೇತ್ರ, ಪಂಕಜ-ಅಂಗ್ರಿ ಪಂಕಜ-ಮಾಲಿ ಎನ್ನುತ್ತಾರೆ. ಈ ಬ್ರಹ್ಮಾಂಡವನ್ನು ನಾಭಿಯಲ್ಲಿ ಧರಿಸಿದವನು ಪಂಕಜ-ನಾಭ, ಈ ಜಗದ ನೇತಾರ ಪಂಕಜ-ನೇತ್ರ, ಈ ಬ್ರಹ್ಮಾಂಡ ಭಗವಂತನ ಕಾಲಿನ ಒಂದು ದೂಳಿನ ಕಣ ಅದ್ದರಿಂದ ಆತ ಪಂಕಜ-ಅಂಗ್ರಿ ಹಾಗು ಅನಂತ ಕೋಟಿ ಬ್ರಹ್ಮಾಂಡಗಳ ಸರಮಾಲೆಗಳ ಸೃಷ್ಟಾರ ಪಂಕಜ-ಮಾಲಿ ಅಥವಾ ಸ್ರಗ್ವೀ. ಸ್ರಗ್ವೀ ಅಂದರೆ ಇನ್ನೊಂದು ಅರ್ಥ ತುಳಸೀ ಮಾಲೆ ತೊಟ್ಟವ. ಭಗವಂತನಿಗೆ ಲಕ್ಷ್ಮೀ ಸಾನಿಧ್ಯವಿರುವ ತುಳಸಿಮಾಲೆ ಅತ್ಯಂತ ಪ್ರೀಯ. ಕೃಷ್ಣಾವತಾರದಲ್ಲಿ ಸದಾ ವನಮಾಲೆಯನ್ನು ತೊಟ್ಟ ಭಗವಂತನಿಗೆ ಭಕ್ತಿಯಿಂದ ಅರ್ಪಿಸಿದ ಯಾವ ಮಾಲೆಯೂ ಇಷ್ಟ.
217)ವಾಚಸ್ಪತಿಃ
ವಾಗ್ದೇವತೆಯ ಒಡೆಯ ಅಥವಾ ಎಲ್ಲಾ ವಾಕ್ ಗಳಿಗೆ ಪತಿ. ಅನೇಕ ಬಾಷೆಗಳನ್ನು ತಿಳಿದು ಮಾತನಾಡುವವ ವಾಚಸ್ಪತಿಯಲ್ಲ. ಪ್ರಾಣಿಗಳಿಗೂ ಅವುಗಳದ್ದೇ ಆದ ಭಾಷೆ ಇದೆ. ಆದರೆ ಅದು ನಮಗೆ ಅರ್ಥವಾಗುವುದಿಲ್ಲ. ಭಾಷೆ ನಾಲ್ಕು ಮಜಲುಗಳಿಂದ ಬೆಳೆದಿದೆ. ಪರಾಶರ, ಪಶ್ಯಂತಿ, ಮದ್ಯಮ ಹಾಗು ವೈಖರಿ. ಇಲ್ಲಿ ಪರಾಶರ ಅತ್ಯಂತ ಸೂಕ್ಷ್ಮವಾದ ಭಾಷೆಯ ಸ್ಥಿತಿ. ಮನಸ್ಸಿನ ಯೋಚನೆಗನುಗುಣವಾಗಿ ನಾಭಿಯಲ್ಲಿ ಉಂಟಾಗುವ ಕಂಪನ( Vibration)-'ಪರಾಶರ'. 'ಪಶ್ಯಂತಿ' ಎಂದರೆ ನಾಭಿಯಿಂದ ಹೊರಟ ಸೂಕ್ಷ್ಮ ಭಾಷೆ ಹೃದಯದಲ್ಲಿ ಅಭಿವ್ಯಕ್ತವಾಗುವ ಸ್ಥಿತಿ. ಆ ನಂತರ ಕುತ್ತಿಗೆ ಮೂಲಕ ಹೊರಹೊಮ್ಮುವ ಭಾಷೆಯ ಸ್ಥಿತಿ 'ಮದ್ಯಮ'. ಕೊನೆಯದಾಗಿ ಬಾಯಿಯ ಮೂಲಕ ಹೊರಹೊಮ್ಮುವ ಶಬ್ದ 'ವೈಖರಿ'. ಹೀಗೆ ಪ್ರಾಣಿ-ಪಕ್ಷಿಗಳಿಂದ ಹಿಡಿದು, ಭಾಷೆಯ ವಿವಿಧ ಮಜಲನ್ನು ತಿಳಿದಿರುವ ಭಗವಂತ ವಾಚಸ್ಪತಿಃ. ಈ ಕಾರಣಕ್ಕಾಗಿ ಭಗವಂತನನ್ನು ನಾವು ಯಾವ ಭಾಷೆಯಲ್ಲಿ ಕೂಡ ಉಪಾಸನೆ ಮಾಡಬಹುದು. ಆತ ನಮ್ಮ ನಾಭಿ-ಹೃದಯ ಭಾಷೆಯನ್ನೂ ಕೂಡ ಅರ್ಥೈಸಬಲ್ಲ.
218)ಉದಾರಧೀಃ
ಉದಾರಧೀಃ ಎಂದರೆ ಉತ್ಕೃಷ್ಟವಾದ ಅರಿವಿನ ಅಲೆ ಅಥವಾ ಸರ್ವೋತ್ಕೃಷ್ಟವಾದ ಜ್ಞಾನ. ಭಗವಂತ ಸರ್ವವನ್ನೂ ಬಲ್ಲ ಸರ್ವಜ್ಞ.
No comments:
Post a Comment