Sunday, July 4, 2010

Vishnu Sahasranama 133-136

ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ

ಈ ಶ್ಲೋಕದಲ್ಲಿ ಭಗವಂತನನ್ನು ಅಧ್ಯಕ್ಷ ಎನ್ನುತ್ತಾರೆ. ಇಲ್ಲಿ ಅಧ್ಯಕ್ಷ ಎಂದರೆ ಎಲ್ಲರನ್ನೂ ನೋಡುವವ, ಎಲ್ಲರ ಮೇಲೆ ನಿಗಾ ಇರಿಸುವವ, ಪ್ರತಿಯೊಂದು ಕ್ರಿಯೆಯನ್ನು ನಿರ್ವಹಿಸುವವ ಎಂದರ್ಥ.
133)ಲೋಕಾಧ್ಯಕ್ಷಃ
ಭಗವಂತ ಲೋಕಾಧ್ಯಕ್ಷ. ಇಲ್ಲಿ ಲೋಕ ಅಂದರೆ ಈ ಭೂಲೋಕ, ಈ ಬ್ರಹ್ಮಾಂಡ, ಈ ಪಿಂಡಾ೦ಡ. ಆತ ಎಲ್ಲವುದರ ಅಧ್ಯಕ್ಷ.
134)ಸುರಾಧ್ಯಕ್ಷ
ಸುರರು ಅಂದರೆ ದೇವತೆಗಳು. ಈ ಬ್ರಹ್ಮಾಂಡ ಹಾಗು ಪಿಂಡಾ೦ಡದಲ್ಲಿ ಅನೇಕ ದೇವತೆಗಳಿದ್ದಾರೆ.
ಈ ಹಿಂದೆ ಹೇಳಿದಂತೆ, ನಮ್ಮ ದೇಹದ ಒಳಗೆ ಹಾಗು ಹೊರಗೆ ದೇವತೆಗಳು ಭಗವಂತನ ನಿಯಮದಂತೆ ಎಲ್ಲವನ್ನು ನಿಯಂತ್ರಿಸುತ್ತಿರುತ್ತಾರೆ. ದೇಹದ ಹೊರಗೆ ಸೂರ್ಯ ಬೆಳಕಿನ ದೇವತೆಯಾದರೆ, ಆತನೇ ದೇಹದಲ್ಲಿ ಕಣ್ಣಿನ ದೇವತೆ. ಸೋಮ ದೇಹದ ಹೊರಗೆ ಶಬ್ದದ ದೇವತೆ ಹಾಗು ದೇಹದಲ್ಲಿ ಕಿವಿಯ ದೇವತೆ. ವರುಣ ನೀರಿನ ದೇವತೆ ಹಾಗು ಬಾಯಲ್ಲಿ ನೀರೂರಿಸುವ ನಾಲಗೆಯ ಅಭಿಮಾನಿ ದೇವತೆ. ಇದೇ ರೀತಿ ಅಗ್ನಿ-ಮಾತಿನ,ಇಂದ್ರ-ಕೈಯ, ಇಂದ್ರನ ಮಗ ಯಜ್ಞ-ಕಾಲಿನ, ಯಮ-ಮಲಮೂತ್ರ ವಿಸರ್ಜನಾಂಗದ ಮತ್ತು ದಕ್ಷ ಸಂತಾನಕ್ಕೆ ಸಂಭಂದಪಟ್ಟ ಅಂಗದ ದೇವತೆ.
ಇವರಲ್ಲದೆ ಇಂದ್ರ ಮತ್ತು ಕಾಮರು ಮನಸ್ಸಿನ, ಗರುಡ-ಶೇಷ-ರುದ್ರರು ಮನಸ್ಸು-ಬುದ್ದಿ-ಅಹಂಕಾರದ ದೇವತೆಗಳು. ಸರಸ್ವತಿ-ಭಾರತಿ-ಪಾರ್ವತಿಯರು ವಾಕ್ ದೇವಿಯರು. ಇನ್ನು ಬ್ರಹ್ಮ-ವಾಯು ಚಿತ್ತದ ದೇವತೆಗಳು. ಈ ರೀತಿ ದೇಹದ ಪ್ರತಿಯೊಂದು ಇಂದ್ರಿಯ ನಿರ್ವಹಣೆ ಒಬ್ಬೊಬ್ಬ ದೇವತೆಗಳ ಅದೀನ. ಇಂತಹ ಸುರರ ಅದಿಪತಿಯಾದ ಭಗವಂತ ಸುರಾಧ್ಯಕ್ಷ.
135)ಧರ್ಮಾಧ್ಯಕ್ಷಃ
ಭಗವಂತನ ಪ್ರತೀ ಅವತಾರ ಈ ಭೂಮಿಯಲ್ಲಿ ಧರ್ಮಸಂಸ್ಥಾಪನೆಗಾಗಿ ಆಗಿದೆ. ಇಡೀ ಲೋಕವನ್ನು ಧಾರಣೆ ಮಾಡಿ ಈ ಭೂಮಿಯಲ್ಲಿ ಧರ್ಮ ಸಂಸ್ಥಾಪನೆ ಮಾಡಿದ ಭಗವಂತ ಧರ್ಮಾಧ್ಯಕ್ಷ.
ಇನ್ನು ಆದಿಶೇಷ ಮತ್ತು ಪ್ರಾಣದೇವರನ್ನೂ ಕೂಡ ಧರ್ಮ ಎನ್ನುತ್ತಾರೆ. ದೇಹದ ಒಳಗೆ ಪ್ರಾಣಶಕ್ತಿಯಾಗಿ, ದೇಹದ ಹೊರಗೆ ವಾತಾವರಣದಲ್ಲಿ ತುಂಬಿರುವ ಪ್ರಾಣದೇವರು, ಭೂಮಿಯ ಆಕರ್ಷಣ ಶಕ್ತಿಯಾದ(Gravity) ಸಂಕರ್ಷಣ(ಶೇಷ). ಇವರಿಬ್ಬರ ಮುಖಾಂತರ ಈ ಭೂಮಿಯನ್ನು ಧಾರಣೆ ಮಾಡಿರುವ ಭಗವಂತ ಧರ್ಮಾಧ್ಯಕ್ಷ.
136)ಕೃತಾಕೃತಃ
ಎರಡು ತದ್ವಿರುದ್ದ ಅರ್ಥವಿರುವ ಪದಗಳಿಂದ ಈ ನಾಮವಾಗಿದೆ. ಒಂದು ಕೃತ(ಕರ್ತ) ಹಾಗು ಇನ್ನೊಂದು ಅಕೃತ (ಅಕರ್ತ). ಭಗವಂತ ಸೃಷ್ಟಿಕರ್ತ, ಆದರೆ ಆತನಿಗೆ ಯಾವುದೇ ಪುಣ್ಯ ಪಾಪಗಳ ಲೇಪವಿಲ್ಲ. ಎಲ್ಲವನ್ನೂ ಮಾಡುವವ ಆತ, ಆದರೆ ಯಾವುದರ ಲೇಪವೂ ಅವನಿಗಿಲ್ಲ. ನಮ್ಮೊಳಗಿದ್ದು, ನಮ್ಮಿಂದ ಎಲ್ಲವನ್ನೂ ಮಾಡಿಸಿ, ಪುಣ್ಯ-ಪಾಪಗಳಿಗೆ ನಮ್ಮನ್ನು ಭಾದ್ಯರನ್ನಾಗಿ ಮಾಡಿ, ತಾನು ನಿರ್ಲಿಪ್ತನಾಗಿ ದೂರ ನಿಲ್ಲುವ ಭಗವಂತ ಕೃತಾಕೃತಃ. ಭಗವಂತನಿಗೆ ಸ್ವಯಂ ಕೃತದ ಅಗತ್ಯವಿಲ್ಲ, ಆದರೆ ಭಕ್ತರ ಅಭಿಲಾಷೆಗಾಗಿ ಅವತಾರವನ್ನು ಧರಿಸುತ್ತಾನೆ, ಭಕ್ತರ ಅಭಿಷ್ಟವನ್ನು ಪೂರೈಸುತ್ತಾನೆ. ಇಂತಹ ಭಗವಂತ ಕೃತಾಕೃತಃ.

No comments:

Post a Comment