Sunday, July 18, 2010

Vishnu Sahasranama 161-162

Vishnu Sahasranama ನಿಯಮಃ ಯಮಃ
161) ನಿಯಮಃ
ಭಗವಂತನನ್ನು ತಿಳಿಯಬೇಕಾದರೆ ನಾವು ನಮ್ಮಲ್ಲಿ ಐದು ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಅವುಗಳೆಂದರೆ:
೧) ಶೌಚ, ೨) ತಪಃ , ೩) ತೃಪ್ತಿಃ, ೪) ಸ್ವಾಧ್ಯಾಯ ಮತ್ತು ೫) ಪುರುಷಾರ್ಚನ.

೧)ಶೌಚ : ಕೊಳಕು ತುಂಬಿದ ಮೈ, ಕೊಳಕು ತುಂಬಿದ ಮನಸ್ಸಿಗೆ ಎಂದೂ ಭಗವಂತ ಗೋಚರಿಸುವುದಿಲ್ಲ. ನಮ್ಮ ದೇಹ-ಮನಸ್ಸು-ಮನೆ ಎಲ್ಲವೂ ಸ್ವಚ್ಛವಾಗಿರಬೇಕು. ನಾವು ನಮ್ಮ ತಲೆ ಮೇಲೆ ಒಂದು ಕೊಡ ನೀರು ಹಾಕಿ ಕೊಂಡಾಗ ಮಡಿಯಾಗುವುದಿಲ್ಲ. ಭಗವಂತನ ನೆನಪಿಗೆ ಪೋಷಕವಾದ ನಡೆ "ಮಡಿ". ನಿಜವಾದ ಮಡಿ ಅಂದರೆ ಏನೆಂದು ಈಗ ನೋಡೋಣ.
ಅಥಃ ಪ್ರಾತಃ ಸಂಧ್ಯಾ ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ
ಅಂದರೆ ನೀನು ಯಾವುದೇ ಸ್ಥಿತಿಯಲ್ಲಿರು, ಕೆಂದಾವರೆಯ ಅರಳಿದ ಎಸಳಿನಂತೆ, ನಸುಗೆಂಪಾಗಿ, ಪ್ರೀತಿಯ ಕಾರುಣ್ಯದ ರಸಪೂರವನ್ನು ಹರಿಸುತ್ತಿರುವ, ಅರಳುಗಣ್ಣಿನ ಭಗವಂತನನ್ನು ನೆನೆಸಿಕೂ. ಆತನ ರಸಧಾರೆ ನಿನ್ನ ಮೇಲೆ ಬೀಳುತ್ತಿದೆ ಎಂದು ಯೋಚಿಸು. ಆಗ ನೀನು ಮಡಿಯಾಗುತೀಯ. ಈ ಸ್ಥಿತಿಯಲ್ಲಿ ನೀನು ಮೈಲಿಗೆಯಾಗಲು ಸಾಧ್ಯವಿಲ್ಲ. ನಿನ್ನನ್ನು ಮುಟ್ಟಿದವರೂ ಕೂಡ ನಿನ್ನಿಂದ ಮಡಿಯಾಗುತ್ತಾರೆ! ನೀನು ಧರಿಸಿರುವ ಬಟ್ಟೆಯಾಗಲಿ, ಇತರ ಯಾವುದೇ ವಸ್ತು ನಿನ್ನನ್ನು ಮೈಲಿಗೆ ಮಾಡಲಾರದು. ಭಗವಂತನ ಚಿಂತನೆ, ಭಗವಂತನ ಪ್ರಜ್ಞೆಯನ್ನು ಜಾಗೃತಗೊಳಿಸುವ ನೆಡೆಯೇ 'ಮಡಿ'. ಭಗವಂತನಿಂದ ದೂರ ಸರಿಸುವ ಅಜ್ಞಾನವೇ ಮೈಲಿಗೆ.
ಇತರರನ್ನು ಮೈತ್ರಿಭಾವದಿಂದ ಕಾಣುವುದು. ಸಕಲವೂ ಪರಮಾತ್ಮನಸ್ವರೂಪವೇ ಎಂದು ಭಾವಿಸುವುದು ಶೌಚ. ಈ ಮನಃಸ್ಥಿತಿಯಿಂದ ನಿಜವಾದ ಸುಖ ದೊರೆಯುವುದು. (ಸಂತೋಷಾದನುತ್ತಮಸುಖಲಾಭಃ -ಪತಂಜಲಿ).
೨) ತಪಃ : ನಮ್ಮ ದೇಹ ಮತ್ತು ಮನಸ್ಸಿನ ಕಯಾಲಿಗಳಿಗೆ ಒಳಗಾಗದೆ, ನಮ್ಮ ಇಷ್ಟಕ್ಕೆ ತಕ್ಕಂತೆ ನಮ್ಮ ದೇಹ ಮನಸ್ಸನ್ನು ಮಣಿಸುವ ಕ್ರಿಯೆ ತಪಸ್ಸು.ಇವುಗಳ ಆಚರಣೆಯಿಂದ ಅಶುದ್ಧಿ ನಾಶವಾಗಿ ಅಂತಃಕರಣವು ಶುದ್ಧವಾಗುತ್ತದೆ. (ಕಾರ್ಯೇಂದ್ರಿಯಸಿದ್ಧಿರಶುದ್ಧಿಕ್ಷಯಾಸ್ತಪಸಃ-ಪತಂಜಲಿ).
೩) ತೃಪ್ತಿಃ : ಇದ್ದದರಲ್ಲಿ ತೃಪ್ತಿಪಟ್ಟು, ಹರಿಯ ಚರಣದ ಅರಿವಿನಿಂದ ನಮ್ಮ ಪಾಲಿನ ಕರ್ಮ ನಾವು ಮಾಡುವುದು.
೪) ಸ್ವಾಧ್ಯಾಯ: : ಅಂದರೆ ನಿರಂತರ ಅಧ್ಯಯನ. ವೈದಿಕಮಂತ್ರಗಳ ಅರ್ಥಾನುಸಂಧಾನದಿಂದ ಮಂತ್ರಾಭಿಮಾನಿ ದೇವತೆಗಳು ಸಿದ್ಧಿಯನ್ನು ಕೊಡುವರು. ಮಂತ್ರರಹಸ್ಯ ಅರಿಯಲು ಸದ್ಗುರುವಿನ ಆಶ್ರಯ ಅವಶ್ಯ. (ಸ್ವಾಧ್ಯಾಯಾದಿಷ್ಟದೇವತಾ ಸಂಪ್ರಯೋಗಃ-ಪತಂಜಲಿ).
೫) ಪುರುಷಾರ್ಚನ : ಬದುಕಿನ ಪ್ರತಿಯೊಂದು ಕ್ರಿಯೆಯೂ ಭಗವಂತನ ಆರಾದನೆ, ಹರಿಯ ಪೂಜೆ ಎನ್ನುವ ಎಚ್ಚರ.ಸಕಲಕ್ರಿಯಾದಿಗಳ ಫಲವನ್ನು ಅಪೇಕ್ಷಿಸದೇ ಈಶ್ವರನಲ್ಲಿ ಅರ್ಪಣೆ ಮಾಡುವುದು. "ಕಾಮತೋಕಾಮತೋವಾಪಿ ಯತ್ಕರೋಮಿ ಶುಭಾಶುಭಂ ತತ್ಸರ್ವಂ ತ್ವಯಿ ವಿನ್ಯಸ್ಯ ತ್ವತ್ಪ್ರಯುಕ್ತಃ ಕರೋಮ್ಯಹಂ " ಅಂದರೆ, ಆಸೆಯಿಂದಲೋ ಆಥವಾ ಆಸೆ ಇಲ್ಲದೆಯೋ ಯಾವ ಶುಭಾಶುಭ ಕರ್ಮಗಳನ್ನು ಮಾಡುತ್ತೇವೆಯೋ ಅವೆಲ್ಲವನ್ನೂ ಅವನಲ್ಲಿ ಅರ್ಪಿಸಿ ಅವನ ಪ್ರಯುಕ್ತವೇ ಅಂದರೆ ಭಗವಂತನಿಗಾಗಿಯೇ ನಾನು ಎಲ್ಲ ಕರ್ಮಗಳನ್ನೂ ಮಾಡುತ್ತೇನೆ ಎಂದು ಈಶ್ವರನಲ್ಲಿ ಕಾಯಾ, ವಾಚಾ, ಮನಸಾ ಅರ್ಪಣೆ ಮಾಡುವುದು.
ಈ ರೀತಿ ಮೇಲಿನ ಐದು ನಿಯಮಗಳಿಂದ ತಿಳಿಯಲ್ಪಡುವವನು, ಹಾಗು ನಮ್ಮ ಅಭಿವೃದ್ದಿಗಾಗಿ ಈ ಐದು ನಿಯಮಗಳನ್ನು ನಿಯಮಿಸಿದವನು ನಿಯಮಃ
162) ಯಮಃ
ಯಮಃ ಅಂದರೆ ಯಮನೊಳಗಿದ್ದು, ಪಾಪಿಗಳಿಗೆ ಶಿಕ್ಷೆ ಕೊಡುವವ, ಎಲ್ಲರನ್ನು ನಿಯಂತ್ರಿಸುವವ ಎನ್ನುವುದು ಸಾಮಾನ್ಯ ಅರ್ಥ. ಯಮಃ ಅನ್ನುವುದಕ್ಕೆ "ಯಮಗಳಿಂದ ವೇದ್ಯನಾದವನು" ಎನ್ನುವ ವಿಶೇಷ ಅರ್ಥವಿದೆ. ನಮ್ಮ ಅಭಿವೃದ್ದಿಗೊಸ್ಕರ, ಸಮಾಜದ ಸ್ವಾಸ್ಥ್ಯಕ್ಕೋಸ್ಕರ ನಾವು ಬಿಡಬೇಕಾದ ಐದು ದುರ್ಗುಣಗಳನ್ನು ಯಮಗಳು ಎನ್ನುತ್ತಾರೆ. ಅವುಗಳೆಂದರೆ ೧) ಹಿಂಸೆ , ೨) ಸುಳ್ಳು ಹೇಳುವುದು , ೩) ಕಳ್ಳತನ ಮಾಡುವುದು , ೪) ಅನಗತ್ಯ ಇನ್ನೊಬ್ಬರ ಮುಂದೆ ಕೈ ಚಾಚುವುದು ಮತ್ತು ೫) ಅತೀ ಕಾಮುಕತೆ.
ಸಮಾಜಜೀವಿಯಾಗಿ ನಾವು ಅನುಸರಿಸಬೇಕಾದ ಐದು ನೀತಿ ಸಂಹಿತೆಗಳೆಂದರೆ: ೧) ಅಹಿಂಸಾ, ೨) ಸತ್ಯ, ೩)ಅಸ್ತೇಯ, ೪) ಬ್ರಹ್ಮಚರ್ಯ ಮತ್ತು ೫) ಅಪರಿಗ್ರಹ
೧) ಅಹಿಂಸ: ಇನ್ನೊಬ್ಬರಿಗೆ ನೋವುಂಟುಮಾಡದಂತೆ ಬದುಕುವುದು.
೨) ಸತ್ಯ : ಸ್ವಾರ್ಥಕ್ಕೋಸ್ಕರ ಇನ್ನೊಬ್ಬರಿಗೆ ಸುಳ್ಳು ಹೇಳದೇ, ಪ್ರಾಮಾಣಿಕನಾಗಿ ಬದುಕುವುದು. ಇನ್ನೊಬ್ಬರ ಮನ ನೋಯಿಸುವ ಸತ್ಯ ನುಡಿಯಬಾರದು.(ಸತ್ಯ ಪ್ರತಿಷ್ಠಾಯಾಂ ಕ್ರಿಯಾ ಫಲಾಶ್ರಯತ್ವಂ- ಪತಂಜಲಿ)
೩) ಅಸ್ತೇಯ : ಕಳ್ಳತನ ಮಾಡದೇ ಇರುವುದು ನಮ್ಮ ನೀತಿಯಾಗಿರಬೇಕು.
೪) ಬ್ರಹ್ಮಚರ್ಯ: ಅತೀ ಕಾಮುಕನಾಗದೇ ಬದುಕುವುದು. (ಇಲ್ಲಿ ಬ್ರಹ್ಮಚರ್ಯ ಎಂದರೆ ಮದುವೆಯಾಗದೇ ಇರುವುದು ಎನ್ನುವ ಅರ್ಥವಲ್ಲ. ಸಂಸಾರಿಯಾಗಿದ್ದು ಕೂಡಾ ಬ್ರಹ್ಮಚರ್ಯ ಪಾಲಿಸಬಹುದು. ಆದರೆ ಕಾಮುಕನಾಗಿರಬಾರದು. )
೫) ಅಪರಿಗ್ರಹ : ಎಂದರೆ ಭೋಗವಸ್ತುಗಳನ್ನು ಬಯಸದಿರುವುದು. ನಮಗೆ ಬೇಕಾದ್ದನ್ನು ಇನ್ನೊಬ್ಬರಲ್ಲಿ ಒತ್ತಾಯ ಪೂರ್ವಕವಾಗಿ ಬಯಸದೇ, ಇನ್ನೊಬ್ಬರು ಕೊಟ್ಟಿದ್ದರಲ್ಲಿ ತೃಪ್ತಿ ಪಡುವುದು.
ಈ ರೀತಿ ಐದು ಯಮಗಳೆಂಬ ನೀತಿ ಸಂಹಿತೆಯನ್ನು ಸೃಷ್ಟಿಸಿದ ಭಗವಂತ ಯಮಃ

No comments:

Post a Comment