Vishnu Sahasranama: ಸಹಿಷ್ಣು
144) ಸಹಿಷ್ಣು
ಸಹಿಷ್ಣು ಅಂದರೆ ಸಹನೆ ಉಳ್ಳವನು ಎಂದರ್ಥ. ಯಾವುದಕ್ಕೂ ಮಣಿಯದ, ತಾಕತ್ತಿದ್ದರೂ ಇನ್ನೊಬ್ಬರ ತಪ್ಪನ್ನು ಕ್ಷಮಿಸುವ, ಮಹತ್ತಾದ ಗುಣ ಸಹಸ್ಸು. ನಾವು ಮಾಡುವ ಕಾರ್ಯದ ಹಿಂದಿನ ಭಾವ- ಪಾಪ ಅಥವಾ ಪುಣ್ಯಗಳನ್ನು ನಿರ್ದರಿಸುತ್ತದೆ. ಸಾಮಾಜಿಕವಾಗಿ ಕಾಣುವ ಕೆಟ್ಟ ಕೆಲಸವನ್ನು ಮಾಡಿದ ನಮ್ಮ ಭಾವಕ್ಕನುಗುಣವಾಗಿ, ನಮ್ಮನ್ನು ಭಗವಂತ ಕ್ಷಮಿಸಿ, ಪಾಪದ ಲೇಪದಿಂದ ವಿಮುಕ್ತನಾಗಿಸುತ್ತಾನೆ. ಭಗವಂತ 'ಸರ್ವ ಭಕ್ತಾಪರಾದ ಸಹಿಷ್ಣು' ಆತನ ಕ್ಷಮಾಗುಣಕ್ಕೆ ಅಜಾಮಿಳನ ಕಥೆ ಉತ್ತಮ ದೃಷ್ಟಾಂತ.
ಅಜಾಮಿಳ ಒಬ್ಬ ಬ್ರಾಹ್ಮಣ. ಸರಳ, ಮಿತಭಾಷಿ, ಸಾತ್ತ್ವಿಕ, ವಿದ್ವಾಂಸನಿದ್ದ. ಗುರು, ಅತಿಥಿ, ಹಿರಿಯರ ಸೇವೆ ಮಾಡುತ್ತಿದ್ದ. ತನ್ನ ಕೈ ಹಿಡಿದ ಹೆಂಡತಿಯನ್ನೂ ಪ್ರೀತಿಸುತ್ತಿದ್ದ. ಒಂದು ದಿನ ಆತ ಕಾಡಿನಲ್ಲಿ ಸುಂದರಿಯಾದ ಒಬ್ಬಳು ಹೆಣ್ಣನ್ನು, ಅರೆನಗ್ನ ಸ್ಥಿತಿಯಲ್ಲಿ ನೋಡಿ ಆಕರ್ಷಣೆಗೊಳಪಟ್ಟ, ತನ್ನ ಹೆಂಡತಿ ಮತ್ತು ತಂದೆ ತಾಯಿಯರನ್ನು ಮರೆತು, ತಾನು ಕಂಡ ಕಾಡಿನ ಹುಡುಗಿಯ ಸಂಗದಲ್ಲಿ, ಲೋಕವನ್ನು ಮರೆತ. ಆಕೆಯನ್ನು ಸಂತೋಷಪಡಿಸಲು ಮಾಡಬಾರದ ಕೆಲಸವನ್ನೆಲ್ಲಾ ಮಾಡಿದ. ಕುಡುಕನಾದ, ಕಳ್ಳತನ ಮಾಡಿದ, ಜೂಜಾಡಿದ. ಕಾಡಿನಲ್ಲಿ ಆಕೆಯೊಂದಿಗೆ ಸಂಸಾರ ಬೆಳೆಯಿತು, ಮಕ್ಕಳಾದವು. ಕೊನೆಯ ಮಗನ ಹೆಸರು 'ನಾರಾಯಣ'. ಒಂದಿರುಳು ಅಜಾಮಿಳನಿಗೆ ಘೋರ ರೂಪದ ಯಮದೂತರೇ ಕಣ್ಣೆದುರು ನಿಂತಂತಾಯಿತು. ಅವರ ಕೈಯಲ್ಲಿ ಯಮಪಾಶ! ಅಜಾಮಿಳನಿಗೆ ನಿಜಕ್ಕೂ ಭಯವಾಯಿತು. ತನ್ನ ಮಗ 'ನಾರಾಯಣ' ನನ್ನು ಕೂಗಿ ಕರೆದ! - ಆಗ ಮಗನ ಬದಲು ಪ್ರತ್ಯಕ್ಷರಾದ ವಿಷ್ಣು ದೂತರು, ಹಳಿತಪ್ಪಿ ಚಲಿಸುತ್ತಿದ್ದ ಆತನನ್ನು ಪುನಃ ಸರಿಯಾದ ದಾರಿಯಲ್ಲಿ ತಂದು ಉದ್ದಾರ ಮಾಡುತ್ತಾರೆ. ನಂತರದ ದಿನಗಳಲ್ಲಿ ಆತ ಮಹಾತ್ಮನಾಗಿ ಬದುಕುತ್ತಾನೆ.
ನಮ್ಮಲ್ಲಿ ಸಾತ್ವಿಕತೆ ಮತ್ತು ಜ್ಞಾನ ಅನೇಕ ಜನ್ಮಗಳ ಫಲದಿಂದ ಬಂದಿರುತ್ತದೆ. ಯಾವೊದೋ ಕೆಟ್ಟ ಕಾರಣದಿಂದ ನಾವು ದಾರಿತಪ್ಪಿದಾಗ, ಕರುಣಾಮಯನಾದ ಭಗವಂತ ನಮ್ಮನ್ನು ಶಿಕ್ಷಿಸುವ ಬದಲು ಕ್ಷಮಿಸಿ ಉದ್ದಾರ ಮಾಡುತ್ತಾನೆ. ಎಂತಹ ತಪ್ಪನ್ನೂ ಕೂಡ ಕ್ಷಮಿಸುವ ಕಾರುಣ್ಯಮೂರ್ತಿ ಆ ಭಗವಂತ. ಭಗವಂತ ನಮಗೆ ಕೊಡುವ ದುಃಖ- ತಾಯಿ ತನ್ನ ಮಗುವನ್ನು ತಿದ್ದಲು ಕೊಡುವ ಶಿಕ್ಷೆಯಂತೆ. ಆತನ ಶಿಕ್ಷೆ ಕಾರುಣ್ಯದ ರಕ್ಷೆ. ಆತ ಯಾರನ್ನೂ ದ್ವೇಷಿಸುವುದಿಲ್ಲ. ಎಲ್ಲರ ಅಪರಾಧವನ್ನೂ ಸಹಿಸುವ ಭಗವಂತ ಸಹಿಷ್ಣು.
No comments:
Post a Comment