ವಿಷ್ಣು ಸಹಸ್ರನಾಮ: ಅಗ್ರಣೀರ್ಗ್ರಾಮಣೀಃ ಶ್ರೀಮಾನ್
219) ಅಗ್ರಣೀಃ
ಅಗ್ರ ಎಂದರೆ ಮುಂದಾಳು. ಅಗ್ರಣೀ ಎಂದರೆ ಎಲ್ಲರ ಮುಂದಾಳಾಗಿ ನಿಂತು, ಅಥವಾ ಮುಂದಾಳುವಿನ ಒಳಗೆ ಕುಳಿತು ದುಷ್ಟ ನಿಗ್ರಹ ಮಾಡುವವ. ಇದಕ್ಕೆ ಉತ್ತಮ ಉದಾಹರಣೆ ಮಹಾಭಾರತ ಯುದ್ದ. ಧರ್ಮ ಸಂಸ್ಥಾಪನೆಗಾಗಿ ಪಾಂಡವ ಸೇನೆಯ ಸಾರಥಿಯಾಗಿ, ನರನ ಆವೇಷವಿರುವ ಅರ್ಜುನನಲ್ಲಿ ವಿಶೇಷ ರೀತಿಯಲ್ಲಿ ಆವಿರ್ಭೂತನಾಗಿ, ದುಷ್ಟ ಸಂಹಾರ ಮಾಡಿ, ಪ್ರಪಂಚಕ್ಕೆ ಗೀತೆಯ ಮೂಲಕ ವಿಶೇಷ ಸಂದೇಶವನ್ನು ಕರುಣಿಸಿದ ಭಗವಂತ ಅಗ್ರಣೀಃ. ಮಹಾಭಾರತ ಮೇಲ್ನೋಟಕ್ಕೆ ಒಂದು ಮಹಾಯುದ್ದ. ಆದರೆ ಈ ಯುದ್ದಕ್ಕೂ ನಮ್ಮ ಜೀವನಕ್ಕೂ ನೇರ ಸಂಭಂಧವಿದೆ. ಜೀವನವೇ ಒಂದು ಹೋರಾಟ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿತಪ್ಪಿಸುವ ಕೌರವರೂ ಇದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಕಣ್ಣಿಲ್ಲದ ಧೃತರಾಷ್ಟ್ರ ಅಥವಾ ಕಣ್ಣಿದ್ದೂ ಕುರುಡಿಯಾದ ಗಾಂಧಾರಿಯಂತೆ ನಾವು ನಮ್ಮನ್ನು ದಾರಿ ತಪ್ಪಿಸುವ ಶಕ್ತಿಗಳ ಮೋಹಪಾಶಕ್ಕೆ ಬಲಿಯಾಗಿ, ನಮ್ಮಲ್ಲಿರುವ ಅಮೂಲ್ಯ ಸಂಪತ್ತಾದ ಇಂದ್ರಿಯಗಳನ್ನು ದುರುಪಯೋಗ ಮಾಡಿಕೊಂಡು ದಾರಿ ತಪ್ಪಿದಾಗ, ನಮ್ಮೊಳಗಿರುವ ಬಿಂಬ ರೂಪಿ ಭಗವಂತ ಅಗ್ರಣಿಯಾಗಿ ನಿಂತು ದುಷ್ಟಶಕ್ತಿಗಳ ನಿರ್ಮೂಲ ಮಾಡುತ್ತಾನೆ. ಭಗವಂತನ ಶರಣಾಗತಿಯೊಂದೇ ನಮ್ಮನ್ನು ಉದ್ದಾರ ಮಾಡಬಲ್ಲದು ಎನ್ನುವುದು ಮಹಾಭಾರತದ ಮೂಲ ಸಂದೇಶ.
220) ಗ್ರಾಮಣೀಃ
ಗ್ರಾಮ ಎಂದರೆ ಸಮುದಾಯ. ಗ್ರಾಮಣಿ ಎಂದರೆ ಸಮುದಾಯದ ಒಡೆಯನಾಗಿದ್ದು ದುಷ್ಟ ನಿಗ್ರಹ ಮಾಡುವ ಭಗವಂತ. ಎಲ್ಲಾ ಜೀವ ಸಮುದಾಯಕ್ಕೆ, ದೇವತೆಗಳ ಸಮುದಾಯಕ್ಕೆ, ಆತ ನಿಯಾಮಕ. ಅಮಿತವಾದ ಜ್ಞಾನಾನಂದಗಳಿಂದ ತುಂಬಿರುವ ಹಾಗು ಪ್ರಪಂಚದಲ್ಲಿ ಅತೀ ಹೆಚ್ಚು ಸಂಖ್ಯಯಲ್ಲಿರುವ, ಆಸ್ತಿಕತೆಯ ಸೋಗಿನಲ್ಲಿ ಬದುಕುವ ತಾಮಸರನ್ನು ನಿಗ್ರಹಿಸಿ, ಸಾತ್ವಿಕತೆಯ ರಕ್ಷಣೆ ಮಾಡುವ ಭಗವಂತ ಗ್ರಾಮಣೀಃ.
221) ಶ್ರೀಮಾನ್
ನಮ್ಮಲ್ಲಿ ಶ್ರೀಮಂತರು ಎಂದರೆ ಅತೀ ಹೆಚ್ಚು ಹಣವುಳ್ಳವರು ಎನ್ನುವುದು ಜನರ ಅಭಿಪ್ರಾಯ. ಆದರೆ ನಿಜವಾದ ಸಂಪತ್ತು ಹಣವಲ್ಲ! ಏಕೆಂದರೆ ಹಣ "ಕರಗುವ ಸಂಪತ್ತು". ಒಮ್ಮೆ ಕೋಟ್ಯಾಧಿಪತಿಯಾಗಿರುವ ವ್ಯಕ್ತಿಗಳು ಇಂದು ಭಿಕ್ಷಾಧಿಪತಿಯಾಗಿರುವ ಅನೇಕ ಘಟನೆಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ನೋಡುತ್ತೇವೆ. ಹಣ ಬರುವಾಗ ಹೇಗೆ ಬರುತ್ತದೆ ಎಂದು ತಿಳಿಯುವುದಿಲ್ಲ, ಹಾಗೆ ಹೋಗುವಾಗ ಕೂಡ ಹೇಗೆ ಹೋಗುತ್ತದೆ ಎಂದು ನಮಗೆ ತಿಳಿಯುವುದಿಲ್ಲ. ನಾವು ನಿಜವಾದ ಶ್ರಿಮಂತರಾಗಬೇಕಾದರೆ ಎಂದೂ "ಕರಗದ" ಸಂಪತ್ತನ್ನೂ ನಮ್ಮದಾಗಿಸಿಕೊಳ್ಳಬೇಕು. ವೇದ ವಿದ್ಯೆಗಳು ಹಾಗು ಅದರಿಂದ ಬರುವ ಜ್ಞಾನ ಎಂದೂ ಕರಗದ ಅಪೂರ್ವ ಸಂಪತ್ತು.
ವಿದ್ಯಾದೇವತೆಯಾದ ಸರಸ್ವತಿ-ಭಾರತಿಯರಿಗೂ ಭಗವಂತ ನಿಯಾಮಕ ಆದ್ದರಿಂದ ಆತ ಶ್ರೀಮಾನ್.
ಈ ಹಿಂದೆ ಹೇಳಿದಂತೆ ಭಗವಂತ ನಮಗೆ ಅತ್ಯಂತ ಅಮೂಲ್ಯವಾದ ಐದು ಶ್ರೀಗಳನ್ನು ಕರುಣಿಸಿದ ಶ್ರೀಮಾನ್. ಅವುಗಳೆಂದರೆ ಚಕ್ಷು-ಕಣ್ಣು, ಶ್ರೋತ್ರ-ಕಿವಿ, ಮನಃ-ಮನಸ್ಸು , ವಾಕ್-ಮಾತು, ಪ್ರಾಣ-ಉಸಿರು. ಇದಕ್ಕಿಂತ ಹೆಚ್ಚಿನ ಸಂಪತ್ತು ಮನುಷ್ಯನಿಗೆ ಇನ್ನೊಂದಿಲ್ಲ. ಈ ಸಂಪತ್ತನ್ನೂ ನಾವು ಎಂದೂ ದುರುಪಯೋಗ ಮಾಡಿಕೊಳ್ಳಬಾರದು. ಅದಕ್ಕಾಗಿ ಶಾಂತಿ ಮಂತ್ರದಲ್ಲಿ ಒಳ್ಳೆಯದನ್ನು ನೋಡೋಣ. ಒಳ್ಳೆಯದನ್ನು ಮಾಡೋಣ, ಒಳ್ಳೆಯದನ್ನು ಕೇಳೋಣ ಹಾಗು ಒಳ್ಳೆಯದನ್ನು ಯೋಚಿಸೋಣ ಎಂದು ಹೇಳಿದೆ.
ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ ಸ್ಥಿರೈರಂಗೈಃ ಸ್ತುಷ್ಟುವಾಂ ಸಸ್ತನೂಭಿಃ ವ್ಯಶೇಮ ದೇವಹಿತಂ ಯದಾಯುಃ ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ ಸ್ವಸ್ತಿನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು ಓಂ ಶಾಂತಿಃ ಶಾಂತಿಃ ಶಾಂತಿಃ
ಸಾಮಾನ್ಯವಾಗಿ ನಾವು ಜೀವನ ನಿರ್ವಹಣೆಯ ಹಾಗು ನಮ್ಮ ಮುಂದಿನ ಪೀಳಿಗೆಯ ಬಗ್ಗೆ ಯೋಚಿಸುತ್ತಾ ಹಣದ ಹಿಂದೆ ಓಡುತ್ತಾ ಭಗವಂತನ ಅಭಯವನ್ನು ಮರೆತು ಬದುಕುತ್ತೇವೆ. ಗೀತೆಯಲ್ಲಿ ಭಗವಂತ ನಮಗೆ ರಕ್ಷಣೆಯ ಅಭಯವಿತ್ತಿದ್ದಾನೆ.
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ (ಅ-೯, ಶ್ಲೋ-೨೨)
ಅಂದರೆ ಚಿಂತೆಯನ್ನು ತೊರೆದು ಭಕ್ತಿಯಿಂದ ನನ್ನನ್ನು ಪೂಜಿಸುವ ಭಕ್ತರ ಯೋಗ-ಕ್ಷೇಮದ ಹೊಣೆ ನನ್ನದು. ಆದ್ದರಿಂದ ಅತ್ಯಂತ ಶ್ರೀಮಂತನಾದ ಭಗವಂತನ ಮುಂದೆ ಜುಜುಬಿ ಹಣದ ಅಭಿಷ್ಟವನ್ನು ವ್ಯಕ್ತಪಡಿಸದೆ, ಅವನನ್ನು ಸಂಪೂರ್ಣ ಭಕ್ತಿಯಿಂದ ನಂಬಿ ಬದುಕಿದರೆ, ನಮ್ಮ ಸಕಲ ಅಭಿಷ್ಟವನ್ನೂ ಆತ ಪೂರೈಸಿ ರಕ್ಷಿಸುತ್ತಾನೆ.
No comments:
Post a Comment