Vishnu Sahasranama: ಚತುರ್ವ್ಯೂಹಶ್ಚತುರ್ದಂಷ್ಟ್ರ
138)ಚತುರ್ವ್ಯೂಹ
ಭಗವಂತ ನಾಲ್ಕು ವ್ಯೂಹ(ಗುಂಪು ಅಥವಾ ಸಮುದಾಯ)ದಿಂದ ಉಪಾಸ್ಯನಾಗಿದ್ದಾನೆ.
೧. ಸೃಷ್ಟಿಗೆ ಕಾರಣನಾದ ಪ್ರದ್ಯುಮ್ನ,
೨.ಸ್ಥಿತಿಗೆ ಕಾರಣನಾದ ಅನಿರುದ್ದ,
೩. ಸಂಹಾರಕ್ಕೆ ಕಾರಣನಾದ ಸಂಕರ್ಷಣ,
೪. ಮೊಕ್ಷಪ್ರದನಾದ ವಾಸುದೇವ.
ಜೀವವು ಮೊದಲು ಅನಿರುದ್ದನನ್ನು ಸೇರಿ ಅನ್ನಮಯಕೋಶದಿಂದ ಸಂಬಂಧವನ್ನು ಕಳಚಿಕೊಳ್ಳುತ್ತದೆ. ನಂತರ ಪ್ರದ್ಯುಮ್ನನನ್ನು ಸೇರಿ ಮನೋಮಯ ಕೋಶದ ಸಂಬಂಧವನ್ನು ಕಳಚಿಕೊಂಡು, ಸಂಕರ್ಷಣನಿಂದ ವಿಜ್ಞಾನಮಯಕೋಶದ ಬಿಡುಗಡೆಯನ್ನು ಪಡೆದು, ಕೊನೆಗೆ ವಾಸುದೇವನನ್ನು ಸೇರಿ ಸ್ವಯಂ ಆನಂದಮಯನಾಗುತ್ತಾನೆ . ಈ ರೀತಿ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ದ ಎನ್ನುವ ನಾಲ್ಕು ವ್ಯೂಹಗಳಿಂದ ಉಪಾಸ್ಯನಾದ ಭಗವಂತ ಚತುರ್ವ್ಯೂಹ.
ಭಗವಂತ ಪ್ರಪಂಚದಲ್ಲಿ ನಾಲ್ಕು ವರ್ಣದ ಸೃಷ್ಟಿಗೆ ಕಾರಣಕರ್ತ. ಇಲ್ಲಿ ವರ್ಣ ಎಂದರೆ ಜಾತಿ ಅಲ್ಲ. ಜಾತಿ ಪದ್ಧತಿ ಜನರಿಂದ ಬಂದ ಪದ್ಧತಿ. ಆದರೆ ವರ್ಣ ಭಗವಂತನ ಸೃಷ್ಟಿ. ನಾಲ್ಕು ವರ್ಣವನ್ನು ನಾವು ಪ್ರಪಂಚದ ಎಲ್ಲಾ ಭಾಗದಲ್ಲಿ ಕಾಣಬಹುದು. ಅವುಗಳೆಂದರೆ: ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ.
೧. ಬ್ರಾಹ್ಮಣ: ಅದ್ಯಯನ ಮಾಡಿ ಅದ್ಯಾಪನ ಮತ್ತು ಸಂಶೋದನೆ ಮಾಡುವ ಜ್ಞಾನಿಗಳು (Intellects)
೨. ಕ್ಷತ್ರಿಯ: ರಕ್ಷಣೆ ಮತ್ತು ವ್ಯವಸ್ಥಾಪಕ ಗುಣ ಇರುವವರು (Defence & Administrators)
೩. ವೈಶ್ಯ: ಉತ್ಪಾದನೆ ಮತ್ತು ವಿತರಣೆಯಲ್ಲಿ ಚಾಣಾಕ್ಷರು (Production and Sale)
೪. ಶೂದ್ರ: ಶುಶ್ರೂಷೆ ಅಥವಾ ಸೇವೆಯಲ್ಲಿ ಚಾಣಾಕ್ಷರು (Service)
ಈ ಮೇಲಿನ ನಾಲ್ಕು ವರ್ಣಗಳನ್ನು ಒಂದೇ ಕುಟುಬದಲ್ಲಿ ನೋಡಬಹುದು. ಹಾಗು ಅವರವರ ಜೀವ ಗುಣಕ್ಕೆ ಸರಿಹೊಂದುವ ಕೆಲಸವನ್ನು ಮಾಡುವವರು ಶೀಘ್ರ ಯಶಸ್ಸನ್ನು ಕೂಡ ಕಾಣುತ್ತಾರೆ.ಈ ರೀತಿ ಈ ಪ್ರಪಂಚ ನಡೆಯಲು ಅನಿವಾರ್ಯವಾಗಿ ಬೇಕಾಗುವ ನಾಲ್ಕು ವರ್ಣಗಳನ್ನು ನಿರ್ಮಿಸಿದ ಭಗವಂತ ಚತುರ್ವ್ಯೂಹ.
139)ಚತುರ್ದಂಷ್ಟ್ರ
ಭಗವದ್ಗೀತೆಯ ವಿಶ್ವರೂಪ ದರ್ಶನದಲ್ಲಿ ಅರ್ಜುನನು ಹೇಳುವಂತೆ:
ದಂಷ್ಟ್ರಾಕರಾಳಾನಿ ಚ ತೇ ಮುಖಾನಿ
ದೃಷ್ಟ್ವೈವ ಕಾಲಾನಲಸನ್ನಿಭಾನಿ
ದಿಶೋ ನ ಜಾನೇ ನ ಲಭೇ ಚ ಶರ್ಮ
ಪ್ರಸೀದ ದೇವೇಶ ಜಗನ್ನಿವಾಸ (11-25)
ಅಂದರೆ “ಪ್ರಳಯ ಕಾಲದ ಬೆಂಕಿಯಂತೆ ಕೋರೆದಾಡೆಗಳ ಅಬ್ಬರದ ನಿನ್ನ ಮೋರೆಗಳನ್ನು ಕಂಡದ್ದೇ ದಿಕ್ಕು ತಿಳಿಯದಾಗಿದೆ. ನೆಮ್ಮದಿ ಇಲ್ಲವಾಗಿದೆ. ಓ ಸಗ್ಗಿಗರೊಡೆಯನೆ, ಜಗದ ಆಸರೆಯೇ ದಯೆ ತೋರು”ಎಂದರ್ಥ. ಇಲ್ಲಿ ಯುದ್ದನಿರತ ಕೌರವಸೇನೆ ಭಗವಂತನ ಕೋರೆದಾಡೆಗಳ ಮದ್ಯ ಸಿಕ್ಕಿ ನುಚ್ಚು ನೂರಾಗುವುದನ್ನು ಕಂಡ ಅರ್ಜುನ, ತಾನು ಕೇವಲ ನೆಪಮಾತ್ರ ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಾನೆ.
ಇಲ್ಲಿ ದಂಷ್ಟ್ರ ಅಂದರೆ ಕೋರೆದಂತ ಉಳ್ಳವನು ಎಂದರ್ಥ. ಚತುರ್ದಂಷ್ಟ್ರ ಎಂದರೆ ನಾಲ್ಕು ಕೋರೆ ಹಲ್ಲುಗಳಿರುವವನು ಎಂದರ್ಥ.
ಭಗವಂತನು ವರಾಹ ಅವತಾರಿಯಾಗಿ ಹಿರಣ್ಯಾಕ್ಷನನ್ನು ಹಾಗು ನರಸಿಂಹ ಅವತಾರಿಯಾಗಿ ಹಿರಣ್ಯಕಶಿಪುವನ್ನು ತನ್ನ ಕೋರೆ ಹಲ್ಲುಗಳಿಂದ ಸಂಹಾರ ಮಾಡಿದವನು. ನಮ್ಮೊಳಗೆ ಕೂಡಾ ಈ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಿದ್ದಾರೆ!! ಇಲ್ಲಿ ಹಿರಣ್ಯ ಅಂದರೆ ಚಿನ್ನ, ಅಂದರೆ ದುಡ್ಡು ಅಥವಾ ಸಂಪತ್ತು. ಯಾವಾಗಲೂ ದುಡ್ಡಿನ ಮೇಲೆ ಕಣ್ಣನ್ನಿಟ್ಟು, ಅದರಿಂದಾಚೆಗೆ ಏನನ್ನೂ ಯೋಚಿಸದೆ, ದುಡ್ಡಿನ ಆಸೆಯಲ್ಲಿ ಇರುವ ಮನುಷ್ಯನ ಗುಣವೇ ಆತನಲ್ಲಿರುವ ಹಿರಣ್ಯಾಕ್ಷ. ಇನ್ನು ಒಮ್ಮೆ ದುಡ್ಡು ಬಂದಿತು, ಅದನ್ನು ತನ್ನ ತಲೆದಿಂಬನ್ನಾಗಿ(ಕಶಿಪು) ಇಟ್ಟುಕೊಂಡು ದುಡ್ಡಿನ ಲೋಭದಲ್ಲಿ ಮುಳುಗುವ, ಹಾಗು ತಮ್ಮ ಲೋಭಕ್ಕೆ ಅಡ್ಡಿ ಆದಾಗ, ಕ್ರೋಧಗೊಳ್ಳುವ ಮನುಷ್ಯ ಗುಣವೇ ಆತನಲ್ಲಿರುವ ಹಿರಣ್ಯಕಶಿಪು. ನಮ್ಮಲ್ಲಿರುವ ಈ ಕಾಮ-ಕ್ರೋಧ-ಲೋಭವನ್ನು ಸಂಹಾರ ಮಾಡಬಲ್ಲ ಭಗವಂತ ಚತುರ್ದಂಷ್ಟ್ರ.
No comments:
Post a Comment